ಮೋದಿಯವರು ಸೆ. 17ರಂದು 75 ವರ್ಷ ಪೂರ್ಣಗೊಳಿಸಲಿದ್ದಾರೆ. ಮನೆ-ಮಡದಿ-ಮಕ್ಕಳಿಲ್ಲದೆ ಒಬ್ಬಂಟಿಯಾಗಿದ್ದಾರೆ. ಹನ್ನೊಂದು ವರ್ಷಗಳ ಕಾಲ ನಿರಂತರವಾಗಿ ಅಧಿಕಾರದಲ್ಲಿದ್ದಾರೆ. ಅಪಾರ ಅನುಭವ ಹೊಂದಿದ್ದಾರೆ. ಮಾಗಿದ್ದಾರೆ. ಈಗಲಾದರೂ ಭಾರತವನ್ನು, ಅವರ ಕನಸಿನಂತೆ ವಿಶ್ವಗುರು ಮಾಡುವತ್ತ ಮನಸ್ಸು ಮಾಡುವರೇ?
ರಷ್ಯಾದಿಂದ ತೈಲ ಖರೀದಿಸುವ ವಿಚಾರವಾಗಿ ಅಮೆರಿಕದ ಬೆದರಿಕೆಗೆ ಭಾರತ ಮಣಿಯದ ಕಾರಣ ಹೆಚ್ಚುವರಿಯಾಗಿ ಶೇ. 50ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಆಗಸ್ಟ್ 27ರಿಂದ ಜಾರಿಗೂ ತಂದರು.
ಇದರ ನಂತರದ ಬೆಳವಣಿಗೆಯಾಗಿ, ಅಮೆರಿಕದ ಅಧ್ಯಕ್ಷ ಟ್ರಂಪ್ ಮಾಡಿದ ನಾಲ್ಕು ಫೋನ್ ಕರೆಗಳಿಗೆ ಪ್ರತಿಕ್ರಿಯಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನಿರಾಕರಿಸಿದ್ದಾರೆ ಎಂದು ಸುದ್ದಿ ಇದೆ.
ಟ್ರಂಪ್ ಫೋನ್ ಕರೆಗಳನ್ನು ಮೋದಿಯವರು ನಿರಾಕರಿಸಿದ್ದು ನಿಜವೇ ಆದರೆ, ಅವರ ನಡೆ ಸರಿಯಾಗಿದೆ. ಇದು ಭಾರತ ತಳೆಯಬೇಕಾದ ದಿಟ್ಟ ನಿಲುವಾಗಿದೆ. ಈ ಸಂದರ್ಭದಲ್ಲಾದರೂ ಮೋದಿಯವರಿಗೆ ಬುದ್ಧಿ ಬಂತಲ್ಲ ಎಂದು ಸಮಾಧಾನ ಮಾಡಿಕೊಳ್ಳಬೇಕಿದೆ. ಏಕೆಂದರೆ, ಕಳೆದ ಹನ್ನೊಂದು ವರ್ಷಗಳ ಮೋದಿಯವರ ನಡೆ-ನುಡಿಯಲ್ಲಿ ಅಮೆರಿಕ ಅಂದರೆ ಶ್ರೇಷ್ಠ ಎಂಬ ಭಾವನೆ ಇತ್ತು. ಅದು ಅವರ ‘ಬುದ್ಧಿವಂತಿಕೆ’ಯನ್ನು ಬಯಲು ಮಾಡಿತ್ತು. ಅದರಲ್ಲೂ ರಾಜಕಾರಣಿಯಲ್ಲದ, ಅಪ್ಪಟ ವ್ಯಾಪಾರಿ ಟ್ರಂಪ್ ಗೆಳೆತನಕ್ಕಾಗಿ ಮೋದಿಯವರು ಹಾತೊರೆಯುತ್ತಿದ್ದರು. ಆತನ ಮುಂದೆ ನಡುಬಗ್ಗಿಸಿ ನಿಲ್ಲುತ್ತಿದ್ದರು, ಓಲೈಸುತ್ತಿದ್ದರು. ಆತ ಹೇಳಿದ್ದನ್ನೆಲ್ಲ ಕೇಳುತ್ತಿದ್ದರು, ಮಾಡುತ್ತಿದ್ದರು.
ಇದನ್ನು ಓದಿದ್ದೀರಾ?: ಅಮಿತ್ ಶಾ ಅವರೇ, ಸುದರ್ಶನ ರೆಡ್ಡಿ ಪೀಠದ ತೀರ್ಪನ್ನು ತಾವು ಓದಬೇಕಿತ್ತು ಸರ್!
ಆ ಗುಲಾಮಗಿರಿ ಮೋದಿಯವರಿಗೆ ಮಾತ್ರ ಸೀಮಿತವಾಗಿದ್ದರೆ, ಸಹಿಸಬಹುದಿತ್ತು. ಆದರೆ ಅದು ಭಾರತ ದೇಶ ಅಮೆರಿಕ ಮುಂದೆ ಮಂಡಿಯೂರಿದೆ ಎಂಬುದನ್ನು ಜಗತ್ತಿಗೆ ಸಾರಿ ಹೇಳುವಂತಿತ್ತು. ಮೋದಿಯವರು ಒಬ್ಬ ವ್ಯಕ್ತಿಯಾಗಿ ಟ್ರಂಪ್ ಅವರನ್ನು ಅಪ್ಪಿಕೊಂಡರೆ ಅಡ್ಡಿ ಇಲ್ಲ. ಆದರೆ ಮೋದಿಯವರು ಒಬ್ಬ ವ್ಯಕ್ತಿಯಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ನಾಯಕ. ಭಾರತ ಕೂಡ ಒಂದು ರಾಷ್ಟ್ರ, ಭಾರತೀಯರಿಗೂ ಸ್ವಾಭಿಮಾನವಿದೆ ಎಂಬುದನ್ನು ಅರಿಯಬೇಕಲ್ಲವೇ?
ಅಷ್ಟಕ್ಕೂ ಅಮೆರಿಕ ಜಗತ್ತಿನ ನಂಬರ್ ಒನ್ ದೇಶವೇ? ಸಣ್ಣಪುಟ್ಟ ದೇಶಗಳಿಗೆ ದೊಡ್ಡಣ್ಣನೇ? ಒಬಾಮಾ, ಬೈಡನ್ ಕಾಲದಲ್ಲಿ ಕೊಂಚಮಟ್ಟಿಗಾದರೂ ಮಾನ-ಮರ್ಯಾದೆಯಿಂದ ವರ್ತಿಸುತ್ತಿತ್ತು. ಆರ್ಥಿಕವಾಗಿ ಸುಸ್ಥಿತಿಯಲ್ಲಿತ್ತು. ಆದರೆ ಟ್ರಂಪ್ ಆಡಳಿತದಲ್ಲಿ ಸಂಪೂರ್ಣವಾಗಿ ಅರಾಜಕ ಸ್ಥಿತಿ ತಲುಪಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ವಲಸೆ ಸಮಸ್ಯೆ ಬೇರೆ ರೂಪ ಪಡೆದಿದೆ. ಡಾಲರ್ ಕುಸಿತ ಕಂಡಿದೆ. ಆರ್ಥಿಕ ಸ್ಥಿತಿ ಅಲ್ಲೋಲ ಕಲ್ಲೋಲವಾಗಿ, ರಿಸೆಷನ್ ಎಂಬ ಸುನಾಮಿ ಮತ್ತೆ ಅಪ್ಪಳಿಸುವ ಅಪಾಯವಿದೆ. ದೇಶ ದಿವಾಳಿ ಎದ್ದರೂ ಆಶ್ಚರ್ಯವಿಲ್ಲ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.
ಅಮೆರಿಕದ ‘ಬಂಡವಾಳ’ ಹೀಗಿರುವಾಗ, ಟ್ರಂಪ್ ಎಂಬ ತಿಕ್ಕಲು ಆಸಾಮಿಯ ಅತಿಯಾದ ಸುಂಕಕ್ಕೆ, ದುರಹಂಕಾರಕ್ಕೆ ಸೆಟೆದು ನಿಲ್ಲುವುದು ತಪ್ಪಾಗುತ್ತದೆಯೇ? ಭಾರತಕ್ಕೆ ನಿಜವಾಗಲೂ ತನ್ನ ಸಾಮರ್ಥ್ಯ ತೋರಲು ಇದು ಸಕಾಲ. ಪುಟ್ಟ ಬ್ರೆಜಿಲ್ ದೇಶ ಅಮೆರಿಕಕ್ಕೆ ಪ್ರತಿರೋಧ ಒಡ್ಡಿದಂತೆ; ಸೆಡ್ಡು ಹೊಡೆದು ನಿಂತಂತೆ ಭಾರತವೂ ಎದೆಸೆಟೆಸಿ ನಿಲ್ಲಬೇಕಾಗಿದೆ. ಬ್ರಿಟಿಷರು ಬಿಟ್ಟುಹೋದ ಇಂಗ್ಲಿಷ್ ಮತ್ತು ಬಿಳಿಬಣ್ಣವೆಂಬ ಶ್ರೇಷ್ಠತೆಯ ವ್ಯಸನದಿಂದ ಹೊರಬರಬೇಕಾಗಿದೆ. ನೆರೆ-ಹೊರೆಯ ದೇಶಗಳೊಂದಿಗೆ ಸ್ನೇಹ-ಸೌಹಾರ್ದತೆಯಿಂದ ವರ್ತಿಸಬೇಕಾಗಿದೆ. ಅದನ್ನು ತನ್ನ ಬಲವೆಂದು ನಂಬಬೇಕಿದೆ. ಅದನ್ನೇ ಜಗತ್ತಿನೆದುರು ತೋರಬೇಕಿದೆ.
ಹಾಗೆಯೇ, ಪಕ್ಕದ ಚೀನಾ ದೇಶ, ನಮ್ಮಂತೆಯೇ ಅತಿಯಾದ ಜನಸಂಖ್ಯೆ ಹೊಂದಿದ್ದರೂ, ಆ ದೇಶದ ರಾಜಕೀಯ ನೇತಾರರು ಆ ಜನಸಂಖ್ಯೆಯನ್ನೇ ಮಾನವಶಕ್ತಿಯನ್ನಾಗಿ ಪರಿವರ್ತಿಸಿಕೊಂಡು ಬೆಳೆದ ಬಗೆಯನ್ನು ಬಗೆದು ನೋಡಬೇಕಿದೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದನ್ನು; ಅಪಾರ ಪರಿಶ್ರಮದಿಂದ ಪುಟಿದೆದ್ದು ನಿಂತದ್ದನ್ನು; ಅದರ ಅಭಿವೃದ್ಧಿಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸಬೇಕಾಗಿದೆ. ಅಧ್ಯಯನಕ್ಕೊಳಪಡಿಸಿ ಅಳವಡಿಸಿಕೊಳ್ಳಬೇಕಿದೆ.
ಪ್ರಧಾನಿ ಮೋದಿಯವರು ಸೆಪ್ಟೆಂಬರ್ 17ರಂದು 75 ವರ್ಷ ಪೂರ್ಣಗೊಳಿಸಲಿದ್ದಾರೆ. ಮನೆ-ಮಡದಿ-ಮಕ್ಕಳಿಲ್ಲದೆ ಒಬ್ಬಂಟಿಯಾಗಿದ್ದಾರೆ. ಹನ್ನೊಂದು ವರ್ಷಗಳ ಕಾಲ ನಿರಂತರವಾಗಿ ಅಧಿಕಾರದಲ್ಲಿದ್ದಾರೆ. ಅಪಾರ ಅನುಭವ ಹೊಂದಿದ್ದಾರೆ. ಮಾಗಿದ್ದಾರೆ. ಈಗಲಾದರೂ ಭಾರತವನ್ನು, ಅವರ ಕನಸಿನಂತೆ ವಿಶ್ವಗುರು ಮಾಡುವತ್ತ ಮನಸ್ಸು ಮಾಡಬೇಕಿದೆ. ಆ ನಿಟ್ಟಿನಲ್ಲಿ ಭಾರತದ ಸಮಸ್ಯೆಯಾದ ಜನಸಂಖ್ಯೆಯನ್ನೇ ಪರಿಹಾರವನ್ನಾಗಿ ಪರಿವರ್ತಿಸಿಕೊಳ್ಳುವತ್ತ ಗಮನ ಹರಿಸಬೇಕಿದೆ. ಯುವಜನತೆಯ ಕೌಶಲ್ಯವನ್ನು ಹೊರಗೆಳೆದು, ಅವರ ಕೈಗೆ ಕೆಲಸ ಕೊಟ್ಟು, ಆರ್ಥಿಕ ಚಲನಶೀಲತೆಗೆ ವೇಗ ತರಬೇಕಿದೆ. ಮೇಕ್ ಇನ್ ಇಂಡಿಯಾಕ್ಕೆ ಬಲ ತುಂಬಬೇಕಿದೆ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಿದೆ. ಆ ಮೂಲಕ ಬಹುತ್ವ ಭಾರತದ ಬೆರಗನ್ನು ಪ್ರಪಂಚದೆದುರು ಬಿಚ್ಚಿಡಬೇಕಿದೆ.
ಇದನ್ನು ಓದಿದ್ದೀರಾ?: ಆನ್ಲೈನ್ ಗೇಮಿಂಗ್: ಹದ್ದುಬಸ್ತಿನಲ್ಲಿಡುವುದು ಸಾಧ್ಯವೇ?
ಇನ್ನಾದರೂ, ದೇಶದ ಯುವಜನತೆಯನ್ನು ದೇವರು-ಧರ್ಮ ಎಂಬ ಅಮಲಿನಿಂದ ಹೊರತರಬೇಕಿದೆ. ಅವರೆದೆಗೆ ಹಿಂದೂ-ಮುಸ್ಲಿಂ ದ್ವೇಷಾಸೂಯೆ ಬಿತ್ತುವುದನ್ನು ಬಿಡಬೇಕಿದೆ. ಅವರ ಕೈಗೆ ತಲವಾರ್-ತ್ರಿಶೂಲಗಳನ್ನು ಕೊಡುವುದನ್ನು ನಿಲ್ಲಿಸಬೇಕಿದೆ. ಭಾವುಟ-ಭೋಪರಾಕ್ಗಳಿಗೆ ಸೀಮಿತಗೊಳಿಸುವುದನ್ನು ಬಿಡಬೇಕಿದೆ. ಹಾಗೆಯೇ ನಾಯಕರೆನಿಸಿಕೊಂಡವರು ಹನುಮಾನ್ ಮೊದಲ ಅಂತರಿಕ್ಷಯಾನಿ ಎನ್ನುವ ಅಪದ್ಧ ನುಡಿಯುವುದನ್ನು ಬಿಟ್ಟು, ಪುರಾಣ ಪಕ್ಕಕ್ಕಿಟ್ಟು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ಹೇಗೆ ಎಂಬ ಬಗ್ಗೆ ಪ್ರಾಮಾಣಿಕವಾಗಿ ಯೋಚಿಸಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಮೋದಿಯವರು ಮನಸ್ಸು ಮಾಡಬೇಕಿದೆ.
