ಈ ದಿನ ಸಂಪಾದಕೀಯ | ದೇವನಹಳ್ಳಿ ಐತಿಹಾಸಿಕ ಗೆಲುವಿಗೆ ರೈತರು, ಪ್ರಗತಿಪರ ಸಂಘಟನೆಗಳು ಹಾಗೂ ಸಿದ್ದರಾಮಯ್ಯ ಕಾರಣ

Date:

Advertisements

ದೇವನಹಳ್ಳಿ ತಾಲೂಕಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಹಿಂಪಡೆಯುವ ಮೂಲಕ ಸಿದ್ದರಾಮಯ್ಯನವರು ದೊಡ್ಡ ನೈತಿಕ ಶಕ್ತಿಯನ್ನು ಮರಳಿ ಗಳಿಸಿಕೊಂಡಿದ್ದಾರೆ. ಈ ಗೆಲುವು ಒಂದು ರೀತಿಯಲ್ಲಿ ಚನ್ನರಾಯಪಟ್ಟಣ ಹೋಬಳಿಯ ರೈತರು ಮತ್ತು ಕರ್ನಾಟಕದ ಪ್ರಗತಿಪರ ಸಂಘಟನೆಗಳು ಅವರಿಗೆ ನೀಡಿದ ಕೊಡುಗೆಯೇ ಸರಿ.

ಸಿದ್ದರಾಮಯ್ಯನವರು ಪ್ರಾಯಶಃ ಕರ್ನಾಟಕದಲ್ಲಿ ಪಂಚೆ ಉಟ್ಟ ಕಟ್ಟಕಡೆಯ ಮುಖ್ಯಮಂತ್ರಿ. ರಾಜ್ಯದ ಈ ಹೊತ್ತಿನ ಅತ್ಯಂತ ಜನಪ್ರಿಯ ಮಾಸ್‌ ಲೀಡರ್ ಅವರೇ, ನಿಸ್ಸಂದೇಹವಾಗಿ. ಆದರೆ, ಈ ಸಲ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತರುವಾಯ, ಇವರು ಹಿಂದಿನ ಅವಧಿಯ ಅದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ ಎಂಬ ಅನಿಸಿಕೆ ನೆಲೆಯೂರತೊಡಗಿತ್ತು. ಅದಕ್ಕೆ ಹಲವು ಕಾರಣಗಳಿದ್ದವು. ಅದರಲ್ಲೂ ಸ್ವತಃ ಅವರ ಮೇಲೆಯೇ ‘ಮುಡಾ ಸೈಟುಗಳ ಹಗರಣ’ದ ಕರಿನೆರಳು ಬಿದ್ದಿತ್ತು. ಅಲ್ಲಿಯತನಕ ಶುಭ್ರವೆನಿಸಿದ್ದ ಅವರ ವರ್ಚಸ್ಸಿಗೆ ಭ್ರಷ್ಟಾಚಾರದ ಮಸಿ ಮೆತ್ತಿದಂತೆ ಗೋಚರಿಸತೊಡಗಿತ್ತು. ಆದರೂ, ಈ ಸೈಟುಗಳಿಗಾಗಿ ಅವರು ತಮ್ಮ ಅಧಿಕಾರದ ಪ್ರಭಾವ ಬೀರಿರಬಹುದು ಎಂದು ಅನಿಸಿರಲಿಲ್ಲ. ನಿಜಕ್ಕೂ ಅವರ ವ್ಯಕ್ತಿತ್ವಕ್ಕೆ ನೈತಿಕ ಘಾತವಾದದ್ದು ಆರ್.ಸಿ.ಬಿ.ಗೆಲುವಿನ ಸಂಭ್ರಮಾಚರಣೆಯಲ್ಲಿ ಘಟಿಸಿದ ಕಾಲ್ತುಳಿತದಲ್ಲಿ ಸಾವುಗಳು ಸಂಭವಿಸಿದಾಗ. ಆದೇ ಕಾಲಕ್ಕೆ ಬಿಜೆಪಿ ಸರ್ಕಾರಕ್ಕೂ ಕಾಂಗ್ರೆಸ್ ಸರ್ಕಾರಕ್ಕೂ ಭ್ರಷ್ಟಾಚಾರದಲ್ಲಿ ಅಂತಹ ದೊಡ್ಡ ವ್ಯತ್ಯಾಸವೇನಿಲ್ಲ ಎಂದು ಜನ ನೋಡಲಾರಂಭಿಸಿ ಬಹು ಕಾಲ ಉರುಳಿತ್ತು.

ಒಳಮೀಸಲಾತಿ ಮತ್ತು ಜಾತಿಗಣತಿ ಎರಡೂ ವಿಚಾರಗಳಲ್ಲಿ ವಿಪರೀತ ವಿಳಂಬ ಮತ್ತು ರಾಜ್ಯದಲ್ಲಿ ಹೂಂಕರಿಸುತ್ತಿರುವ  ಕೋಮುವಾದವನ್ನು ನಿಯಂತ್ರಿಸಲು ಯಾವ ಖಚಿತ ಮುನ್ನೋಟವುಳ್ಳ ನೀಲನಕ್ಷೆಯ ಅಭಾವ– ಇವೆಲ್ಲವೂ ಸಿದ್ದರಾಮಯ್ಯನವರ ಎರಡನೇ ಅವಧಿಯ ಗಂಭೀರ ಲೋಪಗಳಾಗಿ ಅಸಮಾಧಾನ ಹೆಚ್ಚಿಸಿದ್ದವು.

ಆದರೆ, ದೇವನಹಳ್ಳಿ ತಾಲೂಕಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಹಿಂಪಡೆಯುವ ಮೂಲಕ ಸಿದ್ದರಾಮಯ್ಯನವರು ದೊಡ್ಡ ನೈತಿಕ ಶಕ್ತಿಯನ್ನು ಮರಳಿ ಗಳಿಸಿಕೊಂಡಿದ್ದಾರೆ. ಈ ಗೆಲುವು ಒಂದು ರೀತಿಯಲ್ಲಿ ಚನ್ನರಾಯಪಟ್ಟಣ ಹೋಬಳಿಯ ರೈತರು ಮತ್ತು ಕರ್ನಾಟಕದ ಪ್ರಗತಿಪರ ಸಂಘಟನೆಗಳು ಅವರಿಗೆ ನೀಡಿದ ಕೊಡುಗೆಯೇ ಸರಿ. ಏಕೆಂದರೆ, ಕಳೆದ ಎರಡು ವರ್ಷಗಳಿಂದ ಸಿದ್ದರಾಮಯ್ಯನವರು ಈ ವಿಚಾರದಲ್ಲಿ ಸಕಾರಾತ್ಮಕ ತೀರ್ಮಾನವನ್ನು ತೆಗೆದುಕೊಂಡಿರಲಿಲ್ಲ. ಈ ಸಾರಿ ಹೋರಾಟದ ಇನ್ನೊಂದು ಮಜಲು ಆರಂಭವಾದಾಗಲೂ ಅವರು ಭೂಸ್ವಾಧೀನ ಕೈಬಿಡುವುದಕ್ಕೆ ಒಲವು ತೋರಿರಲಿಲ್ಲ. ಆದರೆ, ಹಂತಹಂತವಾಗಿ ಪಟ್ಟನ್ನು ಬಿಗಿಗೊಳಿಸುತ್ತಾ ಬಂದ ರೈತರು-ಹೋರಾಟಗಾರರು, ತಾವೂ ಗೆದ್ದರು; ಮುಖ್ಯಮಂತ್ರಿಗಳಿಗೂ ಈ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನೂ ತಂದುಕೊಟ್ಟರು.

ಸಿದ್ದರಾಮಯ್ಯನವರು ಸಮಾಜವಾದಿ ಆಶಯ, ಸೆಕ್ಯುಲರ್‌ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳ ಅಪ್ಪಟ ಪ್ರತಿಪಾದಕರು. ಆದರೆ ಈ ಪ್ರತಿಪಾದನೆಗೆ ಪಕ್ಷ ಮತ್ತು ಸರ್ಕಾರದ ಒಳಗಿನಿಂದ ಅವರಿಗೆ ಸಿಗುತ್ತಿರುವ ಬಲ-ಬೆಂಬಲ ಸಾಲದು. ಈ ಅತ್ಯಗತ್ಯ ಬೆಂಬಲ ಅವರಿಗೆ ಸಿಗುತ್ತಿರುವುದು ಕಾಂಗ್ರೆಸ್‌ ಪಕ್ಷಕ್ಕಿಂತ ಹೆಚ್ಚಾಗಿ, ರಾಜ್ಯದಲ್ಲಿನ ʼಸಮಾನ ಮನಸ್ಕʼ ಜನ ಮತ್ತು ಪ್ರಗತಿಪರ ಸಂಘಟನೆಗಳಿಂದ ಎಂಬ ಸತ್ಯವನ್ನು ದೇವನಹಳ್ಳಿ ಪ್ರಕರಣದ ಬೆಳವಣಿಗೆ ಸಾಬೀತು ಮಾಡಿ ತೋರಿಸಿದೆ.

ಕೆಐಎಡಿಬಿಗೆ ತಮ್ಮ ಜಮೀನು ಬಿಟ್ಟುಕೊಡುವುದಿಲ್ಲ ಎಂದು ಸಾವಿರಕ್ಕೂ ಹೆಚ್ಚು ದಿನಗಳ ಕಾಲ ಪಟ್ಟುಬಿಡದೇ ತಮ್ಮೂರಿನಲ್ಲೇ ಧರಣಿ ಕುಳಿತಿದ್ದರು ರೈತರು. ಆರಂಭದಿಂದಲೂ ಸಂಘಟನೆಗಳ ಬೆಂಬಲವನ್ನು ಪಡೆದುಕೊಂಡಿದ್ದರು. ಆದರೆ ಅದು ಬಹುತೇಕ ಸಾಂಕೇತಿಕವಾಗಿತ್ತು. ಎಡಪಂಥೀಯ ನಾಯಕ ದಿವಂಗತ ಕಾಂ.ಜಿ.ಸಿ.ಬಯ್ಯಾರೆಡ್ಡಿಯವರು ಸೇರಿದಂತೆ ಹಲವರು ನೆರವನ್ನು ನೀಡಿದ್ದರು. ಆದರೆ, ಕಳೆದ ಕೆಲವು ತಿಂಗಳುಗಳ ಕೆಳಗೆ ಅದು ಸುಸಂಘಟಿತ ಗಟ್ಟಿ ಬೆಂಬಲವಾಗಿ ಪರಿವರ್ತನೆಯಾಗಲು ಕಾರಣ, ಭೂಸ್ವಾಧೀನ ಮಾಡಿಕೊಂಡು ಸರ್ಕಾರ ಹೊರಡಿಸಿದ್ದ ಅಂತಿಮ ನೋಟಿಫಿಕೇಷನ್.‌ ಅಲ್ಲಿಂದಾಚೆಗೆ ʼದೇವನಹಳ್ಳಿ ಭೂ ಹೋರಾಟʼ ದೊಡ್ಡದಾಗಿ ಅನುರಣಿಸಿತು.

ಆದರೆ, ಈ ಹಂತದವರೆಗೆ ಸಾವಿರಕ್ಕೂ ಹೆಚ್ಚು ದಿನಗಳ ಕಾಲ ಹೋರಾಟದ ಬಿಸುಪನ್ನು ಕಾಪಿಟ್ಟುಕೊಂಡು ಬಂದಿದ್ದವರು ಸ್ಥಳೀಯ ರೈತರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶುರುವಾದ ಹೋರಾಟಕ್ಕೆ ಬೆಂಬಲ ನೀಡಿ ಬಂದ ಎಲ್ಲರನ್ನೂ ಮನಸಾರೆ ಬರಮಾಡಿಕೊಂಡರು. ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರೂ ಹೋರಾಟದ ಟೆಂಟೊಳಗೆ ಬಂದು ಆಡಿದ ಮಾತುಗಳನ್ನೂ ಕೇಳಿಸಿಕೊಂಡರು. ಸಿದ್ದರಾಮಯ್ಯ ಪುನಃ ಗೆದ್ದು ಮುಖ್ಯಮಂತ್ರಿಯಾದ ಮೇಲೆ ಮತ್ತೆ ಮತ್ತೆ ಅವರನ್ನು ಕಂಡು, ಅವರು ಟೆಂಟೊಳಗೆ ಆಡಿದ್ದ ಮಾತುಗಳನ್ನು ನೆನಪಿಸಿದರು. ಆದರೆ, ಅಷ್ಟು ಹೊತ್ತಿಗೆ, ʼವ್ಯವಸ್ಥೆʼ ವ್ಯವಸ್ಥಿತವಾಗಿ ಕೆಲಸ ಮಾಡಲು ಶುರು ಮಾಡಿತ್ತು. ಪರಿಣಾಮವಾಗಿ ಮುಖ್ಯಮಂತ್ರಿಯವರು ಸಭೆಗಳನ್ನು ನಡೆಸಿದರಾದರೂ, ಭೂಸ್ವಾಧೀನದ ನೋಟಿಫಿಕೇಷನ್‌ ಹಿಂತೆಗೆದುಕೊಳ್ಳಲಿಲ್ಲ.

ಚನ್ನರಾಯಪಟ್ಟಣದ ಹೋರಾಟ ಇಷ್ಟು ದೀರ್ಘವಾಗಿ ಉಳಿದುಕೊಂಡಿದ್ದು ಹೇಗೆಂಬುದರ ಹಿಂದೆ ಸ್ವಾರಸ್ಯಕರ ಪಾಠಗಳಿವೆ. ಹೋರಾಟವನ್ನು ಅವರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಸಲಿಲ್ಲ; ದೇವನಹಳ್ಳಿ ತಹಸೀಲ್ದಾರ್‌ ಕಚೇರಿಯ ಮುಂದೆಯೂ ನಡೆಸಲಿಲ್ಲ. ಬದಲಿಗೆ ತಮ್ಮೂರಿನಲ್ಲೇ ಟೆಂಟು ಹಾಕಿದರು. ಅಮೆರಿಕದ Occupy wall street ನಂತರ ಜಗತ್ತಿನ ಎಷ್ಟೋ ಕಡೆ ಇಂತಹದೊಂದು ಮಾದರಿ ಶುರುವಾಗಿದೆ. ಅದಕ್ಕೆ ಮುಂಚೆಯೂ ಎಷ್ಟೋ ಕಡೆ ನಡೆದಿದೆ. ಆದರೆ Occupy ಒಂದು ವಿದ್ಯಮಾನವಾಗಿ ಹಲವೆಡೆ ಪಸರಿಸಿದ್ದರಿಂದ, ವಾಲ್ ಸ್ಟ್ರೀಟ್ ಹೆಸರು ಸೇರಿಕೊಂಡಿದೆ ಅಷ್ಟೇ. ಅರಬ್‌ ದೇಶಗಳನ್ನೂ ಒಳಗೊಂಡಂತೆ ಎಷ್ಟೋ ಕಡೆ ಜನರು ಭಾರೀ ದೊಡ್ಡ ಸಂಖ್ಯೆಯಲ್ಲಿ ಒಂದೆಡೆ ಸೇರಿ ದೀರ್ಘಕಾಲ ನಡೆಸಿರುವ ಹೋರಾಟದ ಪ್ರಸಿದ್ಧ ಮಾದರಿ ಅದು.

ದೆಹಲಿಯ ʼಬಾರ್ಡರುಗಳಲ್ಲಿʼ ರೈತರು 14 ತಿಂಗಳು ನಡೆಸಿದ ಚಳವಳಿಯೂ ಅದೇ ಮಾದರಿಯದು. ಚಳವಳಿಯ ಹೊಸ ರೂಪವಾಗಿ ಚಾಲ್ತಿಗೆ ಬಂದುಬಿಟ್ಟಿದೆ. ಸಿಎಎ, ಎನ್‌ ಆರ್‌ ಸಿ ವಿರುದ್ಧ ದೆಹಲಿಯ ಶಾಹೀನ್‌ ಬಾಗ್‌ ನಲ್ಲಿ ಮುಸ್ಲಿಂ ಮಹಿಳೆಯರು ತಮ್ಮ ಮನೆ ಮಗ್ಗುಲಿನಲ್ಲೇ ಅಂತಹದೊಂದು ಹೋರಾಟದ ಕಣವನ್ನು ತೆರೆದರು. ಅದೇ ಸ್ಫೂರ್ತಿಯಲ್ಲಿ ದೇಶದ ಹಲವೆಡೆ ʼಶಾಹೀನ್‌ ಬಾಗ್‌ಗಳುʼ ಹುಟ್ಟಿಕೊಂಡಿದ್ದವು. ದೆಹಲಿಯ ಬಾರ್ಡರಿನಂತೆ, ಶಹೀನ್‌ ಬಾಗಿನಂತೆ ಚನ್ನರಾಯಪಟ್ಟಣವೂ ಒಂದು ‘Occupy’ ಮಾದರಿಯೆನಿಸಿತು. ಮನೆ ಪಕ್ಕದಲ್ಲೇ ಚಳವಳಿಯನ್ನು ಜೀವಂತವಿಡುವ ತನ್ನದೇ ಮಾದರಿಯನ್ನು ಕಟ್ಟಿಕೊಂಡಿತು. ಮನೆ ಮಗ್ಗುಲಿನಲ್ಲಿದ್ದ ಶೋಷಿತ ಸಮುದಾಯದ ಯುವಕನನ್ನು ನಾಯಕನಾಗಿ ಒಪ್ಪಿಕೊಂಡಿತು. ಸಿದ್ದರಾಮಯ್ಯನವರಿಂದ ಒಂದೂ ಮುಕ್ಕಾಲು ವರ್ಷ ನಿರಾಸೆಯಾದರೂ, ತೀರಾ ಹಗ್ಗ ತುಂಡಾಗುವಷ್ಟು ಅವರ ಸಂಬಂಧ ಹರಿದುಕೊಳ್ಳಲಿಲ್ಲ. ಅದೇ ಮಾದರಿಯು ಕರ್ನಾಟಕದ ನಾನಾ ಸಂಘಟನೆಗಳ ಕೇಡರುಗಳು ಮತ್ತು ವಿವೇಕ ಜೊತೆಯಾದಾಗಲೂ ಮುಂದುವರೆಯಿತು. ಅಂತಿಮ ನೋಟಿಫಿಕೇಷನ್‌ ಹೊರಟ ನಂತರ ಕೂಡ ದೇವನಹಳ್ಳಿ ತಾಲೂಕಾಫೀಸಿನ ಮುಂದೆ ನೆರೆದ ರೈತರು ಮತ್ತು ಜೊತೆಯಾದ ಸಂಘಟನೆಗಳ ಕೇಡರುಗಳ ಮೇಲೆ ಲಾಠಿ ಬೀಸಿ, ಎಳೆದುಕೊಂಡು ಹೋದಾಗಲೂ ಈ ವಿವೇಕ ಆವಿಯಾಗಲಿಲ್ಲ. ಆದರೆ, ಲಾಠಿ ಬೀಸಿದವರು ಹೋರಾಟದಲ್ಲಿದ್ದವರ ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದರು! ʼಸಿದ್ದರಾಮಯ್ಯನವರ ಮೇಲೆ ಪೂರ್ಣ ವಿಶ್ವಾಸ ಇನ್ನೂ ಹೋಗಿಲ್ಲʼ ಎಂದು ಹೇಳುತ್ತಲೇ ಬೆಳೆದ ಜಂಟಿ ಹೋರಾಟ ಇದಾಗಿತ್ತು; ಐಕ್ಯ ಹೋರಾಟ. ಭೂಮಿ ಉಳಿಸಿಕೊಳ್ಳುವ ರೈತರದ್ದು ಮತ್ತು ಹೋರಾಟಗಾರರದ್ದು. ವಿವಿಧ ಧಾರೆಗಳ ಸಂಘಟನೆಗಳ ಮುಂಚೂಣಿ ಕಾರ್ಯಕರ್ತರದ್ದು. ಎಲ್ಲರೂ ಸೇರಿ, ಹಲವು ಬಗೆಯ ಜನರನ್ನು ಒಳಗೊಂಡು ನಡೆಸಿದ ಐಕ್ಯ ಹೋರಾಟ. ಹಲವು ರೀತಿಯ ವಿವೇಕವನ್ನು ಒಟ್ಟಿಗೆ ಬೆಸೆದದ್ದು.

ಈ ಮಹತ್ವದ ಕಾರಣಗಳಿಗಾಗಿಯೇ ಇದು ಸಿದ್ದರಾಮಯ್ಯನವರನ್ನೂ ತಲುಪಿತು ಮತ್ತು ಕಲಕಿತು. ತಮ್ಮನ್ನು ಆವರಿಸಿದ್ದ  ʼವ್ಯವಸ್ಥೆʼಯನ್ನು ದಾಟಿ, ‘ಈ ಜಮೀನುಗಳು ಉಳಿಯಲಿ’ ಎಂದು ಅವರು ಹೇಳುವಂತಾಗಿದ್ದು ಇವೆಲ್ಲಾ ಕಾರಣಗಳಿಂದ. ಎಷ್ಟೇ ಉದಾತ್ತ ಆಶಯಗಳು ಎದೆಯಲ್ಲಿದ್ದರೂ, ರಾಜ್ಯ ದೊಡ್ಡ ಸರ್ಕಾರಿ ಸೀಟಿನ ಮೇಲೆ ಕುಳಿತ ಮರುಘಳಿಗೆಯಿಂದ ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸುಲಭವಲ್ಲ. ಬೀದಿಯ ಮೇಲೆ ಅದೇ ಬೆಂಕಿಯನ್ನು ಎದೆಯಲ್ಲಿ ಹೊತ್ತವರ ಒತ್ತಾಸೆಯೂ ಅದಕ್ಕೆ ಅನುವಾಗಿ ಒದಗಿ ಬರಬೇಕಾಗುತ್ತದೆ. ಅದೂ ಕೂಡಿ ಬಂದಿದ್ದರಿಂದ ಸಿಕ್ಕ ಗೆಲುವು ಇದು. ಸಿದ್ದರಾಮಯ್ಯನವರ ಪಕ್ಷದ ಅತಿ ದೊಡ್ಡ ನಾಯಕರ ಪರೋಕ್ಷ ನೆರವು ಕೂಡ, ಈ ನಿರ್ಧಾರದ ಕೈ ಹಿಡಿದು ಬಲಪಡಿಸಿತು. ಮೇಲ್ನೋಟಕ್ಕೆ ಕಂಡುಬರದ ತೆರೆಯ ಹಿಂದೆ ಕೆಲಸ ಮಾಡಿದ ಹಲವರ ಪ್ರಯತ್ನವೂ ಜೊತೆಯಾಯಿತು. ಎಲ್ಲಕ್ಕೂ ಮೂಲ ಎನಿಸಿದ್ದು ಸಾವಿರಕ್ಕೂ ಹೆಚ್ಚು ದಿನಗಳ ತಮ್ಮೂರಿನಲ್ಲೇ ಪೊರೆದುಕೊಂಡು ಬಂದ ಜಾತ್ಯತೀತ ಹೋರಾಟ.

ಇದನ್ನೂ ಓದಿ ಅಡಕತ್ತರಿಯಲ್ಲಿದ್ದ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಂಡಿದ್ದು ಹೇಗೆ?

ಹಾಗೆ ನೋಡಿದರೆ, ಇದು ʼಕೇವಲʼ 1777 ಎಕರೆಗಳ ʼಪುಟ್ಟʼ ಹೋರಾಟ. ಆದರೆ, ಈ ಪುಟ್ಟ ಹೋರಾಟಕ್ಕೆ ಇಷ್ಟೊಂದು ಮಹತ್ವ ಬರಲು ಕಾರಣವಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರವನ್ನು ಈ ಪರಿ ನಿದ್ದೆಗೆಡಿಸಿದ ಚಳವಳಿಗಳು ಅಷ್ಟಾಗಿ ನಡೆದಿಲ್ಲ. ತಾವೇ ಬೆಂಬಲಿಸಿದ್ದ ಪಕ್ಷವೊಂದರ ಸರ್ಕಾರವನ್ನು ಮಣಿಸಿದ ಹಿರಿಮೆ ರೈತರದ್ದು ಮತ್ತು ರೈತಪರ ಹೋರಾಟಗಾರರದ್ದು; ಅದರ ನೈತಿಕ ಶಕ್ತಿಯನ್ನು ಅರಿತು ಮಣಿದ ಹಿರಿಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು.

ಈ ಆಶಾದಾಯಕ ಬೆಳವಣಿಗೆಯು ರಾಜ್ಯದ ಜನಪರ ಹೋರಾಟಗಳಿಗೆ ದೊಡ್ಡ ತಿರುವು ಆಗದೆಯೂ ಹೋಗಬಹುದು. ಏಕೆಂದರೆ, ಇಂದು ಸಾಗಿರುವ ʼಅಭಿವೃದ್ಧಿ ಮಾದರಿʼ ಮತ್ತು ʼಆಡಳಿತದ ಮಾದರಿʼಯ ಬೀಡುಬೀಸು ಅಂಥದ್ದು. ಅದಕ್ಕೆ ಇನ್ನೂ ಸಂಘಟಿತ, ಸದಾಶಯದ, ಹಲವು ಸ್ತರಗಳ ಜನರು ಒಟ್ಟು ಸೇರಿ ನಡೆಸುವ ರಾಜಕೀಯ ಪ್ರಕ್ರಿಯೆಯ ಅಗತ್ಯವಿದೆ. ಅಂಥದ್ದೊಂದು ಪ್ರಕ್ರಿಯೆ ಮೊಳೆಕೆಯೊಡೆಯುತ್ತಿರುವ ಸಾಧ್ಯತೆಯನ್ನು ಈ ಗೆಲುವು ತೋರಿಸಿರಬಹುದು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು...

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

Download Eedina App Android / iOS

X