ಹತ್ತು ವರ್ಷಗಳ ಕಾಲ ದೇಶವನ್ನಾಳಿದ ಬಿಜೆಪಿ, ತನ್ನ ಆಡಳಿತವನ್ನು, ಅಭಿವೃದ್ಧಿಯನ್ನು ದೇಶದ ಜನತೆಯ ಮುಂದಿಟ್ಟು ಮತ ಕೇಳಬೇಕಾಗಿತ್ತು. ಅದು ಬಿಜೆಪಿ ನಾಯಕರ ವಿವೇಕಯುತ ನಡೆಯಾಗಿತ್ತು. ಅದು ಬಿಟ್ಟು, ಮೀನು ತಿಂದ, ಮೊಘಲ, ಸೆಂಗೋಲು, ಸನಾತನಿ, ಕುಟುಂಬ ಕಂಪನಿ, ಮಣಿಪುರದಲ್ಲಿ ಶಾಂತಿ, ಚೀನಾ ಅತಿಕ್ರಮಿಸಿಲ್ಲ, ನಿರುದ್ಯೋಗವಿಲ್ಲ, ಕೋವಿಡ್‌ನಿಂದ ದೇಶ ಬಚಾವು, ಕಚ್ಚತ್ತೀವು ಎಂದರೆ; ನಾರಾಯಣ ಗುರುವಿನಂತೆ ವೇಷ ಹಾಕಿದರೆ ಜನ ನಂಬುತ್ತಾರೆಯೇ? ನಂಬಿ ಕೆಟ್ಟಿದ್ದಾರೆ. ಸಹಜವಾಗಿಯೇ ಸಿಟ್ಟಾಗಿದ್ದಾರೆ.
ಪಕ್ಕದ ತಮಿಳುನಾಡಿನ ಚುನಾವಣಾ ಪ್ರಚಾರಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ”ಭ್ರಷ್ಟಾಚಾರದ ಮೊದಲ ಹಕ್ಕುಸ್ವಾಮ್ಯವನ್ನು ಡಿಎಂಕೆ ಹೊಂದಿದೆ. ಡಿಎಂಕೆ ವರಿಷ್ಠರ ಇಡೀ ಕುಟುಂಬವು ತಮಿಳುನಾಡನ್ನು ಲೂಟಿ ಹೊಡೆಯುತ್ತಿದೆ. ಈ ದ್ರಾವಿಡ ಪಕ್ಷವು ‘ದೊಡ್ಡ ಕುಟುಂಬ ಕಂಪನಿ’ಯಾಗಿ ಮಾರ್ಪಟ್ಟಿದೆ,” ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿಯವರು ತಮಿಳುನಾಡಿಗೆ ತೆರಳುವ ಎರಡು ದಿನಗಳ ಮುಂಚೆ, ಸಿಎಂ ಸ್ಟಾಲಿನ್, ‘ಜೂನ್ 4ರ ನಂತರ ದೇಶಕ್ಕೆ ಸಮರ್ಥ ಪ್ರಧಾನ ಮಂತ್ರಿ ಸಿಗುತ್ತಾರೆ’ ಎಂದು ಹೇಳಿದ್ದರು. ಅಷ್ಟೇ ಅಲ್ಲ, ‘ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತದಲ್ಲಿ ಚುನಾವಣೆಗಳಿರುವುದಿಲ್ಲ, ಚುನಾವಣಾ ಪ್ರಜಾಪ್ರಭುತ್ವವನ್ನು ಚುನಾಯಿತ ನಿರಂಕುಶಾಧಿಕಾರವಾಗಿ ಪರಿವರ್ತಿಸುತ್ತಾರೆ’ ಎಂದಿದ್ದರು.
ದಕ್ಷಿಣ ಭಾರತದ ಮುಖ್ಯಮಂತ್ರಿಯೊಬ್ಬರು ತಮ್ಮನ್ನು ನಿರಂಕುಶಾಧಿಕಾರಿ ಎಂದಿದ್ದು ಸಿಟ್ಟಿಗೇಳಿಸಿತ್ತು. ಸಿಟ್ಟಿನ ಭರಾಟೆಯಲ್ಲಿ ‘ಡಿಎಂಕೆ ತಮಿಳುನಾಡನ್ನು ಲೂಟಿ ಹೊಡೆಯುತ್ತಿದೆ’ ಎಂದರು. ಹೇಳಿದ ಎರಡು ತಾಸಿನಲ್ಲಿ ‘ಜಿ ಪೇ’ ಪೋಸ್ಟರ್‍ಗಳು ತಮಿಳುನಾಡಿನಾದ್ಯಂತ ರಾರಾಜಿಸುತ್ತಿದ್ದವು.
ಕರ್ನಾಟಕದ ಬಸವರಾಜ ಬೊಮ್ಮಾಯಿಯವರ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್ ಕುರಿತು ಕಾಂಗ್ರೆಸ್ ‘ಪೇ ಸಿಎಂ’ ಪೋಸ್ಟರ್ ಮಾಡಿ, ದೇಶದಾದ್ಯಂತ ಸಂಚಲನ ಉಂಟು ಮಾಡಿತ್ತು. ಬಿಜೆಪಿಯ ಭ್ರಷ್ಟಾಚಾರವನ್ನು ಬಯಲು ಮಾಡಿತ್ತು.
ಇದೇ ತಂತ್ರವನ್ನು ಚಾಲ್ತಿಗೆ ತಂದ ತಮಿಳುನಾಡಿನ ಡಿಎಂಕೆ, ಪ್ರಧಾನಿ ಮೋದಿಯವರ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ‘ಜೀ ಪೇ’ ಅಂದರೆ, ಮೋದಿ’ಜೀ ಪೇ’ ಎಂದು ಕ್ಯೂಆರ್ ಕೋಡ್ ಇರುವ ಪೋಸ್ಟರ್‍ಗಳನ್ನು ಮಾಡಿ ತಮಿಳುನಾಡಿನ ಗೋಡೆಗಳನ್ನು ಅಲಂಕರಿಸಿತ್ತು. ಪೋಸ್ಟರ್‍ನಲ್ಲಿರುವ ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡುತ್ತಿದ್ದಂತೆ, ಮೋದಿಯವರ ಬಿಜೆಪಿ ಸರ್ಕಾರದ ಹತ್ತು ವರ್ಷಗಳ ಬ್ರಹ್ಮಾಂಡ ಭ್ರಷ್ಟಾಚಾರದ ವಿಡಿಯೋ ಅನಾವರಣಗೊಳ್ಳುತ್ತದೆ.
ಪ್ರಧಾನಿ ಮೋದಿಯವರು, ಕಳೆದ ವರ್ಷ ಜೆಡಿಎಸ್ ಹಾಗೂ ಎಚ್.ಡಿ. ದೇವೇಗೌಡರನ್ನು ಕುರಿತು, ‘ಅದೊಂದು ಕುಟುಂಬ ಕಂಪನಿ’ ಎಂದು ಲೇವಡಿ ಮಾಡಿದ್ದರು. ಇಂದು ಅದೇ ಕುಟುಂಬದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ತಮ್ಮ ಪಕ್ಷದ ಅನೇಕ ನಾಯಕರ ಮಕ್ಕಳಿಗೆ ಟಿಕೆಟ್ ಕೊಡುವ ಮೂಲಕ ಕುಟುಂಬ ರಾಜಕಾರಣವನ್ನು ಪೋಷಿಸುತ್ತಿದ್ದಾರೆ. ಆದರೆ, ಡಿಎಂಕೆಯನ್ನು ‘ಕುಟುಂಬ ಕಂಪನಿ’ ಎಂದು ದೂರುತ್ತಾರೆ.
ಚೀನಾ ಒಂದೇ ಒಂದು ಇಂಚು ಜಾಗವನ್ನು ಅತಿಕ್ರಮಿಸಿಲ್ಲ ಎಂದು ಬಹಿರಂಗ ಸಭೆಯಲ್ಲಿ ಹೇಳುತ್ತಾರೆ. ಆದರೆ ಅಲ್ಲಿಯೇ ಕೂತು ಧರಣಿ ಮಾಡುತ್ತಿರುವ ಸೋನಂ ವಾಂಗ್ಚುಕ್ 4 ಸಾವಿರ ಚದರ ಕಿ.ಮೀ ಜಾಗವನ್ನು ಚೀನಾ ಅತಿಕ್ರಿಮಿಸಿದೆ ಎಂದು ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆ.
ಆರು ತಿಂಗಳು ಹತ್ತಿ ಉರಿದ ಮಣಿಪುರದತ್ತ ನೋಡದ ಮೋದಿಯವರು, ಅಮಿತ್ ಶಾ ಹೋದ ನಂತರ ಮಣಿಪುರದಲ್ಲಿ ಶಾಂತಿ ನೆಲೆಸಿದೆ ಎನ್ನುತ್ತಾರೆ. ಇಂದು ಕೂಡ ಮಣಿಪುರದಲ್ಲಿ ಗಲಭೆಗಳು ನಡೆಯುತ್ತಲೇ ಇವೆ. ಕೋವಿಡ್ ಕಾಲದಲ್ಲಿ ಕಾರ್ಮಿಕರು ನಡೆದರು, ಹೆಣಗಳು ತೇಲಿಹೋದವು, ಬಡವರು ನರಳಾಡಿದರು. ಆದರೆ ದೇಶವನ್ನು ಕಾಪಾಡಲಾಗಿದೆ ಎನ್ನುತ್ತಾರೆ.
ವಿಶ್ವದ ಅತಿ ದೊಡ್ಡ ಭ್ರಷ್ಟಾಚಾರವೆಂದು ಪರಿಗಣಿಸಲಾದ ಚುನಾವಣಾ ಬಾಂಡ್ ಬಗ್ಗೆ ಮೋದಿ, ಕೃಷ್ಣ-ಕುಚೇಲನ ಕತೆ ಹೇಳಿ, ದೇಣಿಗೆಯ ನೆಪದ ಸುಲಿಗೆಯನ್ನು ಅವಲಕ್ಕಿಗೆ ಸಮೀಕರಿಸುತ್ತಾರೆ.
ಇನ್ನು ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ, ಬೆಲೆ ಏರಿಕೆ ಮತ್ತು ಹಣದುಬ್ಬರಕ್ಕೆ ಅರ್ಥಶಾಸ್ತ್ರಜ್ಞರು ಅಂಕಿ-ಅಂಶಗಳ ಸಮೇತ ದೇಶದ ಮುಂದಿಟ್ಟರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಂಬ ಹೆಣ್ಣುಮಗಳು ‘ಎಲ್ಲಿದೆ ನಿರುದ್ಯೋಗ’ ಎಂದು ವ್ಯಂಗ್ಯವಾಗಿ ಪ್ರಶ್ನಿಸುತ್ತಾರೆ.
ಕರ್ನಾಟಕ ಸರ್ಕಾರ ಕಳೆದ ವರ್ಷ ಅಕ್ಟೋಬರ್‍ನಲ್ಲಿಯೇ ಬರ ಪರಿಹಾರಕ್ಕೆ ಮನವಿ ಮಾಡಿಕೊಂಡರೆ, ಜೆಎನ್‌ಯು ಬುದ್ಧಿವಂತಿಕೆ ಬಳಸಿ ಜಿಎಸ್ಟಿ, ಸಿಎಜಿಆರ್, ಸೆಸ್ ಅಂತೆಲ್ಲ ಲೆಕ್ಕ ಹೇಳಿ, ‘ಕರ್ನಾಟಕಕ್ಕೆ ಪಾವತಿಸಬೇಕಾದ ಪರಿಹಾರದ ಬಾಕಿ ಇಲ್ಲ, ಜುಲೈ 2017 ರಿಂದ ಜೂನ್ 2022 ರ ನಡುವೆ ರಾಜ್ಯಕ್ಕೆ 1.06 ಲಕ್ಷ ರೂ. ಪಾವತಿಸಲಾಗಿದೆ’ ಎನ್ನುತ್ತಾರೆ.
ರಾಜ್ಯ ಸರ್ಕಾರ ಕೇಳುತ್ತಿರುವುದು 2023ರ ಬರ ಪರಿಹಾರ ಮತ್ತು ತೆರಿಗೆ ಬಾಕಿ. ಅವರು ಹೇಳುತ್ತಿರುವುದು 2022ರ ಕತೆ! ಮುಂದುವರೆದು, ‘ಚುನಾವಣಾ ಆಯೋಗ ಸೂಚಿಸಿದರೆ, ಸಭೆ ನಡೆಸಲಾಗುವುದು, ಸುಪ್ರೀಂ ಕೋರ್ಟ್ ಸೂಚಿಸಿದೆ’ ಎಂದು ಧಿಮಾಕಿನಿಂದ ಉತ್ತರಿಸುತ್ತಾರೆ. ಸುಪ್ರೀಂ ಕೋರ್ಟಿನಲ್ಲಿ ಕೇಂದ್ರ ಸರ್ಕಾರದ ಪರ ವಕೀಲರು, ‘ಕೇಂದ್ರಕ್ಕೆ ನೋಟಿಸ್ ಕೊಡಬೇಡಿ, ಮುಜುಗರವಾಗುತ್ತದೆ’ ಎಂದು ಕೇಂದ್ರದ ಮಾನ ಮುಚ್ಚಲು ಹೆಣಗಾಡುತ್ತಾರೆ.
ಕಳೆದ ವಾರವಷ್ಟೇ ಚನ್ನಪಟ್ಟಣಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ರಾಜ್ಯ ಸರ್ಕಾರ ಬರ ಪರಿಹಾರ ಕೇಳಿದ್ದು ತಡವಾಯಿತು, ಅಷ್ಟರಲ್ಲಿ ಚುನಾವಣೆ ಘೋಷಣೆಯಾಯಿತು’ ಎನ್ನುತ್ತಾರೆ.
ಇದು ಡಿಜಿಟಲ್ ಯುಗ ಎನ್ನುವುದು ಬಿಜೆಪಿ ನಾಯಕರಿಗೆ ಗೊತ್ತಿಲ್ಲವೇ? ರಾಜ್ಯದ ನಾಯಕರು ದೆಹಲಿಗೆ ತೆರಳಿದ್ದು, ಭೇಟಿ ಮಾಡಿದ್ದು, ಮನವಿ ಮಾಡಿಕೊಂಡದ್ದು ಎಲ್ಲವೂ ನಿಮ್ಮ ಬೆರಳತುದಿಯಲ್ಲಿ ಇದೆಯಲ್ಲವೇ? ದೇಶದ ಜನಕ್ಕೆ ಸುಲಭದಲ್ಲಿ ಸಿಗುತ್ತದೆಯಲ್ಲವೇ? ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಡವೇ?
ಹತ್ತು ವರ್ಷಗಳ ಕಾಲ ದೇಶವನ್ನಾಳಿದ ಬಿಜೆಪಿ, ತನ್ನ ಆಡಳಿತವನ್ನು, ಅಭಿವೃದ್ಧಿಯನ್ನು ದೇಶದ ಜನತೆಯ ಮುಂದಿಟ್ಟು ಮತ ಕೇಳಬೇಕಾಗಿತ್ತು. ಅದು ಬಿಜೆಪಿ ನಾಯಕರ ವಿವೇಕಯುತ ನಡೆಯಾಗಿತ್ತು. ಅದು ಬಿಟ್ಟು, ಮೀನು ತಿಂದ, ಮೊಘಲ, ಸೆಂಗೋಲು, ಸನಾತನಿ, ಕುಟುಂಬ ಕಂಪನಿ, ಮಣಿಪುರದಲ್ಲಿ ಶಾಂತಿ, ಚೀನಾ ಅತಿಕ್ರಮಿಸಿಲ್ಲ, ನಿರುದ್ಯೋಗವಿಲ್ಲ, ಕೋವಿಡ್‌ನಿಂದ ದೇಶ ಬಚಾವು, ಕಚ್ಚತ್ತೀವು ಎಂದರೆ; ನಾರಾಯಣ ಗುರುವಿನಂತೆ ವೇಷ ಹಾಕಿದರೆ ಜನ ನಂಬುತ್ತಾರೆಯೇ?
ದೇಶದ ಜನ ಹತ್ತು ವರ್ಷಗಳ ಕಾಲ ಮೋದಿಯ ನೂರಾರು ವೇಷಗಳನ್ನು, ಸುಳ್ಳುಗಳನ್ನು ನಂಬಿ ಕೆಟ್ಟಿದ್ದಾರೆ. ಸಹಜವಾಗಿಯೇ ಸಿಟ್ಟಾಗಿದ್ದಾರೆ. ಅವರ ಸಿಟ್ಟು ಮತಗಳಾಗಿ ಮಾರ್ಪಟ್ಟರೆ, ದೇಶಕ್ಕೊಂದು ದೃಢ ಸರ್ಕಾರ ನಿಶ್ಚಿತ.
