ಈ ದಿನ ಸಂಪಾದಕೀಯ | ರಾಹುಲ್ ಹೇಳಿದ್ದನ್ನೆಲ್ಲ ಮೋದಿ ಮಾಡುತ್ತಿದ್ದಾರಲ್ಲ?

Date:

Advertisements
ರಾಹುಲ್ ಗಾಂಧಿ, ಜನಪರವಾಗಿ ಚಿಂತಿಸಿದ್ದನ್ನು ಆಗ ವ್ಯಂಗ್ಯವಾಡಿದ್ದ ಮೋದಿಯವರು, ಈಗ ಅದೆಲ್ಲವನ್ನು ಮಾಡುತ್ತಿದ್ದಾರೆ. ಮಾಡುವ ಮೂಲಕ ರಾಹುಲ್‌ ಗಾಂಧಿ ಯೋಚಿಸಿದ್ದು ಸರಿ ಎನ್ನುವುದನ್ನು, ತಮ್ಮದು ಬೂಟಾಟಿಕೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕುಗ್ಗಿದೆಯೇ, ವರ್ಚಸ್ಸು ಕಳೆಗುಂದಿದೆಯೇ? ಈ ಪ್ರಶ್ನೆ ಈಗ ವ್ಯಾಪಕ ಚರ್ಚೆಯಲ್ಲಿದೆ. ದೇಶದಲ್ಲಿ ಗೋದಿ ಮೀಡಿಯಾ ಮತ್ತು ಬಿಜೆಪಿಪ್ರಣೀತ ಸೋಷಿಯಲ್‌ ಮೀಡಿಯಾಗಳಲ್ಲಿ ಮೋದಿಯವರನ್ನು ಮೇಲೆತ್ತುವ ಸ್ಟೋರಿಗಳು ಎಷ್ಟೇ ಹರಿದಾಡಿದರೂ, ವಾಸ್ತವ ಸ್ಥಿತಿ ಅದಕ್ಕಿಂತ ಭಿನ್ನವಾಗಿದೆ. ಅವರನ್ನು, ಅವರ ಆಡಳಿತವನ್ನು ಮೆಚ್ಚುವವರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಅದು 2024ರ ಸಾವ್ರರ್ತಿಕ ಚುನಾವಣೆಯ ಫಲಿತಾಂಶದಿಂದಲೇ ಆರಂಭವಾಯಿತೆಂದು ಹೇಳಬಹುದು. ಚುನಾವಣೆಗೂ ಮುಂಚೆ ಬಿಜೆಪಿ ‘ಚಾರ್ ಸೌ ಪಾರ್’, ‘ಮೋದಿ ಅಲೆ ಮತ್ತೊಮ್ಮೆ’ ಎಂಬ ಘೋಷಣೆಗಳನ್ನು ಹುಟ್ಟುಹಾಕಿತ್ತು. ಬೇರೆ ಪಕ್ಷಗಳ ಹಂಗಿಲ್ಲದೆ, ಬಿಜೆಪಿ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂಬ ಭಾರೀ ನಿರೀಕ್ಷೆಯಲ್ಲಿತ್ತು. ಆದರೆ, ದೇಶದ ಜನ ಬಿಜೆಪಿಯನ್ನು 240 ಸೀಟುಗಳಿಗೆ ಇಳಿಸುವ ಮೂಲಕ ನಾಯಕ ನರೇಂದ್ರ ಮೋದಿಯವರನ್ನು ಬೆಚ್ಚಿ ಬೀಳಿಸಿದ್ದರು. ಅಲ್ಲಿಂದಲೇ ಮೋದಿಯವರ ಜನಪ್ರಿಯತೆಯ ಗ್ರಾಫ್ ಕೆಳಗಿಳಿಯಲಾರಂಭಿಸಿತ್ತು.

ಇದನ್ನು ಓದಿದ್ದೀರಾ?: ಡಿಜೆ ಬ್ಯಾನ್‌ನಿಂದ ಕಲೆಗೆ ಪ್ರೋತ್ಸಾಹ, ಕೋಮು ಉದ್ವಿಗ್ನತೆಗೆ ಕಡಿವಾಣ

ಮೋದಿಯವರ ಜನಪ್ರಿಯತೆ ಕಳೆಗುಂದತೊಡಗುತ್ತಿದ್ದಂತೆ, ಅದಕ್ಕೆ ವಿರುದ್ಧವಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್ ಗಾಂಧಿಯವರತ್ತ ನೋಡತೊಡಗಿದರು. ಕಂಗೆಟ್ಟಿದ್ದ ಕಾಂಗ್ರೆಸ್ ಪಕ್ಷವನ್ನು ನೂರರ ಗಡಿಗೆ ತಂದು ನಿಲ್ಲಿಸಿದರು. ವಿಪಕ್ಷ ನಾಯಕರಾಗಿ ಆಯ್ಕೆಯಾದರು. ಜನರ ದನಿಯಾಗಿ ಸಂಸತ್‌ನಲ್ಲಿ ಮಾಡಿದ ಮೊದಲ ಭಾಷಣದಲ್ಲಿಯೇ, ಸಿಕ್ಕ ಅಪೂರ್ವ ಅವಕಾಶ ಮತ್ತು ಎದುರಾದ ಸವಾಲು- ಎರಡನ್ನು ಸಮರ್ಥವಾಗಿ ನಿಭಾಯಿಸಿದರು. ಅವರ ಮಾತಿನಲ್ಲಿದ್ದ ನಿಖರತೆ, ಖಚಿತತೆ, ವಿಷಯ ಮಂಡನೆ, ವಿರೋಧಿಗಳನ್ನು ಕಟ್ಟಿಹಾಕಿದ ಬಗೆ ವಿಶೇಷವಾಗಿತ್ತು. ಇಂತಹ ಒಬ್ಬ ಪ್ರತಿಭಾನ್ವಿತ ಸಂಸದೀಯ ಪಟುವನ್ನು ‘ಪಪ್ಪು’ ಎಂದು ಜರೆದ ಮಹಾಪರಾಧಕ್ಕೆ ಮೋದಿಯವರು ದೇಶದೆದುರು ತಲೆ ತಗ್ಗಿಸುವಂತಾಗಿತ್ತು.

ಆದರೆ ಇದನ್ನು ಮೋದಿ ಮತ್ತು ಶಾ ಸೋಲೆಂದು ಒಪ್ಪಿಕೊಳ್ಳಲಿಲ್ಲ. ಮುಂದಾಗಬಹುದಾದ ಸೋಲುಗಳನ್ನೇ ಸೋಲಿಸಲು ಹೊಸ ತಂತ್ರ-ಕುತಂತ್ರಗಳ ಮೊರೆ ಹೋಗುವುದನ್ನೂ ಬಿಡಲಿಲ್ಲ.

ಅದರ ಮುಂದುವರಿಕೆಯಾಗಿ, ಕೇಂದ್ರ ಚುನಾವಣಾ ಆಯೋಗಕ್ಕೆ, ತಮ್ಮ ಆಟಕ್ಕೆ ತಕ್ಕ ಗೊಂಬೆಗಳನ್ನು ನೇಮಕ ಮಾಡಿದರು. ಮತದಾರರ ಪಟ್ಟಿಯಲ್ಲಿ ಮತದಾರರನ್ನು ಏರಿಸುವ-ಇಳಿಸುವ ಹೊಸ ಕುತಂತ್ರಕ್ಕೆ ಕೈಹಾಕಿ ಮಹಾರಾಷ್ಟ್ರವನ್ನು ಗೆದ್ದರು. ಹರ್ಯಾಣದಲ್ಲಿ ಬಿಜೆಪಿ ಗೆಲ್ಲುವುದು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯಿತ್ತು. ಅಲ್ಲಿಯೂ ಮಹಾರಾಷ್ಟ್ರಕ್ಕಿಂತ ಮೀರಿದ ಮತ್ತೊಂದು ಹೊಸ ತಂತ್ರದ ಮೂಲಕ ಅದನ್ನೂ ಗೆದ್ದರು. ಈಗ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಕೈಹಾಕಿದ್ದಾರೆ. ಲಕ್ಷಾಂತರ ಜನರ ಸಂವಿಧಾನದತ್ತ ಮತದಾನದ ಹಕ್ಕನ್ನೇ ಇಲ್ಲವಾಗಿಸಿದ್ದಾರೆ. ಪ್ರಜಾಪ್ರಭುತ್ವಕ್ಕೇ ಧಕ್ಕೆ ತಂದಿದ್ದಾರೆ.

ಮೋಶಾಗಳ ಹೊಸ ಕುತಂತ್ರಗಳು ಹೇಗಿವೆ ಎಂದರೆ, ಕಳ್ಳರು, ವಂಚಕರು, ಭ್ರಷ್ಟರು, ಲೂಟಿಕೋರರು ಹೊಸ ಮಾರ್ಗಗಳನ್ನು ಕಂಡುಹಿಡಿದು ಜನರನ್ನು ಮೋಸಗೊಳಿಸುತ್ತಾರಲ್ಲ, ಹಾಗೆ. ಅದು ಮಾಧ್ಯಮಗಳಲ್ಲಿ ಸುದ್ದಿಯಾಗಿ ಜನರಿಗೆ ಗೊತ್ತಾಗುತ್ತಿದ್ದಂತೆ ಕಳ್ಳರು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಾರಲ್ಲ, ಹಾಗೆ.

ಕೇಂದ್ರ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಬಿಹಾರದಲ್ಲಿ ಮಾಡಿರುವ ವಂಚನೆ- ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂಥದ್ದು. ದನಿ ಇಲ್ಲದವರ, ಶೋಷಿತರ, ಅಸಹಾಯಕರ ‘ವೋಟ್ ಚೋರಿ’ಯನ್ನು ರಾಹುಲ್ ಗಾಂಧಿಯವರು ದೇಶದ ಜನರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟು ಬಿಜೆಪಿಯನ್ನು ಬೆತ್ತಲು ಮಾಡಿದ್ದಾರೆ. ಅದು ದೊಡ್ಡ ಮಟ್ಟದಲ್ಲಿ ದೇಶದಾದ್ಯಂತ ಚರ್ಚೆಯನ್ನು ಹುಟ್ಟುಹಾಕಿದೆ. ಬಿಜೆಪಿಯವರ ಮೋಸ-ವಂಚನೆ ಜನರಿಗೆ ಅರ್ಥವಾಗಿದೆ. ಮೋದಿ ಮೇಲಿದ್ದ ಅಭಿಮಾನ ಮಂಜಿನಂತೆ ಕರಗತೊಡಗಿದೆ, ಅವರ ನಡೆ-ನುಡಿ ಅನುಮಾನ ಹುಟ್ಟಿಸತೊಡಗಿದೆ.

ಇದು ಮೋದಿಯವರಿಗೂ ಅರ್ಥವಾದಂತಿದೆ. ಹಾಗೆಯೇ ಕಳೆದ ಹನ್ನೊಂದು ವರ್ಷಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎತ್ತಿದ- ಜಿಎಸ್‌ಟಿ, ಜಾತಿ ಜನಗಣತಿ, ಅದಾನಿ-ಅಂಬಾನಿ, ಮಣಿಪುರ, ವಿದೇಶಾಂಗ ನೀತಿ ಕುರಿತಾದ ಪ್ರಶ್ನೆಗಳಲ್ಲಿ ಸತ್ಯವಿರುವುದೂ ಗೊತ್ತಾಗಿದೆ. ಇವುಗಳನ್ನು ವಿರೋಧ ಮಾಡಿದ್ದರಿಂದ ಆದ ಅವಘಡಗಳು-ಅವಮಾನಗಳು ಮೋದಿಯವರ ಅರಿವಿಗೂ ಬಂದಿದೆ.

ಇದರಿಂದ ಹೊರಬರಲು ಹಾಗೂ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮೋದಿಯವರು ಈಗ ಮೊದಲು ವಿರೋಧಿಸಿದ್ದ, ಟೀಕಿಸಿದ್ದ, ವ್ಯಂಗ್ಯವಾಡಿದ್ದ ರಾಹುಲ್ ಗಾಂಧಿಯವರ ಒತ್ತಾಯಗಳನ್ನು ಒಂದೊಂದಾಗಿ ಜಾರಿಗೆ ತರುತ್ತಿದ್ದಾರೆ.

ರಾಹುಲ್ ಗಾಂಧಿ, ಸಾಮಾಜಿಕ ನ್ಯಾಯ ಸಿಗಬೇಕಾದರೆ ಜಾತಿ ಜನಗಣತಿಯ ಅಗತ್ಯವಿದೆ ಎಂದಾಗ, ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚಿ ದೇಶ ಒಡೆಯುವ ಕೆಲಸ ಎಂದು ಟೀಕಿಸಿದ್ದ ಪ್ರಧಾನಿ ಮೋದಿಯವರು, ನಂತರ ಜಾತಿ ಜನಗಣತಿ ಮಾಡುವುದಾಗಿ ಘೋಷಿಸಿದರು.

ರಾಹುಲ್ ಗಾಂಧಿ, ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಅಗತ್ಯಕ್ಕಿಂತ ಹೆಚ್ಚು ಅಪ್ಪಿಕೊಂಡದ್ದರ ಹಿಂದೆ, ಅದಾನಿ-ಅಂಬಾನಿಗಳಿಗೆ ಲಾಭ ಮಾಡಿಕೊಡುವ ಇರಾದೆ ಇದೆ ಎಂದಾಗ, ಮೌನಕ್ಕೆ ಜಾರಿದ್ದವರು, ಟ್ರಂಪ್ ದೇಶದ ಮೇಲೆ ಶೇ. 50 ಸುಂಕ ವಿಧಿಸಿದ ಮೇಲೆ ಎಚ್ಚೆತ್ತುಕೊಂಡರು. ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಒಪ್ಪಂದಗಳಿಗೆ ತೊಡಕುಂಟಾಗಿ ಆರ್ಥಿಕ ವ್ಯವಸ್ಥೆ ಹದಗೆಟ್ಟಾಗ, ಚೀನಾದತ್ತ ಕೈ ಚಾಚಿದರು. ನೆರೆಯ ಚೀನಾ ದೇಶದೊಂದಿಗೆ ಉತ್ತಮ ಸ್ನೇಹವಿರಬೇಕೆಂದು ರಾಹುಲ್‌ ಗಾಂಧಿ ಹೇಳಿದಾಗ, ಶತ್ರುವಿನ ಮಿತ್ರ ಎಂದು ವ್ಯಂಗ್ಯವಾಡಿದ್ದರು. ಈಗ ಅವರೇ ಚೀನಾ ಸ್ನೇಹ ಬಯಸುತ್ತಿದ್ದಾರೆ.

ಹಾಗೆಯೇ, 2016ರಲ್ಲಿಯೇ ರಾಹುಲ್ ಗಾಂಧಿ ಜಿಎಸ್‌ಟಿಯನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಕರೆದಿದ್ದರು. ಬಡವರು ಮತ್ತು ಮಧ್ಯಮವರ್ಗದವರನ್ನು ಹಿಂಡಿ ಕಾರ್ಪೊರೇಟ್‌ ಕುಳಗಳಿಗೆ ಲಾಭ ಮಾಡಿಕೊಡುವ ತೆರಿಗೆ ನೀತಿ ಎಂದು ಟೀಕಿಸಿದ್ದರು. ಆದರೂ ಮೋದಿಯವರು, ಕಳೆದ ಎಂಟು ವರ್ಷಗಳಿಂದ ಜನರಿಂದ 93 ಸಾವಿರ ಕೋಟಿ ರೂಪಾಯಿಗಳನ್ನು ಜಿಗಣೆಯಂತೆ ಹೀರಿದರು. ಈಗ ಜಿಎಸ್‌ಟಿ ಸರಳೀಕರಣ, ದೀಪಾವಳಿಗಾಗಿ ಕಡಿತ-ಕೊಡುಗೆಯ ಮಾತುಗಳನ್ನಾಡುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಹಿರಿಯ ಪತ್ರಕರ್ತ, ದಿ ಟೆಲಿಗ್ರಾಫ್‌ ಸಂಪಾದಕ ಸಂಕರ್ಷಣ್ ಠಾಕೂರ್ ನಿಧನ

ಇನ್ನು ಮಣಿಪುರ ಎನ್ನುವುದು ದೇಶದೊಳಗೇ ಇರುವ ನಮ್ಮದೇ ರಾಜ್ಯ, ಅಲ್ಲಿರುವವರು ನಮ್ಮವರು, ಅವರ ಸಮಸ್ಯೆ ನಿವಾರಿಸಿ ಎಂದು ರಾಹುಲ್ ಮನವಿ ಮಾಡಿಕೊಂಡರೆ, ಮೋದಿಯವರು ಮೌನಕ್ಕೆ ಜಾರಿದರು. ಈಗ ಸೆ. 13ರಂದು ಮಣಿಪುರಕ್ಕೆ ಭೇಟಿ ಕೊಡುವ ಸುದ್ದಿ ಇದೆ.

ಅಂದರೆ, ಈ ದೇಶವನ್ನು ಜನರನ್ನು ಅರ್ಥ ಮಾಡಿಕೊಂಡಿರುವ ರಾಹುಲ್ ಗಾಂಧಿ, ಜನಪರವಾಗಿ ಚಿಂತಿಸಿದ್ದನ್ನು ಆಗ ವ್ಯಂಗ್ಯವಾಡಿದ್ದ ಮೋದಿಯವರು, ಈಗ ಅದೆಲ್ಲವನ್ನು ಮಾಡುತ್ತಿದ್ದಾರೆ. ಮಾಡುವ ಮೂಲಕ ರಾಹುಲ್‌ ಗಾಂಧಿ ಯೋಚಿಸಿದ್ದು ಸರಿ ಎನ್ನುವುದನ್ನು, ತಮ್ಮದು ಬೂಟಾಟಿಕೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಹಾಗೆಯೇ ತಮ್ಮ ಸೋಲನ್ನು ತಾವೇ ಸೋಲಿಸುವ ಚಮತ್ಕಾರಿಕೆಯನ್ನೂ ತೋರುತ್ತಿದ್ದಾರೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

ಈ ದಿನ ಸಂಪಾದಕೀಯ | ಬಸನಗೌಡ ಯತ್ನಾಳ್‌ ಒಪ್ಪಿಸಿದ್ದು ಮನುವಾದಿ ಗಿಳಿಪಾಠ

ನಾಡ ದೇವತೆ ಎಂದು ಕರೆಸಿಕೊಂಡ ಚಾಮುಂಡಿ ದೇವಿ ಹೆಣ್ಣಾಗಿ ದಲಿತ ಮಹಿಳೆಯಿಂದ...

Download Eedina App Android / iOS

X