ಈ ದಿನ ಸಂಪಾದಕೀಯ | ಮಹದಾಯಿ: ನಾಯಕರೇ ನಾಡದ್ರೋಹಿಗಳು

Date:

Advertisements
ನಮ್ಮ ನಡುವಿನಿಂದ ಎದ್ದುಹೋದವರೇ ಅಧಿಕಾರದ ಕುರ್ಚಿಯಲ್ಲಿ ಕೂತಿದ್ದರೂ; ಡಬಲ್ ಎಂಜಿನ್ ಸರ್ಕಾರವಿದ್ದರೂ ಅನ್ಯಾಯ ತಪ್ಪಿಲ್ಲ. ಮಹದಾಯಿ ನೀರು ಹರಿಯಲಿಲ್ಲ. ಜನರೆದ್ದು ನಿಂತು ಅಧಿಕಾರಸ್ಥರ ಕುರ್ಚಿಗೆ ಕಂಟಕ ತರದ ಹೊರತು, ಇಲ್ಲಿ ಯಾವುದೂ ಸಲೀಸಾಗಿ ದಕ್ಕುವುದಿಲ್ಲ.

ಕಳಸಾ-ಬಂಡೂರಿ ಯೋಜನೆಗಾಗಿ ಉತ್ತರ ಕರ್ನಾಟಕ ಭಾಗದ 4 ಜಿಲ್ಲೆಗಳಾದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ ವ್ಯಾಪ್ತಿಯ 11 ತಾಲೂಕುಗಳ, ನೂರಾರು ಗ್ರಾಮಗಳ ಜನ ಸತತ 45 ವರ್ಷಗಳಿಂದ ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ.

ದುರದೃಷ್ಟಕರ ಸಂಗತಿ ಎಂದರೆ, ಪ್ರತಿ ಚುನಾವಣೆಯಲ್ಲೂ ಮುಖ್ಯ ವಿಷಯವಾಗಿ ಮುನ್ನೆಲೆಗೆ ಬರುವ ಮಹದಾಯಿ, ಚುನಾವಣೆ ಮುಗಿಯುತ್ತಿದ್ದಂತೆ ಮೂಲೆಗೆ ಸರಿಯುತ್ತದೆ. ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು ಅಧಿಕಾರಕ್ಕೇರುತ್ತಿದ್ದಂತೆ ಜನರನ್ನು ಮರೆಯುತ್ತಿದ್ದಾರೆ. ಜನ ಕೇಳುತ್ತಿರುವುದು ಅಧಿಕಾರಸ್ಥರ ಆಸ್ತಿಯನ್ನಲ್ಲ, ಕುಡಿಯುವ ನೀರನ್ನು. ಆದರೆ, ಅಧಿಕಾರಸ್ಥರು ಕೊಟ್ಟಿದ್ದು ಪೊಲೀಸರ ಲಾಠಿ ಏಟು, ಜೈಲು ಊಟ, ಮೈತುಂಬಾ ಕೇಸುಗಳನ್ನು.   

ಉತ್ತರ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳ ಜನ 45 ವರ್ಷಗಳಿಂದ ಕೇಳುತ್ತಿರುವುದು ಕೇವಲ 40 ಟಿಎಂಸಿ ನೀರು. ಕುಡಿಯಲಿಕ್ಕೆ ಮತ್ತು ಕೃಷಿಗೆ, ಜನ-ಜಾನುವಾರಿಗೆ. ಮಹದಾಯಿ ಜಲವಿವಾದ ನ್ಯಾಯಮಂಡಳಿ, ಕರ್ನಾಟಕಕ್ಕೆ 13.42 ಟಿಎಂಸಿ ಅಡಿ ನೀರನ್ನು ನಿಗದಿಪಡಿಸಿ 2018ರಲ್ಲಿಯೇ ಐತೀರ್ಪು ನೀಡಿದೆ. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಯೋಜನೆ ಜಾರಿಗೆ ಅಡ್ಡಗಾಲು ಹಾಕುತ್ತಲೇ ಬಂದಿದೆ.

ಇದೇ ಸಂದರ್ಭದಲ್ಲಿ, ಉರಿಯುವ ಗಾಯದ ಮೇಲೆ ಉಪ್ಪು ಸುರಿದಂತೆ, ಗೋವಾ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಪ್ರಮೋದ ಸಾವಂತ್, ‘ಮಹದಾಯಿ ನದಿ ತಿರುವು ಯೋಜನೆ ಮುಂದುವರೆಸಿರುವ ಕರ್ನಾಟಕ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು’ ಎಂದಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೋಶಾ ಕಂಪನಿಯ ಮತ್ತೊಂದು ನಿಗೂಢ ನಾಟಕ!

ಅಷ್ಟೇ ಅಲ್ಲ, ಗೋವಾದ ಬಿಜೆಪಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರ ಮಾತಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವ್‍ ಮಣೆ ಹಾಕಿದ್ದಾರಂತೆ. ‘ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ’ ಎಂದು ಭರವಸೆಯನ್ನೂ ನೀಡಿದ್ದಾರಂತೆ. ಅದನ್ನವರು ಗೋವಾ ವಿಧಾನಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಈ ನಿಲುವು ಒಕ್ಕೂಟ ವ್ಯವಸ್ಥೆಗೆ ಧಕ್ಕೆಯುಂಟು ಮಾಡುವುದಿಲ್ಲವೇ? ಇದು ಬಿಜೆಪಿಯ ಮಲತಾಯಿ ಧೋರಣೆಯಲ್ಲವೇ? ರಾಜ್ಯದ ಜನತೆಯ ಕುಡಿಯುವ ನೀರಿನ ಬೇಡಿಕೆಗೆ ಬಿಜೆಪಿ ಬಗೆಯುತ್ತಿರುವ ದ್ರೋಹವಲ್ಲವೇ?

ಇಷ್ಟಾದರೂ ಕರ್ನಾಟಕದ ಮತದಾರರು 2024ರ ಚುನಾವಣೆಯಲ್ಲಿ ಬಿಜೆಪಿಯ 17 ಸಂಸದರನ್ನು ಗೆಲ್ಲಿಸಿ, ಮೋದಿಯವರು ಪ್ರಧಾನಿಯಾಗಲು ಶಕ್ತಿ ತುಂಬಿದ್ದಾರೆ. ಇವರೊಂದಿಗೆ ಜೆಡಿಎಸ್‌ನ ಇಬ್ಬರು ಸಂಸದರನ್ನೂ ಗೆಲ್ಲಿಸಿ ಕಳಿಸಿದ್ದಾರೆ. ಬಿಜೆಪಿ-ಜೆಡಿಎಸ್‌ನ 19 ಸಂಸದರು ರಾಜ್ಯವನ್ನು ಪ್ರತಿನಿಧಿಸುವವರಿದ್ದರೂ, ಅವರಲ್ಲಿ 4 ಜನ ಕೇಂದ್ರ ಸಚಿವರಾಗಿದ್ದರೂ, ರಾಜ್ಯದ ಪರ ದನಿ ಎತ್ತುವವರು, ರಾಜ್ಯದ ಹಿತ ಕಾಪಾಡುವವರು ಯಾರೂ ಇಲ್ಲವಾಗಿದೆ.

ಅದರಲ್ಲೂ ಕಳಸಾ-ಬಂಡೂರಿ ಯೋಜನೆಯನ್ನು ಒಳಗೊಳ್ಳುವ, ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಿಂದ 5 ಬಾರಿ ಗೆದ್ದು ಸಂಸದರಾಗಿರುವ, ಮೋದಿಯವರ ಕ್ಯಾಬಿನೆಟ್‌ನಲ್ಲಿ ಸಚಿವರಾಗಿರುವ ಪ್ರಲ್ಹಾದ್ ಜೋಶಿಯವರು, ತಮ್ಮನ್ನು ಗೆಲ್ಲಿಸಿದ ಮತದಾರರ ಕುಡಿಯುವ ನೀರಿನ ಕೂಗಿಗೆ ಕಲ್ಲಾಗಿದ್ದಾರೆ. ಗೋವಾ, ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರದ ಪರ ನಿಲುವು ತಳೆದು ತಟಸ್ಥರಾಗಿದ್ದಾರೆ.

ಬಿಜೆಪಿ-ಜೆಡಿಎಸ್ ಸಂಸದರ, ಸಚಿವರ ‘ಕಾಳಜಿ’ ಕಂಡು ಕೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ರಾಜ್ಯದ ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಲಾಗದಷ್ಟು ನಿರ್ವಿರ್ಯರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ ಕರ್ನಾಟಕದ ಜನತೆಯ ವಿರುದ್ಧ ಸೇಡು ತೀರಿಸಿಕೊಳ್ಳುವ ದುರುದ್ದೇಶದಿಂದಲೇ ಮಹದಾಯಿ ಯೋಜನೆಗೆ ಪರಿಸರ ಖಾತೆಯ ಅನುಮತಿಯನ್ನು ನಿರಾಕರಿಸಿರುವುದು ಸ್ಪಷ್ಟವಾಗಿದೆ’ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಳಸಿರುವ ಪದಗಳನ್ನೇ ಬಿಜೆಪಿ-ಜೆಡಿಎಸ್ ನಾಯಕರು, ಇವರಿಗೂ ಬಳಸಬಹುದು. ಅಂದರೆ ಈ ಮೂರೂ ಪಕ್ಷಗಳ ನಾಯಕರು ನಿರ್ವಿರ್ಯರು ಎಂಬುದನ್ನು ಅವರಿಗವರೇ ಸಾಬೀತುಪಡಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಮಹದಾಯಿ ಯೋಜನೆಯ ವಿಳಂಬದ್ರೋಹದಲ್ಲಿ ಎಲ್ಲ ಪಕ್ಷಗಳ ಪಾಲಿದೆ; ನಾಯಕರ ನಾಡದ್ರೋಹವಿದೆ. ಅದು ರಾಜ್ಯದ ಜನತೆಗೂ ಗೊತ್ತಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅಧಿವೇಶನ ಎಂದಾಕ್ಷಣ ಹೆದರಿ ಓಡುವ ಪ್ರಧಾನಿ ಮೋದಿ   

ಆದರೂ ಅವರ ಮೇಲೆ ಇವರು, ಇವರ ಮೇಲೆ ಅವರು ಪತ್ರಿಕಾ ಹೇಳಿಕೆಗಳೆಂಬ ಕೆಸರೆರಚಾಟ ನಡೆದೇ ಇದೆ. ಈ ಹೇಳಿಕೆಗಳಲ್ಲೇ ನಿರ್ವಿರ್ಯರಾಗುವ, ಬೆತ್ತಲಾಗುವ ಬದಲು; ಅಳಿದುಳಿದ ಮಾನ ಮುಚ್ಚಿಕೊಳ್ಳಲಾದರೂ ಇವರೆಲ್ಲ ಪಕ್ಕದ ತಮಿಳುನಾಡಿನತ್ತ ನೋಡುವ ಅಗತ್ಯವಿದೆ. ತಮಿಳುನಾಡಿನ ರಾಜಕಾರಣಿಗಳು ನೆಲ, ಜಲ, ಭಾಷೆಯ ವಿಚಾರಕ್ಕೆ ಬಂದರೆ, ಪಕ್ಷರಾಜಕಾರಣವನ್ನು ಪಕ್ಕಕ್ಕಿಟ್ಟು ಒಂದಾಗುತ್ತಾರೆ. ಅದರಲ್ಲೂ ಅಧಿಕಾರಿವರ್ಗ ಮತ್ತು ಮಾಧ್ಯಮಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಜನರಲ್ಲಿ ಜಾಗೃತಿ ಉಂಟುಮಾಡುತ್ತವೆ. ಅಧಿಕಾರಸ್ಥರ ಮೇಲೆ ಒತ್ತಡ ಹಾಕುತ್ತವೆ. ಅದಕ್ಕೆ ಪೂರಕವಾಗಿ ದೆಹಲಿಯಲ್ಲಿರುವ ಉನ್ನತ ಅಧಿಕಾರಿಗಳು ತಮಿಳುನಾಡಿನ ಪರ ನಿಂತು ತಾಯ್ನೆಲದ ಋಣ ತೀರಿಸುತ್ತಾರೆ.

ಇಂತಹದ್ದೊಂದು ಹೊಂದಾಣಿಕೆ, ಒಗ್ಗೂಡುವಿಕೆ ಕರ್ನಾಟಕದಲ್ಲಿ ಇದುವರೆಗೂ ಸಾಧ್ಯವಾಗಿಲ್ಲ. ನಮ್ಮ ನಡುವಿನಿಂದ ಎದ್ದುಹೋದವರೇ ಅಧಿಕಾರದ ಕುರ್ಚಿಯಲ್ಲಿ ಕೂತಿದ್ದರೂ; ಡಬಲ್ ಎಂಜಿನ್ ಸರ್ಕಾರವಿದ್ದರೂ ಅನ್ಯಾಯ ತಪ್ಪಿಲ್ಲ. ಮಹದಾಯಿ ನೀರು ಹರಿಯಲಿಲ್ಲ. ಜನರೆದ್ದು ನಿಂತು ಅಧಿಕಾರಸ್ಥರ ಕುರ್ಚಿಗೆ ಕಂಟಕ ತರದ ಹೊರತು, ಇಲ್ಲಿ ಯಾವುದೂ ಸಲೀಸಾಗಿ ದಕ್ಕುವುದಿಲ್ಲ.  

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು...

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

Download Eedina App Android / iOS

X