ಈ ದಿನ ಸಂಪಾದಕೀಯ | ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ; ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಏನು ಮಾಡುತ್ತಿವೆ?

Date:

Advertisements
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇದ್ದೂ ಇಷ್ಟೊಂದು ಪ್ರಮಾಣದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಬಾಲ್ಯವಿವಾಹಗಳಾಗುತ್ತಿವೆ, ಬಾಲಕಿಯರು ಗರ್ಭಿಣಿಯರಾಗುತ್ತಿದ್ದಾರೆ ಎಂದರೆ ಏನರ್ಥ? ಹಾಗಿದ್ದರೆ ಅವರೆಲ್ಲ ಏನು ರಕ್ಷಣೆ ಮಾಡುತ್ತಿದ್ದಾರೆ?

 

ವರ್ಷಾಂತ್ಯದಲ್ಲಿ ಕೋಲಾರ ಜಿಲ್ಲೆಯಿಂದ ಬಂದ ಬಾಲ ಗರ್ಭಿಣಿಯರ ಕುರಿತ ವರದಿ ಆಘಾತ ನೀಡುವಂತಿದೆ. ನಿಜಕ್ಕೂ ಸರ್ಕಾರ, ಅಧಿಕಾರಿಗಳು ಮತ್ತು ಒಟ್ಟು ಸಮಾಜ ತಲೆ ತಗ್ಗಿಸುವ ವಿಚಾರ. ಇದು ಕೋಲಾರ ಜಿಲ್ಲೆಯೊಂದರ ಕತೆಯಲ್ಲ. ರಾಜ್ಯದಲ್ಲಿ ವರದಿಯಾಗದ ಅದೆಷ್ಟೋ ಪ್ರಕರಣಗಳು ಇರಬಹುದು. ಒಂದೆಡೆ ಅವ್ಯಾಹತವಾಗಿ ನಡೆಯುತ್ತಿರುವ ಹೆಣ್ಣು ಭ್ರೂಣಹತ್ಯೆ, ಇನ್ನೊಂದೆಡೆ ಬಾಲ ಅಮ್ಮಂದಿರು, ನಿಜಕ್ಕೂ ಈ ಸಮಾಜ ಅದೆಷ್ಟು ಕ್ರೂರ! ಧರ್ಮ, ದೇವರು, ಜಾತಿ ಎಂದು ಹೊಡೆದಾಡುತ್ತಿರುವ ಸಮಯದಲ್ಲಿ ಸದ್ದಿಲ್ಲದ ಮುಗ್ಧ ಹೆಣ್ಣಮಕ್ಕಳ ಸಹಜ ಬಾಲ್ಯದ ಸಂತೋಷ, ಬಯಕೆಗಳನ್ನು ಗರ್ಭದ ಕಸದೊಂದಿಗೆ ಕಿತ್ತೆಸೆಯಲಾಗುತ್ತಿದೆ.

ಕೋಲಾರ ಜಿಲ್ಲೆಯಲ್ಲಿ ಎಂಟು ತಿಂಗಳಲ್ಲಿ ಅಂದರೆ 2023ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ 98 ಅಪ್ರಾಪ್ತ ಬಾಲಕಿಯರು ಗರ್ಭ ಧರಿಸಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ ಕೆಲವರು ಪಕ್ಕದ ರಾಜ್ಯಗಳ ವಲಸೆ ಕೂಲಿ ಕಾರ್ಮಿಕರ ಮಕ್ಕಳೂ ಸೇರಿದ್ದಾರೆ. ಕೆಲವರ ವಿಳಾಸ ಪತ್ತೆಯಾಗಿಲ್ಲವಂತೆ. 2021-22 ರಲ್ಲಿ 123 ಪ್ರಕರಣಗಳು ಈ ಜಿಲ್ಲೆಯಲ್ಲಿ ದಾಖಲಾಗಿದ್ದವು. ಮೂರು ವರ್ಷಗಳಲ್ಲಿ 227 ಬಾಲ್ಯ ವಿವಾಹಗಳ ದೂರು ದಾಖಲಾಗಿದ್ದವು. ಅದರಲ್ಲಿ 215 ವಿವಾಹಗಳನ್ನು ತಡೆಯಲಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಈ ವರದಿಯೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. ಆರೋಗ್ಯ ಇಲಾಖೆಯ ಆರ್‌ಸಿಎಚ್‌ (ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ) ಪೋರ್ಟಲ್‌ನಲ್ಲಿ ಈ ಎಲ್ಲ ಮಾಹಿತಿ ಸಿಗುತ್ತದೆ. ತಾಯಿ ಕಾರ್ಡ್‌ ಪಡೆಯಲು ಬಂದಾಗ ಮಕ್ಕಳ ವಯಸ್ಸು ಗೊತ್ತಾಗಿದೆ. ಆದರೂ ಪತ್ರಿಕೆಯೊಂದರಲ್ಲಿ ವರದಿ ಬಂದ ನಂತರ ತರಾತುರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪೊಲೀಸರು ಅಖಾಡಕ್ಕಿಳಿದಿದ್ದಾರೆ. ಮೂರು ದಿನಗಳಲ್ಲಿ 39 ಎಫ್‌ಐಆರ್‌ ದಾಖಲಿಸಿದ್ದಾರಂತೆ! ಅದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್‌ 27ರಂದು ಕೋಲಾರ ಜಿಲ್ಲೆಯ ಪ್ರಗತಿ ಪರಿಶೀಲನೆ ವೇಳೆ ಬಾಲ ಗರ್ಭಿಣಿಯರ ಕುರಿತು ಪತ್ರಿಕೆಯಲ್ಲಿ ಬಂದ ವರದಿಯನ್ನು ಪ್ರಸ್ತಾಪಿಸಿದ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇದ್ದೂ ಇಷ್ಟೊಂದು ಪ್ರಮಾಣದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಬಾಲ್ಯವಿವಾಹಗಳಾಗುತ್ತಿವೆ ಎಂದರೆ ಏನರ್ಥ? ಅವರೆಲ್ಲ ಏನು ರಕ್ಷಣೆ ಮಾಡುತ್ತಿದ್ದಾರೆ? ಬಾಲ್ಯವಿವಾಹಗಳು ಆಗದಂತೆ ತಡೆಯುವ ನಿಟ್ಟಿನಲ್ಲಿ ಬಡ, ಕೂಲಿಕಾರ್ಮಿಕ ಕುಟುಂಬಗಳಲ್ಲಿ ಜಾಗೃತಿ ಮೂಡಿಸುವ ಅಥವಾ ಕಾನೂನಿನಡಿಯಲ್ಲಿ ಯಾವ ಶಿಕ್ಷೆ ಇದೆ ಎಂಬ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆಯೇ? ಹೆಣ್ಣುಮಕ್ಕಳ ಶಿಕ್ಷಣದ ಅಗತ್ಯ, ಆರೋಗ್ಯ ಕಾಳಜಿ ಕುರಿತು ಸಮುದಾಯಗಳಲ್ಲಿ ಮನವರಿಕೆ ಮಾಡುವುದು ಈ ಇಲಾಖೆಗಳ ಕೆಲಸ ಅಲ್ಲವೇ? ವರ್ಷದಲ್ಲಿ ಎಷ್ಟು ಬಾಲ್ಯವಿವಾಹದ ದೂರು ಬಂದವು, ಎಷ್ಟನ್ನು ತಡೆದೆವು, ಎಷ್ಟು ಎಫ್‌ಐಆರ್‌ ದಾಖಲಿಸಲಾಯಿತು ಎಂದು ಪುಸ್ತಕದಲ್ಲಿ ಬರೆದಿಡುವುದಕ್ಕೆ ಸರ್ಕಾರ ಜನರ ತೆರಿಗೆ ಹಣವನ್ನು ಖರ್ಚು ಮಾಡಿ ಕಚೇರಿ, ಸಿಬ್ಬಂದಿ, ವೇತನ, ಎಂದೆಲ್ಲ ಲಕ್ಷಾಂತರ ರೂಪಾಯಿ ವ್ಯಯಿಸುವ ಅಗತ್ಯವಿದೆಯೇ?

ಭ್ರಷ್ಟ ಜನರೇ ನಮ್ಮ ಜನಪ್ರತಿನಿಧಿಗಳು. ಅವರೆಲ್ಲ ಒಟ್ಟಾಗಿ ಸರ್ಕಾರ ನಡೆಸುತ್ತಾರೆ, ಕಾನೂನು ರೂಪಿಸುತ್ತಾರೆ, ಅಧಿಕಾರಿಗಳನ್ನು ನೇಮಿಸುತ್ತಾರೆ. ಚುನಾವಣೆಗೆ ಖರ್ಚು ಮಾಡಿದ ಹಣ ಅಧಿಕಾರ ಸಿಕ್ಕ ತಕ್ಷಣ ವಾಪಸ್‌ ಪಡೆಯುವುದು ಹೇಗೆ ಎಂಬಲ್ಲಿಗೆ ಅವರ ಜವಾಬ್ದಾರಿ ಸೀಮಿತ. ಈ ಎಲ್ಲ ಅವ್ಯವಸ್ಥೆಗಳ ಬಲಿಪಶುಗಳು ಬಡವರು, ಹಿಂದುಳಿದ ಸಮುದಾಯಗಳು, ಅದರಲ್ಲೂ ಹೆಣ್ಣುಮಕ್ಕಳು.

ಈ ದೇಶದಲ್ಲಿ ಲಾಗಾಯ್ತಿನಿಂದ ಹೆಣ್ಣುಮಕ್ಕಳೆಂದರೆ ಹೆತ್ತವರಿಗೂ, ಸಮಾಜಕ್ಕೂ ಅದೊಂದು ಭಾರ, ಹೊರೆ ಎಂಬ ಭಾವನೆಯಿದೆ. ಬಡತನ ಒಂದು ಕಾರಣವಾದರೆ, ಮನೆ ಮಗಳೆಂದರೆ ವಯಸ್ಸಿಗೆ ಬರುತ್ತಿದ್ದಂತೆ ಮದುವೆ ಮಾಡಿ ಹೊರಗೆ ಹಾಕಬೇಕು. ತಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ಹೊರಿಸಿ ತಾವು ನಿರಾಳರಾಗಬೇಕು ಎಂಬ ದುಷ್ಟ ಆಲೋಚನೆ. ಹೆಣ್ಣು ಮಕ್ಕಳಿಗೆ ಬೇಗ ಮದುವೆಯಾಗಬೇಕು, ಮಕ್ಕಳನ್ನು ಹೆರಬೇಕು ಎಂಬ ಧೋರಣೆ ಈಗಲೂ ಇದೆ. ಲೈಂಗಿಕ ಕ್ರಿಯೆ, ಗರ್ಭಧಾರಣೆ ಅಂದ್ರೇನು, ಯಾವಾಗ ಹೆರಬೇಕು, ಅದಕ್ಕೆದೇಹ ತಯಾರಾಗಿದೆಯೇ ಎಂಬ ಅರಿವು ಬರುವ ಮುನ್ನವೇ ಗಂಡಿನ ಕೈಗೆ ಕೊಟ್ಟುಬಿಡುವುದು, ನಂತರ ಪ್ರಕೃತಿ ನಿಯಮದಂತೆ ಗರ್ಭಧಾರಣೆ, ಮಕ್ಕಳನ್ನು ಹೆತ್ತು ಸಾಕುವುದು… ಇಷ್ಟಕ್ಕೇ ಮುಗಿದುಬಿಡುತ್ತದೆ.

ಇದನ್ನೂ ಓದಿ ಈ ದಿನ ಸಂಪಾದಕೀಯ | ಹಿಜಾಬ್ ಹಿಂಜರಿಕೆ; ರಣತಂತ್ರವೋ, ಇಲ್ಲವೇ ಪಲಾಯನ ಮಂತ್ರವೇ?

ಆಸ್ಪತ್ರೆಗಳಲ್ಲಿಯೇ ಹೆಣ್ಣುಭ್ರೂಣ ಹತ್ಯೆ ವ್ಯಾಪಕವಾಗಿ ನಡೆಯುತ್ತಿರುವುದು. ಗರ್ಭಪಾತ ಮಾಡುವುದನ್ನೇ ದಂಧೆ ಮಾಡಿಕೊಂಡ ಕಿರಾತಕರು ನಡೆಸುತ್ತಿರುವ ಹೆಣ್ಣು ಭ್ರೂಣಗಳ ಮಾರಣಹೋಮ ಒಂದೆಡೆಯಾದರೆ, ಹೆತ್ತ ನಂತರ ಮಗು ಹೆಣ್ಣಾದರೆ ತಿಪ್ಪೆಗೆಸೆಯುವ ಅಮಾನವೀಯ ಕೃತ್ಯಕ್ಕೆ ಕಡಿವಾಣ ಹಾಕುವವರು ಯಾರು? ಭ್ರೂಣ ಲಿಂಗಪತ್ತೆ ವಿರುದ್ಧ ಕಠಿಣ ಕಾನೂನು ಇದೆ. ಬಾಲ್ಯ ವಿವಾಹ ಕೂಡ ಶಿಕ್ಷಾರ್ಹ ಅಪರಾಧ, ಪೋಕ್ಸೋ ಅಡಿ ಪ್ರಕರಣ ದಾಖಲಾದರೆ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬುದು ಕಾನೂನು ಪುಸ್ತಕದಲ್ಲಿ ಇವೆಯಷ್ಟೇ. ಅವೆಲ್ಲ ಕಾರ್ಯರೂಪಕ್ಕೆ ಬರುವವರೆಗೆ ಈ ತರಹದ ವರದಿಗಳು ಬರುತ್ತಲೇ ಇರುತ್ತವೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು...

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

Download Eedina App Android / iOS

X