ಮುಖ್ಯಮಂತ್ರಿ ಸಿಟ್ಟಾದರೆ ಸಾಲದು ಇಡೀ ವರ್ಷ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಜಿಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಸರ್ಕಾರ ನಿಗಾ ಇಡಬೇಕಿದೆ. ಯಾವ ಸರ್ಕಾರ ಶಿಕ್ಷಣಕ್ಕೆ ಉತ್ತೇಜನ ನೀಡುವುದಿಲ್ಲವೋ ಆ ಸರ್ಕಾರ ಜನವಿರೋಧಿ ಸರ್ಕಾರ ಎಂದೇ ಅರ್ಥ.
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಶೈಕ್ಷಣಿಕವಾಗಿ ವಿಜಯನಗರ ಜಿಲ್ಲೆ 10ನೇ ಸ್ಥಾನದಿಂದ 27ನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ ಅವರು, “ಇದಕ್ಕೆ ನಿಮ್ಮನ್ನು ಏಕೆ ಹೊಣೆ ಮಾಡಬಾರದು” ಎಂದು ಡಿಡಿಪಿಐ ಅವರನ್ನು ಪ್ರಶ್ನಿಸಿದ್ದಾರೆ. ಶಿಕ್ಷಣ ಇಲಾಖೆ ಕಾರ್ಯದರ್ಶಿ ರಿತೀಶ್ ಅವರಿಗೆ ಸಭೆ ಮಧ್ಯದಲ್ಲೇ ದೂರವಾಣಿ ಮೂಲಕ ಸಂಪರ್ಕಿಸಿದ ಜಿಲ್ಲೆಯ ಕಳಪೆ ಸಾಧನೆ ಬಗ್ಗೆ ಪ್ರಶ್ನಿಸಿ, ಡಿಡಿಪಿಐ ಮತ್ತು ಬಿಇಒ ಇಬ್ಬರನ್ನೂ ತಕ್ಷಣದಿಂದ ಅಮಾನತ್ತಿನಲ್ಲಿ ಇಡಬೇಕು. ಸಿಇಒ ಅವರಿಗೆ ನೋಟಿಸ್ ನೀಡಬೇಕೆಂದು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿಗಳು ಇಂದು ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾರೆ. ಆಗ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಈ ಬಾರಿ ಶೇ 20ರಷ್ಟು ಗ್ರೇಸ್ ಅಂಕಗಳನ್ನು ಕೊಟ್ಟರೂ ಫಲಿತಾಂಶ ಕಳಪೆಯಾಗಿರುವ ಬಗ್ಗೆ ಮುಖ್ಯಮಂತ್ರಿ ಸಿಟ್ಟಾಗಿದ್ದಾರೆ. ಇದು ವಿಜಯನಗರ ಒಂದೇ ಜಿಲ್ಲೆಯ ಕತೆಯಲ್ಲ. ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಚಿಕ್ಕಮಗಳೂರು, ಉತ್ತರಕನ್ನಡ ಮುಂತಾದ ಕೆಲ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಬಹುತೇಕ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಅವಸ್ಥೆಯಿದು. ಒಂದು ಕಡೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕಬಂಧ ಬಾಹುಗಳು ಗ್ರಾಮೀಣ ಭಾಗಗಳಲ್ಲೂ ಚಾಚುತ್ತಿರುವಾಗ ಸರ್ಕಾರ, ಅಧಿಕಾರಿಗಳು ಒಟ್ಟಾಗಿ ಸೇರಿ ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ ಎಳ್ಳು ನೀರು ಬಿಡುತ್ತಿದ್ದಾರೆ.
ಮುಖ್ಯಮಂತ್ರಿಯವರು ಸಿಟ್ಟಾದರೆ ಸಾಲದು ಇಡೀ ವರ್ಷ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಜಿಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಸರ್ಕಾರ ನಿಗಾ ಇಡಬೇಕಿದೆ. ಯಾವ ಸರ್ಕಾರ ಶಿಕ್ಷಣಕ್ಕೆ ಉತ್ತೇಜನ ನೀಡುವುದಿಲ್ಲವೋ ಆ ಸರ್ಕಾರ ಜನವಿರೋಧಿ ಸರ್ಕಾರ ಎಂದೇ ಅರ್ಥ. ಕರ್ನಾಟಕ ಮಾಹಿತಿ ತಂತ್ರಜ್ಞಾನದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ನೂರಾರು ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಉಳ್ಳವರ ಮಕ್ಕಳು ಅಲ್ಲಿ ಈ ಕಾಲಮಾನಕ್ಕೆ ಬೇಕಾದ ಗುಣಮಟ್ಟದ ಶಿಕ್ಷಣ ಪಡೆಯುತ್ತಾರೆ. ಸಹಜವಾಗಿಯೇ ಉನ್ನತ ಉದ್ಯೋಗ ಪಡೆಯುತ್ತಾರೆ. ಆದರೆ, ಗ್ರಾಮೀಣ ಭಾಗದ ಅದರಲ್ಲೂ ಬಡ ಕುಟುಂಬಗಳ ಮಕ್ಕಳಿಗೆ ಸರ್ಕಾರಿ ಶಾಲೆಯೇ ಗತಿ. ಅಲ್ಲಿ ಸರಿಯಾದ ಮೂಲಸೌಕರ್ಯ, ಬದ್ಧತೆ ಇರುವ ಶಿಕ್ಷಕರು, ಪ್ರಾಮಾಣಿಕ ಶಿಕ್ಷಣಾಧಿಕಾರಿಗಳು ಇದ್ದರೆ ಮಾತ್ರ ಆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯ.
ಇದು ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಇಲಾಖೆಯ ಕಾರ್ಯದರ್ಶಿ, ಜಿಲ್ಲಾ ಶಿಕ್ಷಣಾಧಿಕಾರಿ, ಶಾಲಾ ಶಿಕ್ಷಕರು ಒಟ್ಟಾಗಿ ಮಾಡಬೇಕಿರುವ ಕೆಲಸ. ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಕಾರ್ಯತಂತ್ರ ಹೂಡುವ, ಹೇಗಾದರಾಗಲಿ ಗೆಲ್ಲಲೇಬೇಕು ಎಂದು ಹಗಲಿರುಳು ಶ್ರಮಿಸುವ ಜನನಾಯಕರು ಗೆದ್ದ ನಂತರ ಕನಿಷ್ಠ ಬಡವರ ಮಕ್ಕಳು ಉದ್ಧಾರವಾಗಲಿ ಎಂದು ಬಯಸಿ ಶಾಲೆಗಳನ್ನು ಅಭಿವೃದ್ಧಿ ಮಾಡಬೇಕು. ಬಡವರ ಬದುಕು ಶಿಕ್ಷಣದಿಂದಷ್ಟೇ ಹಸನಾಗಬೇಕಿದೆ. ಹಾಗಾಗಿ ಯಾವುದೇ ಸರ್ಕಾರದ ಮೊದಲ ಆದ್ಯತೆ ಗುಣಮಟ್ಟದ ಪ್ರಾಥಮಿಕ, ಪ್ರೌಢ ಶಿಕ್ಷಣ ನೀಡುವುದಾಗಬೇಕಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ಕೊರತೆ ಒಂದೆಡೆಯಾದರೆ, ಮಕ್ಕಳಿರುವ ಕಡೆ ಮೂಲಸೌಕರ್ಯ, ಶಿಕ್ಷಕರ ಕೊರತೆ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲೇ ಬೇಕು ಎಂದು ಬಯಸುವ ಬಡ ಪೋಷಕರು ಕಡೆಗೆ ಖಾಸಗಿ ಶಾಲೆಯತ್ತ ಮುಖ ಮಾಡಬೇಕಾದ ಅನಿವಾರ್ಯತೆಯಿದೆ.
ರಾಜ್ಯದಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಶಾಲೆಗಳು ಯಾವಾಗಲೂ ಕಳಪೆ ಸಾಧನೆ ಮಾಡುತ್ತಿರುವುದು ಹೊಸದೇನೂ ಅಲ್ಲ. ಅನೇಕ ದಶಕಗಳಿಂದ ಅವು ಹಿಂದೆಯೇ ಇವೆ. ಅಲ್ಲಿಂದ ಆಯ್ಕೆಯಾಗಿ ಬರುವ ಶಾಸಕರು, ಸಂಸದರು ಯಾರಿಗೂ ತಮ್ಮ ಕ್ಷೇತ್ರದ ಶಾಲೆಗಳು ಕಳಪೆ ಫಲಿತಾಂಶ ತೋರುತ್ತಿರುವ ಬಗ್ಗೆ ಅವಮಾನವೇ ಆಗುತ್ತಿಲ್ಲ. ಹಾಗಾಗಿ ಅವರಿಗೆ ಶಾಲೆಗಳ ಅಭಿವೃದ್ಧಿ, ಬಡ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿಯಿಲ್ಲ. ತಮ್ಮ ಊರಿನ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವುದು, ಶಿಕ್ಷಕರ ಕೊರತೆ ನೀಗಿಸುವುದು, ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸುವುದೆಲ್ಲ ರಾಜಕಾರಣಿಗಳಿಂದ ಅಪೇಕ್ಷಿಸುವುದು ಸಾಧ್ಯವಿಲ್ಲ.
ಶಾಲೆಗಳು ಆರಂಭವಾಗುತ್ತಿದ್ದಂತೆ ಪಠ್ಯಪುಸ್ತಕ ಮಕ್ಕಳ ಕೈ ಸೇರಿಬೇಕು. ಯೂನಿಫಾರಂ, ಮತ್ತಿತರ ಶೈಕ್ಷಣಿಕ ಪರಿಕರಗಳನ್ನು ಒದಗಿಸಬೇಕು. ಮೊದಲ ವಾರದಿಂದಲೇ ನಿಗದಿಯ ಪಾಠಗಳು ನಡೆಯಬೇಕು. ಆಗಾಗ ಪರೀಕ್ಷೆಗಳು ನಡೆದು ಓದಿನಲ್ಲಿ, ಗ್ರಹಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಮುಂದೆ ತರಲು ಹೆಚ್ಚಿನ ಪರಿಶ್ರಮ ಹಾಕಬೇಕು. ಆದರೆ, ಶಾಲೆಗಳು ಶುರುವಾಗಿ ಆರು ತಿಂಗಳಾದರೂ ಪಠ್ಯ ಪುಸ್ತಕಗಳನ್ನು ತಲುಪಿಸಲಾರದ ಶಿಕ್ಷಣ ಇಲಾಖೆಯ ಕಾರ್ಯ ವೈಖರಿ ಸರಿಯಾಗುವುದು ಯಾವಾಗ? ಈ ಬಗ್ಗೆಯೂ ಮುಖ್ಯಮಂತ್ರಿಗಳು ಕಾಳಜಿ ತೋರಬೇಕಿದೆ.
ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿಯೇ ಪಠ್ಯ ಪುಸ್ತಕಗಳ ಮುದ್ರಣ, ಶಾಲೆಗಳಿಗೆ ಪೂರೈಕೆ ಕೆಲಸ ಮುಗಿಯಬೇಕು. ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಯಾವುದೇ ಗೊಂದಲವಿಲ್ಲದೇ ಮಕ್ಕಳ ಶಿಕ್ಷಣದ ಕಡೆಗೆ ಗಮನ ಕೊಡಲು ಸಾಧ್ಯವಾಗುವುದು ಈ ಎಲ್ಲ ಸಮಸ್ಯೆಗಳು ನೀಗಿದಾಗ ಮಾತ್ರ. ಶಿಕ್ಷಕರ ಕೊರತೆಯನ್ನು ಮೊದಲು ನಿವಾರಿಸಬೇಕಿದೆ.
ಬೀದರ್ ಜಿಲ್ಲೆಯ ಬಹುತೇಕ ಶಾಲೆಗಳು ಅತಿಥಿ ಶಿಕ್ಷಕರಿಂದಲೇ ನಡೆಯುತ್ತಿದೆ ಎಂಬ ವರದಿ ಬಂದಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬೀದರ್ ಜಿಲ್ಲೆ 33ನೇ ಸ್ಥಾನದಲ್ಲಿತ್ತು. ಇದು ಸಾಂಸ್ಥಿಕ ಅಪರಾಧಕ್ಕೆ ಸಮ. ಆ ಜಿಲ್ಲೆಯ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯುವ ಹಕ್ಕಿಲ್ಲವೇ?
ವಿಧಾನ ಸೌಧದ ಮುಂದೆ 21 ಕೋಟಿ ರೂಪಾಯಿ ವೆಚ್ಚದಲ್ಲಿ ಕನ್ನಡ ಭುವನೇಶ್ವರಿ ಪ್ರತಿಮೆ ಸ್ಥಾಪಿಸುವ ಬದಲು ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸಿ ಅಲ್ಲಿ ಭುವನೇಶ್ವರಿಯೇ ನೆಲೆಸುವಂತೆ ಮಾಡಬೇಕಿದೆ.
