ವಿರೋಧ ಪಕ್ಷದ ನಾಯಕರಾದವರಿಗೆ ಬಹಳ ಮುಖ್ಯವಾಗಿ ಸಾರ್ವಜನಿಕ ಸಭ್ಯತೆ ಇರಬೇಕು. ವಿಪಕ್ಷ ನಾಯಕ ಸ್ಥಾನದಲ್ಲಿ ಇಲ್ಲಿಯವರೆಗೆ ಕೂತು, ಆ ಸ್ಥಾನಕ್ಕೆ ಘನತೆ-ಗೌರವ ತಂದವರ ದೊಡ್ಡ ಪರಂಪರೆಯೇ ನಮ್ಮ ರಾಜ್ಯದಲ್ಲಿದೆ. ಅವರನ್ನು ನೋಡಿಯಾದರೂ ಅಶೋಕ್ ಕಲಿಯದಿದ್ದರೆ, ಸಿಕ್ಕ ಅವಕಾಶವನ್ನು ಬಳಸಿಕೊಂಡು ಬೆಳೆಯದಿದ್ದರೆ- ಅವರು ಪ್ರತಿನಿಧಿಸುವ ಪಕ್ಷಕ್ಕಲ್ಲ, ರಾಜ್ಯದ ಜನರಿಗೆ ಮಾಡುವ ಮಹಾ ದ್ರೋಹ.
ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ, ಭಾರತೀಯ ಜನತಾ ಪಕ್ಷ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಂಡಿರಲಿಲ್ಲ. ಕೊನೆಗೆ, ಅಳೆದು ಸುರಿದು ಆ ಸ್ಥಾನಕ್ಕೆ ಆಯ್ಕೆಯಾದವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕ ಆರ್. ಅಶೋಕ್.
ಏಳು ಬಾರಿ ಶಾಸಕರಾಗಿ, ಹಲವು ತೂಕದ ಖಾತೆಗಳನ್ನು ನಿಭಾಯಿಸಿದ ಅನುಭವಿ ಸಚಿವರಾಗಿ ಹೆಸರು ಗಳಿಸಿರುವ ಅಶೋಕ್, ತಾವು ಪ್ರತಿನಿಧಿಸುವ ಒಕ್ಕಲಿಗ ಸಮುದಾಯದ ನಾಯಕರಾಗಿ ಹೊರಹೊಮ್ಮಿದವರಲ್ಲ. ಕ್ಷೇತ್ರದ ಆಚೆಗೆ ತಮ್ಮ ವ್ಯಕ್ತಿತ್ವವನ್ನು ವಿಸ್ತರಿಸಿಕೊಂಡವರಲ್ಲ. ರಾಜ್ಯ ಮಟ್ಟದ ನಾಯಕರಾಗಿ ಹೊರಹೊಮ್ಮುವ ಅವಕಾಶಗಳು ಸಿಕ್ಕರೂ ಬಳಸಿಕೊಂಡು ಬೆಳೆಯುವ ಉಮೇದು ತೋರಲೂ ಇಲ್ಲ.
ಆ ಕಾರಣದಿಂದಲೇ ಭಾರತೀಯ ಜನತಾ ಪಕ್ಷದ ಅಧಿಕೃತ ವಿರೋಧ ಪಕ್ಷದ ನಾಯಕರಾದರೂ, ಪಕ್ಷದ ಶಾಸಕರೇ ಅವರನ್ನು ನಾಯಕರೆಂದು ನೋಡುತ್ತಿಲ್ಲ, ಗೌರವಿಸುತ್ತಿಲ್ಲ. ಇದಕ್ಕೆ ಪೂರಕವಾಗಿ ಕಳೆದವಾರ ಘಟಿಸಿದ ಎರಡು ಮೂರು ಘಟನೆಗಳನ್ನು ಉದಾಹರಣೆಯನ್ನಾಗಿ ತೆಗೆದುಕೊಂಡು ವಿಶ್ಲೇಷಿಸಿದರೆ, ಅಶೋಕ್ ಎಂತಹ ನಾಯಕ ಮತ್ತು ಅವರ ಸಭ್ಯ ನಡವಳಿಕೆ ಎಂಥದು ಎಂಬುದು ಅರ್ಥವಾಗುತ್ತದೆ.
ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮಂಡನೆಗೆ ಎದ್ದು ನಿಂತಾಗ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ‘ಏನಿಲ್ಲ ಏನಿಲ್ಲ, ಬುರುಡೆ ಬಜೆಟ್’ ಎಂದು ಸದನದಲ್ಲಿ ಕೋಲಾಹಲವೆಬ್ಬಿಸಿದರು. ಬಜೆಟ್ಗೂ ಮೊದಲೇ, ಪ್ಲಕಾರ್ಡ್ ಸಿದ್ಧ ಮಾಡಿಟ್ಟುಕೊಂಡು ಬಂದು ಪ್ರತಿಭಟನೆಗೆ ಮುಂದಾದರು. ಬಜೆಟ್ ಬಹಿಷ್ಕರಿಸಿ ಸದನದಿಂದ ಹೊರನಡೆದರು.
ಕೊನೆಪಕ್ಷ, ವಿರೋಧಿಸಲಿಕ್ಕಾದರೂ ಬಜೆಟ್ ಪುಸ್ತಕವನ್ನು ಓದಬೇಡವೇ? ವಿರೋಧ ಪಕ್ಷಗಳ ಈ ನಡೆ ಆಳುವ ಪಕ್ಷಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸಿತು. ಜನರ ಆಶೋತ್ತರಗಳಿಗೆ ದ್ರೋಹ ಬಗೆಯಿತು.
ಮೊನ್ನೆ, ಕೇರಳದ ವಯನಾಡು ಕ್ಷೇತ್ರದಲ್ಲಿ ಆನೆ ತುಳಿತಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ಮೃತರಾದರು. ಕರ್ನಾಟಕ ಸರ್ಕಾರ ಅವರ ಕುಟುಂಬಕ್ಕೆ 15 ಲಕ್ಷ ಪರಿಹಾರ ನೀಡಿತು. ಆ ತಕ್ಷಣವೇ ಆರ್. ಅಶೋಕ್, ‘ನಾವಾಡುವ ನುಡಿಯೇ ಮಲಯಾಳಿ ನುಡಿ… ನಾವಿರುವುದೇ ನಿಮ್ಮ ಮುಲಾಜಿನಡಿ… ಗಾಂಧಿ ಪರಿವಾರ ಮೆಚ್ಚಿಸಲು ಕರ್ನಾಟಕವನ್ನು ಹರಾಜು ಹಾಕಲೂ ರೆಡಿ’ ಎಂದು ಬಿಜೆಪಿಯ ಐಟಿ ಸೆಲ್ ಸೃಷ್ಟಿಸಿದ ತೀರಾ ಕೆಳಮಟ್ಟದ ಚಿತ್ರ ಬಳಸಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದರು.
ಆನೆ ತುಳಿತಕ್ಕೆ ಸಿಲುಕಿದ ವ್ಯಕ್ತಿ ವಯನಾಡ್ ಕ್ಷೇತ್ರದವರಾದರೂ, ವ್ಯಕ್ತಿಯ ಸಾವಿಗೆ ಕಾರಣವಾದ ಆನೆ ಕರ್ನಾಟಕದ್ದು. ಪರಿಹಾರಕ್ಕಾಗಿ ಕೇರಳ ರಾಜ್ಯ ಸರ್ಕಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು, ಪರಿಹಾರ ಕೊಟ್ಟಿದ್ದು ಕಾನೂನು ಪ್ರಕಾರ ಸರಿಯಾಗಿತ್ತು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದರೂ, ಪರಿಹಾರ ಕೊಡಲೇಬೇಕಿತ್ತು. ಈ ಕನಿಷ್ಠ ಜ್ಞಾನವೂ ಇಲ್ಲದ ವಿರೋಧ ಪಕ್ಷದ ನಾಯಕರು, ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ಬಳಸಿಕೊಂಡು ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರನ್ನು ಬಫೂನ್ಗಳಂತೆ ಚಿತ್ರಿಸಿ ದೇಶದಾದ್ಯಂತ ಹಂಚಿದರು. ತಾವೂ ಕೂಡ ಹೀಗೆ ಹಂಚಿಕೆಯ ವಸ್ತುವಾಗಬಹುದು ಎಂಬುದನ್ನೇ ಮರೆತರು.
ಕರಾವಳಿಯಲ್ಲಿ ಚರ್ಚ್ಗಳ ಮೇಲೆ ಆದ ದಾಳಿ ಕುರಿತು ಸದನದಲ್ಲಿ ಪ್ರಸ್ತಾಪವಾದಾಗ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ‘ಗೃಹ ಸಚಿವನಾಗಿದ್ದಾಗ ಒತ್ತಡವಿತ್ತು, ಆದರೂ ಬಜರಂಗದಳ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ’ ಎಂದು ಕೊಂಚ ವೀರಾವೇಶದಲ್ಲಿ ಮಾತನಾಡಿದರು. ಆ ತಕ್ಷಣವೇ, ಶ್ರೀರಾಮ ಸೇವೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ‘ಅಶೋಕ್ ಪ್ರತಿಪಕ್ಷ ನಾಯಕರಾಗಲು ನಾಲಾಯಕ್’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರಾವಳಿಯ ಬಜರಂಗದಳ ನಾಯಕ ಶರಣು ಪಂಪ್ವೆಲ್, ಪಕ್ಷದ ಅಧ್ಯಕ್ಷ ವಿಜಯೇಂದ್ರರಿಗೆ, ‘ಕಾರ್ಯಕರ್ತರಿಗೆ ನೋವುಂಟು ಮಾಡಿದ್ದಾರೆ. ವಿಪಕ್ಷ ನಾಯಕ ಸ್ಥಾನದಿಂದ ಅಶೋಕ್ರನ್ನು ಕೆಳಗಿಳಿಸಬೇಕು’ ಎಂದು ಮನವಿ ಕೊಟ್ಟು ಒತ್ತಡ ಹಾಕಿದರು. ಅಷ್ಟೇ ಅಲ್ಲದೆ, ‘ಅಡ್ಜಸ್ಟ್ಮೆಂಟ್ ಅಶೋಕ್’ ಎಂದು ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮ ಸೇನೆ ಮತ್ತು ಬಜರಂಗದಳ- ಇವೆರಡೂ ಭಾರತೀಯ ಜನತಾ ಪಕ್ಷದ ಕೈ-ಕಾಲುಗಳಂತಿರುವ, ಬೇಕಾದಾಗ ಬೇಕಾದಂತೆ ಬಳಕೆಗೆ ಬರುವ ಸಂಘಟನೆಗಳು. ಅವುಗಳಿಂದ ಬಂದ ವಿರೋಧವನ್ನು ರಾಜಕೀಯವಾಗಿ ನಿರ್ಲಕ್ಷಿಸಿದರೂ, ಸದನದೊಳಗಿನ ಯತ್ನಾಳರ ಹೇಳಿಕೆ, ಅಷ್ಟು ಸುಲಭಕ್ಕೆ ತಳ್ಳಿಹಾಕುವಂಥದ್ದಲ್ಲ. ಸದನದ ಕಾವೇರಿದ ಚರ್ಚೆಯ ನಡುವೆ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ‘ನಾನೇ ಅಧಿಕೃತ ವಿರೋಧಪಕ್ಷದ ನಾಯಕ’ ಎಂದಿರುವುದು ನೇರವಾಗಿ ಆರ್.ಅಶೋಕ್ರನ್ನೇ ಟಾರ್ಗೆಟ್ ಮಾಡಿದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯ, ಬಂಡಾಯವನ್ನು ಬಹಿರಂಗಪಡಿಸಿದೆ.
ಅಂದರೆ, ಬಿಜೆಪಿಗರೇ ಬಿಜೆಪಿ ನಾಯಕರನ್ನು ಒಪ್ಪುತ್ತಿಲ್ಲ, ಅವರ ಅಡ್ಜಸ್ಟ್ಮೆಂಟ್ ರಾಜಕಾರಣವನ್ನು ಹರಾಜು ಹಾಕುವುದನ್ನು ನಿಲ್ಲಿಸುತ್ತಲೂ ಇಲ್ಲ.
ವಿರೋಧ ಪಕ್ಷದ ನಾಯಕರಾದವರಿಗೆ ಬಹಳ ಮುಖ್ಯವಾಗಿ ಸಾರ್ವಜನಿಕ ಸಭ್ಯತೆ ಇರಬೇಕು. ಸಭಾ ಘನತೆಯನ್ನು ಕಾಪಾಡಿಕೊಂಡು ಸರ್ಕಾರವನ್ನು ಮಣಿಸುವ ವಾಕ್ ಸಾಮರ್ಥ್ಯ ಮತ್ತು ಶಾಸಕರನ್ನು ಒಟ್ಟಿಗೆ ಕರೆದೊಯ್ಯುವ ಚಾತುರ್ಯವಿರಬೇಕು. ಜನಪರ ವಿಷಯಗಳನ್ನು ಮುನ್ನೆಲೆಗೆ ತಂದು ತರ್ಕಬದ್ಧವಾಗಿ ಚರ್ಚಿಸುವ ತಿಳಿವಳಿಕೆ ಇರಬೇಕು. ಆಳವಾದ ಅಧ್ಯಯನದಿಂದ ಅರಗಿಸಿಕೊಂಡ ವಿಷಯವನ್ನು ಅಂಕಿಅಂಶಗಳ ಸಮೇತ ಮಂಡಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು. ನಾಡಿನ ಜನತೆಯ ದನಿಯಾಗಬೇಕು. ಆ ದನಿಗೆ ಬೆಲೆ ಬರುವಂತೆ ನಡೆ-ನುಡಿ ಇರಬೇಕು.
ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಇಲ್ಲಿಯವರೆಗೆ ಕೂತು, ಆ ಸ್ಥಾನಕ್ಕೆ ಘನತೆ-ಗೌರವ ತಂದವರ ದೊಡ್ಡ ಪರಂಪರೆಯೇ ನಮ್ಮ ರಾಜ್ಯದಲ್ಲಿದೆ. ಅವರನ್ನು ನೋಡಿಯಾದರೂ ಅಶೋಕ್ ಕಲಿಯದಿದ್ದರೆ, ಸಾರ್ವಜನಿಕ ಸಭ್ಯತೆಗೆ ಸ್ಥಳವಿರುವುದಿಲ್ಲ. ಹಾಗೆಯೇ ಸಿಕ್ಕ ಅವಕಾಶವನ್ನು ಅಶೋಕ್ ಬಳಸಿಕೊಂಡು ಬೆಳೆಯದಿದ್ದರೆ- ಅವರು ಪ್ರತಿನಿಧಿಸುವ ಪಕ್ಷಕ್ಕಲ್ಲ, ರಾಜ್ಯದ ಜನರಿಗೆ ಮಾಡುವ ಮಹಾ ದ್ರೋಹ.
