ಪ್ರತಿಯೊಂದು ಸುದ್ದಿಯಲ್ಲೂ ಸೆಕ್ಸ್, ಕ್ರೈಮ್, ಗ್ಲ್ಯಾಮರ್ ಹುಡುಕುವ ದೃಶ್ಯಮಾಧ್ಯಮಗಳು; ಪ್ರತಿಯೊಂದರಲ್ಲೂ ದೇವರು, ಧರ್ಮ, ಮತಾಂಧತೆ ಹುಡುಕುವ ಬಿಜೆಪಿ- ಇಬ್ಬರೂ ಒಟ್ಟಿಗೆ ಸೇರಿದರೆ ಆಗುವ ಅಪಾಯವನ್ನು ಜನ ಅರ್ಥ ಮಾಡಿಕೊಳ್ಳಬೇಕಿದೆ.
ಇಂದಿನ ದೃಶ್ಯಮಾಧ್ಯಮಗಳು ನಿಂತಿರುವುದು ನೋಡುಗರ ಮೇಲೆ. ಒಂದು ಸುದ್ದಿಯನ್ನು ಅತಿರಂಜಿತವಾಗಿ ತೋರುವುದರಲ್ಲಿ; ಅದನ್ನು ಅತಿ ಹೆಚ್ಚು ಜನ ನೋಡುವಂತೆ ಮಾಡುವುದರಲ್ಲಿ ಅವರ ಟಿಆರ್ಪಿ ಇದೆ, ಲಾಭವಿದೆ. ದುರದೃಷ್ಟಕರ ಸಂಗತಿ ಎಂದರೆ, ದೃಶ್ಯಮಾಧ್ಯಮಗಳು ಪ್ರತಿ ಸುದ್ದಿಯಲ್ಲೂ ಸೆಕ್ಸ್, ಕ್ರೈಮ್ ಮತ್ತು ಗ್ಲ್ಯಾಮರ್- ಈ ಮೂರು ಅಂಶಗಳನ್ನು ಹುಡುಕುತ್ತವೆ. ಇಲ್ಲದಿದ್ದರೆ ತುರುಕುತ್ತವೆ ಮತ್ತು ಬಣ್ಣಕಟ್ಟಿ ಬಿತ್ತರಿಸುತ್ತವೆ. ಆ ಮೂಲಕ ಜನರ ಅಭಿರುಚಿಯನ್ನು ಕೆಡಿಸುತ್ತವೆ, ದಿಕ್ಕು ತಪ್ಪಿಸುತ್ತವೆ.
ಇದೇ ರೀತಿ ಭಾರತೀಯ ಜನತಾ ಪಕ್ಷ ಕೂಡ ಜನರನ್ನು ಅವಲಂಬಿಸಿದೆ. ಆ ಜನರನ್ನು ತನ್ನತ್ತ ಸೆಳೆಸಲು, ಕೆರಳಿಸಲು- ದೇಶ, ಧರ್ಮ, ಮತಾಂಧತೆಯ ಮೊರೆ ಹೋಗುತ್ತದೆ. ಪ್ರತಿಯೊಂದರಲ್ಲೂ ಈ ಮೂರು ಅಂಶಗಳನ್ನು ಹುಡುಕುತ್ತದೆ, ಇಲ್ಲದಿದ್ದರೆ ತುರುಕುತ್ತದೆ, ಬಣ್ಣ ಕಟ್ಟಿ ಬಿತ್ತರಿಸಲು ವ್ಯವಸ್ಥೆ ಮಾಡುತ್ತದೆ. ಆ ಮೂಲಕ ದ್ವೇಷಾಸೂಯೆ ಬಿತ್ತುತ್ತದೆ, ಅಧಿಕಾರದ ಬೆಳೆ ತೆಗೆಯುತ್ತದೆ.
ಇಂತಹ ಬಿಜೆಪಿಗೆ ಈಗ ಧರ್ಮಸ್ಥಳ ಸಿಕ್ಕಿದೆ. ಪವಿತ್ರ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಕಳಂಕ ತರುತ್ತಿದೆ ಎಂಬ ಅಪಪ್ರಚಾರದಲ್ಲಿ ನಿರತವಾಗಿದೆ. ಅಸಲಿಗೆ, ಧರ್ಮಸ್ಥಳದ ಆಸುಪಾಸಿನಲ್ಲಿ ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಪ್ರಕರಣಗಳು, ಅಸ್ವಾಭಾವಿಕವಾದ ಸಾವು/ಕೊಲೆ ಪ್ರಕರಣಗಳು ಮತ್ತು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ರಾಜ್ಯ ಸರ್ಕಾರ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದೆ.
ಇದನ್ನು ಓದಿದ್ದೀರಾ?: ಬಿಜೆಪಿಯ ದ್ವಿಪಾತ್ರಾಭಿನಯಕ್ಕೆ ಆಸ್ಕರ್ ಕೊಟ್ಟರೂ ಕಡಿಮೆಯೇ: ಪ್ರಿಯಾಂಕ್ ಖರ್ಗೆ ಲೇವಡಿ
ಎಸ್ಐಟಿ ರಚನೆಯ ಹಿಂದೆ ರಾಜ್ಯ ಮಹಿಳಾ ಆಯೋಗದ ಮನವಿ ಇದೆ. ಆ ಮನವಿಯ ಮೇರೆಗೆ ಸರ್ಕಾರ ರಚಿಸಿರುವ ಎಸ್ಐಟಿಯಿಂದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಅಸ್ವಾಭಾವಿಕ ಸಾವಿನ ತನಿಖೆ ನಡೆಯುತ್ತಿದೆ, ವರದಿ ಬರಲಿದೆ. ಆದರೆ ಆ ವರದಿ ಬರುವ ಮೊದಲೇ, ರಾಜ್ಯ ಪೊಲೀಸ್ ಅಧಿಕಾರಿಗಳ ಎಸ್ಐಟಿಯನ್ನು ವಿರೋಧ ಪಕ್ಷಗಳು ವಿರೋಧಿಸುತ್ತಿವೆ. ಮಾಧ್ಯಮಗಳನ್ನು ಬಳಸಿಕೊಂಡು ಜನರನ್ನು ದಿಕ್ಕುತಪ್ಪಿಸುತ್ತಿವೆ.
ಸರ್ಕಾರ, ಇದು ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ವಿರುದ್ಧವಲ್ಲ, ಅಮಾಯಕ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಲು ರಚಿಸಿರುವ ಎಸ್ಐಟಿ ಎನ್ನುವುದನ್ನು ಸ್ಪಷ್ಟಪಡಿಸಿದೆ.
ಆದರೂ ಬಿಜೆಪಿ, ಇದನ್ನು ಧಾರ್ಮಿಕ ವಿಷಯವನ್ನಾಗಿ ತಿರುಚಿದೆ. ಅನಗತ್ಯವಾಗಿ ದೇವರು ಮತ್ತು ಧರ್ಮವನ್ನು ಎಳೆದು ತರುತ್ತಿದೆ. ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಕ್ಕೆ ಮಾಡುತ್ತಿರುವ ಅಪಮಾನ, ಷಡ್ಯಂತ್ರ ಎಂದು ಕೂಗೆಬ್ಬಿಸಿದೆ. ಜನರನ್ನು ಭಾವನಾತ್ಮಕವಾಗಿ ಸೆಳೆಯಲು, ಕೆರಳಿಸಲು, ಅದರಿಂದ ರಾಜಕೀಯ ಲಾಭ ಪಡೆಯಲು ಧರ್ಮಸ್ಥಳ ಚಲೋ ಕೈಗೊಂಡಿದ್ದೂ ಆಗಿದೆ.
ಧರ್ಮಸ್ಥಳಕ್ಕೆ ವಿರೋಧಪಕ್ಷಗಳು ಮೇಲಿಂದ ಮೇಲೆ ‘ಸತ್ಯಕ್ಕಾಗಿ ಆಗ್ರಹಿಸಿ’ ವಾಹನಗಳಲ್ಲಿ ಯಾತ್ರೆ ಮಾಡುತ್ತಿವೆ. ಮೊದಲಿಗೆ ಯಾತ್ರೆ ಆರಂಭಿಸಿದ ಯಲಹಂಕ ಶಾಸಕ ವಿಶ್ವನಾಥ್ ನೇತೃತ್ವದಲ್ಲಿ 400 ಕಾರುಗಳು ಧರ್ಮಸ್ಥಳದಲ್ಲಿ ಗಬ್ಬೆಬ್ಬಿಸಿದರೆ; ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿಯವರ ನೇತೃತ್ವದ ಸತ್ಯ ಯಾತ್ರೆಯಲ್ಲಿ ಸಾವಿರಾರು ಕಾರುಗಳು, ಬಸ್ಸುಗಳು ಸದ್ದು ಮಾಡಿವೆ. ಇವೆರಡನ್ನೂ ಮೀರಿಸುವಂತೆ ಬಿಜೆಪಿಯ ವಿಜಯೇಂದ್ರ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ಕೂಡ ನಡೆದಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಧರ್ಮಾಧಿಕಾರಿಯ ಕಾಲಿಗೆ ಬಿದ್ದು ‘ನಿಮ್ಮ ಸೇವೆಗೆ ಸಿದ್ಧ’ ಎನ್ನುವ ನಾಟಕವೂ ನಡೆದಿದೆ.
ಎಸ್ಐಟಿ ತನಿಖೆ ನಡೆಸುತ್ತಿರುವ ಸಂದಿಗ್ಧ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಈ ರೀತಿ ಗುಂಪುಗುಂಪಾಗಿ ಧರ್ಮಸ್ಥಳಕ್ಕೆ ಬರಬಾರದು ಎಂದು ಹೇಳುವ ವಿವೇಕ ಅಲ್ಲಿನ ‘ದೊಡ್ಡವರಿಗೆ’ ಇಲ್ಲ. ಬಂದವರಿಗೆ ನಿಮ್ಮ ಪ್ರೀತಿ-ಗೌರವ ಹೀಗೆಯೇ ಇರಲಿ ಎಂದು ಹೇಳುವ ಸಣ್ಣತನವನ್ನೂ ಬಚ್ಚಿಟ್ಟುಕೊಳ್ಳಲಾಗಲಿಲ್ಲ. ಅವರನ್ನು ದೇವರೆಂದು ಭಾವಿಸುವ, ಭ್ರಮಿಸುವ ಜನರೂ ಕಡಿಮೆಯಾಗುತ್ತಿಲ್ಲ.
ಅಷ್ಟೇ ಅಲ್ಲ, ‘ರಾಜ್ಯ ಸರ್ಕಾರ ರಚಿಸಿರುವ ಎಸ್ಐಟಿ ಬಗ್ಗೆ ನಮಗೆ ನಂಬಿಕೆಯಿಲ್ಲ, ಕೇಂದ್ರ ಸರ್ಕಾರ ಅಧೀನದ ಎನ್ಐಎ(ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ)ಯಿಂದ ತನಿಖೆ ನಡೆಸಬೇಕು’ ಎಂದು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಕುತೂಹಲಕರ ಸಂಗತಿ ಎಂದರೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬಿಐನಿಂದ ಸೌಜನ್ಯ ಪ್ರಕರಣ ತನಿಖೆ ಆಗಿದ್ದನ್ನು, ಮುಚ್ಚಿಹಾಕಿದ್ದನ್ನು ಪ್ರಜ್ಞಾಪೂರ್ವಕವಾಗಿಯೇ ಮರೆಗೆ ಸರಿಸುತ್ತಿದ್ದಾರೆ.
ಬಿಜೆಪಿಯಾಗಲಿ, ಜೆಡಿಎಸ್ ಆಗಲಿ, ಈ ನೆಲದ ಕಾನೂನನ್ನು ಪಾಲಿಸಬೇಕು, ಸರ್ಕಾರ ರಚಿಸಿರುವ ಎಸ್ಐಟಿ ತನಿಖೆಯನ್ನು ಗೌರವಿಸಬೇಕು. ಅವರು ಧರ್ಮರಕ್ಷಕರೇ ಆಗಿದ್ದರೆ, ಹೆಣ್ಣುಮಕ್ಕಳ ಪರವಾಗಿ ನಿಲ್ಲಬೇಕು. ಅದೇ ಅವರ ಧರ್ಮವಾಗಬೇಕು, ಅಲ್ಲವೇ?
ಆದರೆ ಅವರಾಗಲೇ ಧರ್ಮಸ್ಥಳದಿಂದ ದಸರಾದತ್ತ ಜಿಗಿದಿದ್ದಾರೆ. ರಾಜ್ಯ ಸರ್ಕಾರ, ನಾಡಹಬ್ಬ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಆಯ್ಕೆ ಮಾಡಿದ್ದನ್ನು ಕೂಡ ಬಿಜೆಪಿಗರು ವಿವಾದ ಮಾಡುತ್ತಿದ್ದಾರೆ. ಅದನ್ನು ಕೂಡ ದೇವರು-ಧರ್ಮದ ದುರ್ಬೀನುನಿಂದಲೇ ನೋಡುತ್ತಿದ್ದಾರೆ. ಕನ್ನಡಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದ ಕನ್ನಡದ ಲೇಖಕಿ ಬಾನು ಮುಷ್ತಾಕ್ ಆಯ್ಕೆಯಲ್ಲಿ ಮುಸ್ಲಿಂ ಹುಡುಕಿದ್ದಾರೆ. ‘ದಸರಾ ಉದ್ಘಾಟನೆಗೆ ಇನ್ಯಾರೂ ಸಿಗಲಿಲ್ಲವೇ’ ಎಂದು ಅಪಸ್ವರ ಎತ್ತಿದ್ದಾರೆ. ‘ಹಿಂದೂ ಧರ್ಮಕ್ಕೆ ಅಪಚಾರ’ ಎಂದಿದ್ದಾರೆ. ಮುಂದುವರೆದು, ಮೈಸೂರಿನಿಂದ ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು
ಭಾರತೀಯ ಜನತಾ ಪಕ್ಷದವರ ಈ ಧರ್ಮಸ್ಥಳ ಚಲೋ, ಚಾಮುಂಡಿ ಚಲೋಗಳ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಬಿಜೆಪಿಯವರಿಗೆ ಧರ್ಮನೂ ಗೊತ್ತಿಲ್ಲ, ಜಾತಿನೂ ಗೊತ್ತಿಲ್ಲ. ಧರ್ಮಯಾತ್ರೆ ಮೂಲಕ ರಾಜಕೀಯ ಮಾಡಲು ಹೊರಟಿದ್ದಾರೆ. ಹಾಗೆಯೇ ದಸರಾ ನಾಡ ಹಬ್ಬ. ಎಲ್ಲರೂ ಸೇರಿ ಆಚರಿಸುವ ಹಬ್ಬ. ಬಿಜೆಪಿಯದು ಇದರಲ್ಲೂ ರಾಜಕಾರಣ. ಒಂದು ಕಡೆ ವೀರೇಂದ್ರ ಹೆಗಡೆಯವರ ಪರ ಎನ್ನುತ್ತಾರೆ ಮತ್ತೊಂದಡೆ ಸೌಜನ್ಯ ಪರ ಎನ್ನುತ್ತಾರೆ. ಒಂದು ಕಡೆ ವೀರೇಂದ್ರ ಹೆಗ್ಗಡೆಯವರಿಗೆ ಜೈಕಾರ ಹಾಕುತ್ತಾರೆ, ಮತ್ತೊಂದು ಕಡೆ ಸೌಜನ್ಯ ಪರ ಇರುವುದಾಗಿ ಹೇಳುತ್ತಾರೆ. ನಿಜವಾಗಿಯೂ ಇವರು ಯಾರ ಪರ?’ ಎಂದು ಪ್ರಶ್ನಿಸುವ ಮೂಲಕ ಬಿಜೆಪಿಗರ ಸೋಗಲಾಡಿತನವನ್ನು ಬಿಚ್ಚಿಟ್ಟಿದ್ದಾರೆ.
ಪ್ರತಿಯೊಂದು ಸುದ್ದಿಯಲ್ಲೂ ಸೆಕ್ಸ್, ಕ್ರೈಮ್, ಗ್ಲ್ಯಾಮರ್ ಹುಡುಕುವ ದೃಶ್ಯಮಾಧ್ಯಮಗಳು; ಪ್ರತಿಯೊಂದರಲ್ಲೂ ದೇವರು, ಧರ್ಮ, ಮತಾಂಧತೆ ಹುಡುಕುವ ಬಿಜೆಪಿ- ಈಗ ಬೆಸೆದುಕೊಂಡಿವೆ. ಅವರು ಅಭಿರುಚಿ ಕೆಡಿಸುತ್ತಾರೆ, ಇವರು ಹಾದಿ ತಪ್ಪಿಸುತ್ತಾರೆ. ಇಬ್ಬರೂ ಒಟ್ಟಿಗೆ ಸೇರಿದರೆ ಆಗುವ ಅಪಾಯ ಮತ್ತು ಅನಾಹುತವನ್ನು ಜನ ಅರ್ಥ ಮಾಡಿಕೊಳ್ಳಬೇಕಿದೆ.
