ಇತ್ತೀಚಿನ ದಿನಗಳಲ್ಲಿ ಆಳುವ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರಶ್ನಿಸುವ, ಪ್ರತಿಭಟಿಸುವ ಕೆಚ್ಚು ಕಾಣುತ್ತಿಲ್ಲ. ಜನರ-ವಿರೋಧಪಕ್ಷಗಳ ಈ ಹೊಂದಿಕೊಂಡು ಹೋಗುವ ಗುಣ ಅಧಿಕಾರಿಗಳು ಮತ್ತು ಅಧಿಕಾರಸ್ಥ ರಾಜಕಾರಣಿಗಳಿಗೆ ಅನುಕೂಲಕರ ಸನ್ನಿವೇಶವನ್ನು ಸೃಷ್ಟಿಸುತ್ತಿದೆ.
ನಾಲ್ಕು ದಿನಗಳ ಹಿಂದೆ, ಬೆಂಗಳೂರು ನಗರದ ಕೆಲ ಶಾಲಾ ಬಾಲಕಿಯರು, ‘ರಸ್ತೆ ಗುಂಡಿ, ಟ್ರಾಫಿಕ್‌ನಿಂದ ಶಾಲೆಗೆ ಸರಿಯಾಗಿ ಹೋಗಲು ಆಗುತ್ತಿಲ್ಲ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಲು ಆಗುತ್ತಿಲ್ಲ’ ಎಂದು ರಸ್ತೆಗಳ ದುಃಸ್ಥಿತಿ, ಗುಂಡಿ ಹಾಗೂ ಪಾದಚಾರಿ ಮಾರ್ಗಗಳ ಅವ್ಯವಸ್ಥೆ ಕುರಿತು ತಮ್ಮ ಅಳಲು ತೋಡಿಕೊಂಡಿದ್ದರು. ಅದನ್ನೇ ಒಂದು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಆ ವಿಡಿಯೋವನ್ನು ವಿರೋಧ ಪಕ್ಷವಾದ ಬಿಜೆಪಿ ಎಕ್ಸ್‌ನಲ್ಲಿ ಹಂಚಿಕೊಂಡು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರಿಗೆ ‘ನೀವು ಹೇಳಿರುವ ಬ್ರ್ಯಾಂಡ್ ಬೆಂಗಳೂರು ಮಾದರಿ ಇದೇನಾ’ ಎಂದು ಪ್ರಶ್ನಿಸಿದ್ದರು. ಅದು ಮಾಧ್ಯಮಗಳಲ್ಲಿ ಪ್ರಕಟವಾಯಿತು, ಅಲ್ಲಿಗೆ ವಿರೋಧ ಪಕ್ಷದ ಕೆಲಸ ಮುಗಿಯಿತು.
ಒಂದು ದಿನದ ಹಿಂದೆ, ಬೆಳ್ಳಂದೂರಿನ ಬ್ಲ್ಯಾಕ್ ಬಕ್ ಕಂಪನಿಯ ಕೋಫೌಂಡರ್ ಮತ್ತು ಸಿಇಒ ರಾಜೇಶ್ ಯಾಬಾಜಿ, ನಗರದ ಟ್ರಾಫಿಕ್ ಅವ್ಯವಸ್ಥೆ, ರಸ್ತೆ ಗುಂಡಿಗಳು, ಧೂಳು, ಪ್ರಯಾಣದ ಸಮಯ ಎಲ್ಲವನ್ನು ಸಹಿಸಿ ಸಾಕಾಗಿ, ‘ನಾವು ಕಂಪನಿ ಸ್ಥಳಾಂತರಕ್ಕೆ ನಿರ್ಧರಿಸಿದ್ದೇವೆ’ ಎಂದು ಟ್ವೀಟ್ ಮಾಡಿದರು. ಸರ್ಕಾರದ ಬಗೆಗಿನ ಅಸಮಾಧಾನವನ್ನು ಹೊರಹಾಕಿದ್ದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅಂಧಭಕ್ತರ ಕಿವಿಗೆ ಹೂ ಮುಡಿಸಿದ ಮೋಶಾ ಜೋಡಿ!
ಬ್ಲ್ಯಾಕ್ ಬಕ್ ಕಂಪನಿಯ ರಾಜೇಶ್ ಯಾಬಾಜಿ ಅಸಮಾಧಾನಕ್ಕೆ ದನಿಗೂಡಿಸಿರುವ ಇನ್ಫೋಸಿಸ್ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಮೋಹನ್ ದಾಸ್ ಪೈ, ‘ಬೆಂಗಳೂರಿನ ಆಡಳಿತ ವೈಫಲ್ಯ ಕುರಿತು ಪ್ರತಿಸಲ ನಾನೊಬ್ಬನೇ ಪ್ರಶ್ನೆ ಮಾಡಬೇಕಾ, ಇದು ನಮ್ಮ ನಗರ, ನಗರವಾಸಿಗಳು ಮುಂದಾಗಬೇಕು’ ಎಂದು ಟ್ವೀಟ್ ಮಾಡಿದರು. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟ್ಯಾಗ್ ಮಾಡಿ, ‘ದಯವಿಟ್ಟು ಗಮನಿಸಿ, ಕಂಪನಿಗಳು ಸ್ಥಳಾಂತರಗೊಳ್ಳುತ್ತಿವೆ. ಇದು ಆಶಾದಾಯಕ ಬೆಳವಣಿಗೆಯಲ್ಲ’ ಎಂದಿದ್ದರು. ಇದಕ್ಕೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಕೂಡ ದನಿಗೂಡಿಸಿದರು.
ತಕ್ಷಣ ಸ್ಪಂದಿಸಿದ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ‘ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಅವರಿಗೆ ಎಚ್ಚರಿಸಿದ್ದೇನೆ. ರಸ್ತೆ ಗುಂಡಿ ಮುಚ್ಚಲು ನವೆಂಬರ್ ಗಡುವು ನೀಡಿದ್ದೇನೆ, ಆಗದಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆ’ ಎಂದು ಮಾಧ್ಯಮಗಳ ಮುಂದೆ ಹೂಂಕರಿಸಿದರು. ಐಟಿ ಆಸಾಮಿಗಳಿಗೆ ತಲುಪಲಿ ಎಂದು ಟ್ವೀಟ್ ಮಾಡಿದರು. ಅಲ್ಲಿಗೆ ಸಚಿವರ ಜವಾಬ್ದಾರಿಯೂ ಮುಗಿಯಿತು.
ಅಸಲಿಗೆ, ಅಧಿಕಾರಿಗಳು ಮೇಲಿನಿಂದ ಉದುರಿದವರಲ್ಲ. ಸಚಿವರ ಕಣ್ತಪ್ಪಿಸಿ ಕುರ್ಚಿಯಲ್ಲಿ ಕೂರುವುದು ಸಾಧ್ಯವೇ ಇಲ್ಲ. ಕೊಡು-ಕೊಳ್ಳುವ ವ್ಯಾಪಾರವಿಲ್ಲದೆ ಇಲ್ಲಿ ಏನೂ ನಡೆಯುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಅಧಿಕಾರಿಗಳು ಸಚಿವರ ಮಾತು ಕೇಳುತ್ತಾರೆಯೇ? ಇವರ ಮೇಲೆ ಕಠಿಣ ಕ್ರಮ ಸಾಧ್ಯವೇ? ಕಾಂಗ್ರೆಸ್ ಸರ್ಕಾರ ಬಂದು ಎರಡೂವರೆ ವರ್ಷಗಳಾಯಿತು, ಎಷ್ಟು ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದಾರೆ? ಈ ಪ್ರಶ್ನೆಗಳನ್ನು ಮಾಧ್ಯಮಗಳೂ ಕೇಳುತ್ತಿಲ್ಲ; ಮತ ನೀಡಿದ ಮತದಾರರೂ ಕೇಳುತ್ತಿಲ್ಲ.
ಬೆಂಗಳೂರು ನಗರ ಅಭಿವೃದ್ಧಿ ಖಾತೆ ಸಚಿವ ಡಿ.ಕೆ. ಶಿವಕುಮಾರ್, ದೂರದೃಷ್ಟಿಯುಳ್ಳ ವ್ಯಕ್ತಿ, ಪ್ರಭಾವಿ ಸಚಿವ, ಧೈರ್ಯಸ್ಥ ಎನ್ನುವವರಿದ್ದಾರೆ. ಅದನ್ನು ಅವರು ಸಾಬೀತುಪಡಿಸಲು ಬೆಂಗಳೂರಿಗೆ ಸ್ಕೈ-ಡೆಕ್, ಎರಡನೇ ವಿಮಾನ ನಿಲ್ದಾಣ, ಸುರಂಗರಸ್ತೆ, ಫ್ಲೈ ಓವರ್, ಮೆಟ್ರೋ ಕುರಿತು ಕನಸುಗಾರನಂತೆ ಮಾತನಾಡುತ್ತಾರೆ. ಸಿಲಿಕಾನ್ ಸಿಟಿಯನ್ನು ವಿಶ್ವಮಟ್ಟಕ್ಕೆ ಏರಿಸಿ ಬ್ರ್ಯಾಂಡ್ ಬೆಂಗಳೂರು-ವೈಬ್ರೆಂಟ್ ಬೆಂಗಳೂರು ಮಾಡುತ್ತೇನೆ ಎನ್ನುತ್ತಾರೆ. ಮಾತೆತ್ತಿದರೆ ಸಾವಿರಾರು ಕೋಟಿಗಳ ಹೊಸ ಹೊಸ ಯೋಜನೆಗಳನ್ನು ಕಣ್ಮುಂದೆ ತಂದು ನಿಲ್ಲಿಸುತ್ತಾರೆ. ಎ ಖಾತಾ ಇ ಖಾತಾ ಮಾಡುತ್ತಾರೆ, ಆಸ್ತಿ ತೆರಿಗೆ ದುಪ್ಪಟ್ಟು ಮಾಡುತ್ತಾರೆ. ಆದರೆ, ಜನರ ಮೂಲಭೂತ ಸಮಸ್ಯೆಗಳನ್ನು ಪ್ರಜ್ಞಾಪೂರ್ವಕವಾಗಿಯೇ ಮರೆಯುತ್ತಾರೆ. ಇಲ್ಲವೇ ಅಧಿಕಾರಿಗಳ ಮೇಲೆ ಹಾಕಿ, ನುಣುಚಿಕೊಳ್ಳುತ್ತಾರೆ.
ಈಗ ಸುದ್ದಿಯಲ್ಲಿರುವ ನಗರದ ರಸ್ತೆಗಳ ನಿರ್ಮಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದನಂತರ ಖರ್ಚು ಮಾಡಿರುವ ಮೊತ್ತ 2023-24ರಲ್ಲಿ 9,602 ಕೋಟಿ, 2024-25ರಲ್ಲಿ 10,318 ಕೋಟಿ. ಅದರಲ್ಲೂ ಕಳೆದ ತಿಂಗಳು ಸುರಿದ ಮಳೆಯಿಂದಾದ ರಸ್ತೆಗುಂಡಿಗಳನ್ನು ಮುಚ್ಚಲು ತುರ್ತು ನೆಪದಲ್ಲಿ ಬಿಡುಗಡೆಯಾಗಿರುವುದು 1,100 ಕೋಟಿ ರೂಪಾಯಿಗಳು. ಇದು ನಗರದ ನಿವಾಸಿಗಳ ತೆರಿಗೆಯ ಹಣವಲ್ಲವೇ? ಕಣ್ಮುಚ್ಚಿ ಬಿಡುವುದರೊಳಗೆ ಬೆಂಗಳೂರಿನ ರಸ್ತೆಗಳು ಸಾವಿರಾರು ಕೋಟಿಗಳನ್ನು ನುಂಗುವ ತಿಮಿಂಗಿಲಗಳಾಗಿವೆಯೇ?
ಇದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಏಕೆಂದರೆ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿಯೇ ಸಮಸ್ಯೆ ಇದೆ. ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಪ್ರಭಾವಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಪದವಿಯಿಂದ ದೂರವಿಡಬೇಕೆಂಬ ಏಕಮಾತ್ರ ಕಾರಣದಿಂದ, ಅವರು ಕೇಳಿದ್ದನ್ನು ಕೊಡಲಾಗಿದೆ, ಅವರು ಮಾಡಿದ್ದನ್ನು ಮೌನವಾಗಿ ಸಮ್ಮತಿಸಲಾಗುತ್ತಿದೆ. ಸಿದ್ದರಾಮಯ್ಯನವರು ಸಿಎಂ ಕುರ್ಚಿ ತಂಟೆಗೆ ಬರದಿದ್ದರೆ ಸಾಕು ಎಂದು ಸುಮ್ಮನಾದಂತಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ನ್ಯಾಯಾಲಯದ ವಿವೇಕದ ಮುಂದೆ ಬಯಲಾದ ಬಿಜೆಪಿ ನಾಯಕರ ಅವಿವೇಕ
ಡಿ.ಕೆ. ಶಿವಕುಮಾರ್ ಬಲಿಷ್ಠ, ಬಲಾಢ್ಯ, ಪ್ರಭಾವಿ ಸಚಿವ ಎನ್ನುವ ಕಾರಣಕ್ಕೋ ಅಥವಾ ಹೊಂದಾಣಿಕೆ ರಾಜಕಾರಣವೋ- ವಿರೋಧ ಪಕ್ಷಗಳು ಪ್ರಶ್ನಿಸುವ ಮೂಲಭೂತ ಕರ್ತವ್ಯವನ್ನೇ ಮರೆತಿವೆ. ಜಿಬಿಎ(ಬಿಬಿಎಂಪಿ)ಗೆ ಚುನಾವಣೆಗಳಾಗಿ ಹತ್ತು ವರ್ಷಗಳಾದರೂ, ವಿರೋಧ ಪಕ್ಷಗಳು ಸುಮ್ಮನಿವೆ. ನಗರದ ಧಾವಂತದ ಬದುಕಿಗೆ ಒಗ್ಗಿಹೋಗಿರುವ ಜನರಿಗೆ ಶಾಸಕರು-ಸಂಸದರನ್ನು ಹುಡುಕುವ, ಸಮಸ್ಯೆ ಹೇಳಿಕೊಳ್ಳುವ ವ್ಯವದಾನವಿಲ್ಲ. ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಆಳುವ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರಶ್ನಿಸುವ, ಪ್ರತಿಭಟಿಸುವ ಕೆಚ್ಚು ಕಾಣುತ್ತಿಲ್ಲ. ಜನರ ಈ ಹೊಂದಿಕೊಂಡು ಹೋಗುವ ಗುಣ ಅಧಿಕಾರಿಗಳು ಮತ್ತು ಅಧಿಕಾರಸ್ಥ ರಾಜಕಾರಣಿಗಳಿಗೆ ಅನುಕೂಲಕರ ಸನ್ನಿವೇಶವನ್ನು ಸೃಷ್ಟಿಸುತ್ತಿದೆ.
ಹೀಗಿರುವಾಗ ಪುಟ್ಟ ಶಾಲಾ ಬಾಲಕಿಯರ ಅಳಲು ಯಾರಿಗೆ ಕೇಳುತ್ತದೆ? ಬಡವರೂ ಬದುಕುವ ಬೆಂಗಳೂರು ನಗರವನ್ನಾಗಿಸುವುದು ಯಾರಿಗೆ ಬೇಕಾಗಿದೆ?
