ಹೆಸರಿನ ತಕರಾರಿನ ನಡುವೆ, ಇದು ಸಂಭ್ರಮಿಸಬೇಕಾದ ಹೊತ್ತು. ಎರಡು ತೀರಗಳ ನಡುವೆ ಕೊಂಡಿಯೊಂದು ಬೆಸೆದಿರುವ ಹೊತ್ತು. ಐವತ್ತು ವರ್ಷಗಳ ಬದುಕು ಮತ್ತೊಂದು ಪಲ್ಲಟಕ್ಕೆ ತೆರೆದುಕೊಳ್ಳುತ್ತಿದೆ.
ಅಂತೂ ಇಂತೂ ದ್ವೀಪದ ಐದು ದಶಕಗಳ ಹೋರಾಟಕ್ಕೆ ಅಂತಿಮ ಫಲ ಸಿಕ್ಕಿದೆ. ಈ ಸುದೀರ್ಘ ಪಯಣದಲ್ಲಿ ಮಕ್ಕಳ ವಿದ್ಯಾಭ್ಯಾಸದ ಪರದಾಟ, ವಯೋವೃದ್ಧರ ಬಳಲಿಕೆ, ಕಾಯಿಲೆ ಬಿದ್ದವರ ನರಳಾಟ, ಬಸುರಿ- ಬಾಣಂತಿಯರ ನಿಟ್ಟುಸಿರು- ಹೀಗೆ ಸಾವಿರಾರು ನೆನಪುಗಳು ಸೇರಿವೆ. ಶರಾವತಿ ಇಡೀ ರಾಜ್ಯಕ್ಕೆ ಬೆಳಕು ಕೊಟ್ಟರೂ, ತನ್ನ ಮಡಿಲ ಮಕ್ಕಳಿಗೆ ಕತ್ತಲು ನೀಡಿತ್ತು. ಮುಳುಗಡೆ ಸಂತ್ರಸ್ತರ ಗೋಳಿನ ಜೀವನ ಐದು ದಶಕಗಳು ಸಾಗಿತು. ಅಂತಿಮವಾಗಿ ಸುಮಾರು 20,000 ಜನರ ಪರದಾಟಕ್ಕೆ ಅಂತ್ಯಹಾಡುವ ನಿಟ್ಟಿನಲ್ಲಿ ಭಾರತದ ಎರಡನೇ ಅತಿದೊಡ್ಡ ತೂಗು ಸೇತುವೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ನಿರ್ಮಾಣವಾಗಿದೆ.
1942ರಿಂದ 1946ರ ನಡುವೆ ಹಿರೇಭಾಸ್ಕರ (ಮಡೇನೂರು) ಡ್ಯಾಮ್ ಕಟ್ಟಲಾಯಿತು. ಶರಾವತಿ ಕಣಿವೆಯಲ್ಲಿ ತಲೆ ಎತ್ತಿದ ಮೊದಲ ಜಲಾಶಯ ಅದಾಗಿತ್ತು. ತುಮರಿ ಭಾಗದ ಜನರು ಡ್ಯಾಮ್ ಮೇಲೆ ತಿರುಗಾಡಲು ಅನುವು ಮಾಡಿಕೊಡಲಾಯಿತು. ಆದರೆ 1963-67ರ ನಡುವೆ ಎರಡನೇ ಡ್ಯಾಮ್ ಲಿಂಗನಮಕ್ಕಿಯಲ್ಲಿ ನಿರ್ಮಾಣವಾಯಿತು. ಮಡೇನೂರು ಡ್ಯಾಮ್ ಮುಳುಗಡೆಯಾಗಿ ಅದರ ಮೇಲೆ 20 ಅಡಿ ನೀರು ನಿಂತುಕೊಂಡಿತು. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ರಸ್ತೆ ಮೂಲಕ ಪ್ರಯಾಣಿಸಬೇಕಾದರೆ ಸುಮಾರು 100 ಕಿಮೀ ಸುತ್ತಾಡಿ ಸೇರಬೇಕಾಗಿತ್ತು. ಶರಾವತಿ ನೀರಿನಿಂದ ಮುಳುಗಡೆಯಾದ ಜನರ ಗೋಳಿನ ಕಥೆ ಅಲ್ಲಿಂದ ತೆರೆದುಕೊಳ್ಳುತ್ತದೆ. ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗುವುದೆಂದರೆ ಸಾಹಸವೇ ಆಗಿತ್ತು. ಹೀಗಾಗಿ 1969ರಲ್ಲಿ ಲಾಂಚ್ ತೆರೆದು ದ್ವೀಪದ ಜನರ ಓಡಾಟಕ್ಕೆ ಅನುವು ಮಾಡಿಕೊಡಲಾಯಿತು.
ಕಳಸವಳ್ಳಿ-ಅಂಬಾರಗೋಡ್ಲು ನಡುವೆ ಚಲಿಸುತ್ತಿದ್ದ ಲಾಂಚ್ 5 ದಶಕಗಳ ಕಾಲ ಜನರ ಬದುಕಿನ ಭಾಗವಾಗಿತ್ತು. ಸಂಜೆಯಾದ ಮೇಲೆ ಲಾಂಚ್ ಮುಚ್ಚಲಾಗುತ್ತಿತ್ತು. ಹೀಗಾಗಿ ತುಮರಿ ಭಾಗದ ಜನರು ಹೊತ್ತು ಮುಳುಗುವ ಮುನ್ನ ಮನೆ ಸೇರಿಕೊಳ್ಳಬೇಕಿತ್ತು. ಆದರೆ ಕಾಯಿಲೆಗಳು, ಪ್ರಸವ ವೇದನೆಗಳು, ದಿಢೀರ್ ಅವಘಡಗಳು ಸಮಯ ಕೇಳಿ ಬರುವುದಿಲ್ಲ. ಇಂತಹ ಸಾವಿರಾರು ನೋವು ನಲಿವಿನ ಕಥನಗಳನ್ನು ಹೊತ್ತು ತಂದಿದ್ದ ಲಾಂಚ್ ಕೊನೆಯ ಪ್ರಯಾಣವನ್ನು ಮುಗಿಸಿದೆ. ದ್ವೀಪದ ಜನರು ಐದು ದಶಕಗಳ ಕಾಲ ನಡೆಸಿದ ಹೋರಾಟದ ಫಲವಾಗಿ ಎರಡು ತೀರಗಳ ನಡುವೆ 2.44 ಕಿಮೀ ಉದ್ದದ ಸೇತುವೆ ತಲೆ ಎತ್ತಿದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಕೈಗಾರಿಕೆಯಲ್ಲಿ ತಮಿಳುನಾಡು ಮಾದರಿ ಅಳವಡಿಸಿಕೊಳ್ಳಲಿ ಕರ್ನಾಟಕ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವ್ಯಾಪ್ತಿಗೆ ಬಂದಿರುವ ಈ ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೊಡುಗೆ ಖಂಡಿತ ಇದೆ. ಕಳಸವಳ್ಳಿ-ಅಂಬಾರಗೋಡ್ಲು ಸೇತುವೆ ನಿರ್ಮಾಣಕ್ಕೆ ಹಣ ಮೀಸಲಿಡುವ ಘೋಷಣೆ ಮಾಡಿದ್ದು ಬಿ.ಎಸ್.ವೈ. ಒಟ್ಟಾರೆಯಾಗಿ 473 ಕೋಟಿ ರೂ. ವೆಚ್ಚದಲ್ಲಿ ಸೇತುವೆ ತಲೆ ಎತ್ತಿದ್ದು, ಭಾರತದ ಎರಡನೇ ಅತಿ ಉದ್ದದ ಕೇಬಲ್ ಸೇತುವೆ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಈ ಕೆಲಸದಲ್ಲಿ ಭಾಗಿಯಾದ ಎಲ್ಲರೂ ಅಭಿನಂದನಾರ್ಹರು. ಎಂದೋ ಆಗಬೇಕಿದ್ದ ಸೇತುವೆ ತಡವಾದರೂ ನಿರ್ಮಾಣವಾಗಿರುವ ಸೇತುವೆ ನೋಡಿ ಈ ಭಾಗದ ಜನರಲ್ಲಿ ಭಾವುಕ ಕ್ಷಣಗಳು, ನೆಮ್ಮದಿಯ ನಿಟ್ಟುಸಿರು.
ಮುಖ್ಯವಾಗಿ ಈ ಸೇತುವೆಗೆ ಯಾವ ಹೆಸರು ಇಡಬೇಕೆಂಬ ಚರ್ಚೆ ಎದ್ದಿದೆ. ಆರಂಭದಲ್ಲಿ ‘ಸಿಗಂದೂರು ಶ್ರೀ ಚೌಡೇಶ್ವರಿ ತೂಗು ಸೇತುವೆ’ ಎಂಬ ಹೆಸರನ್ನು ತೇಲಿಬಿಡಲಾಯಿತು. ಸಂಸದ ಬಿ.ವೈ.ರಾಘವೇಂದ್ರ ಅವರೇ ಈ ಹೆಸರನ್ನು ಪ್ರಚಾರಕ್ಕೆ ತಂದರು. ಆದರೆ ಸ್ಥಳೀಯರನೇಕರು ತಕರಾರು ಎತ್ತಿದರು. ಸಿಗಂದೂರು ಶ್ರೀ ಕ್ಷೇತ್ರ ಪ್ರವರ್ಧಮಾನಕ್ಕೆ ಬಂದಿದ್ದು 2004ರಿಂದೀಚೆಗೆ. ಆದರೆ ದ್ವೀಪಕ್ಕೆ ಐದು ದಶಕಗಳ ಇತಿಹಾಸವಿದೆ. ಇಲ್ಲಿನ ಲಾಂಚ್ ಕಾರಣಕ್ಕೂ, ಧಾರ್ಮಿಕ ಉದ್ದೇಶಗಳಿಗೂ ಜನ ಬರಲಾರಂಭಿಸಿದ್ದು ನಿಜ. ನೈಸರ್ಗಿಕ ಟೂರಿಸಂ ಬೆಳೆದು ಶ್ರೀಕ್ಷೇತ್ರವೂ ಅಭಿವೃದ್ಧಿಯಾಗಿದ್ದೂ ನಿಜ. ಆದರೆ ಧಾರ್ಮಿಕ ಕ್ಷೇತ್ರದ ಹೆಸರಿಗಿಂತ ನಮ್ಮ ಹೋರಾಟದ ಬದುಕನ್ನು ಸೇತುವೆ ಧ್ವನಿಸಬೇಕು ಎನ್ನುವುದು ಸ್ಥಳೀಯರನೇಕರ ಆಗ್ರಹ. ಅಂತಿಮವಾಗಿ ಇಂದು ರಾಘವೇಂದ್ರ ಅವರು ಪತ್ರಿಕೆಯೊಂದರಲ್ಲಿ ಬರೆದಿರುವ ಲೇಖನದಲ್ಲಿ ‘ಕಳಸವಳ್ಳಿ- ಅಂಬಾರಗೋಡ್ಲು- ಸಿಗಂದೂರು ಸೇತುವೆ’ ಎಂಬ ಹೆಸರನ್ನು ಬಳಸಿದ್ದಾರೆ. ಅಷ್ಟರ ಮಟ್ಟಿಗೆ ಜನರ ಕೂಗನ್ನು ಆಲಿಸಿದ್ದಾರೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ |ದೇವರ ಆಟವೇ, ದಗಲುಬಾಜಿ ಕಾಟವೇ? ಯಾವುದು ನಿಜ ಮೋದಿಯವರೇ!
ಯೋಜನೆ ಶುರುವಾಗಿನಿಂದಲೂ ಕಳಸವಳ್ಳಿ-ಅಂಬಾರಗೋಡ್ಲು ಸೇತುವೆ ಎಂದೇ ಬಳಸಲಾಗಿದೆ. ಈ ಭಾಗದ ನದಿ ತೀರದ ಜನರು ಅಂಬಾರಗೋಡ್ಲು ದೋಣಿ ಕಡವು ಎಂದೂ ಶತಮಾನಗಳಿಂದ ಕರೆದುಕೊಂಡು ಬಂದಿದ್ದಾರೆ. ಹೀಗಾಗಿ ಸೇತುವೆಯ ಹೆಸರಲ್ಲಿ ಕಳಸವಳ್ಳಿ-ಅಂಬಾರಗೋಡ್ಲು ಎಂಬುದಿರಲಿ ಎನ್ನುವವರಿದ್ದಾರೆ. ಶರಾವತಿ ನದಿಯು ನಮ್ಮ ಬದುಕಿನ ಭಾಗವಾಗಿದ್ದು, ಹೀಗಾಗಿ ‘ಶರಾವತಿ ತೂಗು ಸೇತುವೆ’ ಎಂದು ಸರಳವಾಗಿ ಕರೆಯಬಹುದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ. ಈ ಭಾಗದ ದ್ವೀಪದ ಜನರ ಹೋರಾಟದ ಬದುಕನ್ನು ಈ ಸೇತುವೆಯ ಹೆಸರು ನೆನಪಿಸುವ ನಿಟ್ಟಿನಲ್ಲಿಯೇ ಜನಪ್ರತಿನಿಧಿಗಳು ಮುಂದುವರಿಯುವುದು ಸೂಕ್ತವೆನಿಸುತ್ತದೆ. ಎಲ್ಲಕ್ಕೂ ಮೊದಲು ಸ್ಥಳೀಯರೊಂದಿಗೆ ಜನಪ್ರತಿನಿಧಿಗಳು ಮಾತನಾಡಿ, ಅವರ ಅಭಿಪ್ರಾಯ ಗಣನೆಗೆ ತೆಗೆದುಕೊಂಡು ಮುಂದುವರಿಯಬಹುದು. ಹೆಸರಿನ ತಕರಾರಿನ ನಡುವೆ, ಇದು ಸಂಭ್ರಮಿಸಬೇಕಾದ ಹೊತ್ತು. ಎರಡು ತೀರಗಳ ನಡುವೆ ಕೊಂಡಿಯೊಂದು ಬೆಸೆದಿರುವ ಹೊತ್ತು. ಐವತ್ತು ವರ್ಷಗಳ ಬದುಕು ಮತ್ತೊಂದು ಪಲ್ಲಟಕ್ಕೆ ತೆರೆದುಕೊಳ್ಳುತ್ತಿದೆ. ಸಂತ್ರಸ್ತ ಜನರು ಇನ್ನಾದರೂ ನೆಮ್ಮದಿಯ ದಿನಗಳನ್ನು ಕಾಣಲಿ.
