ಈ ದಿನ ಸಂಪಾದಕೀಯ | ಕೋಮು ರಾಜಕಾರಣ: ಒಡೆದ ಮನೆಯಲ್ಲಿ ಹಿಂದುತ್ವಕ್ಕೆ ಒಡೆಯನಾರು?

Date:

Advertisements
ಬಿಜೆಪಿ ಮತ್ತು ಯತ್ನಾಳ್ ಇಬ್ಬರೂ ಸ್ವಹಿತಾಸಕ್ತಿ ಉಳ್ಳವರೇ ಆಗಿದ್ದಾರೆ. ಮದ್ದೂರಿನಲ್ಲಿ ಹಿಂದುತ್ವದ ಭಾವುಟ ಹಿಡಿದು ಇಬ್ಬರೂ ಅಬ್ಬರಿಸಿದ್ದಾರೆ. ಅಸಲಿ ಹಿಂದುತ್ವವಾದಿಗಳಾರು, ನಕಲಿ ಯಾರು? ಇವರ ನಡುವೆ ನಿಜ ಹಿಂದುತ್ವದ ಕಾಲಾಳುಗಳಾಗಿರುವ ಕಾರ್ಯಕರ್ತರು ಕಂಗಾಲಾಗಿದ್ದಾರೆ. 

ಕರ್ನಾಟಕದಲ್ಲಿ ಹಿಂದುತ್ವ ಮತ್ತು ಕೋಮು ರಾಜಕಾರಣ ಮಾಡುವ ಪಕ್ಷ ಒಡೆದ ಮನೆಯಾಗಿದೆ. ಬಿಜೆಪಿಯು ಮೊದಲ ಬಾರಿಗೆ ಜೆಡಿಎಸ್‌ ಜೊತೆಗೆ ಮೈತ್ರಿಯಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಈವರೆಗೆ ಬಿಜೆಪಿಯಲ್ಲಿ ಒಡಕು, ತೊಡಕುಗಳು ಮುಂದುವರೆದಿವೆ. ಆಂತರಿಕ ಬಂಡಾಯದ ಬಿಸಿ ಬೂದಿ ಮುಚ್ಚಿದ ಕೆಂಡದಂತಿದೆ. ಈಗ ಅದು ಜಗಜ್ಜಾಹೀರಾಗಿದೆ.

ಒಡೆದ ಮನೆಯಾಗಿರುವ ಬಿಜೆಪಿ ರಾಜಕೀಯ ಲಾಭಕ್ಕಾಗಿ ಮದ್ದೂರಿನಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಲು ದೌಡಾಯಿಸಿತ್ತು. ಹಿಂದುಗಳು ನಮ್ಮವರು, ನಾವೇ ಹಿಂದುಗಳ ರಕ್ಷಕರೆಂದು ಬಿಜೆಪಿ ರಾಜ್ಯ ಪರಮೋಚ್ಚ ನಾಯಕರೆಸಿಕೊಂಡವರು ಅಬ್ಬರಿಸಿ ಬೊಬ್ಬಿರಿದರು. ಆದರೆ, ಮರುದಿನವೇ ಬಿಜೆಪಿಯ ಹಿಂದುತ್ವಕ್ಕೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಂಟ್ರಿ ಕೊಟ್ಟರು. ತಾನೇ ಹಿಂದುತ್ವದ ಹುಲಿ ಎಂದು ಅಬ್ಬರಿಸಿದರು.

ಯಾವುದೇ ಅಹಿತಕರ ಘಟನೆಗಳು ನಡೆದರೆ, ಅದರಲ್ಲೂ ಆ ಘಟನೆಗೆ ಕೋಮು ಆಯಾಮವಿದ್ದರೆ ಅಲ್ಲಿ ಬಿಜೆಪಿಗರು ಪ್ರತ್ಯಕ್ಷರಾಗಿಬಿಡುತ್ತಾರೆ. ಘಟನೆಯಲ್ಲಿ ನೊಂದವರಿಗೆ ನ್ಯಾಯ ಸಿಗುತ್ತದೆಯೋ-ಇಲ್ಲವೋ ರಾಜಕೀಯ ಬೇಳೆ ಮಾತ್ರ ಬೇಯುತ್ತದೆ. ಈಗ, ಮದ್ದೂರಿನಲ್ಲಿ ಆಗಿರುವುದೂ ಇದೆ. ಹಸಿರು ಶಾಲು ಹೊದ್ದು, ಅನ್ನ ಹಾಕುತ್ತಿದ್ದ ಮಂಡ್ಯ ಜಿಲ್ಲೆಯಲ್ಲಿ ಕೇಸರಿ ಶಾಲು ರಕ್ತ ಹರಿಸಲು ಹೊಂಚು ಹಾಕುತ್ತಿದೆ. ಆದರೆ, ಈಗ ಕೇಸರಿ ಶಾಲು ಕೂಡ ಹರಿದು ಇಬ್ಭಾಗವಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಧರ್ಮಸ್ಥಳ, ದಸರಾ, ಗಣೇಶ ಮತ್ತು ಅಶೋಕ್ ಮೋಚಿ

ಮದ್ದೂರಿನಲ್ಲಿ ಸೆಪ್ಟೆಂಬರ್ 7ರಂದು ಗಣಪತಿ ವಿಸರ್ಜನೆ ವೇಳೆ, ಕೆಲವು ಪುಂಡರು ಮಸೀದಿ ಎದುರು ದಾಂಧಲೆ ನಡೆಸಿದರು. ಇಸ್ಲಾಂ ಬಾವುಟವನ್ನು ಕಿತ್ತು, ಅವಮಾನಿಸಿ ಕೋಮುಕ್ರೌರ್ಯ ಮೆರೆದರು. ಘಟನೆಯು ಪೊಲೀಸ್‌ ಲಾಠಿಚಾರ್ಜ್‌ಗೆ ಕಾರಣವಾಯಿತು. ಹಿಂದುತ್ವವಾದಿಗಳ ಈ ಕ್ರೌರ್ಯ ಸರ್ವಜನಾಂಗದ ಶಾಂತಿ ತೋಟ ಎಂಬ ಆಶಯದೊಂದಿಗೆ ಸಹಬಾಳ್ವೆಯಿಂದ ಕೂಡಿರುವ ಮಂಡ್ಯದಲ್ಲಿ ಕೋಮು ವಿಷವಿಕ್ಕುವ ಪೂರ್ವನಿಯೋಜಿತ ಕೃತ್ಯವೆಂದು ಆರೋಪಿಸಲಾಗಿದೆ.

ಆದಾಗ್ಯೂ, ಪೊಲೀಸರು ಹಿಂದುತ್ವವಾದಿ ಪುಂಡರ ಮೇಲೆ ಲಾಠಿಬೀಸುತ್ತಿದ್ದಂತೆಯೇ, ನಿಶ್ಚಲನೆಯಿಂದ ಕೂತಿದ್ದ ಬಿಜೆಪಿಗರ ಎಂಜಿನ್‌ಗೆ ಇಂಧನ ಸುರಿದಂತಾಯಿತು. ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಸೇರಿದಂತೆ ಹಲವರು ಒಟ್ಟೊಟ್ಟಿಗೆ ಮದ್ದೂರಿಗೆ ದೌಡಾಯಿಸಿದರು. ಪ್ರಚೋದನಾಕಾರಿ, ಕೋಮುದ್ವೇಷದ ಭಾಷಣ ಮಾಡಿದರು. ಸಿ.ಟಿ ರವಿ ಅವರಂತೂ, ‘ತೊಡೆ ಮುರಿತೀವಿ, ತಲೆಯನ್ನೂ ತೆಗೆತೀವಿ. ಸಮಾಧಿ ಮಾಡ್ತೀವಿ’ ಎಂದು ಸಾರ್ವಜನಿಕವಾಗಿಯೇ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದರು. ಹಿಂದುತ್ವಕ್ಕೆ ಬಿಜೆಪಿಯೇ ಅಪ್ಪ-ಅಮ್ಮ, ನಾವೇ ಹಿಂದುಗಳ ರಕ್ಷಕರು ಎಂಬಂತೆ ದ್ವೇಷ ಬಿತ್ತಿ, ಕೋಮು ರಾಜಕಾರಣದ ಬೇಳೆ ಬೇಯಿಸಿಕೊಂಡು ಬಂದರು.

ಬಳಿಕ, ಮದ್ದೂರಿಗರಲ್ಲಿ ಹಿಂದು(ತ್ವ) ರಕ್ಷಣೆಗೆ ಬಿಜೆಪಿಯೇ ದಿಕ್ಕು ಎಂಬ ಭಾವನೆಯನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಬೆಳೆಸಲು ಸಿದ್ದತೆ ನಡೆಸಿದ್ದರು. ಆ ವೇಳೆಗೆ, ಯತ್ನಾಳ್‌ ಪ್ರವೇಶವು ಮದ್ದೂರಿನ ಕೋಮು ರಾಜಕೀಯಕ್ಕೆ ಹೊಸ ತಿರುವು ಕೊಟ್ಟಿತು.

ಸೆಪ್ಟೆಂಬರ್ 11ರಂದು ಮದ್ದೂರಿಗೆ ಬಂದ ಯತ್ನಾಳ್ ಅವರನ್ನು ಸಾವಿರಾರು ಹಿಂದುತ್ವ ಕಾರ್ಯಕರ್ತರು ಸ್ವಾಗತಿಸಿದರು. ಇವರಲ್ಲಿ ಬಿಜೆಪಿ ಕಾರ್ಯಕರ್ತರೂ ಸೇರಿದ್ದರು. ಬಿಜೆಪಿ ನಾಯಕರು ಬಂದಾಗ ಸೇರಿದ್ದಕ್ಕಿಂತಲೂ ಸರಿಸುಮಾರು ಎರಡುಪಟ್ಟು ಜನರು ಯತ್ನಾಳ್‌ ಭೇಟಿ ವೇಳೆ ನೆರೆದಿದ್ದರು. ವೇದಿಕೆಯಲ್ಲಿ ನಿಂತು ತನ್ನ ಹರುಕು ಬಾಯಿಯಿಂದ ನಾಲಿಗೆ ಹರಿಬಿಟ್ಟ ಯತ್ನಾಳ್, “ಪಾಕಿಸ್ಥಾನ್ ಜೈ ಎಂದರೆ ಗುಂಡಿಕ್ಕಿ ಕೊಲ್ಲಬೇಕು. ಕಲ್ಲು ತೂರಿದವರ ಮನೆಗಳನ್ನು ಬುಲ್ಡೋಜರ್‌ನಿಂದ ಉರುಳಿಸಬೇಕು. ಬಿಜೆಪಿ ದೊರೆಯಾಳು ರಾಜಕಾರಣ ಮಾಡುತ್ತಿದ್ದರೆ, ಹಿಂದುಗಳಿಗಾಗಿ ಹೊಸ ಪಕ್ಷ ಅನಿವಾರ್ಯ. ನಾನು ‘ಕರ್ನಾಟಕ ಹಿಂದು ಪಕ್ಷ’ ಕಟ್ಟುತ್ತೇನೆ. ಅದರ ಚಿಹ್ನೆ ಬುಲ್ಡೋಜರ್ ಆಗಿರಲಿದೆ. ನಾನು 2028ಕ್ಕೆ ಮುಖ್ಯಮಂತ್ರಿಯಾದರೆ, ವಿಧಾನಸೌಧದ ಮುಂದೆ ಭಾಗವಾಧ್ವಜ ಹಾರಿಸುತ್ತೇನೆ. ಮಸೀದಿ ಮುಂದೆ ಗಂಟೆಗಟ್ಟಲೆ ಡಾನ್ಸ್‌ ಮಾಡಲು ಅವಕಾಶ ನೀಡುತ್ತೇನೆ” ಎಂದು ಮತ್ತಷ್ಟು ಪ್ರಚೋದನಾಕಾರಿ ಭಾಷಣ ಮಾಡಿದರು.

ಮುಖ್ಯವಾಗಿ, ಬಿಜೆಪಿ ನಾಯಕರು ಬಂದಾಗ ಸ್ಥಳೀಯ ಬಿಜೆಪಿಯ ಒಂದು ಭಾಗ ಉತ್ಸುಕವಾಗಿ ತಮ್ಮ ನಾಯಕರನ್ನು ಸ್ವಾಗತಿಸಿದರೆ, ಅದೇ ಬಿಜೆಪಿಯ ಮತ್ತೊಂದು ಭಾಗವು ಯತ್ನಾಳ್‌ ಅವರನ್ನು ಕೊಂಡಾಡಿದೆ. ಹಿಂದುತ್ವ ಕಾರ್ಯತರ್ಕರು ಬಿಜೆಪಿ ಮತ್ತು ಯತ್ನಾಳ್‌ ನಡುವೆ ಹರಿದು ಹಂಚಿಹೋಗುತ್ತಿದ್ದಾರೆ ಎಂಬುದನ್ನು ಮದ್ದೂರು ಇಡೀ ರಾಜ್ಯಕ್ಕೆ ತೋರಿಸಿದೆ.

ಯತ್ನಾಳ್‌ಗೂ ಮಂಡ್ಯ ಜಿಲ್ಲೆಗೂ ಎಂದಿಗೂ ಸಂಬಂಧವೇ ಬೆಳೆದಿರಲಿಲ್ಲ. ಯತ್ನಾಳ್‌ ಪ್ರಭಾವ ಮಂಡ್ಯದಲ್ಲಿ ಕೊಂಚವೂ ಇರಲಿಲ್ಲ. ಆದರೆ, ತನ್ನ ಪ್ರಭಾವವೇ ಇಲ್ಲದ ಮಂಡ್ಯ ಜಿಲ್ಲೆಗೆ ಏಕಾಂಗಿಯಾಗಿ ಬಂದು, ಹಿಂದುತ್ವದ ವಿಷವನ್ನು ತಮಗಿಂತಲೂ ಹೆಚ್ಚಾಗಿಯೇ ಉಣಿಸಿ, ಹೊಸ ಪಕ್ಷ ಕಟ್ಟುವುದಾಗಿಯೂ ಘೋಷಿಸಿ ಹೋದ ಯತ್ನಾಳ್‌ ನಡೆಯು ಬಿಜೆಪಿಯಲ್ಲಿ ಆತಂಕವನ್ನೂ ಸೃಷ್ಟಿಸಿದೆ. ಕರ್ನಾಟಕದಲ್ಲಿ ಹಿಂದುತ್ವ ಮತಗಳು ಮತ್ತೆ ಚದುರಿ ಹೋಗಿಬಿಡುತ್ತವೆ ಎಂಬ ಕಳವಳಕ್ಕೆ ಕಾರಣವೂ ಆಗಿದೆ.

ಈ ಹಿಂದೆ, 2012ರಲ್ಲಿ ಬಿ.ಎಸ್‌ ಯಡಿಯೂರಪ್ಪ ಅವರು ಬಿಜೆಪಿಯಿಂದ ಹೊರಬಂದು, ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಕಟ್ಟಿದ್ದರು. ಆಗ ಹಿಂದುತ್ವ ಕಾರ್ಯಕರ್ತರು ಮತ್ತು ಹಿಂದುತ್ವ ಮತಗಳು ವಿಭಜನೆಗೊಂಡಿದ್ದವು. ಪರಿಣಾಮ, ಅಧಿಕಾರದಲ್ಲಿದ್ದ ಬಿಜೆಪಿ ಹೀನಾಯವಾಗಿ ಸೋಲುಂಡಿತು. ಯಡಿಯೂರಪ್ಪ ಇಲ್ಲದೆ, ಬಿಜೆಪಿಗೆ ನೆಲೆಯಿಲ್ಲ ಎಂಬುದನ್ನು ಅರಿತ ಬಿಜೆಪಿ ಹೈಕಮಾಂಡ್‌, ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮರಳಿ ಕರೆತಂದಿತು.

ಆದಾಗ್ಯೂ, ಅಂದಿನಿಂದ ಇಂದಿನವರೆಗೂ ಬಿಜೆಪಿಯೊಳಗೆ ಬಣ ರಾಜಕಾರಣ ಮುಂದುವರಿದೇ ಇದೆ. ಮುಖ್ಯವಾಗಿ, ಬಿಜೆಪಿ ಮುಖವಾಗಿರುವ ಯಡಿಯೂರಪ್ಪ ಮತ್ತು ಆರ್‌ಎಸ್‌ಎಸ್‌ ಮುಖ ಬಿ.ಎಲ್‌ ಸಂತೋಷ್‌ ನಡುವಿನ ತಿಕ್ಕಾಟವು ಬಣ ರಾಜಕಾರಣವನ್ನು ಜೀವಂತವಾಗಿ ಇರಿಸಿವೆ. ಇಡೀ ದೇಶದಲ್ಲಿ ಮೋದಿ ಅಲೆ ಅಬ್ಬರಿಸಿ-ಬೊಬ್ಬರಿದಾಗಲೂ ಬಿಜೆಪಿ ಒಳಗಿನ ಬಣ ರಾಜಕಾರಣ ಒಗ್ಗೂಡಲಿಲ್ಲ. ಬದಲಾಗಿ, ಮೋದಿ ಮುಖನೋಡಿ, ಬಿಜೆಪಿ/ಹಿಂದುತ್ವ ಮತದಾರರು ಮಾತ್ರವೇ ಒಗ್ಗಟ್ಟಾಗಿ ಬಿಜೆಪಿಗೆ ಮತ ಚಲಾಯಿಸಿದರು. ಆದರೂ, ಕರ್ನಾಟಕದಲ್ಲಿ ಬಿಜೆಪಿ ಈವರೆಗೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಾಗಿಲ್ಲ ಎಂಬುದು ವಾಸ್ತವ.

ಈಗ, ಯಡಿಯೂರಪ್ಪ ವಿರುದ್ಧ ಸಮರ ಸಾರಿರುವ ಯತ್ನಾಳ್, ಇದೇ ಯಡಿಯೂರಪ್ಪ ಮಾದರಿಯಲ್ಲಿ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಅದಕ್ಕೆ, ಹಿಂದುತ್ವದ ಬಣ್ಣವನ್ನೂ ಹಚ್ಚಿದ್ದಾರೆ. ಯತ್ನಾಳ್ ಅವರನ್ನು ಬಿಜೆಪಿ ಉಚ್ಚಾಟಿಸಿದಾಗ ಅವರ 124 ಬೆಂಬಲಿಗರು ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಇದು ಯತ್ನಾಳ್‌ಗೆ ಮತ್ತಷ್ಟು ಬಲ ತಂದುಕೊಟ್ಟಿತು. ಪಂಚಮಸಾಲಿ ಲಿಂಗಾಯತ ಸಮುದಾಯದ ಯತ್ನಾಳ್‌, ಒಂದು ವೇಳೆ ಹೊಸ ಪಕ್ಷ ಕಟ್ಟಿದರೆ, ಬಿಜೆಪಿಗೆ ಭಾರೀ ಪೆಟ್ಟು ಬೀಳುವುದು ಖಚಿತ.

ಈ ಲೇಖನ ಓದಿದ್ದೀರಾ?: ಮೋದಿ-ಕ್ಸಿ-ಪುಟಿನ್ ಭೇಟಿ: ಅಮೆರಿಕ ವಿರುದ್ಧ ಪ್ರಬಲ ಗುಂಪು ರಚನೆ ಸಾಧ್ಯವೇ?

ಯತ್ನಾಳ್‌ ಅವರ ಹೊಸ ಪಕ್ಷ ಕಟ್ಟುವ ವಿಚಾರವು, ‘ದೊರೆಯಾಳು ರಾಜಕಾರಣ’ vs ‘ಶುದ್ಧ ಹಿಂದುತ್ವ’ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಬಿಜೆಪಿ ಯಡಿಯೂರಪ್ಪರ ಕುಟುಂಬದ ಮೇಲೆ ಅವಲಂಬಿತವಾಗಿದ್ದು, ಇದು ಇತರ ಹಿಂದುತ್ವ ನಾಯಕರನ್ನು ತುಳಿಯುತ್ತಿದೆ. ಬಿಜೆಪಿ ಹಿಂದುಗಳನ್ನು ರಕ್ಷಿಸುತ್ತಿಲ್ಲ ಎಂಬ ಯತ್ನಾಳ್‌ ಅವರ ಆರೋಪ ನಿಧಾನವಾಗಿ ರಾಜ್ಯಾದ್ಯಂತ ಬೇರೂರುತ್ತಿದೆ. ಪಸರಿಸುತ್ತಿದೆ.

ಬಿಜೆಪಿ vs ಯತ್ನಾಳ್ – ಹಿಂದುತ್ವ ರಾಜಕಾರಣವು ಹಿಂದುತ್ವವಾದಿ ಮತಗಳು ಮತ್ತು ಕಾರ್ಯಕರ್ತರನ್ನು ವಿಭಜಿಸುತ್ತದೆ. ಒಂದಷ್ಟು ಮಂದಿ ಬಿಜೆಪಿ ಹಿಂದೆ ಹೋದರೆ, ಮತ್ತಷ್ಟು ಮಂದಿ ಯತ್ನಾಳ್‌ ಹಿಂದೆ ಹೋಗುತ್ತಾರೆ. ಆದರೆ, ಈ ಇಬ್ಬರಲ್ಲಿ, ಯಾರು ಹಿತವರು? ಯಾರು ಹಿಂದುತ್ವ ರಕ್ಷಕರು? ಯಾರು ಹಿಂದುತ್ವ ಕಟ್ಟಾಳುಗಳು?

ಹಾಗೆ ನೋಡಿದರೆ, ಬಿಜೆಪಿ ಮತ್ತು ಯತ್ನಾಳ್ ಇಬ್ಬರೂ ಸ್ವಹಿತಾಸಕ್ತಿ ಉಳ್ಳವರೇ ಆಗಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ತಾವು ಬೆಳೆಯುತ್ತಿದ್ದಾರೆ. ತಮ್ಮ ಮಕ್ಕಳನ್ನು ಬೆಳೆಸುತ್ತಿದ್ದಾರೆ. ತಮ್ಮ ಕುಟುಂಬವನ್ನು ಸುಭದ್ರಗೊಳಿಸಿಕೊಳ್ಳುತ್ತಿದ್ದಾರೆ. ಹಿಂದುತ್ವದ ಕಾಲಾಳುಗಳಾಗಿರುವ ಸಾಮಾನ್ಯ ಬಡ ಕಾರ್ಯಕರ್ತರು ಬೀದಿಗಳಲ್ಲಿ ಹೆಣವಾಗುತ್ತಿದ್ದಾರೆ. ಬದುಕು ಕಳೆದುಕೊಳ್ಳುತ್ತಿದ್ದಾರೆ. ತಮ್ಮ ಕುಟುಂಬಗಳನ್ನು ಅನಾಥ ಮಾಡುತ್ತಿದ್ದಾರೆ.

ಮದ್ದೂರು, ಮಂಡ್ಯ ಸೇರಿದಂತೆ ಇಡೀ ಕರ್ನಾಟಕ, ಇಡೀ ಭಾರತ ಹಿಂದುತ್ವ ರಾಜಕಾರಣದ ಹಿಕಮತ್ತನ್ನು ಅರಿತುಕೊಳ್ಳಬೇಕು. ಹಿಂದುತ್ವ ಭ್ರಾಂತಿಯಿಂದ ಹೊರಬರಬೇಕು. ಸೌಹಾರ್ದ ನಾಡನ್ನು ಕಟ್ಟಬೇಕು. ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ಆಳುವವರನ್ನು ಪ್ರಶ್ನಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

ಈ ದಿನ ಸಂಪಾದಕೀಯ | ಬಸನಗೌಡ ಯತ್ನಾಳ್‌ ಒಪ್ಪಿಸಿದ್ದು ಮನುವಾದಿ ಗಿಳಿಪಾಠ

ನಾಡ ದೇವತೆ ಎಂದು ಕರೆಸಿಕೊಂಡ ಚಾಮುಂಡಿ ದೇವಿ ಹೆಣ್ಣಾಗಿ ದಲಿತ ಮಹಿಳೆಯಿಂದ...

Download Eedina App Android / iOS

X