ಈ ದಿನ ಸಂಪಾದಕೀಯ | ನ್ಯಾಯಾಲಯದ ವಿವೇಕದ ಮುಂದೆ ಬಯಲಾದ ಬಿಜೆಪಿ ನಾಯಕರ ಅವಿವೇಕ

Date:

Advertisements
ಅಧಿಕಾರವಿಲ್ಲದೆ ಅತಂತ್ರರಾಗಿರುವ ರಾಜ್ಯ ಬಿಜೆಪಿ ನಾಯಕರಿಗೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದರಲ್ಲೂ ಧರ್ಮ ಹುಡುಕುವುದು, ಕೋಮು ಬಣ್ಣ ಬಳಿಯುವುದು, ಜನರ ನಡುವೆ ದ್ವೇಷಾಸೂಯೆ ಬಿತ್ತುವುದು, ಶಾಂತಿ-ಸಹಬಾಳ್ವೆಗೆ ಧಕ್ಕೆ ತರುವುದು, ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳುವುದು ರೂಢಿಯಾಗಿಹೋಗಿದೆ.

ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್​ ಅವರನ್ನು ರಾಜ್ಯ ಸರ್ಕಾರ ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಪುರಸ್ಕರಿಸಿತ್ತು. ಕನ್ನಡ ಭಾಷೆಗೆ ಬಂದ, ಕನ್ನಡದ ಲೇಖಕಿ ಕರ್ನಾಟಕಕ್ಕೆ ಕರೆತಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೌರವಿಸುವ ನೆಪದಲ್ಲಿ ರಾಜ್ಯ ಸರ್ಕಾರದ ಕ್ರಮ ಸಮಯೋಚಿತವಾಗಿತ್ತು, ಶ್ಲಾಘನೀಯವಾಗಿತ್ತು.  

ನಾಡಿನ ಜನರೆಲ್ಲ ಒಂದೆಡೆ ಸೇರಿ ಸಂಭ್ರಮಿಸುವ ನಾಡ ಹಬ್ಬದಲ್ಲಿಯೂ ಹಿಂದೂ-ಮುಸ್ಲಿಂ ಭಿನ್ನತೆ ಹುಡುಕಿದ ಬಿಜೆಪಿಯ ಕೆಲ ನಾಯಕರು ರಾಜ್ಯ ಸರ್ಕಾರದ ಕ್ರಮವನ್ನು ಟೀಕಿಸಿದ್ದರು. ದಸರಾದಲ್ಲೂ ದುಷ್ಟ ದೂರಾಲೋಚನೆಗೆ ಬಿದ್ದ ಬಿಜೆಪಿ ನಾಯಕರು, ನಾಡಿನ ಜನರನ್ನು ವಿಭಾಗಿಸಲು ಹವಣಿಸಿದ್ದರು. ಅದರಲ್ಲೂ ಬಿಜೆಪಿ ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಗುರಿಯಾಗಿ, ನಿರುದ್ಯೋಗಿಯಾಗಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು.

ಪ್ರತಾಪ್ ಸಿಂಹ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಆಲಿಸಿದ ಕರ್ನಾಟಕ ಹೈಕೋರ್ಟ್‌, ಸೋಮವಾರ ಅವರ ಅರ್ಜಿ ವಜಾಗೊಳಿಸಿದೆ. ಅಷ್ಟೇ ಅಲ್ಲ, ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ಬಿಜೆಪಿ ನಾಯಕರಿಗೆ ವಿವೇಕದ ಪಾಠ ಮಾಡಿದೆ, ಅವರ ಅವಿವೇಕವನ್ನು ಬಯಲು ಮಾಡಿದೆ.

ಇದನ್ನು ಓದಿದ್ದೀರಾ?: ಮತಾಂತರ ವಿಚಾರದಲ್ಲಿ ಬಿಜೆಪಿಯ ಬೂಟಾಟಿಕೆ ಮತ್ತು ವಾಸ್ತವ

‘ರಾಜ್ಯ ಸರ್ಕಾರ ಆಯೋಜಿಸುವ ಕಾರ್ಯಕ್ರಮದಲ್ಲಿ ಭಿನ್ನ ಧರ್ಮದ ವ್ಯಕ್ತಿ ಭಾಗಿಯಾಗುವುದು ಅರ್ಜಿದಾರರ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಹಕ್ಕನ್ನು ಹೇಗೆ ಉಲ್ಲಂಘಿಸುತ್ತದೆ ಅಥವಾ ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ಹೇಗೆ ವಿರುದ್ಧ ಎಂದು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲವಾಗಿರುವುದರಿಂದ ಅರ್ಜಿಗಳನ್ನು ವಜಾಗೊಳಿಸಲಾಗಿದೆ’ ಎಂದು ನ್ಯಾಯಾಲಯ ಹೇಳಿದೆ.

ಇಷ್ಟಾದರೂ ಪ್ರತಾಪ್‌ ಸಿಂಹ ಪರ ವಕೀಲರು ‘ಬಾನು ಮುಷ್ತಾಕ್‌ ಅವರು ಹಿಂದೂ ಸಂಪ್ರದಾಯ ವಿರೋಧಿ ಮತ್ತು ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ. ದಸರಾ ಉದ್ಘಾಟನೆಗೆ ಆಯ್ಕೆಯಾದವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವುದು ಶಿಷ್ಟಾಚಾರ. ಇದನ್ನು ಪಾಲಿಸಲಾಗಿಲ್ಲ. ಬಾನು ಮುಷ್ತಾಕ್‌ ಅವರಿಗೆ ಅರಿಶಿಣ-ಕುಂಕುಮದ ಮೇಲೆ ನಂಬಿಕೆ ಇಲ್ಲ. ದಸರಾ ಹಿಂದೂ ಹಬ್ಬವಾಗಿದ್ದು, ಜಾತ್ಯತೀತ ಹಬ್ಬವಲ್ಲ’ ಎಂದು ವಾದ ಮಾಡಲು ಮುಂದಾದರು.

ಅಸಲಿಗೆ, 2017ರಲ್ಲಿ, ಇದೇ ಪ್ರತಾಪ ಸಿಂಹ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಸಂದರ್ಭದಲ್ಲಿ, ರಾಜ್ಯ ಸರ್ಕಾರ ಕವಿ, ಸಾಹಿತಿ ಕೆ.ಎಸ್. ನಿಸಾರ್ ಅಹಮದ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿತ್ತು. ಆಗ ಅದರಲ್ಲಿ ಮುಸ್ಲಿಂ ಹುಡುಕದ, ಆಕ್ಷೇಪ ವ್ಯಕ್ತಪಡಿಸದ, ಕೋರ್ಟ್ ಮೆಟ್ಟಿಲು ಹತ್ತದ ಪ್ರತಾಪ್ ಸಿಂಹ ಈಗ, ಬಾನು ಮುಷ್ತಾಕ್ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಲು ಹೋಗಿ ನಗೆಪಾಟಲಿಗೀಡಾಗಿದ್ದಾರೆ. ನ್ಯಾಯಾಲಯ ‘ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಲು ನಿಮಗೆ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಹಕ್ಕು ಏನಿದೆ ಹೇಳಿ’ ಎನ್ನುವ ಮೂಲಕ ಮತಾಂಧರಿಗೆ ಸಂವಿಧಾನದ 15ನೇ ವಿಧಿಯ ತಿಳಿವಳಿಕೆ ತುಂಬಿದೆ.

ಮುಂದುವರೆದ ಪೀಠ, ‘ವಿಜಯದಶಮಿ ಎಂದರೇನು? ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯ ಎಂಬುದಾಗಿದೆ’ ಎಂದು ಹೇಳುವ ಮೂಲಕ ನಾಡಹಬ್ಬದ ಆಚರಣೆ, ಪಾಲಿಸಿಕೊಂಡು ಬಂದ ಪರಂಪರೆಯನ್ನು ವಿವರಿಸಿ, ವಿವೇಕವಂತರಾಗಿ ಎಂದಿದೆ.

ಆದಾಗ್ಯೂ, ಭಂಡತನದಿಂದ ವಾದ ಮುಂದುವರಿಸಲು ಯತ್ನಿಸಿದ ಪ್ರತಾಪ್‌ ಸಿಂಹ ಪರ ವಕೀಲರನ್ನು ಕುರಿತು ಪೀಠವು ‘ನಮ್ಮ ಆದೇಶ ನೀಡಲಾಗಿದೆ. ದಂಡ ವಿಧಿಸಬೇಕೆ? ಈ ನ್ಯಾಯಾಲಯದಲ್ಲಿ ನೀವು ಹೀಗೆಲ್ಲಾ ಮಾಡಲಾಗದು’ ಎಂದು ಏರುಧ್ವನಿಯಲ್ಲಿ ಎಚ್ಚರಿಸಿ, ನೀರಿಳಿಸಿ ಕಳಿಸಿದೆ. ಆದರೂ ಪ್ರತಾಪ್ ಸಿಂಹ ಎಂಬ ನಿರುದ್ಯೋಗಿ, ‘ಜಾತ್ಯತೀತತೆ ಚೌಕಟ್ಟಿನಲ್ಲಿ ಪಿಐಎಲ್ ವಜಾ ಆಗಿದೆ. ನಾನು ವಾಕ್ ಸ್ವಾತಂತ್ರ್ಯ ಬಳಸಿಕೊಂಡು ಮಾತನಾಡುತ್ತಿದ್ದೇನೆ’ ಎಂದಿದ್ದಾರೆ. ಇದು, ಜಟ್ಟಿ ಜಾರಿಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಜಾಣ್ಮೆ!   

ಇದು ಪ್ರತಾಪ್ ಸಿಂಹರ ‘ಜಾಣ್ಮೆ’ಯಷ್ಟೇ ಅಲ್ಲ, ಕಳೆದ ಹನ್ನೊಂದು ವರ್ಷಗಳಿಂದ ಬಿಜೆಪಿ ಪಾಲಿಸಿಕೊಂಡು ಬಂದಿರುವುದು ಇದನ್ನೇ.  

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಪ್ರಜಾಪ್ರಭುತ್ವದ ಮೂರು ಮುಖ್ಯ ಆಧಾರಸ್ತಂಭಗಳಲ್ಲಿ ಕಾರ್ಯಾಂಗ, ಶಾಸಕಾಂಗವನ್ನು ಕೈವಶ ಮಾಡಿಕೊಂಡಿದೆ. ನಾಲ್ಕನೇ ಅಂಗವಾದ ಮಾಧ್ಯಮ ಕ್ಷೇತ್ರವನ್ನು ಖರೀದಿಸಿ ಕುಲಗೆಡಿಸಿದೆ. ಇಡಿ, ಐಟಿ, ಸಿಬಿಐ, ಎನ್ಐಎಗಳಂತಹ ಸರ್ಕಾರಿ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಂಡು, ವಿರೋಧ ಪಕ್ಷವನ್ನು ಬಗ್ಗುಬಡಿದಿದೆ. ಸರ್ಕಾರಗಳನ್ನೇ ಹೈಜಾಕ್ ಮಾಡಿದೆ. ಬಡವರಿಗೆ, ಅಲ್ಪಸಂಖ್ಯಾತರಿಗೆ, ಅಸಹಾಯಕರಿಗೆ ನ್ಯಾಯ ದೊರಕುವುದು ದುಸ್ತರ ಎನ್ನುವ ವಾತಾವರಣ ದೇಶದಲ್ಲಿ ನಿರ್ಮಾಣವಾಗಿದೆ.

ಇಂತಹ ದುರಿತ ಕಾಲದಲ್ಲಿ ದೇಶದ ಜನತೆಯ ಆಶಾಕಿರಣವಾಗಿದ್ದು ನ್ಯಾಯಾಂಗ. ಬಿಜೆಪಿಯ ಚುನಾವಣಾ ಬಾಂಡ್ ಎಂಬ ಭಾರೀ ಭ್ರಷ್ಟಾಚಾರವನ್ನು ಬಯಲಿಗೆಳೆದದ್ದೇ ನ್ಯಾಯಾಂಗ. ಅಲ್ಲಿಂದಲೇ ಬಿಜೆಪಿ ಎಂಬ ‘ಪರಮ ಪ್ರಾಮಾಣಿಕ ಪಕ್ಷ’ದ ಮುಖವಾಡ ಕಳಚಲು ಆರಂಭವಾದದ್ದು. ಈಗ ಕರ್ನಾಟಕ ಹೈಕೋರ್ಟ್ ಕೂಡ, ಬಾನು ಮುಷ್ತಾಕ್ ಪ್ರಕರಣದಲ್ಲಿ ಸಂವಿಧಾನ ಮತ್ತು ಜಾತ್ಯತೀತತೆಯನ್ನು ಎತ್ತಿ ಹಿಡಿದಿದೆ. ಆ ಮೂಲಕ ಬಿಜೆಪಿಗರ ಬುದ್ಧಿ ಮತ್ತು ಬಂಡವಾಳವನ್ನು ಬಯಲು ಮಾಡಿದೆ.

ಇದನ್ನು ಓದಿದ್ದೀರಾ?: ಮೋದಿ ಮಣಿಪುರ ಭೇಟಿ- ‘ಹಾವು ಸಾಯಲಿಲ್ಲ, ಕೋಲು ಮುರಿಯಲಿಲ್ಲ’!

ಅಧಿಕಾರವಿಲ್ಲದೆ ಅತಂತ್ರರಾಗಿರುವ ರಾಜ್ಯ ಬಿಜೆಪಿ ನಾಯಕರಿಗೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದರಲ್ಲೂ ಧರ್ಮ ಹುಡುಕುವುದು, ಕೋಮು ಬಣ್ಣ ಬಳಿಯುವುದು, ಜನರ ನಡುವೆ ದ್ವೇಷಾಸೂಯೆ ಬಿತ್ತುವುದು, ಶಾಂತಿ-ಸಹಬಾಳ್ವೆಗೆ ಧಕ್ಕೆ ತರುವುದು, ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳುವುದು ರೂಢಿಯಾಗಿಹೋಗಿದೆ.

ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್​ ಅವರನ್ನು ರಾಜ್ಯ ಸರ್ಕಾರ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿದ್ದರಲ್ಲೂ ಬಿಜೆಪಿ ಧರ್ಮ ಹುಡುಕಿದೆ. ಆದರೆ, ನ್ಯಾಯಾಲಯ ಸರ್ಕಾರದ ಪರ ನಿಲುವು ತಾಳಿ, ಸಂವಿಧಾನ ಮತ್ತು ಜಾತ್ಯತೀತತೆಯನ್ನು ಎತ್ತಿ ಹಿಡಿದಿದೆ. ಪಿಐಎಲ್ ಹಾಕಿ ಕೋರ್ಟಿನ ಸಮಯ ಹಾಳು ಮಾಡಿದವರಿಗೆ ವಿವೇಕದ ಪಾಠ ಮಾಡಿದೆ.

ಇಷ್ಟಾದರೂ ಬುದ್ಧಿ ಕಲಿಯದ ಬಿಜೆಪಿ ನಾಯಕರು, ‘ದಸರಾವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಯಾವುದೇ ಕಾನೂನು ಇಲ್ಲ. ನಾವು ಅಧಿಕಾರಕ್ಕೆ ಬಂದರೆ ಕಾನೂನು ತರುತ್ತೇವೆ. ಕಾಂಗ್ರೆಸ್ ಮಾಡಿರುವ ಅವಾಂತರಗಳೆಲ್ಲವನ್ನು ತೆಗೆದುಹಾಕುತ್ತೇವೆ. ಇದು ತಾಲಿಬಾನ್, ಮುಲ್ಲಾಗಳ ಸರ್ಕಾರ ಆಗಿಹೋಗಿದೆ’ ಎಂದು ಹೂಂಕರಿಸಿದ್ದಾರೆ. ಇವರ ಅಹಂಕಾರಕ್ಕೆ, ಅಟಾಟೋಪಕ್ಕೆ ಮತದಾರ ಪ್ರಭುವೇ ಪಾಠ ಕಲಿಸಬೇಕಾಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

ಈ ದಿನ ಸಂಪಾದಕೀಯ | ಬಸನಗೌಡ ಯತ್ನಾಳ್‌ ಒಪ್ಪಿಸಿದ್ದು ಮನುವಾದಿ ಗಿಳಿಪಾಠ

ನಾಡ ದೇವತೆ ಎಂದು ಕರೆಸಿಕೊಂಡ ಚಾಮುಂಡಿ ದೇವಿ ಹೆಣ್ಣಾಗಿ ದಲಿತ ಮಹಿಳೆಯಿಂದ...

Download Eedina App Android / iOS

X