ಈ ದಿನ ಸಂಪಾದಕೀಯ | ತುಳಿದಷ್ಟು ಪುಟಿದೇಳುವ ರಾಹುಲ್ ಎಂಬ ಜನನಾಯಕ

Date:

Advertisements
ಮೋದಿ, ಬಿಜೆಪಿ ಮತ್ತು ಸಂಘಪರಿವಾರ, ರಾಹುಲ್‌ರನ್ನು ಕೋರ್ಟ್ ಕಟಕಟೆಯಲ್ಲಿ ಕಟ್ಟಿಹಾಕಲು, ನೈತಿಕ ಬಲ ಕುಗ್ಗಿಸಲು ನೋಡುತ್ತಿದೆ. ಅವರು ತುಳಿದಷ್ಟು ರಾಹುಲ್ ಪುಟಿದೆದ್ದು ನಿಲ್ಲುತ್ತಲೇ ಇದ್ದಾರೆ.

ಕಳೆದ ಮಂಗಳವಾರ ಉತ್ತರ ಪ್ರದೇಶದ ಲಕ್ನೋ ನ್ಯಾಯಾಲಯದಿಂದ ಕೇಸ್ ಸಂಬಂಧ ಜಾಮೀನು ಪಡೆದು ಹೊರಬಂದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ‘ಭಾರತೀಯ ಜನತಾ ಪಕ್ಷ ನನ್ನ ಮೇಲೆ 30-32 ಕೇಸುಗಳನ್ನು ದೇಶದಾದ್ಯಂತ ದಾಖಲಿಸಿದೆ. ಆ ಕೇಸುಗಳು ನನಗೆ ಪದಕಗಳಿದ್ದಂತೆ’ ಎಂದರು.

ಕಳೆದ ಹತ್ತು ವರ್ಷಗಳಲ್ಲಿ- 2014ರಿಂದ 2024ರವರೆಗೆ, ಬಿಜೆಪಿ ಮತ್ತು ಪ್ರಧಾನಿ ಮೋದಿಯವರು ಆಡಿದ್ದೇ ಆಟವಾಗಿತ್ತು. ಅದೇ ಆಡಳಿತವಾಗಿತ್ತು, ಕಾನೂನಾಗಿತ್ತು. ವಿರೋಧ ಪಕ್ಷಗಳೇ ಇಲ್ಲದಂತೆ ಮಾಡಿ ಸರ್ವಾಧಿಕಾರಿ ‘ಸೇವೆ’ ಜಾರಿಯಲ್ಲಿತ್ತು. ಅಪರಿಮಿತ ಅಧಿಕಾರ ಬಲದಿಂದ ರಾಹುಲ್ ಮೇಲೆ ನಿರಂತರ ದಾಳಿ ಮಾಡಿತ್ತು. ‘ಪಪ್ಪು’ ಎಂದು ವ್ಯಂಗ್ಯವಾಡುವ, ಅಪಮಾನಿಸುವ ಮೂಲಕ ರಾಹುಲ್‌ರನ್ನು ರಾಜಕೀಯ ಚದುರಂಗದಾಟದಿಂದ ಇಲ್ಲವಾಗಿಸಬಹುದೆಂದು ಭಾವಿಸಿತ್ತು. ರಾಹುಲ್‌ರನ್ನು ಹಣಿಯುವುದೇ ಬಿಜೆಪಿ ಐಟಿ ಸೆಲ್‌ನ ಪೂರ್ಣಕಾಲಿಕ ಉದ್ಯೋಗವಾಗಿತ್ತು. ಸಾಲದೆಂದು ಮಡಿಲ ಮಾಧ್ಯಮಗಳನ್ನು ಬಳಸಿಕೊಂಡು, ‘ರಾಹುಲ್ ಬಾಲಕ, ನಾಯಕನಲ್ಲ’ ಎಂದು ಪ್ರತಿದಿನ ಸಾರಿತ್ತು. ದೇಶದ ಜನ ಇದನ್ನು ನಂಬಿದರು, ನಕ್ಕರು, ಹಂಚಿದರು.

ಬಿಜೆಪಿ, ಮೋದಿ ಮತ್ತು ಸಂಘಪರಿವಾರದವರ ಮತ್ತೊಂದು ಸಣ್ಣತನ, ಕುಯುಕ್ತಿ ಎಂದರೆ, ರಾಹುಲ್ ಗಾಂಧಿಯವರು ಮಾತನಾಡಿದ್ದನ್ನು ಆ ತಕ್ಷಣವೇ ತಿರುಚಿ, ವಿರೂಪಗೊಳಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿ ‘ನೋಡಿ, ಇದು ರಾಹುಲ್’ ಎಂದು ಅವಮಾನಿಸುವುದು. ಸಾಲದೆಂದು, ಅಧಿಕಾರ ಬಳಸಿ, ಆ ತಿರುಚಿದ ಹೇಳಿಕೆಗಳ ಮೇಲೆ ದೇಶಾದ್ಯಂತ ಹಲವು ಕೇಸು ದಾಖಲಿಸುವುದು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ದೇವನಹಳ್ಳಿ ಐತಿಹಾಸಿಕ ಗೆಲುವಿಗೆ ರೈತರು, ಪ್ರಗತಿಪರ ಸಂಘಟನೆಗಳು ಹಾಗೂ ಸಿದ್ದರಾಮಯ್ಯ ಕಾರಣ

2014ರಲ್ಲಿ ರಾಹುಲ್ ಗಾಂಧಿ, ಮಹಾತ್ಮ ಗಾಂಧಿಯವರ ಹತ್ಯೆಗೆ ಆರ್‌ಎಸ್‌ಎಸ್ ಕಾರಣವಾಯಿತು ಎಂದು ಆರೋಪಿಸಿದ್ದರು. ಇದರಿಂದ ಥಾಣೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರಿಂದ ಮಾನಹಾನಿ ದಾವೆ ದಾಖಲಿಸಿದರು.

2018ರ ಮೇನಲ್ಲಿ ರಾಹುಲ್‌ ಗಾಂಧಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಗ್ಗೆ ಮಾತನಾಡಿದ್ದರು. ಅಮಿತ್‌ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ದೂರಿ, ಸುಲ್ತಾನಪುರದ ಬಿಜೆಪಿ ಮುಖಂಡ ವಿಜಯ್ ಮಿಶ್ರಾ, ರಾಹುಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದರು.

2019ರಲ್ಲಿ ಕೋಲಾರದಲ್ಲಿ ನಡೆದ ರಾಜಕೀಯ ರ್‍ಯಾಲಿಯಲ್ಲಿ ರಾಹುಲ್ ಗಾಂಧಿ, ‘ಎಲ್ಲ ಕಳ್ಳರ ಉಪನಾಮ ಮೋದಿ ಏಕೆ’ ಎಂದು ಪ್ರಶ್ನಿಸಿದ್ದರು. ಬಿಜೆಪಿ ಶಾಸಕ ಪೂರ್ಣೇಶ್ ಮೋದಿ, ರಾಹುಲ್ ಗಾಂಧಿಯವರ ವಿರುದ್ಧ ಸೂರತ್‌ನಲ್ಲಿ ಮಾನಹಾನಿ ದಾವೆ ದಾಖಲಿಸಿದರು. 2023ರ ಮಾರ್ಚ್ 23ರಂದು, ಸೂರತ್ ಕೋರ್ಟ್ ರಾಹುಲ್ ಅವರನ್ನು ದೋಷಿಯೆಂದು ಘೋಷಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು, ಇದರಿಂದಾಗಿ ಅವರು ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡರು.

ಆಗ ಬಿಜೆಪಿ ಮತ್ತು ಮೋದಿಯವರು, ರಾಹುಲ್ ರಾಜಕಾರಣಕ್ಕೆ ಅನ್‌ಫಿಟ್ ಎಂದು ಕತೆ ಕಟ್ಟಿ ದೇಶದಾದ್ಯಂತ ಪ್ರಚಾರ ಮಾಡಿದರು. ಆತ ಚುನಾವಣೆಗೆ ನಿಲ್ಲುವಂತಿಲ್ಲ, ಲೋಕಸಭೆಗೂ ಬರುವುದಿಲ್ಲ, ನಮ್ಮ ದಾರಿ ಸುಗಮವಾಯಿತು ಎಂದುಕೊಂಡರು. ಆದರೆ, ಆಗಸ್ಟ್ 2023ರಲ್ಲಿ, ಸುಪ್ರೀಂ ಕೋರ್ಟ್ ಆ ಶಿಕ್ಷೆಯನ್ನು ತಡೆಹಿಡಿದು, ರಾಹುಲ್‌ಗೆ ಮತ್ತೊಂದು ಅವಕಾಶ ನೀಡಿತು. ಇದರಿಂದ ಅವರು 2024ರ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಯಿತು.

2024ರ ಲೋಕಸಭಾ ಚುನಾವಣೆಯಲ್ಲಿ ಜನ ರಾಹುಲ್ ಗಾಂಧಿ ಪರ ನಿಂತರು. ರಾಹುಲ್ ಸಂಸತ್ತಿನಲ್ಲಿ ಜನರ ದನಿಯಾದರು. ಸಂಸತ್‌ನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ ಮೊದಲ ಭಾಷಣದಲ್ಲಿಯೇ, ಸಿಕ್ಕ ಅಪೂರ್ವ ಅವಕಾಶ ಮತ್ತು ಎದುರಾದ ಸವಾಲು- ಎರಡನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡರು. ಅವರ ಮಾತಿನಲ್ಲಿದ್ದ ನಿಖರತೆ, ಮಂಡನೆ, ವಿರೋಧಿಗಳನ್ನು ಕಟ್ಟಿಹಾಕಿದ ಬಗೆ ವಿಶೇಷವಾಗಿತ್ತು. ಇಂತಹ ಒಬ್ಬ ಪ್ರತಿಭಾನ್ವಿತ ಸಂಸದೀಯ ಪಟುವನ್ನು ‘ಪಪ್ಪು’ ಎಂದು ಜರೆದ ಮಹಾಪರಾಧಕ್ಕೆ ಮೋದಿಯವರು ದೇಶದೆದುರು ತಲೆ ತಗ್ಗಿಸುವಂತಾಗಿತ್ತು.

ಇಷ್ಟಾದರೂ ರಾಹುಲ್ ಗಾಂಧಿಯವರನ್ನು ಕೋರ್ಟ್ ಕಟಕಟೆಯಲ್ಲಿ ಕಟ್ಟಿಹಾಕುವ ಕುತಂತ್ರ ನಿಲ್ಲಲಿಲ್ಲ. ರಾಹುಲ್ ಗಾಂಧಿ ಕೂಡ ಬಿಜೆಪಿ ಮತ್ತು ಸಂಘಪರಿವಾರದ ಷಡ್ಯಂತ್ರಗಳನ್ನು ಬಿಚ್ಚಿಡುವುದನ್ನೂ ಬಂದ್ ಮಾಡಲಿಲ್ಲ.

2023ರಲ್ಲಿ ಲಂಡನ್‌ನಲ್ಲಿ ನಡೆದ ಓವರ್‌ಸೀಸ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಮುಖಂಡ ಸಾವರ್ಕರ್ ಕುರಿತು, ‘ಅವರು ಬ್ರಿಟಿಷರಿಗೆ ಮೋಸ್ಟ್ ಒಬಿಡಿಯಂಟ್ ಸರ್ವೆಂಟ್ ಎಂದು ಪತ್ರ ಬರೆದಿದ್ದಾರೆ’ ಎಂದು ಆರೋಪಿಸಿದರು. ಇದರಿಂದಾಗಿ ಸಾವರ್ಕರ್ ಕುಟುಂಬದವರು ಪುಣೆಯಲ್ಲಿ ಮಾನಹಾನಿ ದಾವೆ ದಾಖಲಿಸಿದರು.

2024ರ ಸೆಪ್ಟೆಂಬರ್‌ನಲ್ಲಿ, ರಾಹುಲ್ ಗಾಂಧಿ ತಮ್ಮ ಅಮೆರಿಕ ಭೇಟಿಯ ಸಂದರ್ಭದಲ್ಲಿ ಸಿಖ್ ಸಮುದಾಯ ಕುರಿತು ಮಾತನಾಡಿದರು. ಆ ಮಾತುಗಳು ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಬಿಜೆಪಿಯ ಅಮರ್‌ಜೀತ್ ಸಿಂಗ್ ಛಾಬ್ರಾ ಟೀಕಿಸಿದರು. ಅಷ್ಟೇ ಅಲ್ಲ, ದೇಶದ ಹಲವು ನಗರಗಳಲ್ಲಿ ದೂರು ದಾಖಲಿಸಿದರು.

ಬಿಜೆಪಿಯ ಮಾಜಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಗೆ(2015-2025) ಸಂಬಂಧಿಸಿದಂತೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಿದ್ದಾರೆ. ಈ ಕೇಸಿಗೆ ಸಂಬಂಧಿಸಿದಂತೆ ಹಿಯರಿಂಗ್ ನಡೆದಾಗಲೆಲ್ಲ, ಬಿಜೆಪಿ ಮತ್ತು ಸಂಘಪರಿವಾರ, ರಾಹುಲ್ ಮತ್ತು ಸೋನಿಯಾರನ್ನು ದೇಶದ ಸಂಪತ್ತನ್ನು ಲೂಟಿಗೈದ ಕುಟುಂಬ ಎಂಬುದನ್ನು ಮುನ್ನೆಲೆಗೆ ತರುತ್ತದೆ. ಈ ರೀತಿ ಕೆಸರೆರಚುವ ಕೆಲಸವನ್ನು ಕಳೆದ ಹತ್ತು ವರ್ಷಗಳಿಂದ ಮಾಡಿಕೊಂಡೇ ಬಂದಿದೆ.

2022ರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಅರುಣಾಚಲ ಪ್ರದೇಶದಲ್ಲಿ ಚೀನಾದ ಸೈನ್ಯವು ಭಾರತೀಯ ಸೈನಿಕರನ್ನು ಥಳಿಸುತ್ತಿದೆ. ಆದರೆ ನಮ್ಮ ಪ್ರಧಾನಿ ಮೋದಿಯವರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಏನೂ ಆಗಿಯೇ ಇಲ್ಲ ಎಂಬಂತಿದ್ದಾರೆ ಎಂದು ರಾಹುಲ್ ದೂರಿದ್ದರು. ನಮ್ಮ ಸೈನಿಕರ ರಕ್ಷಣೆಗೆ ನಿಲ್ಲಬೇಕಾದ, ಚೀನಾದ ಕ್ರಮವನ್ನು ಖಂಡಿಸಬೇಕಾದ ಆಡಳಿತಾರೂಢ ಬಿಜೆಪಿ, ರಾಹುಲ್ ಮಾತುಗಳನ್ನು ಭಾರತೀಯ ಸೇನೆಯ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಗಿ ತಿರುಚಿ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿತು. ಮೊನ್ನೆ ಆ ಕೇಸಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ ಜಾಮೀನು ಸಿಕ್ಕಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕಾನೂನು ಅಸ್ತ್ರವಾಗದಿರಲಿ, ಬಡವರ ಬಗ್ಗೆ ವಿವೇಚನೆಯಿಂದ ಬಳಸಲಿ 

ಸಂಸದೀಯ ಪ್ರಜಾಸತ್ತೆಯಲ್ಲಿ ಪ್ರಧಾನಮಂತ್ರಿಗೆ ಇರುವಷ್ಟೇ ಜವಾಬ್ದಾರಿ ವಿರೋಧ ಪಕ್ಷದ ನಾಯಕನಿಗೂ ಇದೆ. ಹೀಗಾಗಿ, ಆ ಸ್ಥಾನವನ್ನು ಛಾಯಾಪ್ರಧಾನಮಂತ್ರಿ ಎಂದೇ ಕರೆಯಲಾಗುತ್ತದೆ. ಆಡಳಿತ ಪಕ್ಷದ ಲೋಪ–ದೋಷಗಳನ್ನು ಎತ್ತಿ ತೋರುವ ಮೂಲಕ ಜನರ ನೋವಿಗೆ ದನಿಯಾಗಬೇಕಾದ ಗುರುತರ ಹೊಣೆ ಈ ಸ್ಥಾನದ್ದಾಗಿದೆ. ಆಡಳಿತ ಪಕ್ಷ ದಾರಿ ತಪ್ಪಿ ನಡೆದಾಗ ಎಚ್ಚರಿಸುವ, ಜನಕಲ್ಯಾಣದ ವಿಷಯದಲ್ಲಿ ಜಾಣನಿದ್ರೆಗೆ ಜಾರದಂತೆ ಎಚ್ಚರದಲ್ಲಿಡುವ ಮಹತ್ವದ ಜವಾಬ್ದಾರಿ ವಿರೋಧ ಪಕ್ಷದ ನಾಯಕನದು.

ಅಂತಹ ಅವಕಾಶವನ್ನು ರಾಹುಲ್ ಗಾಂಧಿ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ, ಜನತಂತ್ರ ವ್ಯವಸ್ಥೆಗೆ ಬೆಲೆ ತರುತ್ತಿದ್ದಾರೆ, ದೇಶದಲ್ಲಿ ಪ್ರಜಾಪ್ರಭುತ್ವ ಉಸಿರಾಡುವಂತೆ ನೋಡಿಕೊಂಡಿದ್ದಾರೆ. ಆದರೆ ಮೋದಿ, ಬಿಜೆಪಿ ಮತ್ತು ಸಂಘಪರಿವಾರ, ಅವರನ್ನು ಕೋರ್ಟ್ ಕಟಕಟೆಯಲ್ಲಿ ಕಟ್ಟಿಹಾಕಲು ನೋಡುತ್ತಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಬಳಸಿಕೊಂಡು ನೈತಿಕವಾಗಿ ಕುಗ್ಗಿಸಲು ಶಕ್ತಿಮೀರಿ ಶ್ರಮಿಸುತ್ತಿದೆ.

ಸೋಜಿಗವೆಂದರೆ, ಬಂಡೆಗಳ ನಡುವೆ ಚಿಗುರೊಡೆದು ನಿಲ್ಲುವ ಪುಟ್ಟ ಹಸಿರು ಗಿಡದಂತೆ, ಅವರು ತುಳಿದಷ್ಟು ರಾಹುಲ್ ಪುಟಿದೆದ್ದು ನಿಲ್ಲುತ್ತಲೇ ಇದ್ದಾರೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು...

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

Download Eedina App Android / iOS

X