ಈ ದಿನ ಸಂಪಾದಕೀಯ | ಬಿಬಿಎಂಪಿಗೆ ಬೇಕಿರುವುದು ವಿಭಜನೆಗೂ ಮುಖ್ಯವಾಗಿ ಚುನಾವಣೆ

Date:

Advertisements
ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ ಸಂವಿಧಾನಕ್ಕೆ ತಿದ್ದುಪಡಿ ತಂದು, ಯಾವುದೇ ಸ್ಥಳೀಯ ಸಂಸ್ಥೆಗೆ ಆರು ತಿಂಗಳಿಗಿಂತ ಹೆಚ್ಚು ಅವಧಿಗೆ ಆಡಳಿತಾಧಿಕಾರಿ ಇರಬಾರದು ಎಂದು ನಿಯಮ ಮಾಡಿದ್ದರು. ಆದರೆ, ಅದೇ ರಾಜೀವ್ ಗಾಂಧಿಯವರ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಬಿಬಿಎಂಪಿಗೆ ಚುನಾವಣೆ ನಡೆದು ನಾಲ್ಕು ವರ್ಷಗಳಾಗಿದೆ, ತಮ್ಮ ನಾಯಕನ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ. ಚುನಾವಣೆ ನಡೆಸದೆ, ಜನಪ್ರತಿನಿಧಿಗಳಿಗೆ ಅಧಿಕಾರ ನೀಡದೆ, ಪ್ರಜಾಪ್ರಭುತ್ವಕ್ಕೂ ಮಸಿ ಬಳಿಯುತ್ತಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯದೆ ನಾಲ್ಕು ವರ್ಷಗಳಾಗುತ್ತಿದೆ. ಈ ನಡುವೆ 80 ವಾರ್ಡ್‌ಗಳ ಐದು ಪಾಲಿಕೆಯನ್ನಾಗಿ ಮಾಡಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ.

ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ‘ಬಿಬಿಎಂಪಿ ವಿಭಜನೆ ಪ್ರಸ್ತಾವ ಈ ಹಿಂದೆಯೇ ಇತ್ತು. ಆ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಏನೇ ಇದ್ದರೂ, ಆದಷ್ಟು ಬೇಗ ಚುನಾವಣೆ ಮಾಡಲಾಗುವುದು. ಇಲ್ಲದಿದ್ದರೆ ಕೋರ್ಟ್ ಬಿಡಲ್ಲ’ ಎಂದಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರೀಕರಣ ಎನ್ನುವುದು ಉದಾತ್ತ ಚಿಂತನೆ. ಸಚಿವ ಶಿವಕುಮಾರ್ ವಿಕೇಂದ್ರೀಕರಣದ ಮಾತುಗಳನ್ನೇ ಆಡಿದ್ದಾರೆ. ಆದರೆ, ಆಡಿದ್ದನ್ನು ಅನುಷ್ಠಾನಕ್ಕೆ ತರುವರೇ ಎಂಬ ಬಗ್ಗೆ ಅನುಮಾನವಿದೆ. ಆ ಅನುಮಾನಕ್ಕೆ ಕಾರಣ, ‘ನಗರದಲ್ಲಿ ಲೋಕಸಭೆ ಚುನಾವಣೆಯನ್ನು ಸೋತಿರುವ ಕಾಂಗ್ರೆಸ್‌ಗೆ ಬಿಬಿಎಂಪಿ ಚುನಾವಣೆಯಲ್ಲಿ ಸೋಲುವ ಭಯ. ಆದ್ದರಿಂದಲೇ ವಿಭಜನೆಯ ಮಾತನಾಡಿ, ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿದೆ’ ಎಂಬ ಬಿಜೆಪಿ ನಾಯಕರ ಮಾತುಗಳು ಪುಷ್ಟೀಕರಿಸುತ್ತವೆ.

ಚುನಾವಣೆ ಮುಂದೂಡುವ ವಿಚಾರದಲ್ಲಿ ಬಿಜೆಪಿ ನಾಯಕರೇನೂ ಹಿಂದೆ ಬಿದ್ದಿಲ್ಲ. ಅವರ ಸರ್ಕಾರವಿದ್ದಾಗ, ಮೂರು ವರ್ಷಗಳ ಕಾಲ ಬಿಬಿಎಂಪಿಗೆ ಚುನಾವಣೆ ನಡೆಸದೆ, ವಿಕೇಂದ್ರೀಕರಣದ ಆಶಯವನ್ನೇ ಅವಮಾನಿಸಿದರು. ಆಗ ಚುನಾವಣೆಗಾಗಿ ದೊಡ್ಡ ಗಂಟಲಿನಲ್ಲಿ ಕೂಗಾಡುತ್ತಿದ್ದ ಕಾಂಗ್ರೆಸ್, ತನ್ನದೇ ಸರ್ಕಾರ ರಚನೆಯಾಗುತ್ತಿದ್ದಂತೆ ತಾನೂ ವಿಭಜನೆಯ ಆಟ ಶುರು ಮಾಡಿಕೊಂಡಿದೆ.

ಇದರಿಂದ ಒಂದಂತೂ ಸ್ಪಷ್ಟ: ಚುನಾವಣೆ ನಡೆಸುವುದು, ಅಧಿಕಾರ ವಿಕೇಂದ್ರೀಕರಣವಾಗುವುದು ಯಾರಿಗೂ ಇಷ್ಟವಿಲ್ಲ. ತೋರಿಕೆಗೆ, ಮಾಧ್ಯಮಗಳ ಹೇಳಿಕೆಗೆ ಚುನಾವಣೆ ಚಲಾವಣೆಯಲ್ಲಿದೆ. ಕೋರ್ಟ್ ಆದೇಶ ಗುರಾಣಿಯಂತೆ ಬಳಕೆಯಾಗುತ್ತಿದೆ.

ವರ್ಷಕ್ಕೆ 11 ಸಾವಿರ ಕೋಟಿ ರೂ.ಗಳ ಬಜೆಟ್ ಹೊಂದಿರುವ ಬಿಬಿಎಂಪಿ, ಈಗ ನಗರ ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಕೈಯಲ್ಲಿದೆ. ಬೆಳೆಯುತ್ತಿರುವ ಬೆಂಗಳೂರು ಅಭಿವೃದ್ಧಿ ಬೇಡುವ ನಗರ. ಅಭಿವೃದ್ಧಿ ಎಂದಾಕ್ಷಣ ಅನುದಾನ, ಕಾಮಗಾರಿ ಮುನ್ನೆಲೆಗೆ ಬರುತ್ತದೆ. ಅದು ಎಲ್ಲ ರಾಜಕಾರಣಿಗಳಿಗೂ ಇಷ್ಟವಾಗುತ್ತದೆ. ಕಾಂಗ್ರೆಸ್‌ನಲ್ಲಿ ಬೆಂಗಳೂರು ನಗರದಿಂದ ಗೆದ್ದು ಮಂತ್ರಿಗಳಾಗಿರುವ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಜಮೀರ್ ಅಹ್ಮದ್ ಖಾನ್‌ಗಳಿದ್ದರೂ, ಬೆಂಗಳೂರು ಉಸ್ತುವಾರಿ ಶಿವಕುಮಾರ್ ಕೈವಶವಾಗಿದೆ.

ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಎಲ್ಲದಕ್ಕೂ ಅಧಿಕಾರಿಗಳನ್ನೇ ಅವಲಂಬಿಸುವುದು, ನಗರದ ಆತ್ಮವನ್ನೇ ಅರಿಯದ ಅಧಿಕಾರಶಾಹಿಯೇ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ನಗರಜೀವನವನ್ನು ನರಕವನ್ನಾಗಿಸಿದೆ. ಪ್ರತಿಯೊಂದಕ್ಕೂ ಅಧಿಕಾರಿಗಳನ್ನೇ ಅವಲಂಬಿಸುವುದು ನಗರವಾಸಿಗಳಿಗೆ ಕಷ್ಟದ ಕೆಲಸವಾಗಿದೆ. ಮೂಲಭೂತ ನಾಗರಿಕ ಸೌಲಭ್ಯಗಳಿಂದ ನಾಗರಿಕರು ವಂಚಿತರಾಗುವಂತಾಗಿದೆ.

ಈಚಿಪುರ ಸೇತುವೆ ಅದೆಷ್ಟೋ ವರ್ಷಗಳಿಂದ ಹಾಗೇ ನಿಂತಿದೆ, ರಾಜಕಾಲುವೆಯಲ್ಲಿ ನೀರಿಗಿಂತ ಹೆಚ್ಚು ಹಣ ಹರಿದುಹೋಗಿದೆ, ಅವಿನ್ಯೂ ರಸ್ತೆ ಅಧ್ವಾನವನ್ನು ಕೇಳುವವರಿಲ್ಲದಾಗಿದೆ, ಒಂದು ಜೋರು ಮಳೆಗೆ ನಗರ ತೇಲುತ್ತದೆ, ತ್ಯಾಜ್ಯ ತೆಗೆಯುವವರದೇ ಒಂದು ಮಾಫಿಯಾ ಆಗಿದೆ, ಕೆರೆಗಳು ರಿಯಲ್ ಎಸ್ಟೇಟ್ ಕುಳಗಳ ಒತ್ತುವರಿಗೆ ಒಳಪಡುತ್ತಲೇ ಇವೆ, ರಸ್ತೆಗಳಲ್ಲಿ ಗುಂಡಿಬಿದ್ದು ವಾಹನ ಸಂಚಾರ ನರಕವಾಗಿದೆ, ಬಿಬಿಎಂಪಿ, ಬಿಡಿಎ ಭ್ರಷ್ಟಾಚಾರದ ಕೂಪಗಳಾಗಿ ಸಾಮಾನ್ಯರು ಕಾಲಿಡದಂತಹ ಪರಿಸ್ಥಿತಿ ಎದುರಾಗಿದೆ. ಬೆಂಗಳೂರು ನಗರ ಸಮಸ್ಯೆಗಳ ಆಗರವಾಗಿದೆ. ಪರಿಹರಿಸಬೇಕಾದ ಸಚಿವ ಶಿವಕುಮಾರ್ ಮಾತ್ರ ಬ್ರ್ಯಾಂಡ್‌ ಬೆಂಗಳೂರು ಮಂತ್ರ ಜಪಿಸುತ್ತಿದ್ದಾರೆ.

ಹಿಂದೊಮ್ಮೆ ಬೆಂಗಳೂರನ್ನು ಉದ್ಯಾನನಗರಿ ಎನ್ನುತ್ತಿದ್ದರು. ಅಂತಹ ನಗರವನ್ನು 2007ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರು, ಸುತ್ತಮುತ್ತಲಿನ ಪುರಸಭೆಗಳನ್ನು ನಗರದ ವ್ಯಾಪ್ತಿಗೆ ತಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಿದರು. ಮಣ್ಣಿನ ಮಕ್ಕಳಾದ ಕುಮಾರಸ್ವಾಮಿಯವರ ಯೋಚನೆ ಇದ್ದದ್ದು, ನಗರದ ಸುತ್ತಲಿನ ಭೂಮಿಯ ಮೇಲೆ. ಆ ಭೂಮಿಯ ಬೆಲೆ ದುಪ್ಪಟ್ಟಾಯಿತು, ಆಸೆ ಈಡೇರಿತು, ಉದ್ಯಾನನಗರಿ ಅಧ್ವಾನನಗರಿಯಾಯಿತು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಒಂದೆಡೆ ವಂದೇ ಭಾರತ್- ಬುಲೆಟ್ ಟ್ರೇನ್ ವಿಲಾಸ; ಮತ್ತೊಂದೆಡೆ ಬಡವರ ಜೀವಗಳ ಅಪಹಾಸ

ಮುಂದೆ ಅಧಿಕಾರಕ್ಕೆ ಬಂದವರು, 198 ವಾರ್ಡ್‌ಗಳನ್ನು 243 ವಾರ್ಡ್‌ಗಳಿಗೆ ಏರಿಸಿದರು. ನಂತರ ಅದನ್ನು 225ಕ್ಕೆ ಇಳಿಸಿದರು. ಈ ಏರಿಸುವ, ಇಳಿಸುವ ಪ್ರಕ್ರಿಯೆಯಲ್ಲಿ ಒಂದು ದೃಢ ನಿರ್ಧಾರಕ್ಕೆ ಬರದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ, ಅಧಿಕಾರದಲ್ಲಿ ಇಲ್ಲದಾಗ ಕೋರ್ಟ್ ಮೆಟ್ಟಿಲು ಹತ್ತುವುದು, ತಗಾದೆ ತೆಗೆಯುವುದು ಸಾಮಾನ್ಯವಾಯಿತು. ಘನತೆವೆತ್ತ ಕೋರ್ಟ್ ಅದೆಷ್ಟು ಸಲ, ಅದೆಷ್ಟು ವಿಷಯಗಳಿಗೆ ಬಿಬಿಎಂಪಿಗೆ ಛೀಮಾರಿ ಹಾಕಿದೆಯೋ ಆ ನ್ಯಾಯದೇವತೆಗೇ ಗೊತ್ತು! ದಪ್ಪ ಚರ್ಮದ ಅಧಿಕಾರಿಗಳಿಗೆ, ಅಧಿಕಾರಿಗಳನ್ನು ಆ ಸ್ಥಾನದಲ್ಲಿ ಪ್ರತಿಷ್ಠಾಪಿಸುವ ರಾಜಕೀಯ ನಾಯಕರಿಗೆ ಕೋರ್ಟ್ ಛೀಮಾರಿ ಕೂಡ ಅಭ್ಯಾಸವಾಗಿಹೋಗಿದೆ.

ಇದರ ನಡುವೆಯೇ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಸಂಗತಿ, ರಾಜಕೀಯ ಮೀಸಲಾತಿ ವಿಚಾರ ಎದ್ದು ನಿಂತಿದೆ. ಒಬಿಸಿ ಮೀಸಲಾತಿ ಹಂಚಿಕೆಯಲ್ಲಿ ಸುಪ್ರೀಂ ಕೋರ್ಟ್ ತ್ರಿಸೂತ್ರ ಅಳವಡಿಸಿಕೊಳ್ಳಲು ಸೂಚಿಸಿದೆ. ಆದರೆ, ಇಲ್ಲಿಯವರೆಗೆ ಯಾವ ಸರ್ಕಾರವೂ ತ್ರಿಸೂತ್ರ ಅಳವಡಿಕೆಯತ್ತ ಮನಸ್ಸು ಮಾಡಿಲ್ಲ. ಸಣ್ಣ ಸಮುದಾಯಗಳು ರಾಜಕೀಯ ಅಧಿಕಾರ ಪಡೆಯಬೇಕು, ಸಾಮಾಜಿಕ ನ್ಯಾಯ ಪರಿಪಾಲನೆಯಾಗಬೇಕು ಎಂದು ದೊಡ್ಡದಾಗಿ ಭಾಷಣ ಬಿಗಿಯುತ್ತಾರೆ. ಆದರೆ, ಮೀಸಲಾತಿ ಹಂಚಿಕೆಯಾಗುವಾಗ ಬಹುಸಂಖ್ಯಾತರಾದ ಒಕ್ಕಲಿಗರು ಮತ್ತು ಲಿಂಗಾಯತರು ಒಬಿಸಿಯ ಸಿಂಹಪಾಲು ಪಡೆದು, ಸಣ್ಣ ಸಮುದಾಯಗಳನ್ನು ರಾಜಕೀಯವಾಗಿ ಮೂಲೆಗುಂಪು ಮಾಡುತ್ತಾ ಬಂದಿದ್ದಾರೆ.

ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ ಸಂವಿಧಾನಕ್ಕೆ ತಿದ್ದುಪಡಿ ತಂದು, ಯಾವುದೇ ಸ್ಥಳೀಯ ಸಂಸ್ಥೆಗೆ ಆರು ತಿಂಗಳಿಗಿಂತ ಹೆಚ್ಚು ಅವಧಿಗೆ ಆಡಳಿತಾಧಿಕಾರಿ ಇರಬಾರದು ಎಂದು ನಿಯಮ ಮಾಡಿದ್ದರು. ಅದು ನರಸಿಂಹರಾವ್ ಕಾಲದಲ್ಲಿ ಅನುಷ್ಠಾನಕ್ಕೆ ಬಂದಿತ್ತು. ಆದರೆ ಅದೇ ರಾಜೀವ್ ಗಾಂಧಿಯವರ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ, ಬಿಬಿಎಂಪಿಗೆ ಚುನಾವಣೆ ನಡೆದು ನಾಲ್ಕು ವರ್ಷಗಳಾಗಿದೆ, ತಮ್ಮ ನಾಯಕನ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ. ಚುನಾವಣೆ ನಡೆಸದೆ, ಜನಪ್ರತಿನಿಧಿಗಳಿಗೆ ಅಧಿಕಾರ ನೀಡದೆ, ಪ್ರಜಾಪ್ರಭುತ್ವಕ್ಕೂ ಮಸಿ ಬಳಿಯುತ್ತಿದೆ.

ಈಗಲಾದರೂ ರಾಜೀವ್ ಗಾಂಧಿಗೆ, ಕೋರ್ಟಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಬೆಲೆ ಕೊಟ್ಟು ಬಿಬಿಎಂಪಿಗೆ ಚುನಾವಣೆ ನಡೆಸಲು ಮುಂದಾಗಬೇಕಿದೆ. ಮತ್ತೆ ವಿಭಜನೆ, ಕೋರ್ಟು ಎಂದು ಸಬೂಬು ಹೇಳಿದರೆ, ಜನ ದಂಗೆ ಏಳುವುದು ನಿಶ್ಚಿತ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು...

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

Download Eedina App Android / iOS

X