ಈ ದಿನ ಸಂಪಾದಕೀಯ | ಮೋದಿಭಕ್ತ ಆಗಿದ್ದ ಸೋನಮ್ ವಾಂಗ್ಚುಕ್ ‘ದೇಶದ್ರೋಹಿ’ ಆಗಿದ್ದಾದರೂ ಹೇಗೆ?

Date:

Advertisements

ಸೋನಮ್ ಯಾವ ಕೋನದಿಂದಲೂ ದೇಶದ್ರೋಹಿ ಅಲ್ಲ. ಹಿಂಸಾಚಾರದ ಬೆಂಬಲಿಗ ಅಲ್ಲವೇ ಅಲ್ಲ. ತನ್ನ ನಾಡಿನ ಜನರ ದಿನನಿತ್ಯದ ದೈಹಿಕ ಶ್ರಮವನ್ನು ತಗ್ಗಿಸಲು ಹಲವು ಸಾಧನ ಸಲಕರಣೆಗಳನ್ನು ಕಂಡು ಹಿಡಿದಾತ. ನೀರಿನ ಕೊರತೆಯ ನೀಗಿಸಲು ಹಿಮಸ್ತೂಪಗಳಂತಹ ಬೆರಗಿನ ಹೊಸ ಪರಿಹಾರಗಳನ್ನು ನೀಡಿದಾತ.

ಸೋನಮ್ ವಾಂಗ್ಚುಕ್ ಎಂಬ ಲದ್ದಾಖಿ ಬೌದ್ಧ ಎಂಜಿನಿಯರನ್ನು ಬಂಧಿಸಿ ಸೆರೆಮನೆಗೆ ತಳ್ಳಲಾಗಿದೆ. ಆತನನ್ನು ಬಂಧಿಸಿ ಇರಿಸಿರುವ ಸ್ಥಳವನ್ನೂ ಕೂಡ ಕೇಂದ್ರ ಸರ್ಕಾರ ಹೊರ ಹಾಕಿಲ್ಲ.

ಈ ಮೊದಲು ಮೋದಿ ಭಕ್ತನಾಗಿದ್ದ. ಅಲ್ಲಿಯ ತನಕ ದೇಶಪ್ರೇಮಿಯಾಗಿದ್ದ, ಆದರೆ ತನ್ನ ತಾಯ್ನೆಲದ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರದ ವಿರುದ್ಧ ದನಿ ಎತ್ತಿದ ಗಳಿಗೆಯಲ್ಲಿಯೇ ಮೋದಿ ಸರ್ಕಾರದ ಪಾಲಿಗೆ ದೇಶದ್ರೋಹಿ ಆಗಿ ಹೋಗಿದ. ಜಾತಿ ಜನಗಣತಿ, ದಲಿತ ದಮನಿತರಿಗೆ ಮೀಸಲಾತಿ, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಂತಹ ವಿಷಯಗಳ ಕುರಿತು ಆತನದು ಜಾಣಮೌನ. ಆದರೂ ಆತನನ್ನು ದೇಶದ್ರೋಹಿಯ ಪಟ್ಟಿಗೆ ಸೇರಿಸಲಾಗಿದೆ. ಜನಪರವಾಗಿ ದನಿ ಎತ್ತುವುದು ಸರ್ಕಾರದ ವಿರೋಧ ಎಂಬ ಹುಸಿ ಕಥಾನಕ ಕಟ್ಟಿ ನಿಲ್ಲಿಸಲಾಗಿದೆ. ಲದ್ದಾಖ್‌ನಲ್ಲಿ ವಿರೋಧ ಪ್ರದರ್ಶನಗಳು ಹಿಂಸಾಚಾರಕ್ಕೆ ತಿರುಗಿದ್ದನ್ನು ಸೋನಮ್ ಒಪ್ಪಲಿಲ್ಲ. ಉಪವಾಸ ಸತ್ಯಾಗ್ರಹವನ್ನು ಕೂಡ ತಕ್ಷಣವೇ ನಿಲ್ಲಿಸಿದರು. ಆದರೂ, ಸೋನಮ್ ವಾಂಗ್ಚುಕ್ ಕುರಿತ ಮಾಹಿತಿಗಳನ್ನು ಹೆಕ್ಕಿ ಅವುಗಳಿಗೆ ದೇಶದ್ರೋಹಿಯ ವೇಷ ತೊಡಿಸಲಾಯಿತು.

Advertisements

ತನಗೆ ಆಗದವರನ್ನು ಸರ್ಕಾರ ಬಂಧಿಸುತ್ತದೆ, ಬಿಜೆಪಿಯ ಐಟಿ ಸೆಲ್‌ನಿಂದ ಕಟ್ಟುಕತೆಗಳನ್ನು ಹುಟ್ಟಿ ಹಾಕಿ ಅಪಪ್ರಚಾರ ಮಾಡಿಸುತ್ತದೆ. ಬಂಧನವನ್ನು ಸಮರ್ಥಿಸಿಕೊಳ್ಳುತ್ತದೆ. ದೇಶದ್ರೋಹಿ ಎನ್ನುತ್ತದೆ. ಸುಳ್ಳು, ನಕಲಿ, ಅರ್ಧಸತ್ಯದ ವಿಡಿಯೋ ಕ್ಲಿಪ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತೇಲಿ ಬಿಡುತ್ತದೆ. ದೇಶಕ್ಕೆ ಅಪಾಯಕಾರಿ ಎಂದು ಬಿಂಬಿಸುತ್ತದೆ. ಈ ಹಂತದಲ್ಲಿ ಗೋದಿ ಮೀಡಿಯಾ ಕೂಡ ಕೈ ಜೋಡಿಸಿ ಸುಳ್ಳು ಕಥನವ ಹೆಣೆದು ಜನತೆಗೆ ಉಣಬಡಿಸುತ್ತದೆ.ಇದು ಮಾಮೂಲು ಸೂತ್ರವಾಗಿ ಹೋಗಿಬಿಟ್ಟಿದೆ. ಇದನ್ನು ಬಿಟ್ಟು ಈ ಸರ್ಕಾರಕ್ಕೆ ಬೇರೇನಾದರೂ ಗೊತ್ತಿದೆಯೇ?

ಸೋನಮ್ ಯಾವ ಕೋನದಿಂದಲೂ ದೇಶದ್ರೋಹಿ ಅಲ್ಲ. ಹಿಂಸಾಚಾರದ ಬೆಂಬಲಿಗ ಅಲ್ಲವೇ ಅಲ್ಲ. ತನ್ನ ನಾಡಿನ ಜನರ ದಿನನಿತ್ಯದ ದೈಹಿಕ ಶ್ರಮವನ್ನು ತಗ್ಗಿಸಲು ಹಲವು ಸಾಧನ ಸಲಕರಣೆಗಳನ್ನು ಕಂಡು ಹಿಡಿದಾತ. ನೀರಿನ ಕೊರತೆಯ ನೀಗಿಸಲು ಹಿಮಸ್ತೂಪಗಳಂತಹ ಬೆರಗಿನ ಹೊಸ ಪರಿಹಾರಗಳನ್ನು ನೀಡಿದಾತ. ಅತ್ಯಂತ ಎತ್ತರದ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಭಾರತೀಯ ಯೋಧರಿಗೆ ಎಲುಬು ಕೊರೆಯುವ ಚಳಿಯಲ್ಲಿ ಬೆಚ್ಚಗಿರಲು, ಕೆಂಡದ ಬಿಸಿಲು ಕಾರುವ ಕಾಲದಲ್ಲಿ ತಣ್ಣಗಿರಲು ವಿಶೇಷ ವಸತಿ ವ್ಯವಸ್ಥೆಯನ್ನು ಕಂಡು ಹಿಡಿದಾತ. ನಾನು ಹೊರಗೆ ಉಳಿಯದೆ, ಜೈಲಿಗೆ ಹೋಗುವುದರಿಂದ ನನ್ನ ದೇಶ ಹೆಚ್ಚು ಎಚ್ಚರಗೊಳ್ಳಲಿದೆ ಎಂದು ಸೋನಮ್ ಹೇಳಿದ್ದುಂಟು.

ಶಿಕ್ಷಣ, ಪರಿಸರ, ಚೀನೀ ಆಕ್ರಮಣ, ಲದ್ದಾಖಿನ ಸಂವೇದನಾಶೀಲ ಪರಿಸರ ಕುರಿತು ಕಳೆದ ಎರಡು ವರ್ಷಗಳಿಂದ ಸೋನಮ್ ನಡೆಸುತ್ತಿರುವ ಇತ್ತೀಚಿನ ತಿಂಗಳುಗಳಲ್ಲಿ ತೀವ್ರಗತಿ ಹಿಡಿಯಿತು. ಅವರ ವಿರುದ್ಧ ಕಟ್ಟುಕತೆಗಳನ್ನು ಹುಟ್ಟಿಸಿ ಹಬ್ಬಿಸಲಾಯಿತು. ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಲಾಯಿತು. ಸೋನಮ್ ಅವರನ್ನು ಚೀನೀ ಏಜೆಂಟ್ ಎಂದು ಕರೆದ ‘ಆರೆಸ್ಸೆಸ್-ಬಿಜೆಪಿ ಪತ್ರಕರ್ತರು’, ಆನಂತರ ಲದ್ದಾಖಿಗೆ ತೆರಳಿ ಕ್ಷಮೆ ಕೇಳಿದ್ದಾರೆ. ಮಾನಹಾನಿ ಮೊಕದ್ದಮೆ ಅವರನ್ನು ನೆಲಕ್ಕೆ ಬಗ್ಗಿಸಿದೆ. ಲದ್ದಾಖಿನಲ್ಲಿ ಸೋನಮ್ ಮಾಡಿರುವ ಜನೋಪಯೋಗಿ- ಪರಿಸರಸ್ನೇಹಿ ಕೆಲಸಕಾರ್ಯಗಳನ್ನು ಸ್ಥಳಕ್ಕೆ ತೆರಳಿ ನೋಡುವಂತೆ ಶಿಫಾರಸು ಮಾಡಿದ್ದಾರೆ ಈ ಪತ್ರಕರ್ತರು. ಸೋನಮ್ ವಿರುದ್ಧ ಸುಳ್ಳು ಕಥಾನಕ ಕಟ್ಟುವ ಪಿತೂರಿಯಲ್ಲಿ ತಾವು ಪಾಲುದಾರರಾಗಿದ್ದಕ್ಕೆ ತಮಗೆ ಲಜ್ಜೆಯಾಗುತ್ತಿದೆ ಎಂಬ ಮಾತನ್ನು ಕೂಡ ಈ ಚೇಲಾ ಚಮಚಾಗಳು ಆಡಿದ್ದಾರೆ. ಗಲಭೆಗಳಿಗೆ ಪ್ರಚೋದನೆ ನೀಡಿರುವ ಆರೋಪವನ್ನು ಆತನ ಮೇಲೆ ಹೊರಿಸಲಾಗಿದೆ.

ಹೌದು, ಸೋನಮ್ ಪಾಕಿಸ್ತಾನಕ್ಕೆ ಹೋಗಿದ್ದರು. ಅವರೊಂದಿಗೆ ಇತರರೂ ಹೋಗಿದ್ದರು. ಅಲ್ಲಿಗೆ ಹೋಗಲು ಮೋದಿ ಸರ್ಕಾರವೇ ಅನುಮತಿ ನೀಡಿತ್ತು. ಪಾಕಿಸ್ತಾನದ ಪ್ರತಿಷ್ಠಿತ ಇಂಗ್ಲಿಷ್ ದಿನಪತ್ರಿಕೆ ‘ಡಾನ್’ (ಸೂರ್ಯೋದಯ), ಹವಾಮಾನ ಬದಲಾವಣೆಯ ಬಿಕ್ಕಟ್ಟು ಕುರಿತು ಏರ್ಪಡಿಸಿದ್ದ ಸಮ್ಮೇಳನ ಅದು. ಇಷ್ಟು ಮಾತ್ರಕ್ಕೇ ಅವರಿಗೆ ಪಾಕಿಸ್ತಾನಿ ಏಜೆಂಟ್ ಎಂದ ಹಣೆಪಟ್ಟಿ ಅಂಟಿಸಬೇಕೇ? 2015ರಲ್ಲಿ ಮತ್ತೊಂದು ದೇಶಕ್ಕೆ ತೆರಳಿದ್ದ ಪ್ರಧಾನಿ ಮೋದಿಯವರು, ವಾಪಸಾತಿ ಮಾರ್ಗಮಧ್ಯದಲ್ಲಿ ಪಾಕಿಸ್ತಾನದಲ್ಲಿ ಇಳಿದು ಅಚ್ಚರಿಯ ಭೇಟಿ ಕೊಟ್ಟಿದ್ದರು. ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಆತಿಥ್ಯ ಸ್ವೀಕರಿಸಿದ್ದರು. ಷರೀಫ್ ತಾಯಿಯವರಿಗೆ ಸೀರೆಗಳ ಉಡುಗೊರೆ ನೀಡಿದ್ದರಲ್ಲ?

ಲದ್ದಾಖ್ ಗೆ ಸ್ವಾಯತ್ತತೆ ನೀಡಿ, ಅಲ್ಲಿನ ನೆಲ-ಜಲ-ಸಂಸ್ಕೃತಿ ಅಸ್ಮಿತೆಯನ್ನು ರಕ್ಷಿಸುವುದಾಗಿ ಬಿಜೆಪಿ 2019ರ ಚುನಾವಣಾ ಪ್ರಣಾಳಿಕೆಯಲ್ಲೇ ಆಶ್ವಾಸನೆ ನೀಡಿತ್ತು. ಆದರೆ ಕೊಟ್ಟ ಮಾತನ್ನು ನಡೆಸಿಕೊಡಲಿಲ್ಲ. ಬದಲಿಗೆ ಬಹುರಾಷ್ಟ್ರೀಯ ಕಂಪನಿಗಳಿಗೆ ಲದ್ದಾಖಿನ ಹೆಬ್ಬಾಗಿಲಗಳನ್ನು ತೆರೆಯಲಾಯಿತು.

ಪಾಕಿಸ್ತಾನ ನಡೆಸಿದ ಮೋಸದ ಕಾರ್ಗಿಲ್ ಯುದ್ಧಕ್ಕೆ ತಕ್ಕ ಎದುರೇಟು ನೀಡಿ ಗೆದ್ದಿತ್ತು ಭಾರತ. ಈ ಯುದ್ಧದ ಮುಂಚೂಣಿಯಲ್ಲಿದ್ದು ಮೂರು ತಿಂಗಳ ಕಾದಾಡಿದ ದಿಟ್ಟ ಯೋಧ ಸೆವಾಂಗ್ ಥರ್ಚಿನ್ ಲದ್ದಾಖಿನ ಪುತ್ರ. ಪಾಕಿಸ್ತಾನಿ ಸೇನೆ ಈತನನ್ನು ಕೊಲ್ಲಲಾಗಲಿಲ್ಲ. ಆದರೆ ನಮ್ಮ ದೇಶದ ಪೊಲೀಸರು ಕೊಂದರು. ಆದರೆ ಸೆ.24ರಂದು ಲೇಹ್‌ನಲ್ಲಿ ನಡೆದ ಯುವಜನರ ಪ್ರತಿಭಟನಾ ಪ್ರದರ್ಶನದಲ್ಲಿ ಪೊಲೀಸರು ಹಾರಿಸಿದ ಗುಂಡುಗಳಿಗೆ ಥರ್ಚಿನ್ ಬಲಿಯಾಗಿದ್ದ. ಬೆನ್ನಿಗೆ ಹೊಕ್ಕ ಗುಂಡು ಎದೆಯಿಂದ ತೂರಿ ಆಚೆ ಬಂದಿತ್ತು. ದೇಶಪ್ರೇಮಿಯನ್ನು ನಡೆಸಿಕೊಳ್ಳುವ ರೀತಿಯೇ ಇದು ಎಂಬ ಆತನ ತಂದೆಯ ಪ್ರಶ್ನೆಗೆ ಮೋದಿ ಸರ್ಕಾರ ಉತ್ತರ ಕೊಡಬೇಕಿದೆ. ಪ್ರತಿಭಟನೆಯನ್ನು ಚೆದುರಿಸಲು ಪೊಲೀಸರು ಗುಂಡು ಹಾರಿಸಬೇಕಿರುವುದು ಗುಂಪಿನ ಮೊಣಕಾಲು ಮಟ್ಟದಿಂದ ಕೆಳಕ್ಕೆ. ಆದರೆ ಹಾರಿಸಲಾದ ಗುಂಡುಗಳು ಯುವಕರ ತಲೆ ಅಥವಾ ಎದೆಗಳನ್ನು ಸೀಳಿರುವ ಮರ್ಮವೇನು? ನಿಶ್ಯಸ್ತ್ರ ಪ್ರತಿಭಟನಾಕಾರರ ಚೆದುರಿಸಲು ಅವರ ಮೇಲೆ ಗುಂಡುಗಳನ್ನು ಸಿಡಿಸಬೇಕಿತ್ತೇ? ಥರ್ಚಿನ್ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. 80 ಮಂದಿ ತೀವ್ರ ಗಾಯಗೊಂಡು ಕೈಕಾಲು ಮುರಿದುಕೊಂಡು ಆಸ್ಪತ್ರೆಗಳಲ್ಲಿ ಬಿದ್ದಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ನೆಯ ಕಲಮಿನ ಪ್ರಕಾರ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು 2019ರಲ್ಲಿ ರದ್ದು ಮಾಡಲಾಯಿತು.

ವಿಶೇಷ ಸ್ಥಾನಮಾನ ಕಳೆದುಕೊಂಡಿರುವ ಜಮ್ಮು-ಕಾಶ್ಮೀರ ಇದೀಗ ದೆಹಲಿಯಂತೆ ವಿಧಾನಸಭೆಯನ್ನು ಉಳ್ಳ ಕೇಂದ್ರಾಡಳಿತ ಪ್ರದೇಶ. ಸ್ವಾಯತ್ತತೆಯ ವಿಶೇಷ ಸ್ಥಾನಮಾನಗಳು ಒತ್ತಟ್ಟಿಗಿರಲಿ, ಪೂರ್ಣ ರಾಜ್ಯದ ಸ್ಥಾನಮಾನದಿಂದ ಕೂಡ ವಂಚಿತ. ಮುಸ್ಲಿಂ ಬಹುಸಂಖ್ಯಾತ ಎಂಬ ಯಾವ ಸ್ವರೂಪವನ್ನು ಮುಕ್ಕಾಗದಂತೆ ಕಾಪಾಡಿಕೊಳ್ಳಬಯಸಿತ್ತೋ, ಅದೇ ಸ್ವರೂಪವನ್ನು ಅಳಿಸಿ ಹಾಕಲಾಯಿತು. ಕಾಶ್ಮೀರ ಕಣಿವೆಯ ಜನಸಂಖ್ಯಾ ಸ್ವರೂಪವನ್ನು ಬದಲಿಸುವುದೇ ಕಾಶ್ಮೀರ ಸಮಸ್ಯೆಗೆ ಪರಿಹಾರವೆಂಬುದು ಬಿಜೆಪಿ ಮತ್ತು ಅದರ ತಾಯಿ ಬೇರು ಆರ್.ಎಸ್.ಎಸ್.ನ ಅಚಲ ವಿಶ್ವಾಸ.

ಜಮ್ಮು-ಕಾಶ್ಮೀರ ಮತ್ತು ಲದ್ದಾಖ್. ಎರಡೂ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳು. ಜಮ್ಮು-ಕಾಶ್ಮೀರವು ದೆಹಲಿ ಮತ್ತು ಪುದುಚೆರಿ ಮಾದರಿಯಲ್ಲಿ ರಾಜ್ಯ ವಿಧಾನಸಭೆಯನ್ನು ಹೊಂದಿರುತ್ತದೆ. ಚಂಡೀಗಢ, ದಾದ್ರಾ-ನಗರಹವೇಲಿ ಮಾದರಿಯಲ್ಲಿ ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿದೆ ಲದ್ದಾಖ್.

2020ರ ಗಾಲ್ವಾನ್ ಕಣಿವೆಯ ಕದನದ ನಂತರ ಭಾರತದ 4,056 ಚದರ ಕಿ.ಮೀ.ಗಳಷ್ಟು ವಿವಾದರಹಿತ ಭೂಪ್ರದೇಶವನ್ನು ಕಬಳಿಸಲು ಮೋದಿ ಚೀನಾಗೆ ಅವಕಾಶ ಮಾಡಿಕೊಟ್ಟಿದ್ದರೂ ‘ಯಾರೂ ಒಳ ನುಗ್ಗಿಲ್ಲ….’ ಎಂದು ಹೇಳುತ್ತಿದ್ದಾರೆಂದರೆ ಅವರು ಚೀನಾದೊಂದಿಗೆ ರಾಜೀ ಮಾಡಿಕೊಂಡಿದ್ದಾರೆಂದೇ ಅರ್ಥವೆಂದು ಮೋದಿಯವರನ್ನು ಟೀಕಿಸಿದ್ದರು ಅವರದೇ ಪಕ್ಷದ ಸುಬ್ರಹ್ಮಣ್ಯನ್ ಸ್ವಾಮಿ. ಇಂತಹ ಚೀನೀ ಆಕ್ರಮಣದ ವಿರುದ್ಧ ದನಿ ಎತ್ತಿದ ಸೋನಮ್ ದೇಶದ್ರೋಹಿಯೇ?

ಜಮ್ಮು-ಕಾಶ್ಮೀರವನ್ನು ವಿಧಾನಸಭೆಸಹಿತ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದರೆ, ಲದ್ದಾಖ್‌ಗೆ ಈ ಸವಲತ್ತನ್ನೂ ನೀಡಲಾಗಿಲ್ಲ. ಈ ಬೌದ್ಧ ಧರ್ಮೀಯ ಸೀಮೆ ತಬ್ಬಲಿಯಾಗಿದೆ. ಸೋನಮ್ ವಾಂಗ್ ಚುಕ್ ನೇತೃತ್ವದ ಲದ್ದಾಖ್ ತನಗೆ ಬಗೆಯಲಾಗಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸಿದೆ.

ಇದನ್ನೂ ಓದಿ ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!

ಲದ್ದಾಖ್‌ನ ಬೌದ್ಧ ಜನಬಾಹುಳ್ಯದ ಲೇಹ್ ಮತ್ತು ಮುಸ್ಲಿಮ್ ಜನ ಬಾಹುಳ್ಯದ ಕಾರ್ಗಿಲ್ ಸೀಮೆಯ ಬೇಡಿಕೆಗಳನ್ನು ಈಡೇರಿಸಬೇಕು, ಸೋನಮ್ ವಾಂಗ್ಚುಕ್ ಮೇಲಿನ ಕೇಸುಗಳನ್ನು ವಾಪಸು ಪಡೆದು ಅವರನ್ನು ಬಿಡುಗಡೆ ಮಾಡಬೇಕು ಎಂದು ಲೇಹ್ ಅಪೆಕ್ಸ್ ಬಾಡಿ (ಎಬಿಎಲ್) ಮತ್ತು ಕಾರ್ಗಿಲ್ ಡೆಮಕ್ರಟಿಕ್ ಅಲಯನ್ಸ್ (ಕೆಡಿಎ) ಆಗ್ರಹಿಸಿವೆ.

ಮೋದಿ ಸರ್ಕಾರ ದಮನ ನೀತಿಯನ್ನು ಕೈಬಿಡಬೇಕು. ಜನತಾಂತ್ರಿಕ ವಿಧಾನಗಳನ್ನು ಗೌರವಿಸಬೇಕು. ಲದ್ದಾಖಿನ ಸ್ನೇಹಪರ ಜನರ ಬೇಡಿಕೆಗಳನ್ನು ಗೌರವಿಸಿ ಈಡೇರಿಸಬೇಕು. ಅವರ ಪ್ರೀತಿಯನ್ನು ಮರಳಿ ಗಳಿಸಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

ಈ ದಿನ ಸಂಪಾದಕೀಯ | ಬಸನಗೌಡ ಯತ್ನಾಳ್‌ ಒಪ್ಪಿಸಿದ್ದು ಮನುವಾದಿ ಗಿಳಿಪಾಠ

ನಾಡ ದೇವತೆ ಎಂದು ಕರೆಸಿಕೊಂಡ ಚಾಮುಂಡಿ ದೇವಿ ಹೆಣ್ಣಾಗಿ ದಲಿತ ಮಹಿಳೆಯಿಂದ...

ಈ ದಿನ ಸಂಪಾದಕೀಯ | ರಸ್ತೆ ಗುಂಡಿ ಮುಚ್ಚುವುದು ಸಚಿವ ಡಿ.ಕೆ. ಶಿವಕುಮಾರ್ ಕೆಲಸವೇ?

ಇತ್ತೀಚಿನ ದಿನಗಳಲ್ಲಿ ಆಳುವ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರಶ್ನಿಸುವ, ಪ್ರತಿಭಟಿಸುವ ಕೆಚ್ಚು...

Download Eedina App Android / iOS

X