ಪ್ರಧಾನಿ ಮೋದಿಯವರಿಗೆ ಪ್ರಶ್ನೆಗಳೆಂದರೆ ಆಗುವುದಿಲ್ಲ. ಅದು ಪತ್ರಿಕಾಗೋಷ್ಠಿಯಾಗಿರಲಿ, ಅಧಿವೇಶನವಾಗಿರಲಿ; ಪತ್ರಕರ್ತರಾಗಿರಲಿ, ಪ್ರತಿಪಕ್ಷದವರಾಗಲಿ- ಪ್ರಶ್ನೆಗಳು ಎದುರಾದರೆ, ಅವರು ಅಲ್ಲಿರುವುದಿಲ್ಲ.
ಜುಲೈ 21ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದೆ. ಒಟ್ಟು 21 ದಿನಗಳ ಈ ಅಧಿವೇಶನದ ಆರಂಭಕ್ಕೂ ಮುನ್ನ ಶಿಷ್ಟಾಚಾರದಂತೆ ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಸಭೆಯ ಬಳಿಕ ಕೇಂದ್ರ ಸಚಿವ ಕಿರಣ್ ರಿಜಿಜು, ‘ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ, ವಿಪಕ್ಷಗಳಿಗೆ ಸಹಕರಿಸಲು ಕೋರಲಾಗಿದೆ. ಸರ್ಕಾರ ಯಾವುದೇ ಚರ್ಚೆಯಿಂದ ಹಿಂದೆ ಸರಿಯುವುದಿಲ್ಲ, ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ಸಿದ್ಧವಾಗಿದೆ’ ಎಂದು ಹೇಳಿದ್ದಾರೆ.
ಅಧಿವೇಶನ ಆರಂಭವಾಗುವುದಕ್ಕೂ ಮುನ್ನ, ಪತ್ರಕರ್ತರಿಂದ ಅಂತರ ಕಾಯ್ದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ಮಾತನಾಡುವಾಗಲೂ ಮೋದಿಯವರು, ತಮ್ಮದೇ ಈ ಹಿಂದಿನ ಐದಾರು ನಿಮಿಷಗಳ ದಾಖಲೆಯನ್ನು ಮುರಿದು 18 ನಿಮಿಷ ಮಾತನಾಡಿದ್ದಾರೆ. ಆದರೆ ಅದೆಲ್ಲವೂ ಏಕಮುಖ. ಅಂದರೆ ಪತ್ರಕರ್ತರು ಪ್ರಶ್ನೆ ಕೇಳುವಂತಿಲ್ಲ, ಪ್ರಧಾನಿಗಳು ಉತ್ತರ ನೀಡುವಂತಿಲ್ಲ.
‘ಕಳೆದೊಂದು ದಶಕದಲ್ಲಿ ದೇಶ ಶಾಂತಿ ಮತ್ತು ಪ್ರಗತಿಯನ್ನು ಸಾಧಿಸಿದೆ. ಈ ಮುಂಗಾರು ಅಧಿವೇಶನ ಗೆಲುವನ್ನು ಸಂಭ್ರಮಿಸುವ ಅಧಿವೇಶನದಂತೆ ಭಾಸವಾಗುತ್ತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತ ಧ್ವಜ ಹಾರಿದೆ, ಆಪರೇಷನ್ ಸಿಂಧೂರವು ದೇಶದ ಸೈನ್ಯದ ಬಲವನ್ನು ಜಗತ್ತಿಗೆ ತೋರಿಸಿದೆ, ದೇಶದ ಅನೇಕ ಭಾಗಗಳು ನಕ್ಸಲ್ ಮುಕ್ತವಾಗಿವೆ’ ಎಂದು ಹೇಳಿ ಹೋಗಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪ್ರತಿಭಟಿಸಿದರೆ ಸಾಕು ಜೈಲು ಶಿಕ್ಷೆ; ಇದು ಬಿಜೆಪಿಯ ಅಸಲಿ ಮುಖವೇ?
ಕೇಂದ್ರ ಸಚಿವ ಕಿರಣ್ ರಿಜಿಜು, ಶಿಷ್ಟಾಚಾರದಂತೆ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಲು ಸಿದ್ಧ ಎಂದಿರುವುದು ಮತ್ತು ಪ್ರಧಾನಿ ಮೋದಿಯವರು ಈ ಅಧಿವೇಶನ ಗೆಲುವನ್ನು ಸಂಭ್ರಮಿಸುವ ಅಧಿವೇಶನ ಎಂದಿರುವುದು- ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಈ ಸುದ್ದಿಯನ್ನು ಓದಿದ/ನೋಡಿದ ದೇಶದ ಜನರಲ್ಲಿ ಕೇಂದ್ರ ಸರ್ಕಾರದ ನಡೆಯ ಬಗ್ಗೆ ಸಾಸಿವೆ ಕಾಳಿನಷ್ಟು ಕೂಡ ಲೋಪ ಕಂಡುಬರುವುದಿಲ್ಲ.
ಆದರೆ ವಿಷಯ ಇಷ್ಟು ಸರಳ, ಸ್ಪಷ್ಟವಿಲ್ಲ. ಅದಕ್ಕೆ ಸಾಕ್ಷಿಯಾಗಿ ಕಳೆದ ಹನ್ನೊಂದು ವರ್ಷಗಳ ಸಂಸತ್ ಅಧಿವೇಶನಗಳತ್ತ ಗಮನಹರಿಸಿದರೆ ಎಲ್ಲವೂ ಸ್ಪಷ್ಟವಾಗುತ್ತದೆ. ಕಳೆದ ಹನ್ನೊಂದು ವರ್ಷಗಳಲ್ಲಿ ಅಧಿವೇಶನ ನಡೆದ ದಿನಗಳನ್ನು, ಅಧಿವೇಶನಗಳಲ್ಲಿ ಪ್ರಧಾನಿಗಳ ಹಾಜರಿಯನ್ನು, ವಿಪಕ್ಷಗಳ ಪ್ರಶ್ನೆಗಳಿಗೆ ಪ್ರಧಾನಿಗಳು ಸಂಯಮದಿಂದ ಉತ್ತರಿಸಿದ್ದನ್ನು, ಯಾವುದಾದರೂ ವಿಷಯ ಕುರಿತು ಸುದೀರ್ಘವಾಗಿ ಪ್ರಧಾನಿಗಳು ಮಾತನಾಡಿದ್ದನ್ನು ದೇಶ ಕಂಡಿದೆಯೇ ಎಂಬ ಪ್ರಶ್ನೆಯೂ ಎದುರಾಗುತ್ತದೆ.
ಪ್ರಧಾನಿ ಮೋದಿಯವರಿಗೆ ಪ್ರಶ್ನೆಗಳೆಂದರೆ ಆಗುವುದಿಲ್ಲ. ಅಂತಹ ಸಂದರ್ಭ ಸೃಷ್ಟಿಯಾದರೆ, ಅವರು ಅಲ್ಲಿರುವುದಿಲ್ಲ. ಉದಾಹರಣೆಗೆ ಪಹಲ್ಗಾಮ್ ಉಗ್ರರ ದಾಳಿಯನ್ನು ಗಮನಿಸಬಹುದು. ದಾಳಿಯಲ್ಲಿ ಭದ್ರತಾ ವೈಫಲ್ಯ, ಗುಪ್ತಚರ ಇಲಾಖೆಯ ನಿಷ್ಕ್ರಿಯತೆ ಎದ್ದು ಕಾಣುತ್ತಿತ್ತು. ಆ ಬಗ್ಗೆ ಪ್ರತಿಪಕ್ಷಗಳು ಪ್ರಶ್ನೆ ಎತ್ತಿದ್ದವು. ಉತ್ತರಿಸಬೇಕಾದ ಪ್ರಧಾನಿಗಳು, ಎರಡು ಬಾರಿ ಸರ್ವಪಕ್ಷ ಸಭೆ ನಡೆದರೂ, ಒಮ್ಮೆಯೂ ಹಾಜರಾಗಲಿಲ್ಲ. ಆದರೆ ‘ನಾವು ಚರ್ಚೆಗೆ ಸಿದ್ಧರಿದ್ದೇವೆ’ ಎಂಬ ಹೇಳಿಕೆ ಮಾತ್ರ ಬರುತ್ತದೆ. ಮಡಿಲ ಮಾಧ್ಯಮಗಳಿಂದ ಅದು ದೇಶದಾದ್ಯಂತ ಸುದ್ದಿಯಾಗುತ್ತದೆ.
ಆದರೂ ಪ್ರತಿಪಕ್ಷಗಳು ಅಧಿವೇಶನ ಎಂದಾಕ್ಷಣ ಸಿದ್ಧವಾಗುತ್ತವೆ. ಅದೇ ರೀತಿ ಈ ಬಾರಿಯೂ, ಪಹಲ್ಗಾಮ್ ಉಗ್ರರ ದಾಳಿಯಿಂದ ಹಿಡಿದು ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆಯವರೆಗಿನ ಹತ್ತು ಹಲವು ವಿಷಯಗಳನ್ನಿಟ್ಟುಕೊಂಡು ಸಿದ್ಧವಾಗಿವೆ. ಅದಕ್ಕಿಂತಲೂ ಹೆಚ್ಚಾಗಿ, ವಿಷಯಗಳ ಗಂಭೀರತೆ ಮತ್ತು ಅಧಿವೇಶನದ ಅಗತ್ಯತೆ ಅರಿತ ಪ್ರತಿಪಕ್ಷಗಳು ಒಗ್ಗಟ್ಟಾಗಿವೆ. ಮೌಲ್ಯಯುತ ಪ್ರಶ್ನೆಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಉದ್ದೇಶ ಹೊಂದಿವೆ. ಅವುಗಳ ನಡವಳಿಕೆಯಿಂದ ಅದು ಸ್ಪಷ್ಟವಾಗುತ್ತಿದೆ.
ಆದರೆ, ಮುಂಗಾರು ಅಧಿವೇಶನ ಆರಂಭದ ದಿನವೇ ಆಳುವ ಸರ್ಕಾರ ತನ್ನ ವರಸೆ ತೆಗೆದಿದೆ. ಎಂದಿನಂತೆ ಪ್ರಧಾನಿ ಮೋದಿಯವರು ಹೆಚ್ಚೆಂದರೆ ಹತ್ತು ನಿಮಿಷ ಕೂತು ನಿರ್ಗಮಿಸಿದ್ದಾರೆ. ಬಿಜೆಪಿಯ ಬಾಲಕರು ಬಾಯಿ ಬಡಿದುಕೊಂಡು ಸದನದೊಳಗೆ ಗದ್ದಲವೆಬ್ಬಿಸಿದ್ದಾರೆ. ಸ್ಪೀಕರ್ಗೆ ಅಷ್ಟು ಸಾಕಾಗಿದೆ, ಸದನವನ್ನು ಮುಂದೂಡಿದ್ದಾರೆ.
ದೇಶದ ಜನತೆಗೆ ಇದೇನು ಹೊಸದಲ್ಲ. ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ಪಕ್ಷ, ಒಂದೇ ಒಂದು ಅಧಿವೇಶನವನ್ನು ಸುಸೂತ್ರವಾಗಿ ನಡೆಸಲಿಲ್ಲ, ಸಮರ್ಪಕ ಉತ್ತರ ನೀಡಲಿಲ್ಲ, ಜವಾಬ್ದಾರಿಯಿಂದ ನುಣುಚಿಕೊಳ್ಳುವುದನ್ನೂ ನಿಲ್ಲಿಸಲಿಲ್ಲ. ದುರದೃಷ್ಟಕರ ಸಂಗತಿ ಎಂದರೆ, ಪ್ರತಿ ಅಧಿವೇಶನದಲ್ಲಿ ಆಳುವ ಸರ್ಕಾರ ಇದನ್ನು ಮಾಡುತ್ತಲೇ ಬಂದಿದೆ. ಪ್ರತಿಪಕ್ಷಗಳು ನೋಡುತ್ತಲೇ ಇವೆ. ಕಲಾಪದ ಗಾಂಭೀರ್ಯವನ್ನು ಕಾಪಾಡಿಕೊಂಡು ಸಂಸದೀಯ ಮೌಲ್ಯಗಳ ಪಾಲನೆ ಮಾಡುವುದು ಎಲ್ಲ ಪಕ್ಷಗಳ ಜವಾಬ್ದಾರಿ ಎನ್ನುವುದನ್ನು ಎಲ್ಲರೂ ಮರೆತಿದ್ದಾರೆ.
ಆಡಳಿತ ಮತ್ತು ವಿಪಕ್ಷ- ಯಾರೇ ಆದರೂ, ಪ್ರಜಾಸತ್ತಾತ್ಮಕವಾದ ಅತ್ಯುನ್ನತ ಮಟ್ಟದ ವಾಗ್ವಾದಕ್ಕೆ, ಹೇಳಿಕೆಗಳನ್ನು ದಾಖಲಿಸುವುದಕ್ಕೆ, ನಿಲುವುಗಳನ್ನು ವ್ಯಕ್ತಪಡಿಸುವುದಕ್ಕೆ, ನೀತಿಗಳ ಪರಿಶೀಲನೆಗೆ, ನಿರ್ದಿಷ್ಟ ವಿಚಾರಗಳ ಟೀಕೆಗೆ ಇರುವ ವೇದಿಕೆ ಸದನ ಎಂಬುದನ್ನು ಮೊದಲು ಅರಿಯಬೇಕಿದೆ. ಯಾವುದೇ ವಿಷಯದ ಬಗ್ಗೆ, ರಚನಾತ್ಮಕ ಮತ್ತು ಗುಣಾತ್ಮಕ ಚರ್ಚೆ ನಡೆಸಿದರೆ ಪರಿಹಾರದ ದಾರಿ ಸಿಕ್ಕೇ ಸಿಗುತ್ತದೆ. ಆಡಳಿತ ಪಕ್ಷ ಹಠಮಾರಿ ಧೋರಣೆ ತಳೆಯದೆ, ಪ್ರತಿಪಕ್ಷಗಳ ಮಾತನ್ನು ಸಂಯಮದಿಂದ ಆಲಿಸಬೇಕು ಮತ್ತು ಟೀಕೆ, ನ್ಯೂನತೆಗಳನ್ನು ರಚನಾತ್ಮಕವಾಗಿ ಸ್ವೀಕರಿಸಿ, ಸುಧಾರಣೆಗಳನ್ನು ಕಂಡುಕೊಳ್ಳಬೇಕು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ತುಳಿದಷ್ಟು ಪುಟಿದೇಳುವ ರಾಹುಲ್ ಎಂಬ ಜನನಾಯಕ
ಇಲ್ಲಿ ಸಮಸ್ಯೆ ಇರುವುದು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳದ್ದಲ್ಲ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರದು. ಕಳೆದ ಹನ್ನೊಂದು ವರ್ಷಗಳಲ್ಲಿ ಮೋದಿ ಎಂದೂ ಪತ್ರಿಕಾಗೋಷ್ಠಿ ಕರೆಯಲಿಲ್ಲ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಹಾಗೆಯೇ ಅಧಿವೇಶನದಲ್ಲಿ ಖುದ್ದು ಹಾಜರಿದ್ದು ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಕಿವಿಯಾದವರೂ ಅಲ್ಲ. ಅವರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ಉತ್ತಮ ಸಂಸದೀಯ ನಡವಳಿಕೆಗೆ ಪಾತ್ರರಾದವರೂ ಅಲ್ಲ.
ದುರದೃಷ್ಟಕರ ಸಂಗತಿ ಎಂದರೆ, ಮಹತ್ವದ ಮುಂಗಾರು ಅಧಿವೇಶನದ ಅವಧಿ ಮುಂಚಿತವಾಗಿಯೇ ನಿಗದಿಯಾಗಿರುತ್ತದೆ. ಅದು ಪ್ರಧಾನಿಯವರ ಗಮನಕ್ಕೂ ಬಂದಿರುತ್ತದೆ. ಗೊತ್ತಿದ್ದೂ ಮೋದಿಯವರು ಜುಲೈ 23ರಿಂದ 26ರವರೆಗೆ, ಯುನೈಟೆಡ್ ಕಿಂಗ್ಡಮ್ ಮತ್ತು ಮಾಲ್ಡೀವ್ಸ್ ಭೇಟಿಗೆ ಮುಂದಾಗಿದ್ದಾರೆ. ವಿದೇಶ ಪ್ರವಾಸದ ನೆಪದಲ್ಲಿ ಮುಂಗಾರು ಅಧಿವೇಶನವನ್ನು ತಪ್ಪಿಸಿಕೊಳ್ಳುತ್ತಿದ್ದಾರೆ; ಪ್ರತಿಪಕ್ಷಗಳ ಪ್ರಶ್ನೆಗಳ ಮುಜುಗರದಿಂದ ಪಾರಾಗಲು ಪಲಾಯನಗೈಯುತ್ತಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಬಗೆಯುವ ದ್ರೋಹವಲ್ಲವೇ?
