ದೆಹಲಿ ಕೋಮುಗಲಭೆಗಳ ತರುವಾಯ ಪೊಲೀಸರು 2,500ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು. ನಾಲ್ಕು ವರ್ಷಗಳ ‘ಹಿಯರಿಂಗ್’ ಗಳಲ್ಲಿ ನ್ಯಾಯಾಲಯಗಳು 2000ಕ್ಕೂ ಹೆಚ್ಚು ಮಂದಿ ಆರೋಪಿಗಳಿಗೆ ಜಾಮೀನು ನೀಡಿವೆ. ಬೇಕಾಬಿಟ್ಟಿ ಬೇಜವಾಬ್ದಾರಿ ತನಿಖೆಗಾಗಿ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿವೆ.
ವರ್ಷಗಳ ಹಿಂದೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಹೋರಾಟಗಾರರೂ ಆಗಿದ್ದ ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಮತ್ತು ಇತರೆ ಏಳು ಮಂದಿಯ ಜೈಲುವಾಸಕ್ಕೆ ಅಂತ್ಯವಿಲ್ಲವಾಗಿದೆ. ನ್ಯಾಯದೇವತೆಯ ಬಾಗಿಲುಗಳು- ಹೆಬ್ಬಾಗಿಲುಗಳು ಇವರ ಪಾಲಿಗೆ ಬಿಗಿಯಾಗಿ ಮುಚ್ಚಿ ಹೋಗಿವೆ.
ಇವರಿಗೆ ಜಾಮೀನು ಮಂಜೂರು ಮಾಡಲು ದೆಹಲಿ ಹೈಕೋರ್ಟ್ ಪುನಃ ನಿರಾಕರಿಸಿದೆ. ವಿಚಾರಣೆಯೂ ಇಲ್ಲದೆ, ಜಾಮೀನನ್ನೂ ನೀಡದೆ ಇವರನ್ನು ಜೈಲಿನಲ್ಲಿ ಕೊಳೆ ಹಾಕಿರುವುದು ಎಣೆಯಿಲ್ಲದ ಕ್ರೌರ್ಯ. ಇದೇ ಕಾರಣಕ್ಕಾಗಿ ಖಂಡನೀಯವೂ ಹೌದು.
ಈ ಜಾಮೀನು ನಿರಾಕರಣೆಯು ಅನ್ಯಾಯದಿಂದ ಕೂಡಿದೆ. ಭಾಷಣದ ಕಾರಣಕ್ಕಾಗಿ ಯಾರನ್ನೇ ಆಗಲಿ, ಇಷ್ಟು ದೀರ್ಘ ಕಾಲ ವಿಚಾರಣೆ ಅಥವಾ ಜಾಮೀನು ಇಲ್ಲದೆ ಬಂಧನದಲ್ಲಿ ಇರಿಸುವುದು ತರವಲ್ಲ. ಸರ್ಕಾರದ ಬಳಿ ಇವರ ವಿರುದ್ಧ ನಿಜಕ್ಕೂ ಸಾಕ್ಷ್ಯಾಧಾರಗಳೇನಾದರೂ ಇದ್ದ ಪಕ್ಷದಲ್ಲಿ ತಡವಿಲ್ಲದೆ ವಿಚಾರಣೆಯನ್ನು ಆರಂಭಿಸಬೇಕಿತ್ತು.
ಉಮರ್ ಖಾಲಿದ್ ಅವರನ್ನು 2020ರ ಸೆಪ್ಟಂಬರಿನಲ್ಲಿ ಬಂಧಿಸಲಾಗಿತ್ತು. ಇದೇ ಸೆಪ್ಟಂಬರ್ 13ಕ್ಕೆ ಅವರ ಬಂಧನವಾಗಿ ಐದು ವರ್ಷಗಳು ಉರುಳಿವೆ. ಕಳೆದ ವರ್ಷ ಕೇವಲ ಏಳು ದಿನಗಳ ಮಧ್ಯಂತರ ಜಾಮೀನು ಅವರಿಗೆ ದೊರೆತಿತ್ತು.
ಕಟ್ಟರ್ ಕೋಮುವಾದಿಗಳಿಂದ ಉಮರ್ ಹತ್ಯೆಯ ಪ್ರಯತ್ನವೂ ನಡೆದಿತ್ತು. ಆಳುವವರ ಬೂಟು ನೆಕ್ಕುವ ಗೋದಿ ಮೀಡಿಯಾ 2016ರಲ್ಲೇ ಉಮರ್ ಅವರ ವಿಚಾರಣೆ ನಡೆಸಿ ಅವರಿಗೆ ‘ದೇಶದ್ರೋಹಿʼ ಪಟ್ಟ ಕಟ್ಟಿತ್ತು. ಜೆ.ಎನ್.ಯು.ಕೇಸಿನಲ್ಲಿ ಉಮರ್ ಅವರನ್ನು ಇರುಕಿಸಿ ದ್ವೇಷ, ಅಪಪ್ರಚಾರ, ಸುಳ್ಳು ಮಾಹಿತಿಯ ಹೊಳೆಯನ್ನೇ ಹರಿಸಿತ್ತು. ಜನಮಾನಸದಲ್ಲಿ ಹಸೀ ಸುಳ್ಳುಗಳನ್ನು ಬಿತ್ತಿತ್ತು. ಟಿ.ಆರ್.ಪಿ. ಜೊತೆಗೆ ಆಳುವವರ ಕೃಪಾಶ್ರಯದ ಧಾರಾಳ ಫಸಲನ್ನು ಕಟಾವು ಮಾಡಿಕೊಂಡಿತ್ತು
ಬೇಯ್ಲ್ (ಜಾಮೀನು) ನಿಯಮ ಎನಿಸುವಷ್ಟು ಸರಳವಾಗಬೇಕು ಮತ್ತು ಜೈಲು ಅಪವಾದವೆನಿಸುವಷ್ಟು ವಿರಳವಾಗಬೇಕು (Bail is the rule and jail is an exception) ಎಂಬ ಮಾತನ್ನು ಸುಪ್ರೀಮ್ ಕೋರ್ಟ್ ಕಾಲ ಕಾಲಕ್ಕೆ ಹೇಳುತ್ತಲೇ ಬಂದಿದೆ. ಯುಎಪಿಎ ಎಂಬ ಕರಾಳ ಕಾಯಿದೆ ಪ್ರಕಾರ ಬಂಧನಕ್ಕೆ ಒಳಗಾದವರಿಗೂ ಈ ಮಾತು ಅನ್ವಯಿಸುತ್ತದೆ ಎಂದೂ ಸಾರಿದೆ. ಆದರೆ ಉಮರ್‌ಗೆ ಜಾಮೀನು ನಿರಾಕರಿಸುತ್ತಲೇ ಬರಲಾಗಿದೆ. ಅಧೀನ ನ್ಯಾಯಾಲಯಗಳು, ಹೈಕೋರ್ಟುಗಳು ಈ ಕಿವಿಮಾತಿಗೆ ಕಿವುಡಾಗಿವೆ. ಕಡೆಗೆ ಸುಪ್ರೀಮ್ ಕೋರ್ಟ್ ಕೂಡ ತನ್ನ ವಚನವನ್ನು ತಾನೇ ಕಡೆಗಣಿಸಿದಂತೆ ತೋರುತ್ತಿದೆ. ನಮ್ಮ ಕಣ್ಣೆದುರೇ ಜರುಗಿರುವ ಬಹುದೊಡ್ಡ ವಿಚಿತ್ರ ವಿಡಂಬನೆಯಿದು.
ಈಗಾಗಲೆ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲದಿಂದ ತಾವು ಜೈಲುವಾಸದಲ್ಲಿದ್ದು, ವಿಚಾರಣೆಯ ವಿಳಂಬಗತಿ ಹಿಡಿದಿರುವ ಆಧಾರದ ಮೇಲೆ ತಮಗೆ ಜಾಮೀನು ನೀಡಬೇಕೆಂಬುದು ಈ ಎಲ್ಲ ಬಂಧಿತರ ವಾದವಾಗಿತ್ತು. ಇತರೆ ಸಹ ಆಪಾದಿತರೊಂದಿಗೆ ಕೇವಲ ವಾಟ್ಸ್ಯಾಪ್ ಗ್ರೂಪ್ ಗಳಲ್ಲಿದ್ದುದು ಅಪರಾಧವೇನೂ ಅಲ್ಲ. ತಮ್ಮ ಬಳಿ ಯಾವುದೇ ದೋಷಾರೋಪಿ ಸಾಮಗ್ರಿಗಳು ಅಥವಾ ಹಣ ಪತ್ತೆಯಾಗಿರುವುದಿಲ್ಲ ಎಂದು ಖಾಲಿದ್ ವಾದಿಸಿದ್ದರು.
ಖಾಲಿದ್ ಸೇರಿದಂತೆ ಉಳಿದ ಯಾವುದೇ ಸಹ ಆಪಾದಿತರೊಂದಿಗೆ ತಾವು ಸಂಪರ್ಕ-ಸಂಬಂಧ ಹೊಂದಿರಲಿಲ್ಲ, ದೆಹಲಿ ಪೊಲೀಸರು ಆಪಾದಿಸಿರುವಂತೆ ಯಾವ ಪಿತೂರಿಯಲ್ಲೂ ತಾವು ಪಾಲ್ಗೊಂಡಿರಲಿಲ್ಲ. ಕೇವಲ ಭಾಷಣಗಳು ಮತ್ತು ವಾಟ್ಸ್ಯಾಪ್ ಚಾಟ್ ಗಳು ಅಶಾಂತಿಗೆ ಕಾರಣ ಆಗುವುದಿಲ್ಲ ಎಂಬುದು ಶರ್ಜೀಲ್ ಇಮಾಮ್ ವಾದವಾಗಿತ್ತು.
ದೀರ್ಘ ಕಾಲದಿಂದ ಜೈಲಿನಲ್ಲಿರುವ ಮತ್ತು ವಿಚಾರಣೆ ಇನ್ನೂ ಆರಂಭ ಆಗದೆ ಇರುವ ಕಾರಣವನ್ನು ಜಾಮೀನು ನೀಡಿಕೆಗೆ ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ‘ಆದರೆ ಈ ಕಾರಣವನ್ನು ಸಾರ್ವತ್ರಿಕವಾಗಿ ಎಲ್ಲ ಕೇಸುಗಳಿಗೂ ಅನ್ವಯಿಸುವುದು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಹೇಳಿದೆ.
ಈ ಆದೇಶವನ್ನು ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ಬಂಧಿತ ಹೋರಾಟಗಾರರ ಪರ ನ್ಯಾಯವಾದಿ ತಿಳಿಸಿದ್ದಾರೆ.
‘ಪ್ರತಿಭಟನೆಯ ಹಕ್ಕು ಅನಿರ್ಬಂಧಿತ ಅಲ್ಲ. ಲಂಗುಲಗಾಮುಗಳಿಲ್ಲದ ಪ್ರತಿಭಟನಾ ಹಕ್ಕು ಸಾಂವಿಧಾನಿಕ ಚೌಕಟ್ಟನ್ನು ಘಾಸಿಗೊಳಿಸುತ್ತದೆ ಮಾತ್ರವಲ್ಲದೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಭಂಗಗೊಳಿಸುತ್ತದೆ. ಪ್ರತಿಭಟನೆಗಳು ಅಥವಾ ಪ್ರದರ್ಶನಗಳ ವೇಷದ ಮರೆಯಲ್ಲಿ ಹಿಂಸಾಚಾರದ ಸಂಚಿಗೆ ಅವಕಾಶ ನೀಡಲು ಬರುವುದಿಲ್ಲ. ಹಿಂಸಾತ್ಮಕ ಪ್ರತಿಭಟನೆಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುವುದಿಲ್ಲ’ ಎಂದು ನ್ಯಾಯಪೀಠ ಹೇಳಿದೆ.
ಶಿಫಾ ಉರ್ ರೆಹಮಾನ್, ಅಥರ್ ಖಾನ್, ಮಿರಾನ್ ಹೈದರ್, ಶಾದಾಬ್ ಅಹ್ಮದ್, ಅಬ್ದುಲ್ ಖಾಲಿದ್ ಹಾಗೂ ಗುಲ್ಫಿಶಾ ಫಾತಿಮ ಇತರೆ ಐವರು ಬಂಧಿತರು. ಇವರ ಜಾಮೀನು ಅರ್ಜಿಗಳನ್ನು 2022ರಿಂದಲೂ ಬಾಕಿ ಇರಿಸಲಾಗಿದೆ. ಕಳೆದ ಹನ್ನೆರಡು ವರ್ಷಗಳಿಂದ ದೇಶದಲ್ಲಿ ಮುಸಲ್ಮಾನರನ್ನು ದ್ವೇಷಿಸುವ ವಾತಾವರಣವನ್ನು ಸೃಷ್ಟಿಸಲಾಗಿದೆ. ಕೋಮು ಧೃವೀಕರಣದ ರಾಜಕಾರಣ ವಿಜೃಂಭಿಸಿದೆ. ಹೀಗಾಗಿ ಈ ಎಲ್ಲ ಬಂಧಿತರೂ ಮುಸಲ್ಮಾನರೇ ಆಗಿರುವುದು ಕೇವಲ ಆಕಸ್ಮಿಕ ಅಲ್ಲ.
2020ರ ಫೆಬ್ರವರಿಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಸಂಬಂಧ ಈಶಾನ್ಯ ದೆಹಲಿಯಲ್ಲಿ ಜರುಗಿದ ಕೋಮು ಗಲಭೆಯ ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು ಮತ್ತು 700 ಮಂದಿ ಗಾಯಗೊಂಡಿದ್ದರು. ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರನ್ನು ಯುಎಪಿ ಕಾಯಿದೆಯಡಿ ದಸ್ತಗಿರಿ ಮಾಡಲಾಗಿದೆ.
ಉಮರ್ ಖಾಲಿದ್ ಅವರನ್ನು ಬಂಧಿಸಿದ್ದು 2020ರ ಸೆಪ್ಟಂಬರ್ 13ರಂದು. 1967ರ ಕಾನೂನುಬಾಹಿರ ಅಕ್ರಮ ಚಟುವಟಿಕೆಗಳ ನಿಗ್ರಹ ಕಾಯಿದೆಯನ್ನು (ಯುಎಪಿಎ) ಅವರಿಗೆ ಅನ್ವಯಿಸಲಾಗಿತ್ತು. ಈಶಾನ್ಯ ದೆಹಲಿಯಲ್ಲಿ 2020ರ ಫೆಬ್ರವರಿಯಲ್ಲಿ ಜರುಗಿದ್ದ ಕೋಮುಗಲಭೆಗಳ ಸಂಚನ್ನು ಹೂಡಿದರೆಂಬುದು ಈತನ ಮೇಲೆ ಹೊರಿಸಲಾದ ಆಪಾದನೆ. ಮೂರು ವರ್ಷಗಳು ಉರುಳಿದ ನಂತರವೂ ಈತ ವಿಚಾರಣಾಧೀನ ಬಂಧಿ. ಈತನ ಜಾಮೀನು ಅರ್ಜಿಯನ್ನು ಸತತವಾಗಿ ತಿರಸ್ಕರಿಸುತ್ತ ಬರಲಾಗಿದೆ.
ದ್ವೇಷವನ್ನು ಪ್ರೀತಿಯಿಂದ ಗೆಲ್ಲಬೇಕು ಎಂದು ಸಾರಿದ ದೇಶಪ್ರೇಮಿ ಉಮರ್ ಖಾಲಿದ್. ಮುಸ್ಲಿಮನಾಗಿ ಹುಟ್ಟಿದ್ದು ಆತನ ಮೊದಲ ‘ಅಪರಾಧ’. ಬಿಜೆಪಿಯ ಕಡುಕೋಮುವಾದಿ ನೀತಿಯನ್ನು ವಿರೋಧಿಸಿದ್ದು ಎರಡನೆಯ ‘ಪಾತಕ’. ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಎಡಪಂಥೀಯ ವಿದ್ಯಾರ್ಥಿ ನಾಯಕನಾದದ್ದು ಮೂರನೆಯ ‘ದೇಶದ್ರೋಹ’
ಈ ಪ್ರಕರಣದಲ್ಲಿ ಕಟಕಟೆಯಲ್ಲಿ ನಿಂತು ವಿಚಾರಣೆ ಎದುರಿಸುತ್ತಿರುವುದು ನಮ್ಮ ನ್ಯಾಯವ್ಯವಸ್ಥೆಯೇ ವಿನಾ ಉಮರ್ ಖಾಲಿದ್ ಅಲ್ಲ ಎನ್ನುತ್ತಾರೆ ಕಾನೂನು ತಜ್ಞರು.
ದೆಹಲಿ ಕೋಮುಗಲಭೆಗಳ ತರುವಾಯ ಪೊಲೀಸರು 2,500ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು. ನಾಲ್ಕು ವರ್ಷಗಳ ‘ಹಿಯರಿಂಗ್’ ಗಳಲ್ಲಿ ನ್ಯಾಯಾಲಯಗಳು 2000ಕ್ಕೂ ಹೆಚ್ಚು ಮಂದಿ ಆರೋಪಿಗಳಿಗೆ ಜಾಮೀನು ನೀಡಿವೆ. ಬೇಕಾಬಿಟ್ಟಿ ಬೇಜವಾಬ್ದಾರಿ ತನಿಖೆಗಾಗಿ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿವೆ.
2020ರ ಅಕ್ಟೋಬರ್ ನಲ್ಲಿ ಉಮರ್ ಗೆಳೆಯರು ಜೈಲಿನಲ್ಲಿದ್ದ ಮಿತ್ರನಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದರು. ದೇಶದ ಅಂತಸ್ಸಾಕ್ಷಿಯನ್ನು ಬಡಿದೆಬ್ಬಿಸುವ ಒಕ್ಕಣೆ ಆ ಪತ್ರದಲ್ಲಿ ನಿಗಿನಿಗಿಸಿತ್ತು. ಇಂದಿಗೂ ಮುಂದಿಗೂ ಪ್ರಸ್ತುತ ಒಕ್ಕಣೆಯದು. ಆಯ್ದ ಕೆಲ ಭಾಗಗಳು ಹೀಗಿವೆ-
“ದೆಹಲಿ ಕೋಮುಗಲಭೆಗಳ ನೈಜ ಅಪರಾಧಿಗಳನ್ನು ಬಿಟ್ಟು, ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಶಾಂತಿಯುತ ಆಂದೋಲನ ನಡೆಸಿದ್ದವರ ಹೆಸರಿಗೆ ಮಸಿ ಬಳಿಯಬೇಕಿತ್ತು. ಉಮರ್ ಅವರಿಗೆ ಕೋಮು ಗಲಭೆಗಳ ‘ಮಾಸ್ಟರ್ ಮೈಂಡ್’ ಎಂಬ ಹಣೆಪಟ್ಟಿ ಹಚ್ಚಿ ಸೆರೆಗೆ ತಳ್ಳಬೇಕಿತ್ತು. ಸಾಮರಸ್ಯ ಮತ್ತು ಸಮಾನತೆ ಕುರಿತು ಮಾತಾಡುತ್ತಿದ್ದರೂ ನಿನ್ನತ್ತ ಗುರಿ ತಿರುಗಿಸಲಾಯಿತು”.
“ಇತ್ತೀಚಿನ ವರ್ಷಗಳಲ್ಲಿ ನೀನಿಲ್ಲದ ವಾತಾವರಣಕ್ಕೆ ಕಾಲಕ್ರಮೇಣ ಒಗ್ಗಿ ಹೋಗುತ್ತಿದ್ದೇವೆಯೇ ಎಂಬ ಕಳವಳ ನಮ್ಮನ್ನು ಕಾಡುತ್ತಿದೆ. ಸಂವಿಧಾನವು ದಯಪಾಲಿಸಿರುವ ಸಮಾನ ಪೌರತ್ವಕ್ಕಾಗಿ ಕೊರಳೆತ್ತಿದ ಯುವಪ್ರತಿಭೆಗಳನ್ನು ಜೈಲಿಗೆ ಹಾಕಿರುವುದಕ್ಕೆ ನಾವು ಒಗ್ಗಿ ಹೋಗಿದ್ದೇವೆ. ನಮ್ಮ ಹಕ್ಕುಗಳಿಗಾಗಿ ಹೋರಾಡಿದ ಅತ್ಯುತ್ತಮ ಆಂದೋಲನಕಾರರನ್ನು ಕಲ್ಪಿತ ಆರೋಪಗಳ ಮೇರೆಗೆ ಸೆರೆಗೆ ತಳ್ಳಿರುವ ಕೃತ್ಯಕ್ಕೆ ನಾವು ಒಗ್ಗಿ ಹೋಗಿದ್ದೇವೆ. ಪ್ರೈಮ್ ಟೈಮ್ ಟೆಲಿವಿಷನ್ ಪರದೆಗಳ ಮೇಲೆ ನಿತ್ಯ ನಲಿದಾಡುವ ಸ್ತ್ರೀದ್ವೇಷ, ಹುಸಿದೇಶಭಕ್ತಿಯ ಅಬ್ಬರ, ದ್ವೇಷ ಬಿತ್ತನೆಗೆ ಹೊಂದಿಕೊಂಡು ಬಿಟ್ಟಿದ್ದೇವೆ. ಹೊಂಚು ಹಾಕಿರುವ ಭಯದ ಭಾವನೆಗೆ, ಮಧ್ಯರಾತ್ರಿಯ ಕದಬಡಿತಗಳಿಗೆ, ಸ್ವಯಂ ಸೆನ್ಸಾರ್‌ಶಿಪ್‌ಗಳಿಗೆ ಒಗ್ಗಿ ಹೋಗಿದ್ದೇವೆ. ಹಾಥ್ರಸ್ ನ ದಲಿತ ಯುವತಿಯ ಮೇಲಿನ ಅತ್ಯಾಚಾರ-ಹತ್ಯೆ ಮತ್ತು ಆನಂತರದ ವಿಕೃತ ನ್ಯಾಯವು ನಮ್ಮ ಸಾರ್ವಜನಿಕ ಬದುಕಿನಲ್ಲಿ ಆಳಕ್ಕೆ ಇಳಿದಿರುವ ಕೊಳೆತದತ್ತ ಬೆರಳು ಮಾಡಿದೆ. ಇಂತಹುದು ಯಾವುದೂ ನಮ್ಮ ಆತ್ಮಸಾಕ್ಷಿಗಳನ್ನು ಕಲಕುತ್ತಿಲ್ಲ. ಎಂತಹ ಘೋರನಂಜನ್ನೂ ನಾವು ಅರಗಿಸಿಕೊಂಡು ಆರಾಮಾಗಿದ್ದೇವೆ ಎಂಬುದನ್ನು ತೋರುತ್ತಿದೆ”.
“ಮುಸಲ್ಮಾನರು, ದಲಿತರು ಹಾಗೂ ಆದಿವಾಸಿಗಳ ದೊಂಬಿಹತ್ಯೆಗಳನ್ನು ನಡೆಸಿ ಅವುಗಳನ್ನು ನೇರಪ್ರಸಾರ ಮಾಡಿ, ಸೆಲ್ ಫೋನುಗಳಲ್ಲಿ ಸೆರೆ ಹಿಡಿದು, ಸೆಲ್ಫಿಗಳನ್ನು ತೆಗೆದು, ಹಂಚಿಕೊಂಡು ಸಂಭ್ರಮಿಸುತ್ತಿರುವುದಕ್ಕೆ ನಾವು ಹೇಗೆ ಒಗ್ಗಿ ಹೋಗಿದ್ದೇವೆಯೋ ಹಾಗೆ ನಿನ್ನ ಗೈರು ಹಾಜರಿಗೂ ಒಗ್ಗಿ ಹೋಗುತ್ತೇವೆಯೇ ಎಂಬ ಸಂಕಟ ನಮ್ಮನ್ನು ಚುಚ್ಚಿದೆ. ಇಂತಹ ವಿಷಮ ಕೃತ್ಯಗಳ ಕಟುವಾಸ್ತವಗಳಿಗೆ ಒಗ್ಗಿಕೊಳ್ಳುವುದಿಲ್ಲ ಎಂದು ಎದೆಸೆಟಿಸಿದ ಹಿಡಿಯಷ್ಟು ವ್ಯಕ್ತಿಗಳಲ್ಲಿ ನೀನೂ ಒಬ್ಬನಾಗಿದ್ದೆ. ಭಯಕ್ಕೆ ಶರಣಾಗಿ ಪಾರ್ಶ್ವವಾಯು ಪೀಡಿತನಾಗಲು ನೀನು ಒಪ್ಪಲಿಲ್ಲ. ನಿನ್ನನ್ನು ಹತ್ಯೆ ಮಾಡುವ ಪ್ರಯತ್ನ ನಡೆಯಿತು, ದೇಶದ್ರೋಹದ ಪಟ್ಟ ಕಟ್ಟಲಾಯಿತು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಯಿತು. ‘ಮೀಡಿಯಾ’ ತನ್ನದೇ ಅನ್ಯಾಯದ ವಿಚಾರಣೆ ನಡೆಸಿತು. ಇಂತಹ ಸಾಕಷ್ಟು ‘ಮುನ್ನೆಚ್ಚರಿಕೆಗಳನ್ನು’ ನಿನಗೆ ನೀಡಲಾಗಿತ್ತು. ಅವುಗಳನ್ನು ನೀನು ಲೆಕ್ಕಿಸಲಿಲ್ಲ. ಪರಮ ಹಠಮಾರಿ ನೀನು, ಆತ್ಮಘನತೆಗಾಗಿ ಹಲ್ಲುಕಚ್ಚಿ ಹೋರಾಡಿದ ಶಾಹೀನ್ ಬಾಗ್ ನಂತೆ, ಬಿಲ್ಕಿಸ್ ಬಾನೋ ಅಕ್ಕನಂತೆ. ದೇಶ ಎಂದರೆ ಜನ, ಆ ಜನಕ್ಕಾಗಿ ದನಿಯೆತ್ತಿದ್ದೇ ನೀನು ಮಾಡಿದ ಪರಮಪಾತಕ”.
“ಎಡ್ವರ್ಡೋ ಗಲಿಯಾನೋ (ಲ್ಯಾಟಿನ್ ಅಮೆರಿಕನ್ ಸಾಹಿತಿ) ಮಾತಿನಲ್ಲಿ ಹೇಳುವುದಾದರೆ ಈ ಪ್ರಪಂಚ ತಲೆಕೆಳಗಾಗಿ ಹೋಗಿದೆ. ದ್ವೇಷಬಿತ್ತುವವರು ಗಹಗಹಿಸಿ ಮೆರೆದಾಡುತ್ತಿದ್ದಾರೆ. ಪ್ರೀತಿ ಸಹಾನುಭೂತಿ, ಕಾರುಣ್ಯ, ನ್ಯಾಯದ ಪಕ್ಷಪಾತಿಗಳನ್ನು ಖಳನಾಯಕರೆಂದೂ ರಕ್ಕಸರೆಂದೂ ಬಿಂಬಿಸಲಾಗುತ್ತಿದೆ”.
“ನಿನ್ನ ವಿರುದ್ಧ 11,000 ಪುಟಗಳ ಆಪಾದನಾಪಟ್ಟಿ ಸಲ್ಲಿಸಲಾಗಿದೆ. ಜಗತ್ತು ಕಂಡಿರುವ ಅತಿ ದೀರ್ಘ ಕಲ್ಪನೆಯ ಕತೆಯಿದು. ಸರ್ಕಾರವನ್ನು ವಿರೋಧಿಸುವುದು ಮತ್ತು ಮುಸಲ್ಮಾನನಾಗಿ ಹುಟ್ಟುವುದು ದೊಡ್ಡ ಅಪರಾಧವಾಗಿ ಹೋಗಿದೆ. ನೀನು ಮುಸಲ್ಮಾನನೋ ಅಥವಾ ನಿರೀಶ್ವರವಾದಿಯೋ ಎಂದು ಕೆಲವು ವಲಯಗಳಲ್ಲಿ ಚರ್ಚೆ ನಡೆಯುತ್ತಿರುವುದು ತಮಾಷೆಯ ವಿಷಯವಾಗಿ ತೋರುತ್ತದೆ. ಯಾಕೆಂದರೆ ನೀನು ಈ ಜಗತ್ತಿನ ವಿಶ್ಲೇಷಣೆಗೆ ಬಳಸಿರುವ ಸಾಧನ ಚಲನಶೀಲ ಮಾರ್ಕ್ಸ್ ವಾದ. ನೀನು ಮುಸಲ್ಮಾನನಾಗಿ ಹುಟ್ಟಿದ್ದೀ ಎಂದು ಹೆಜ್ಜೆ ಹೆಜ್ಜೆಗೆ ನಿನಗೆ ನೆನಪು ಮಾಡಿಕೊಡಲಾಗುತ್ತಿದೆ. ಜೈಶ್ ಎ ಮೊಹಮ್ಮದ್ ಗುಂಪಿಗೆ ಸೇರಿದವನೆಂದೂ ದೇಶದ್ರೋಹಿಯೆಂದೂ ಮುಸಲ್ಮಾನನೆಂದೂ ಕರೆದು ನಿನ್ನ ಬೇಟೆ ಆಡಲಾಗುತ್ತಿದೆ. ಆದರೆ ನೀನು ಇದ್ಯಾವುದೂ ಆಗಿರಲಿಲ್ಲ”.
ಖಾಲಿದ್ ಮತ್ತು ಸಂಗಾತಿಗಳ ಅನ್ಯಾಯಪೂರಿತ ಸೆರೆವಾಸ ಅಂತ್ಯಗೊಳ್ಳಬೇಕು.
