ಈ ದಿನ ಸಂಪಾದಕೀಯ | ಬುರ್ನಾಸು ಬಿಜೆಪಿ ಬಿಟ್ಟು ಒಂದಾಗುವರೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ? 

Date:

Advertisements
ಬಿಜೆಪಿಯನ್ನು ತ್ಯಜಿಸಿ, ಸದ್ಯದ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಒಂದಾದರೆ, ಕರ್ನಾಟಕದಲ್ಲಿ ಮೂರನೇ ಶಕ್ತಿಗೆ ಚಾಲನೆ ಕೊಟ್ಟರೆ, ಬುರ್ನಾಸು ಬಿಜೆಪಿಗೆ ಬುದ್ಧಿ ಕಲಿಸಬಹುದಲ್ಲವೇ?

ʻಬಿ.ಎಸ್ ಯಡಿಯೂರಪ್ಪನವರ ಕಣ್ಣೀರಿನಿಂದ ಬಿಜೆಪಿ ಹಾಳಾಗಿದೆ. ಭಾರತೀಯ ಜನತಾ ಪಕ್ಷಕ್ಕೆ ಸಮರ್ಥ ನಾಯಕರ ಆಡಳಿತ ಬೇಕಿದೆʼ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

ರೇಣುಕಾಚಾರ್ಯರ ಮಾತಿನಲ್ಲಿ ಸತ್ವವಿದೆ, ಸತ್ಯವಿದೆ. ರಾಜ್ಯ ಬಿಜೆಪಿಯ ವಾಸ್ತವ ಚಿತ್ರಣವಿದೆ. ಇದು ಬಿಜೆಪಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತಿದೆ. ಆದರೆ ಆಡುವಂತಿಲ್ಲ, ಅನುಭವಿಸುವಂತಿಲ್ಲ. ಇಲ್ಲಿ ನಾಯಕರೂ ಇಲ್ಲ, ನಾನು ನಾಯಕ ಎಂದು ಎದೆ ತಟ್ಟಿಕೊಂಡು ಹೇಳುವಂತಹ ವ್ಯಕ್ತಿಗಳೂ ಕಾಣುತ್ತಿಲ್ಲ. ಇಂತಹ ದಿಕ್ಕೆಟ್ಟ ದರಿದ್ರ ಸ್ಥಿತಿ ರಾಜ್ಯ ಬಿಜೆಪಿಗೆ ಯಾವತ್ತೂ ಬಂದಿದ್ದಿಲ್ಲ. ಬಂದೊದಗಲು ಕಾರಣವೇನು ಎಂದು ಪ್ರಶ್ನೆ ಕೇಳಿಕೊಳ್ಳುವ, ಪರಾಮರ್ಶಿಸಿಕೊಳ್ಳುವ ಪಾಪಪ್ರಜ್ಞೆ ಬಿಜೆಪಿಯ ಯಾರಲ್ಲೂ ಕಾಣುತ್ತಿಲ್ಲ.  

ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದು, ಫಲಿತಾಂಶ ಹೊರಬಿದ್ದು, ನಾಡಿನ ಜನ ಕಾಂಗ್ರೆಸ್ಸಿಗೆ ಅಧಿಕಾರ ನಡೆಸುವ, ಬಿಜೆಪಿಗೆ ವಿರೋಧ ಪಕ್ಷದಲ್ಲಿ ಕೂರುವ ಜನಾದೇಶ ನೀಡಿ ಇಲ್ಲಿಗೆ ಸರಿಯಾಗಿ 140 ದಿನಗಳಾದವು. ನಾಡಿನ ಜನತೆಯ ಆಶೋತ್ತರದಂತೆ ಕಾಂಗ್ರೆಸ್ ಅಧಿಕಾರಕ್ಕೇರಿ, ಕಾರ್ಯಾರಂಭಿಸಿದೆ. ಆದರೆ ವಿರೋಧ ಪಕ್ಷದಲ್ಲಿ ಕೂತು, ಆಡಳಿತ ಪಕ್ಷಕ್ಕೆ ಅಡಿಗಡಿಗೂ ಅಂಕುಶವಿಡಬೇಕಾದ ಬಿಜೆಪಿ, ವಿರೋಧ ಪಕ್ಷದ ನಾಯಕನನ್ನು ಆರಿಸಿಕೊಳ್ಳಲಾಗದ ಅತಂತ್ರ ಸ್ಥಿತಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಬಿಜೆಪಿಯಲ್ಲಿ ಬಿಡಿಗಾಸಿನ ಬೆಲೆಯೂ ಇಲ್ಲವಾಗಿದೆ. ಪ್ರತಿಯೊಂದಕ್ಕೂ ದಿಲ್ಲಿಯ ದೊರೆಗಳತ್ತ ನೋಡಬೇಕಿದೆ, ಅವರು ಹೇಳಿದಂತೆ ಕೇಳಬೇಕಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಯ ಹೈಕಮಾಂಡ್, ರಾಜ್ಯ ಬಿಜೆಪಿಯ ನಾಯಕರ ಗಮನಕ್ಕೂ ತಾರದೆ, ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮಾತುಕತೆ ಮಾಡಿ ಮುಗಿಸಿದೆ. ಅದನ್ನು ರಾಜ್ಯ ಬಿಜೆಪಿ ನಾಯಕರಿಗೆ ತಿಳಿಸುವ ಸೌಜನ್ಯವನ್ನೂ ತೋರದೆ ನಿಸ್ಸೀಮ ನಿರ್ಲಕ್ಷ್ಯ ತೋರಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದನ್ನು ಪಕ್ಷದ ಅಧಿಕೃತ ಆದೇಶವೆಂಬಂತೆ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು, ʻಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಂದಾಗಿ ಚುನಾವಣೆಯನ್ನು ಎದುರಿಸಲಿವೆʼ ಎಂದು ಪತ್ರಿಕೆಗಳಿಗೆ ಹೇಳಿಕೆ ನೀಡಬೇಕಾದ ಅತ್ಯಂತ ಮುಜುಗರದ ಸ್ಥಿತಿಗೆ ತಂದೊಡ್ಡಲಾಗಿದೆ. 

ರಾಜ್ಯದಲ್ಲಿ ಸುಮಾರು ಐದೂವರೆ ದಶಕಗಳಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ, ಬಹುಸಂಖ್ಯಾತ ಲಿಂಗಾಯತ ಸಮುದಾಯವನ್ನು ಬಿಜೆಪಿಯತ್ತ ಸೆಳೆದ, ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಮೊದಲ ಬಾರಿಗೆ ಅಧಿಕಾರಕ್ಕೆ ತಂದ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಯಡಿಯೂರಪ್ಪನವರನ್ನು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ಪಿಆರ್‌ಓ ಮಟ್ಟಕ್ಕೆ ಇಳಿಸಲಾಯಿತೆ? ಜೆಡಿಎಸ್‌ನ ಕುಮಾರಸ್ವಾಮಿಯವರಿಂದ ಆದ ಮೋಸವನ್ನೂ ಮರೆತು, ದಿಲ್ಲಿಯ ದೊರೆಗಳಿಂದ ಆದ ಅವಮಾನವನ್ನೂ ಸಹಿಸಿಕೊಂಡು ಸುಮ್ಮನಿದ್ದಾರೆಂದರೆ, ಯಡಿಯೂರಪ್ಪನವರು ದಾಳಿಗೆ ಹೆದರಿದರೆ? ಪುತ್ರರ ರಾಜಕೀಯ ಭವಿಷ್ಯಕ್ಕಾಗಿ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆಯೇ? ಈ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ರಾಜ್ಯ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಮೈತ್ರಿಯಿಂದ ಮುನಿಸಿಕೊಂಡಿರುವ ರೇಣುಕಾಚಾರ್ಯ, ಸೋಮಣ್ಣ, ಮಾಧುಸ್ವಾಮಿಯಂತಹ ನಾಯಕರು ಪಕ್ಷದ ವಿರುದ್ಧ ಬಹಿರಂಗವಾಗಿಯೇ ಸೆಟೆದು ನಿಂತಿದ್ದಾರೆ. ತಾಕತ್ತು-ದಮ್ಮು ಇದ್ದರೆ ನಮ್ಮ ಮೇಲೆ ಕ್ರಮ ಕೈಗೊಳ್ಳಲಿ ಎಂದಿದ್ದಾರೆ. ಮಾಜಿ ಶಾಸಕರಾದ ಎ.ಟಿ ರಾಮಸ್ವಾಮಿ, ಪ್ರೀತಮ್ ಗೌಡ ಜೆಡಿಎಸ್‌ನೊಂದಿಗೆ ಕೈ ಕುಲುಕುವುದಕ್ಕಿಂತ ರಾಜಕೀಯ ಸನ್ಯಾಸತ್ವವೇ ವಾಸಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಚುನಾವಣೆ ಫಲಿತಾಂಶದ ಬಳಿಕ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ.

ಆದರೆ ಅಸಮಾಧಾನಿತರನ್ನು ಕರೆದು ಮಾತನಾಡಿಸುವ, ಸಂತೈಸುವ, ಸಂಭಾಳಿಸುವ ನಾಯಕರೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಲದೆಂದು, ʻಬಿಜೆಪಿ ತೊರೆಯುವರೆಲ್ಲಾ ವೇಸ್ಟ್ ಬಾಡಿಗಳುʼ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ನಿಂದನಾತ್ಮಕ ಮಾತುಗಳು ಪಕ್ಷವನ್ನು ಪಾತಾಳದಲ್ಲಿ ಪವಡಿಸುವಂತೆ ಮಾಡುತ್ತಿದೆ.

ದುರದೃಷ್ಟಕರ ಸಂಗತಿ ಎಂದರೆ, ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿ, ಕಣ್ಣೀರಾಕಿಸಿ, ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ಸಂಘ ಪರಿವಾರದ ‘ಪುರುಷೋತ್ತಮ’ರು, ಅಧಿಕಾರವಿರುವಾಗ ಆಟ ಆಡಿ ಈಗ ಕಾಣದಂತೆ ಮಾಯವಾಗಿದ್ದಾರೆ. ಸಂಘಿಗಳ ಸಂಗ ಮಾಡಿದ ಸಿಟಿ ರವಿ, ಅಶ್ವತ್ಥನಾರಾಯಣ, ಪ್ರತಾಪ್ ಸಿಂಹ ಮಂಗಗಳಾಗಿದ್ದಾರೆ. ಅಧಿಕಾರದಲ್ಲಿದ್ದಾಗ ಬಿಜೆಪಿ-ಮೋದಿ ಭಜನೆ ಮಾಡುತ್ತ ಪೊಗದಸ್ತಾಗಿ ತಿಂದುಂಡ ಪತ್ರಕರ್ತರು, ಪಕ್ಷದ ಹೀನಾಯ ಸ್ಥಿತಿ ಕುರಿತು ಬರೆಯದೆ ಜನತೆಗೆ ಮೋಸ ಮಾಡುತ್ತಿದ್ದಾರೆ.

ಇಷ್ಟಾದರೂ, ದಿಲ್ಲಿ ಮಟ್ಟದಲ್ಲಾದ ಮೈತ್ರಿಯನ್ನು ಸಮರ್ಥಿಸಿಕೊಳ್ಳುವ, ಆಗಿದ್ದು ಆಗಿಹೋಯಿತು ಎಂದು ತಮ್ಮನ್ನು ತಾವೇ ಸಂತೈಸಿಕೊಳ್ಳುವ ಎಂಬತ್ತರ ಪ್ರಾಯದ ಬಿ.ಎಸ್ ಯಡಿಯೂರಪ್ಪ ನಾಯಕತ್ವ ವಹಿಸಿಕೊಳ್ಳಲು ಮುಂದೆ ಬಂದರೂ, ದಿಲ್ಲಿಯ ದೊರೆಗಳು ಕ್ಯಾರೇ ಅನ್ನುತ್ತಿಲ್ಲ. ಇಂತಹ ಬಿಜೆಪಿಯನ್ನು ತ್ಯಜಿಸಿ, ಸದ್ಯದ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಒಂದಾಗಲಿ ಎನ್ನುವುದು ಬಿಜೆಪಿ ಮತ್ತು ಜೆಡಿಎಸ್‌ನಲ್ಲಿರುವ ಕೆಲವು ಬುದ್ಧಿವಂತರ ಸಲಹೆ. ಹಾಗೇನಾದರೂ ಆದರೆ, ಅವರಿಬ್ಬರು ಒಂದಾಗಿ ಕರ್ನಾಟಕದಲ್ಲಿ ಮೂರನೇ ಶಕ್ತಿಗೆ ಚಾಲನೆ ಕೊಟ್ಟರೆ, ಬುರ್ನಾಸು ಬಿಜೆಪಿಗೆ ಬುದ್ಧಿ ಕಲಿಸಬಹುದಲ್ಲವೇ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬಿಜೆಪಿ ದ್ವೇಷ ರಾಜಕಾರಣವನ್ನು ಸದೆಬಡಿಯದಿದ್ದರೆ ಉಳಿಗಾಲವಿಲ್ಲ

ಭಾರತದ ರಾಜಕೀಯವು ಧಾರ್ಮಿಕ ದ್ವೇಷವನ್ನು ಆಳವಾಗಿ ಅಳವಡಿಸಿಕೊಳ್ಳುತ್ತಿದೆ. ಗುಜರಾತ್ ಮಾಡೆಲ್, ಅಮೃತಕಾಲ,...

ಈ ದಿನ ಸಂಪಾದಕೀಯ | ಧರ್ಮಸ್ಥಳ ಪ್ರಕರಣ; ಎಸ್‌ಐಟಿ ತನಿಖೆಯನ್ನು ಸರ್ಕಾರವೇ ಹಳ್ಳ ಹಿಡಿಸದಿರಲಿ

ಕಾಂಗ್ರೆಸ್‌ ಸರ್ಕಾರ ಈ ವಿಚಾರದಲ್ಲಿ ರಾಜಕೀಯ ಲೆಕ್ಕಾಚಾರ ಅಥವಾ ಓಲೈಕೆ ರಾಜಕಾರಣ...

ಈ ದಿನ ಸಂಪಾದಕೀಯ | ವಿರೋಧದ ನಡುವೆಯೂ ಕಾವೇರಿಗೆ ಕಾಂಗ್ರೆಸ್ಸಿಗರ ಮೊಂಡಾರತಿ

ಸಿದ್ದರಾಮಯ್ಯನವರ ಸರ್ಕಾರ ಕಾವೇರಿ ಆರತಿಯಂತಹ ಮೌಢ್ಯ ಬಿತ್ತುವ ಕಾರ್ಯಕ್ರಮಗಳಿಗೆ ತಡೆಯೊಡ್ಡಿ, ನಾಡಿನ...

ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು...

Download Eedina App Android / iOS

X