ಈ ದಿನ ಸಂಪಾದಕೀಯ | ಧರ್ಮಸ್ಥಳ, ದಸರಾ, ಗಣೇಶ ಮತ್ತು ಅಶೋಕ್ ಮೋಚಿ

Date:

Advertisements
ಧರ್ಮಸ್ಥಳದ ಧರ್ಮಯಾತ್ರೆ, ದಸರಾದ ಚಾಮುಂಡಿ ಚಲೋ, ಈಗ ಗಣೇಶನ ನೆಪದಲ್ಲಿ ಗಲಭೆ- ಇವುಗಳಿಂದ ಜನರ ಸಮಸ್ಯೆಗಳು ನಿವಾರಣೆಯಾಗುತ್ತವೆಯೇ? ಅಸಲಿಗೆ ಬಿಜೆಪಿ ನಾಯಕರಿಗೆ ಬೇಕಾಗಿರುವುದಾದರೂ ಏನು?

ಮಂಡ್ಯ ಜಿಲ್ಲೆಯ ಮದ್ದೂರು ಗಣೇಶೋತ್ಸವ ಸಂದರ್ಭದಲ್ಲಿ ‘ರಂಜಾನ್‌ ಸಮಯದಲ್ಲಿ ದೇವಾಲಯದ ಮುಂಭಾಗ ಮುಸ್ಲಿಮರು ಮೆರವಣಿಗೆ ಹೋಗಬಹುದು. ಆದರೆ ಹಿಂದೂಗಳು ಮಸೀದಿ ಮುಂಭಾಗ ಮೌನವಾಗಿರಬೇಕು. ಕಾಂಗ್ರೆಸ್‌ ಅಧಿಕಾರದಲ್ಲೇ ಇದ್ದರೆ, ರಾಜ್ಯದೊಳಗೆ ಹಲವು ಪಾಕಿಸ್ತಾನಗಳು ಉದ್ಭವವಾಗುತ್ತವೆ’ ಎಂದಿದ್ದಾರೆ ವಿಪಕ್ಷ ನಾಯಕ ಆರ್. ಅಶೋಕ್.

ಮುಸ್ಲಿಮರು ಮತ್ತು ಪಾಕಿಸ್ತಾನವನ್ನು ಅನಗತ್ಯವಾಗಿ ಎಳೆದು ತಂದ ಅಶೋಕ್ ಮಾತಿಗೆ ಮತ್ತಷ್ಟು ಉಪ್ಪು ಹಾಕಲು, ‘ಟಿಪ್ಪು ಮತ್ತು ಅವರ ಅಪ್ಪನನ್ನೇ ಬಿಟ್ಟಿಲ್ಲ ನಾವು. ಇನ್ನು ನಿಮ್ಮನ್ನು ಬಿಡುತ್ತೀವಾ? ನಮಗೆ ತೊಡೆ ತಟ್ಟುವ ಕೆಲಸ ಕೊಡಬೇಡಿ. ಅಗತ್ಯ ಬಿದ್ದರೆ ನಾವು ತೊಡೆನೂ ತಟ್ಟುತ್ತೇವೆ, ತಲೆನೂ ತೆಗೆಯುತ್ತೇವೆ’ ಎಂದಿದ್ದಾರೆ ಬಿಜೆಪಿಯ ಸಿ.ಟಿ. ರವಿ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಎಚ್ಚರೆಚ್ಚರ! ನೇಪಾಳದ ಬೆಂಕಿ ‘ಸರ್ವಾಧಿಕಾರಿ’ಗಳ ಬುಡಕ್ಕೂ ಹರಡೀತು!

ಟಿಪ್ಪು ಮತ್ತು ಅವರಪ್ಪ ಮೈಸೂರು ರಾಜ್ಯವನ್ನು ಆಳ್ವಿಕೆ ಮಾಡಿದರು, ಮರಣ ಹೊಂದಿದರು. ಅದು ರಾಜಪ್ರಭುತ್ವ. ಅದೇ ರೀತಿ ಬಿಜೆಪಿಯ ನಾಯಕರು ಕೂಡ ರಾಜ್ಯದಲ್ಲಿ ಅಧಿಕಾರದಲ್ಲಿದ್ದರು, ಚುನಾವಣೆ ಸೋತು ಕೆಳಗಿಳಿದರು. ಇದು ಪ್ರಜಾಪ್ರಭುತ್ವ.

ಆದರೆ ಇವತ್ತಿನ ಸಂದರ್ಭಕ್ಕೆ ಟಿಪ್ಪು ಮತ್ತು ಅವರಪ್ಪನ ಸುದ್ದಿ ಏಕೆ? ಪಾಕಿಸ್ತಾನದ ಮಾತೇಕೆ? ತಲೆ ತೆಗೆಯುವ ತಿಳಿಗೇಡಿತನದ ತಿಮಿರೇಕೆ? ಧರ್ಮಸ್ಥಳದ ಧರ್ಮಯಾತ್ರೆ, ದಸರಾದ ಚಾಮುಂಡಿ ಚಲೋ, ಈಗ ಗಣೇಶನ ನೆಪದಲ್ಲಿ ಗಲಭೆ- ಇವುಗಳಿಂದ ಜನರ ಸಮಸ್ಯೆಗಳು ನಿವಾರಣೆಯಾಗುತ್ತವೆಯೇ? ಅಸಲಿಗೆ ಬಿಜೆಪಿ ನಾಯಕರಿಗೆ ಬೇಕಾಗಿರುವುದಾದರೂ ಏನು?

ಗಣೇಶೋತ್ಸವಗಳು ಮೇಲ್ನೋಟಕ್ಕೆ ಧಾರ್ಮಿಕ-ಸಾಮಾಜಿಕ ಆಚರಣೆಗಳಂತೆ ಕಂಡರೂ, ಅವುಗಳ ಹಿಂದೆ ಹಿಂದುತ್ವದ ಸೈದ್ಧಾಂತಿಕ ಹಿಡನ್ ಅಜೆಂಡಾವಿದೆ. ಅಂತಹ ಆಚರಣೆಗಳು ಧಾರ್ಮಿಕ ಧ್ರುವೀಕರಣವನ್ನು ಹೆಚ್ಚಿಸಿ, ಅಲ್ಪಸಂಖ್ಯಾತರನ್ನು ದಮನಿಸುತ್ತವೆ. ಅವರ ಹಕ್ಕುಗಳನ್ನು ಇಲ್ಲವಾಗಿಸುವ ಅಪಾಯವನ್ನು ಅಡಗಿಸಿಟ್ಟುಕೊಂಡಿವೆ. ಇದು ಬಹುತ್ವ ಭಾರತಕ್ಕೆ ಧಕ್ಕೆ ತರುತ್ತದೆ.

ಅಸಲಿಗೆ ಬಿಜೆಪಿಗೆ ಬೇಕಾಗಿರುವುದು ಗಣೇಶನೂ ಅಲ್ಲ, ಗಣೇಶೋತ್ಸವಗಳೂ ಅಲ್ಲ, ಹಿಂದೂಗಳಂತೂ ಅಲ್ಲವೇ ಅಲ್ಲ. ಬೇಕಿರುವುದು ಟಿಪ್ಪು, ಪಾಕಿಸ್ತಾನ ಮತ್ತು ಮುಸ್ಲಿಮರು. ಹಾಗಾಗಿಯೇ ಮದ್ದೂರಿನ ಗಣೇಶೋತ್ಸವ ಮೆರವಣಿಗೆಯಲ್ಲಿ ಸೇರಿದ ಜನಸ್ತೋಮದೆದುರು ಟಿಪ್ಪು, ಪಾಕಿಸ್ತಾನ, ಮುಸ್ಲಿಮರನ್ನು ಎಳೆದು ತಂದರು. ಅವರ ವಿರುದ್ಧ ವಿನಾಕಾರಣ ವಿಷ ಕಾರಿದರು. ಪ್ರಚೋದನಕಾರಿ ಮಾತುಗಳನ್ನಾಡಿದರು.

ಬಹುಸಂಖ್ಯಾತರನ್ನು ಬೀದಿಗಿಳಿಸುವ ಕಲೆ ಬಿಜೆಪಿಗೆ ಕರಗತವಾಗಿದೆ. ಬಹುಸಂಖ್ಯಾತರೊಂದಿಗೆ ದೇವರು-ಧರ್ಮವನ್ನು ಬೆರೆಸುವ, ಉನ್ಮಾದಕ್ಕೇರಿಸುವ ಬಿಜೆಪಿ, ಉದ್ವಿಗ್ನಕಾರಿ ಮಾತುಗಳ ಮೂಲಕ ಅಲ್ಪಸಂಖ್ಯಾತರ ಬಗ್ಗೆ ಅಸಹನೆಯ ಬೀಜ ಬಿತ್ತುತ್ತದೆ. ಅವರನ್ನು ದ್ವೇಷಿಸುವಂತೆ ಮಾಡುತ್ತವೆ. ಕೆರಳಿಸುತ್ತವೆ, ರೊಚ್ಚಿಗೇಳಿಸುತ್ತವೆ, ಬೆಂಕಿ ಹಚ್ಚುತ್ತದೆ. ಈ ಬೆಂಕಿಯಲ್ಲಿ ಬಿಜೆಪಿಯ ರಾಜಕೀಯ ಬೇಳೆ ಬೇಯುತ್ತದೆ. ಅಧಿಕಾರದ ಕುರ್ಚಿ ಲಭಿಸುತ್ತದೆ.

ನಿನ್ನೆ ಮದ್ದೂರಿನ ರಸ್ತೆಗಳಲ್ಲಿ ಕೇಸರಿ ಶಾಲು ಬೀಸಿದ, ಪ್ರಚೋದನಕಾರಿ ಮಾತುಗಳನ್ನಾಡಿದ ಬಿಜೆಪಿ ನಾಯಕರು ಇಂದು ನಾಪತ್ತೆಯಾಗಿದ್ದಾರೆ. ಆದರೆ ಆ ಕೇಸರಿ ನಾಯಕರೊಂದಿಗೆ ನಿಂತು ಕೇಸರಿ ಶಾಲು ಸುತ್ತಿಕೊಂಡು ಮುಸ್ಲಿಮರ ವಿರುದ್ಧ ಕಿಡಿಕಾರಿದ ಸ್ಥಳೀಯ ಯುವಕರು, ಇಂದು ಮದ್ದೂರಿನ ಮುಸ್ಲಿಮರನ್ನು ಎದುರುಗೊಳ್ಳಬೇಕಿದೆ. ಅವರೊಂದಿಗೆ ನಿತ್ಯದ ಜಂಜಾಟದ ಬದುಕನ್ನು ಹಂಚಿಕೊಳ್ಳಬೇಕಿದೆ. ಇದು ವಾಸ್ತವ.

ಇದನ್ನು ಇಲ್ಲಿ ಏಕೆ ಪ್ರಸ್ತಾಪಿಸಲಾಗುತ್ತಿದೆ ಎಂದರೆ, 23 ವರ್ಷಗಳ ಹಿಂದೆ ಗುಜರಾತಿನ ಅಹಮದಾಬಾದ್ ಬೀದಿಗಳಲ್ಲಿ ಹಸುವಿನ ವಿಷಯಕ್ಕೆ ಬಿಜೆಪಿ ಮತ್ತು ಸಂಘಪರಿವಾರ ಇದೇ ರೀತಿ ಯುವಕರನ್ನು ಪ್ರಚೋದಿಸಿತ್ತು. ಪ್ರಚೋದನೆಗೊಳಗಾದ ಯುವಕರ ಗುಂಪು ನೆರೆಯ ಮುಸ್ಲಿಮರನ್ನು ಹಿಡಿದು ಬಡಿದಿತ್ತು. ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರವೆಸಗಿತ್ತು. ಅವರ ಆಸ್ತಿಗಳನ್ನು ಲೂಟಿ ಮಾಡಿತ್ತು. ಆ ಕೃತ್ಯದಲ್ಲಿ ದಲಿತ ಯುವಕ ಅಶೋಕ್ ಮೋಚಿ, ತಲೆಗೆ ಕೇಸರಿ ಬಟ್ಟೆ ಕಟ್ಟಿದ್ದ, ಕೈಯಲ್ಲಿ ಕಬ್ಬಿಣದ ಸಲಾಕೆ ಹಿಡಿದಿದ್ದ, ಮುಂಚೂಣಿಯಲ್ಲಿದ್ದ. ದೇಶದಾದ್ಯಂತ ಸುದ್ದಿಯಾಗಿದ್ದ, ಮಾಧ್ಯಮಗಳ ಮುಖಪುಟದಲ್ಲಿ ರಾರಾಜಿಸಿದ್ದ.

23 ವರ್ಷಗಳ ನಂತರ, ಅದೇ ಅಶೋಕ್ ಮೋಚಿ ಅಹಮದಾಬಾದ್ ನಗರದ ರಸ್ತೆಯ ಪಕ್ಕ ಶೂ ರಿಪೇರಿ ಮಾಡುತ್ತ ಕೂತಿದ್ದಾನೆ. ಅಂದರೆ, ಆತನ ತಲೆಗೆ ದೇವರು-ಧರ್ಮ-ಮತಾಂಧತೆಯ ವಿಷ ತುಂಬಿ ಮುಸ್ಲಿಮರ ಮೇಲೆ ದಾಳಿಗೆ ನಿಲ್ಲಿಸಿದ ನಾಯಕರು ಇಂದು ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ. ಅವರು, ಅವರ ಮಕ್ಕಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಅವರ ಮಾತು ಕೇಳಿ ಬೀದಿಗಿಳಿದ, ಬಡಿದಾಡಿದ ಹಿಂದೂ ಅಶೋಕ್ ಮೋಚಿ ಇವತ್ತಿಗೂ ಬೀದಿಯಲ್ಲೇ ಇದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರಾಹುಲ್ ಹೇಳಿದ್ದನ್ನೆಲ್ಲ ಮೋದಿ ಮಾಡುತ್ತಿದ್ದಾರಲ್ಲ?

ದೂರದ ಗುಜರಾತಿನತ್ತ ನೋಡುವುದೇಕೆ, ನಮ್ಮದೇ ಕರಾವಳಿಯತ್ತ ಕಣ್ಣಾಡಿಸಿದರೂ ಸಾಕು, ಬಿಜೆಪಿಯ ಕೋಮುರಾಜಕಾರಣದ ಕುತಂತ್ರ ಕಣ್ಣಿಗೆ ರಾಚುತ್ತದೆ. ಕೇವಲ 20 ವರ್ಷಗಳ ಹಿಂದೆ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದ್ದ ಕರಾವಳಿ, ಇಂದು ಕೋಮುವಾದದ ಪ್ರಯೋಗ ಶಾಲೆಯಾಗಿ ಪರಿವರ್ತನೆಯಾಗಿದೆ. ಗಲಭೆ, ದೊಂಬಿ, ಕೊಲೆಗಳಿಗೆ ಕುಖ್ಯಾತಿ ಗಳಿಸಿದೆ. ನೆಮ್ಮದಿ ಕಳೆದುಕೊಂಡು ನಾಶವಾಗಿದೆ.

ಮಂಡ್ಯ ಜಿಲ್ಲೆ ಕರಾವಳಿಯಾಗದಿರಲಿ. ಆಗದಂತೆ ನೋಡಿಕೊಳ್ಳಬೇಕಾದ ಗುರುತರ ಜವಾಬ್ದಾರಿ ಮಂಡ್ಯ ಜಿಲ್ಲೆಯ ಮಾನವಂತ ಜನರದ್ದಾಗಿದೆ. ಅದಕ್ಕಿಂತಲೂ ಹೆಚ್ಚಾಗಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ; ಅದು ಜೀವಂತವಾಗಿದ್ದರೆ, ಮೊದಲು ಪ್ರಚೋದನಕಾರಿ ಮಾತುಗಳನ್ನಾಡುವ, ಜನತೆಯ ನೆಮ್ಮದಿಯ ಬದುಕಿಗೆ ಭಂಗ ತರುವ ಬಿಜೆಪಿ ನಾಯಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಗಲಭೆಗೆ ಕಾರಣವಾಗುತ್ತಿರುವ ಗಣೇಶೋತ್ಸವಗಳಿಗೊಂದು ಕಟ್ಟುನಿಟ್ಟಿನ ಕಾನೂನು ರಚಿಸಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

ಈ ದಿನ ಸಂಪಾದಕೀಯ | ಬಸನಗೌಡ ಯತ್ನಾಳ್‌ ಒಪ್ಪಿಸಿದ್ದು ಮನುವಾದಿ ಗಿಳಿಪಾಠ

ನಾಡ ದೇವತೆ ಎಂದು ಕರೆಸಿಕೊಂಡ ಚಾಮುಂಡಿ ದೇವಿ ಹೆಣ್ಣಾಗಿ ದಲಿತ ಮಹಿಳೆಯಿಂದ...

Download Eedina App Android / iOS

X