ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಜೂನ್ 9ರಿಂದ ಹಿಡಿದು ನಿನ್ನೆ ಮೊನ್ನೆಯವರೆಗೆ, ಪ್ರತಿದಿನ ಒಂದಿಲ್ಲೊಂದು ಅವಘಡಗಳು ಜರುಗುತ್ತಲೇ ಇವೆ. ಸಮರ್ಥ ವಿರೋಧ ಪಕ್ಷಗಳಿಂದ ಆಳುವ ಸರ್ಕಾರದ ಅಧ್ವಾನಗಳು ಬೆಳಕು ಕಾಣುತ್ತಿವೆ. ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’ವನ್ನು ಬಯಲು ಮಾಡುತ್ತಿವೆ. ಇದೇ ಆಗಬೇಕಾದ್ದು, ಪ್ರಜಾಪ್ರಭುತ್ವವನ್ನು ಉಳಿಸುವಂಥದ್ದು.
‘2014ರ ನಂತರ ಉದ್ಘಾಟನೆಗೊಂಡ ಅಥವಾ ನಿರ್ಮಾಣಗೊಂಡ ಕಟ್ಟಡಗಳು, ಸೇತುವೆಗಳು, ಹೆದ್ದಾರಿಗಳು, ಆಸ್ಪತ್ರೆಗಳ ಸಮೀಪ ಸುಳಿಯದಿರಿ. ಸುರಕ್ಷಿತವಾಗಿರಿ’ ಎಂದು ಬಹುಭಾಷಾ ಕಲಾವಿದ ಪ್ರಕಾಶ್ ರಾಜ್ ಟ್ವೀಟ್ ಮೂಲಕ ದೇಶದ ಜನತೆಗೆ ಎಚ್ಚರಿಕೆ ನೀಡಿದ್ದಾರೆ. ಪ್ರಕಾಶ್ ರಾಜ್ ಅವರ ಈ ಎಚ್ಚರಿಕೆಯ ಹಿಂದೆ, ಬಿಜೆಪಿಯ ಹತ್ತು ವರ್ಷಗಳ ಆಡಳಿತವನ್ನು, ದೇಶ ಕಂಡ ಅಭಿವೃದ್ಧಿಯನ್ನು ಆಡಿಕೊಳ್ಳುವ ವ್ಯಂಗ್ಯವಿರಬಹುದು, ಸುಳ್ಳಿಲ್ಲ.
ಕಾಕತಾಳೀಯವೋ ಏನೋ, ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾದ ನಂತರ, ದೇಶ ಒಂದಲ್ಲ ಒಂದು ಗಂಡಾಂತರಕ್ಕೆ ತುತ್ತಾಗುತ್ತಿದೆ. ಎನ್‌ಡಿಎ ಸರ್ಕಾರ ಅಧಿಕಾರಿಕ್ಕೇರಿ ಒಂದು ತಿಂಗಳ ಅವಧಿಯಲ್ಲಿ ಹತ್ತಾರು ಅವಘಡಗಳು ಸಂಭವಿಸಿ, ಜನ ತತ್ತರಿಸಿಹೋಗಿದ್ದಾರೆ.
ದೇಶದ ನಾನಾ ಭಾಗಗಳಲ್ಲಿ ಮಳೆ ಆರ್ಭಟ ಜೋರಾಗಿದೆ. ದೆಹಲಿ ಜಲಾವೃತ. ಅಸ್ಸಾಂನಲ್ಲಿ ಪ್ರವಾಹ. ಈ ನಡುವೆ ಮಳೆಯಾಗುತ್ತಿರುವ ಎಲ್ಲ ರಾಜ್ಯಗಳಿಗಿಂತ ಬಿಹಾರ ಹೆಚ್ಚು ಸುದ್ದಿಯಲ್ಲಿದೆ. ಅಲ್ಲಿನ ಸೇತುವೆಗಳು, ಕ್ಷಣಮಾತ್ರದಲ್ಲಿ ಉರುಳಿ ಬೀಳುತ್ತಿವೆ. ಕಳೆದ 17 ದಿನಗಳಲ್ಲಿ 12 ಸೇತುವೆಗಳು ನೆಲಸಮವಾಗಿವೆ. ಬಿಹಾರ ಎಂದರೆ ‘ಸೇತುವೆಗಳು ಉರುಳುವ ರಾಜ್ಯ’ ಎಂಬ ಹಣೆಪಟ್ಟಿಗೆ ಒಳಗಾಗಿದೆ. ಅಲ್ಲಿನ ಆಡಳಿತಾರೂಢ ನಿತೀಶ್ ಕುಮಾರ್ ನೇತೃತ್ವದ ಬಿಜೆಪಿ-ಜೆಡಿಯು ಸರ್ಕಾರದ ವಿರುದ್ಧ ಟೀಕೆ, ವ್ಯಂಗ್ಯ, ಟ್ರೋಲ್‌ಗಳು ಹೆಚ್ಚಾಗಿವೆ. ಇದರ ಹಿಂದಿಂದೆಯೇ ಮೋದಿಯವರ ಮರೆಮೋಸದ ಚುನಾವಣಾ ಬಾಂಡ್‌ಗಳ ಬಣ್ಣವೂ ಬಯಲಾಗುತ್ತಿದೆ.
ಹಾಗೆಯೇ ಆರ್‍ಜೆಡಿ ನಾಯಕ ತೇಜಸ್ವಿ ಯಾದವ್, ‘ಬಿಹಾರದಲ್ಲಿ ಕಳೆದ 17 ವರ್ಷಗಳಿಂದ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಆದರೆ ಸೇತುವೆ ಕುಸಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಇಬ್ಬರೂ ಮೌನವಾಗಿದ್ದಾರೆ. ಉತ್ತಮ ಆಡಳಿತ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರದ ಪ್ರತಿಪಾದನೆಗಳು ಏನಾದವು? ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬುದಕ್ಕೆ ಈ ಸೇತುವೆಗಳೇ ಸಾಕ್ಷಿ’ ಎಂದು ಆರೋಪಿಸಿರುವುದು ಸೂಕ್ತವಾಗಿದೆ.
ಲೋಕಸಭಾ ಚುನಾವಣೆಯ ಫಲಿತಾಂಶದ ದಿನದಂದೇ ಹೊರಬಿದ್ದ ನೀಟ್ ಯುಜಿ ಫಲಿತಾಂಶವಂತೂ ದೇಶದ ನಾಲ್ಕು ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನೇ ಮಸುಕುಗೊಳಿಸಿತು. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕಂಡುಕೇಳರಿಯದ ಕೃಪಾಂಕ, ಪಶ್ನೆಪತ್ರಿಕೆ ಸೋರಿಕೆ, ಕೋಟ್ಯಂತರ ರೂಪಾಯಿಗಳ ಅಕ್ರಮ, ಸುಪ್ರೀಂ ಕೋರ್ಟ್ ಛೀಮಾರಿ, ಹಲವರ ಬಂಧನವಾಗಿ ಪ್ರಧಾನಿ ಮೋದಿಯವರು ಮೌನಕ್ಕೆ ಜಾರುವಂತಾಯಿತು. ಕೇಂದ್ರ ಸರ್ಕಾರ ಉಳ್ಳವರ, ಬಲಿಷ್ಠರ, ಮೇಲ್ಜಾತಿಗಳ ಪರವಿರುವ ಸರ್ಕಾರ ಎನ್ನುವುದು ಸಾಬೀತಾಯಿತು. ಇದರ ಬೆನ್ನಿಗೇ ಯುಜಿಸಿ-ನೆಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಲ್ಲೂ ಅಕ್ರಮದ ವಾಸನೆ ಹೊಡೆಯತೊಡಗಿತು. ಲಕ್ಷಾಂತರ ವಿದ್ಯಾರ್ಥಿಗಳ ಆತಂಕದ ನಡುವೆಯೇ ಸರ್ಕಾರ ಐದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಿ, ಮೋದಿ ಆಡಳಿತದ ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆಯನ್ನು ಪ್ರದರ್ಶನಕ್ಕಿಟ್ಟಿತು.
ದೇಶದ ಜನ ಈ ಆಘಾತದಿಂದ ಹೊರಳಿ ನೋಡುವಷ್ಟರಲ್ಲಿ ಉತ್ತರ ಭಾರತದ ತಾಪಮಾನ ಏರಿ, ಕುಡಿಯುವ ನೀರಿಗೆ ಪರದಾಡಿ, ಬಿಸಿಗಾಳಿಗೆ ತುತ್ತಾಗಿ ಕೆಲವರು ಅಸುನೀಗಿದರು. ಪಶ್ಚಿಮ ಬಂಗಾಳದಲ್ಲಿ ರೈಲು ಅಪಘಾತವಾಗಿ, 11 ಜನರು ಪ್ರಾಣ ಕಳೆದುಕೊಂಡರು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಯೋಧರು ಬಲಿಯಾದರು. ಮುಂಬೈನ ಅಟಲ್ ಸೇತು ಉದ್ಘಾಟಿಸಿ ಭಾರಿ ಪ್ರಚಾರ ಪಡೆದಿದ್ದ ಪ್ರಧಾನಿಗಳಿಗೆ ಶಾಕ್ ಆಗುವಂತೆ, ಸಾವಿರಾರು ಕೋಟಿ ಖರ್ಚು ಮಾಡಿ ನಿರ್ಮಾಣಗೊಂಡ ರಸ್ತೆ ಬಿರುಕು ಬಿಟ್ಟು ಮೋದಿಯವರನ್ನು ಅಪಹಾಸ್ಯ ಮಾಡತೊಡಗಿತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ವರ್ಷದಿಂದ ನಡೆಯುತ್ತಲೇ ಇರುವ ಅಂಬಾನಿ ಮದುವೆಯೂ, ಪೌಷ್ಟಿಕ ಆಹಾರ ಸಿಗದ 67 ಲಕ್ಷ ಶಿಶುಗಳೂ…
ಸಾಲು ಸಾಲು ಅವಘಡಗಳಿಂದ ಸುಧಾರಿಸಿಕೊಂಡು ನೋಡುವಷ್ಟರಲ್ಲಿ ಕೇವಲ ಒಂದೇ ಒಂದು ಮಳೆಗೆ ಜಬಲಪುರ್ ಮತ್ತು ದಿಲ್ಲಿಯ ವಿಮಾನ ನಿಲ್ದಾಣಗಳ ಛಾವಣಿಗಳು ಕುಸಿದು ಕೂತಿದ್ದವು. ಅದಕ್ಕೆ ತೇಪೆ ಹಾಕಲು ಹವಣಿಸುತ್ತಿರುವಾಗಲೇ ಅಯೋಧ್ಯೆಯ ಶ್ರೀ ರಾಮಮಂದಿರ ಸೋರತೊಡಗಿತು. ಮೋದಿ ಮತ್ತು ಯೋಗಿಗಳ ಅಭಿವೃದ್ಧಿಗೆ ಬಲಿಯಾದ ಅಯೋಧ್ಯೆ, ಗಲ್ಲಿ ಗಟಾರಗಳಲ್ಲಿ ನೀರು ತುಂಬಿ ತೇಲತೊಡಗಿತು. ದೆಹಲಿಯ ಪ್ರಗತಿ ಮೈದಾನ್ ಜಲಾವೃತವಾಯಿತು.
ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಜೂನ್ 9ರಿಂದ ಹಿಡಿದು ನಿನ್ನೆ ಮೊನ್ನೆಯವರೆಗೆ, ಪ್ರತಿದಿನ ಒಂದಿಲ್ಲೊಂದು ಅವಘಡಗಳು ಜರುಗುತ್ತಲೇ ಇವೆ. ಇದೆಲ್ಲದಕ್ಕೆ ಕಳಶವಿಟ್ಟಂತೆ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಭೋಲೆ ಬಾಬಾ ಸತ್ಸಂಗಕ್ಕೆ ಹೋದ ಲಕ್ಷಾಂತರ ಅಮಾಯಕರು ನೂಕುನುಗ್ಗಲು, ಕಾಲ್ತುಳಿತಕ್ಕೆ ಒಳಗಾಗಿ 121 ಮಂದಿ ಸಾವನ್ನಪ್ಪಿದ್ದಾರೆ. ಈ ಬಾಬಾ ಯಾರು, ಇವನಿಗೆ ರಕ್ಷಣೆ ಕೊಟ್ಟವರು ಯಾರು, ಇಲ್ಲಿಯವರೆಗೆ ಅವನನ್ನು ಏಕೆ ಬಂಧಿಸಿಲ್ಲ? ಈ ಬಗ್ಗೆ ಪ್ರಧಾನಿಗಳು ಬಾಯ್ಬಿಡಲಿಲ್ಲ. ಸಂತ್ರಸ್ತರನ್ನು ಸಂತೈಸಲೂ ಹೋಗಲಿಲ್ಲ.
ದೇಶ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಎದೆಯುಬ್ಬಿಸಿ ಹೇಳುತ್ತಿದ್ದ ಪ್ರಧಾನಿ ಮೋದಿಯವರು, ಕಳೆದ ಹತ್ತು ವರ್ಷಗಳ ಕಾಲ ದೇಶದ ಜನತೆಯ ಕಣ್ಣಿಗೆ ಮಣ್ಣೆರೆಚಿದ್ದರು. ಸಮರ್ಥ ವಿರೋಧ ಪಕ್ಷವಿಲ್ಲದೆ, ಪ್ರಶ್ನಿಸುವ ಮಾಧ್ಯಮಗಳಿಲ್ಲದೆ ಮೋದಿ ಬಿಟ್ಟರೆ ಮತ್ತೊಬ್ಬರಿಲ್ಲ ಎನ್ನುವ ವಾತಾವರಣ ನಿರ್ಮಿಸಿ ಮೆರೆಯುತ್ತಿದ್ದರು.
ಇಂದು ವಿರೋಧ ಪಕ್ಷಗಳು ದನಿ ಎತ್ತುವ ಸ್ಥಿತಿಗೆ ಬಂದಿವೆ, ಕೆಲ ಮಾಧ್ಯಮಗಳು ಜವಾಬ್ದಾರಿಯರಿತು ವರ್ತಿಸುತ್ತಿವೆ, ಜನರ ಸೋಷಿಯಲ್ ಮೀಡಿಯಾವಂತೂ ಜಾಗೃತವಾಗಿದೆ. ಹಾಗಾಗಿ ಆಳುವ ಸರ್ಕಾರದ ಅವಘಡಗಳು, ಅಧ್ವಾನಗಳು ಬೆಳಕು ಕಾಣುತ್ತಿವೆ. ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’ವನ್ನು ಬಯಲು ಮಾಡುತ್ತಿವೆ. ಇದೇ ಆಗಬೇಕಾದ್ದು, ಪ್ರಜಾಪ್ರಭುತ್ವವನ್ನು ಉಳಿಸುವಂಥದ್ದು.
