ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಹೆಸರನ್ನು ಪರಿಚಯಿಸಿದ, ಕನ್ನಡಕ್ಕೆ ಮೊದಲ ಬೂಕರ್ ಪ್ರಶಸ್ತಿ ತಂದುಕೊಟ್ಟ ಸಾಧಕಿ ಬಾನು ಮುಷ್ತಾಕ್ ಅವರು ನಾಡಹಬ್ಬ ಉದ್ಘಾಟಕರಾಗುತ್ತಿದ್ದಂತೆ ಬಿಜೆಪಿ ನಾಯಕರು ಕೋಮುದ್ವೇಷದ ಹೇಳಿಕೆ ನೀಡುತ್ತಿದ್ದಾರೆ. ಹಿಂದೂಗಳ ಹಬ್ಬದ ಉದ್ಘಾಟನೆಗೆ ಒಬ್ಬ ಹಿಂದೂ ಸಿಗಲಿಲ್ಲವೇ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಯನ್ನು ಅವರು ನಿಸಾರ್ ಅಹಮದ್ ಉದ್ಘಾಟಕರಾದಾಗ ಕೇಳಿಲ್ಲ.
ಪ್ರತಿ ವರ್ಷ ನಾಡಹಬ್ಬ ದಸರಾ ಆಚರಣೆಗೆ ಎರಡು ತಿಂಗಳ ಮೊದಲೇ ಸರ್ಕಾರ ತಯಾರಿ ನಡೆಸುತ್ತದೆ. ದಸರಾ ಉದ್ಘಾಟನೆಯನ್ನು ನಾಡಿನ ಶ್ರೇಷ್ಠ ಸಾಧಕರಿಂದ ಮಾಡಿಸುವುದು ವಾಡಿಕೆ. ಇದುವರೆಗೆ ಹಲವು ಸಾಹಿತಿಗಳು, ಕಲಾವಿದರು, ಉದ್ಯಮಿಗಳಿಂದ ದಸರಾ ಉದ್ಘಾಟಿಸಲಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಎಸ್ ಎಲ್ ಬೈರಪ್ಪ, ಸುಧಾ ಮೂರ್ತಿ ತರಹದ ತಮ್ಮ ಸಿದ್ಧಾಂತದ ಪರ ಇದ್ದವರನ್ನು ಆಹ್ವಾನಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಹಂಸಲೇಖ, ಬರಗೂರು ರಾಮಚಂದ್ರಪ್ಪ, ಹಂಪನಾ ತರಹದ ಪ್ರಗತಿಪರರನ್ನು ಕರೆಸಲಾಗಿದೆ. ಈ ಬಾರಿ ಕನ್ನಡಕ್ಕೆ ಮೊದಲ ಬೂಕರ್ ತಂದುಕೊಟ್ಟ ಬಾನು ಮುಷ್ತಾಕ್ ಅವರಿಗೆ ಈ ಗೌರವ ಸಂದಿದೆ.
ಸೌಹಾರ್ದ ಪರಂಪರೆಯ ಈ ನಾಡಿನಲ್ಲಿ ಕೋಮುವಾದಿ ಬಿಜೆಪಿ ಪಕ್ಷದಲ್ಲಿ ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯದ ಕನಸು ಕಾಣುವುದೂ ಸಾಧ್ಯವಿಲ್ಲ. ಅಧಿಕಾರ ಹಿಡಿದಾಗಲೆಲ್ಲ ಸಾಮಾಜಿಕವಾಗಿ ಮುಸ್ಲಿಮರನ್ನು ಹೊರಗಿಡುತ್ತಲೇ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲಷ್ಟೇ ಮುಸ್ಲಿಮರಿಗೆ ಸ್ವಲ್ಪ ಮಟ್ಟಿನ ಪ್ರಾತಿನಿಧ್ಯ ಸಿಗುತ್ತಿದೆ. ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕವಿ ಕೆ ಎಸ್ ನಿಸಾರ್ ಅಹಮದ್ ಅವರಿಂದ ದಸರಾ ಉದ್ಘಾಟಿಸಲಾಗಿತ್ತು. ಆಗ ಯಾವುದೇ ವಿವಾದ ಆಗಿರಲಿಲ್ಲ. ಆದರೆ, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಹೆಸರನ್ನು ಪರಿಚಯಿಸಿದ, ಮೊದಲ ಬೂಕರ್ ಪ್ರಶಸ್ತಿ ತಂದುಕೊಟ್ಟ ಸಾಧಕಿ ಬಾನು ಮುಷ್ತಾಕ್ ಅವರು ನಾಡಹಬ್ಬ ಉದ್ಘಾಟಕರಾಗುತ್ತಿದ್ದಂತೆ ಬಿಜೆಪಿ ನಾಯಕರು ಕೋಮುದ್ವೇಷದ ಹೇಳಿಕೆ ನೀಡುತ್ತಿದ್ದಾರೆ. “ಹಿಂದೂಗಳ ಹಬ್ಬದ ಉದ್ಘಾಟನೆಗೆ ಒಬ್ಬ ಹಿಂದೂ ಸಿಗಲಿಲ್ಲವೇ” ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಯನ್ನು ಅವರು ನಿಸಾರ್ ಅಹಮದ್ ಉದ್ಘಾಟಕರಾದಾಗ ಕೇಳಿಲ್ಲ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು “ಬಾನು ಮುಷ್ತಾಕ್ ಚಾಮುಂಡಿ ಬೆಟ್ಟ ಹತ್ತಬಾರದು. ಸರ್ಕಾರ ಆಹ್ವಾನವನ್ನು ವಾಪಸ್ ಪಡೆಯಬೇಕು” ಎಂದು ಬೆದರಿಕೆಯ ಧಾಟಿಯಲ್ಲಿ ಹೇಳಿದ್ದಾರೆ. ಒಂದು ಧರ್ಮದ ಸಂಕೇತದಂತೆ ಭುವನೇಶ್ವರಿ ಪ್ರತಿಮೆ, ಅರಿಶಿಣ-ಕುಂಕುಮ ಬಣ್ಣ ಧ್ವಜದ ಬಗ್ಗೆ ಬೇಸರ ವ್ಯಕ್ತಪಡಿಸಿದ ಬಾನು ಅವರ ಭಾಷಣದ ತುಣುಕನ್ನು ಈಗ ವಿರೋಧಿಸಲು ಬಳಸುತ್ತಿದ್ದಾರೆ. ಆದರೆ ಅವರೆಲ್ಲರ ಮನಸ್ಸಿನಲ್ಲಿ ಇರುವುದು ಮುಸ್ಲಿಂ ದ್ವೇಷ ಎಂಬುದಂತು ಸ್ಪಷ್ಟ. ಹಾಗೆ ಮುಸ್ಲಿಮರನ್ನು ದ್ವೇಷಿಸುವಾಗ ಅವರ ಕೊಡುಗೆ, ಸಾಧನೆಗಳೆಲ್ಲ ನಗಣ್ಯ ಎಂಬುದಕ್ಕೆ ಬಾನು ಪ್ರಕರಣ ಸಾಕ್ಷಿಯಾಗಿದೆ.
ಮುಸ್ಲಿಂ ಸಮುದಾಯದಲ್ಲಿ ಸಂಪ್ರದಾಯದ ಹೆಸರಿನಲ್ಲಿ ನಡೆಯುತ್ತಿರುವ ಹೆಣ್ಣುಮಕ್ಕಳ ಮೇಲಿನ ಶೋಷಣೆಯನ್ನು ತನ್ನ ಕತೆಗಳಲ್ಲಿ ಬಿಚ್ಚಿಟ್ಟ ಕಾರಣಕ್ಕೆ ಮುಸ್ಲಿಂ ಸಮುದಾಯದಿಂದ ಫತ್ವಾ ಎದುರಿಸಿದ್ದ ಬಾನು ಮುಷ್ತಾಕ್ ಇತ್ತ ಬಾಬಾ ಬುಡನ್‌ಗಿರಿ ಹೋರಾಟದಲ್ಲಿ ಭಾಗಿಯಾದ ಕಾರಣಕ್ಕೆ ಹಿಂದೂ ಸಮಾಜದಿಂದಲೂ ಬಹಿಷ್ಕಾರ ಎದುರಿಸುವಂತಾಗಿದೆ. ಲಂಕೇಶ್ ಪತ್ರಿಕೆಯಲ್ಲಿ ವರದಿಗಾರ್ತಿಯಾಗಿದ್ದ ದಿನದಿಂದಲೂ ಬಾನು ತನ್ನ ದಿಟ್ಟತನ, ಹೋರಾಟದ ಮನೋಭಾವದಿಂದ ಚಿರಪರಿಚಿತರು. ಪತ್ರಕರ್ತೆಯಾಗಿ, ಕತೆಗಾರ್ತಿಯಾಗಿ, ವಕೀಲೆಯೂ ಆಗಿ ಬಾನು ತನ್ನದೇ ಆದ ಜಗತ್ತನ್ನು ನಿರ್ಮಿಸಿಕೊಂಡವರು. ಅವರ ʼಎದೆಯ ಹಣತೆʼ ಮತ್ತಿತರ ಕತೆಗಳ ಇಂಗ್ಲಿಷ್ ಅನುವಾದ “ಹಾರ್ಟ್ ಲ್ಯಾಂಪ್” (ದೀಪಾ ಭಾಸ್ತಿ) ಕೃತಿಗೆ ಪ್ರಾದೇಶಿಕ ಭಾಷೆಗಳಿಂದ ಇಂಗ್ಲಿಷ್‌ಗೆ ಅನುವಾದಗೊಂಡ ಸಣ್ಣಕತೆಗಳಿಗೆ ಕೊಡುವ ಮೊದಲ ಬಹುಮಾನ ಲಭಿಸಿರುವುದು ದೇಶವೇ ಹೆಮ್ಮೆ ಪಡುವ ಸಂಗತಿ. ಆದರೆ, ಬೂಕರ್ ಪ್ರಶಸ್ತಿ ಘೋಷಣೆಯಾದಾಗ ಪ್ರಧಾನಿ ನರೇಂದ್ರ ಮೋದಿ ಕನಿಷ್ಠ ಒಂದು ಟ್ವೀಟ್ ಮಾಡಿ ಶುಭಾಶಯ ಕೋರಲಿಲ್ಲ. ಮೋದಿ ಸಂಪುಟದ ಸಚಿವರೂ ಆ ವಿನಯವಂತಿಕೆ ತೋರಿಲ್ಲ. ಆದರೆ, ಕನ್ನಡ ಪ್ರೇಮಿಗಳು, ಸಾಹಿತ್ಯಾಸಕ್ತರು ತಮಗೇ ಪ್ರಶಸ್ತಿ ಬಂದಂತೆ ಸಂಭ್ರಮಿಸಿದ್ದಾರೆ. ಇಂತಹ ಗೌರವವನ್ನು ತಂದುಕೊಟ್ಟ ಸಾಧಕಿಗೆ ಈಗ ಈ ನಾಡಿನ ಜನ ನಾಯಕರೆನಿಸಿಕೊಂಡವರು ಅವಮಾನಿಸುತ್ತಿರುವುದು ಅತ್ಯಂತ ನೋವಿನ ಸಂಗತಿ.
ನಾಡಿಗೆ ಗೌರವ ತಂದುಕೊಟ್ಟವರಿಗೆ ಗೌರವ ಕೊಡಲಾರದ ಮಟ್ಟಿಗೆ ಬೌದ್ಧಿಕ, ಮಾನಸಿಕ ದಾರಿದ್ರ್ಯ ಈ ನಾಡನ್ನು ಆವರಿಸುತ್ತಿರುವುದು ಕೆಟ್ಟ ಬೆಳವಣಿಗೆ.
ಸರ್ಕಾರ ನಡೆಸುವ ನಾಡಹಬ್ಬ ಅಪ್ಪಟ ಸಾಂಸ್ಕೃತಿಕ ಉತ್ಸವ. ನವ ರಾತ್ರಿಯ ಮೊದಲ ದಿನ ಸಾಂಕೇತಿಕವಾಗಿ ನಾಡ ದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಉದ್ಘಾಟಕರು ಚಾಲನೆ ನೀಡುತ್ತಾರೆ. ಬಾನು ಮುಷ್ತಾಕ್, ನಿಸಾರ್ ಅಹಮದ್ ಆದರೂ ಅಷ್ಟೇ, ಹಿಂದೂ ಧರ್ಮೀಯರು ಆದರೂ ಅಷ್ಟೇ. ಅದರಾಚೆಗೆ ಯಾವುದೇ ಧಾರ್ಮಿಕ ಆಚರಣೆ ಸರ್ಕಾರದಿಂದ ನಡೆಯಲ್ಲ. ಪುಷ್ಪಾರ್ಚನೆ ಮಾಡುವುದು ತಮ್ಮ ಧರ್ಮ, ಆಚರಣೆಗೆ ವಿರುದ್ಧ ಎಂಬ ಭಾವನೆ ಅವರಿಗಿದ್ದರೆ ಅವರೇ ನಿರಾಕರಿಸುತ್ತಿದ್ದರು. ಆದರೆ, ಸರ್ಕಾರ ಆಯ್ಕೆ ಮಾಡಿದ ಸಾಧಕ ಮಹಿಳೆಗೆ ಈ ರೀತಿ ಅವಮಾನಿಸುವುದು ಒಪ್ಪತಕ್ಕದ್ದಲ್ಲ.
ಇದನ್ನೂ ಓದಿ ಮುಸ್ಲಿಮರ ವಿಚಾರಕ್ಕೆ ಮಾತ್ರ ಶೋಭಾ ಹೇಳಿಕೆ ಪಡೆಯುವ ಮಾಧ್ಯಮಗಳ ನಡೆ ಎಷ್ಟು ಸರಿ?
ದಸರಾ ಉದ್ಘಾಟನೆಗೆ ಬಾನು ಅವರಿಗೆ ವಿರೋಧ ವ್ಯಕ್ತವಾಗಿರುವುದು, ಬಿಜೆಪಿ ನಾಯಕರ ಹೇಳಿಕೆಗಳು ರಾಷ್ಟ್ರೀಯ ವಾಹಿನಿಗಳಲ್ಲಿಯೂ ವರದಿಯಾಗಿದೆ. ಬಾನು ಈಗ ಅಂತಾರಾಷ್ಟ್ರೀಯ ವ್ಯಕ್ತಿ. ವಿದೇಶಿ ಮಾಧ್ಯಮಗಳಲ್ಲಿಯೂ ಈ ವಿವಾದ ವರದಿಯಾಗಿರುತ್ತದೆ. ವಿದೇಶದ ಸಾಹಿತ್ಯ ವೇದಿಕೆಗಳಲ್ಲಿ ಕನ್ನಡದಲ್ಲಿ ಕತೆಗಳನ್ನು ಓದಿ ಹೇಳಿ, ಕನ್ನಡದಲ್ಲಿಯೇ ಪುಸ್ತಕಗಳಿಗೆ ಸಹಿ ಮಾಡಿ, ಕನ್ನಡ ನೆಲದ ಸತ್ವವನ್ನು ಸಾರಿ ಸಾರಿ ಹೇಳುತ್ತ ಬಂದ ಬಾನು ಅವರಿಗೆ ಈಗ ವಿದೇಶಿ ಮಾಧ್ಯಮಗಳಿಂದ ಬರುವ ಪ್ರಶ್ನೆಗಳು ನಿಜಕ್ಕೂ ಮುಜುಗರ ತರಲಿವೆ. ಕನ್ನಡಿಗರ ಬಗ್ಗೆ, ಕನ್ನಡ ಭಾಷೆ, ಸಂಸ್ಕೃತಿ, ಗರಿಮೆಯ ಬಗ್ಗೆ ವಿದೇಶದ ಜನರ ಮನಸ್ಸಿನಲ್ಲಿ ಬಾನು ಬಿತ್ತಿ ಬಂದಿದ್ದ ಸದ್ಭಾವ ಸದ್ಯದ ಬೆಳವಣಿಗೆಯಿಂದ ನಗೆಪಾಟಲಿಗೀಡಾಗುವ ಸಂದರ್ಭ ಬಂದರೂ ಬರಬಹುದು.
ವಿವಾದವಾಗಬಾರದಿದ್ದ ವಿಚಾರ ವಿವಾದವಾಗಿಬಿಟ್ಟಿದೆ. ಇದರ ಬಗ್ಗೆ ಸಾಹಿತ್ಯ, ಸಾಂಸ್ಕೃತಿಕ ವಲಯದ ಮೌನ ಅಚ್ಚರಿ ಮೂಡಿಸಿದೆ. ಇಡೀ ಮಾಧ್ಯಮಗಳು ಈ ವಿಚಾರವನ್ನು ವಿವಾದವಾಗಿಸಿದ ಅಪರಾಧಿ ಸ್ಥಾನದಲ್ಲಿ ನಿಂತಿವೆ. ನಾಡಿನ ಪ್ರಜ್ಞಾವಂತರು ಮೌನ ಮುರಿದು ವಿವಾದಕ್ಕೆ ಅಂತ್ಯ ಹಾಡಬೇಕಿದೆ.
