ಈ ದಿನ ಸಂಪಾದಕೀಯ | ಮಹಿಳಾ ಮೀಸಲಾತಿ ಮರೆಯಲ್ಲಿ ಮೋದಿ ಸರ್ಕಾರದ ಮಸಲತ್ತು!

Date:

ಮೋದಿ ಸರ್ಕಾರ ಬಿಜೆಪಿಯನ್ನು ಗೆಲ್ಲಿಸದಿರುವ ದಕ್ಷಿಣ ರಾಜ್ಯಗಳ ರಾಜಕೀಯ ಅಧಿಕಾರ ಪ್ರಾತಿನಿಧ್ಯವನ್ನು ಮೊಟಕು ಮಾಡಿ, ಕೇಸರೀಕರಣಗೊಂಡಿರುವ ಉತ್ತರದ ರಾಜ್ಯಗಳ ರಾಜಕೀಯ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲಿದೆ.  ವಿರೋಧ ಪಕ್ಷಗಳ ಭದ್ರ ಅಧಿಕಾರ ನೆಲೆಗಳನ್ನು ಕದಲಿಸುವ ತಂತ್ರವಿದು. ಕ್ಷೇತ್ರಗಳ ಗಡಿರೇಖೆಗಳನ್ನು ಬಿಜೆಪಿ ಅನುಕೂಲಕ್ಕೆ ತಕ್ಕಂತೆ, ಮುಸ್ಲಿಂ ಬಹುಳ ಕ್ಷೇತ್ರಗಳನ್ನು ಯಶಸ್ವಿಯಾಗಿ ಹರಿದು ಹಾಕಿದ ಜಮ್ಮು- ಕಾಶ್ಮೀರ ಮತ್ತು ಅಸ್ಸಾಮ್ ಕ್ಷೇತ್ರ ಮರುವಿಂಗಡಣೆಗಳ ನಿದರ್ಶನ ಈಗಾಗಲೇ ನಮ್ಮ ಕಣ್ಣ ಮುಂದಿದೆ.

ಆಳುವ ಪಕ್ಷ ಮತ್ತು ಪ್ರತಿಪಕ್ಷಗಳು ಸಮಬಲದೊಂದಿಗೆ ಸೆಣೆಸಬೇಕು ಎನ್ನುವುದು ಜನತಂತ್ರದ ಆಶಯ. ಅಳಿದುಳಿದಿದ್ದ ಆಶಯವೂ ಮಣ್ಣುಗೂಡಿ ಬಹುಕಾಲ ಉರುಳಿದೆ. 2014ರ ನಂತರವಂತೂ ಆಳುವ ಪಕ್ಷ ಮತ್ತು ಪ್ರತಿಪಕ್ಷಗಳು ಇದಿರುಬದಿರು ನಿಂತು ಕಾದಾಡುವ ನೆಲಗಳ ನಡುವೆ ನೆಲಮುಗಿಲುಗಳ ಅಂತರವನ್ನು ಪ್ರಜ್ಞಾಪೂರ್ವಕವಾಗಿ ನಿರ್ಮಿಸಲಾಗಿದೆ. ಈ ಅಂತರವನ್ನು ಕೈಯಾರೆ ಕಟ್ಟಿಕೊಂಡು ಎತ್ತರದಲ್ಲಿ ನಿಂತು ಕಾದಾಡಿದರೂ, 2024ರಲ್ಲಿ ಬಿಜೆಪಿಗೆ ಸರಳ ಬಹುಮತ ದಕ್ಕದೆ ಹೋಯಿತು. ಇನ್ನು ಅಂತರವನ್ನು ನಿರ್ಮಿಸಿಕೊಳ್ಳದೆ ಸಮಸಮ ಹೋರಾಟಕ್ಕೆ ಇಳಿದಿದ್ದರೆ ಬಿಜೆಪಿ ಶೋಚನೀಯವಾಗಿ ಸೋಲುತ್ತಿತ್ತು ಎನ್ನುವುದು ಚುನಾವಣಾ ತಜ್ಞರನೇಕರ ಅನಿಸಿಕೆ. ‘ಅಬ್ ಕೇ ಬಾರ್ ಚಾರ್ ಸೌ ಪಾರ್’ ಎಂಬ ಠೇಂಕಾರದ ಘೋಷಣೆಗಳಲ್ಲಿ ಮೈಮರೆತಿದ್ದ ಬಿಜೆಪಿಗೆ ಚುನಾವಣಾ ಫಲಿತಾಂಶಗಳು ತೀವ್ರ ಆಘಾತ ನೀಡಿದ್ದವು. ಮೌನಕ್ಕೆ ಜಾರಿದ್ದ ಪಕ್ಷ, ಕಡೆಗೆ ಮಿತ್ರಪಕ್ಷಗಳ ಊರುಗೋಲುಗಳ ಹಿಡಿದು ಸರ್ಕಾರ ರಚಿಸಿದ ಸಂಗತಿ ಜನಜನಿತ.

- Advertisement -

ಎಂತಹ ಚುನಾವಣೆಗಳನ್ನೂ ‘ಎದುರಿಸುವ’ ದೈತ್ಯಶಕ್ತಿಯನ್ನು ಬಿಜೆಪಿಗೆ ದಯಪಾಲಿಸಿದ್ದು ಮೋದಿ ಮತ್ತು ಅಮಿತ್ ಶಾ ಜೋಡಿ ತನಗೆ ತಾನೇ ಮಾತ್ರವಲ್ಲದೆ ತಮ್ಮ ಪಕ್ಷಕ್ಕೆ ಮಾಡಿದ ಮಹದುಪಕಾರವೇ ಸರಿ. ಚುನಾವಣೆಗಳನ್ನು ಗೆದ್ದ ಮರುದಿನದಿಂದಲೇ ಮುಂದಿನ ಚುನಾವಣೆಗೆ ಹಗ್ಗ ಹೊಸೆಯುವ ಕೆಲಸವನ್ನು ಬಿಜೆಪಿಯಷ್ಟು ದಕ್ಷತೆಯಿಂದ ಮಾಡುತ್ತ ಬಂದಿರುವ ಪಕ್ಷ ದೇಶದಲ್ಲಿ ಮತ್ತೊಂದಿಲ್ಲ.  ಈ ವೃತ್ತಿ- ಪ್ರವೃತ್ತಿಯಿಂದ ಇತರೆ ಪಕ್ಷಗಳು ಕಲಿಯುವುದು ಸಾಕಷ್ಟಿದೆ. ಆದರೆ ಜನತಾಂತ್ರಿಕ ಚೌಕಟ್ಟನ್ನು ಮೀರಿದ ವರ್ತನೆ-ದುಂಡಾವರ್ತನೆಗಳು, ಸಂಚುಗಳು ಷಡ್ಯಂತ್ರಗಳು ಅನುಕರಣೀಯ ಅಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಲೋಕಸಭಾ ಚುನಾವಣೆಗಳು ಇನ್ನೂ ಮೂರು ವರ್ಷ ದೂರ ಇರುವಂತೆಯೇ ಬಿಜೆಪಿ ಚುನಾವಣೆಗಳನ್ನು ‘ಅಪಹರಿಸುವ’ ಹೊಸ ಹುನ್ನಾರಕ್ಕೆ ಚಾಲನೆ ನೀಡಿದೆ. ಅದುವೇ ಲೋಕಸಭಾ ಕ್ಷೇತ್ರ ಮರುವಿಂಗಡಣೆ. ಈ ಮರುವಿಂಗಡಣೆಯನ್ನು ನೇರ ಜಾರಿಗೆ ತರದೆ, ಮಹಿಳಾ ಮೀಸಲಾತಿಯ ಹೊಗೆಪರದೆಯ ಹಿಂದೆ ಅವಿತಿರಿಸಿದೆ. ಹೆಸರಿಗಷ್ಟೇ ನಾರೀಶಕ್ತಿ ವಂದನೆ. ವಾಸ್ತವದಲ್ಲಿ ಮೋದಿ ಸರ್ಕಾರದ ಸ್ವಾರ್ಥ ಸಾಧನೆ. ಮಹಿಳಾ ಮೀಸಲು ಮಸೂದೆಯನ್ನು ಮೋದಿ ಸರ್ಕಾರ 2023ರ ಸೆಪ್ಟಂಬರ್ ನಷ್ಟು ಹಿಂದೆಯೇ ಅಂಗೀಕರಿಸಿತ್ತು. ಆದರೆ ಜಾರಿಗೆ ಬರುವ ವರ್ಷ ತಿಂಗಳನ್ನು ಸೂಚಿಸಿರಲಿಲ್ಲ. ಮುಂದಿನ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯ ನಂತರ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಿತ್ತು.

 2029ರಲ್ಲಿ ಲೋಕಸಭಾ ಚುನಾವಣೆಗಳನ್ನು ಗೆಲ್ಲಲು ನಡೆಸಿರುವ ಸನ್ನಾಹಗಳ ಪೈಕಿ ಇದೂ ಒಂದು. ಯಾಕೆಂದರೆ ಇದೊಂದನ್ನೇ ನೆಚ್ಚಿ ಕುಳಿತುಕೊಳ್ಳುವ ಆಸಾಮಿಯಲ್ಲ ಮೋಶಾ ಬಿಜೆಪಿ.

ಈ ಕಾರ್ಯಸಾಧನೆಗೆಂದೇ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ನಾರೀಶಕ್ತಿ ವಂದನೆ ಅಧಿನಿಯಮ (ಸಂವಿಧಾನಕ್ಕೆ 106ನೆಯ ತಿದ್ದುಪಡಿ) ಎಂಬ ಆಡಂಬರದ ಹೆಸರನ್ನು ಈ ಅಧಿವೇಶನಕ್ಕೆ ಇಡಲಾಗಿದೆ. ಲೋಕಸಭೆ ಮತ್ತು ವಿಧಾನಸಭೆಗಳ ಮೂರನೆಯ ಎರಡರಷ್ಟು ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡುವ ಇರಾದೆ ಪ್ರಕಟಿಸಲಾಗಿದೆ. ಆದರೆ ತಮಿಳುನಾಡು- ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳ ನಡುವೆ ತರಾತುರಿಯಿಂದ ಕರೆಯಲಾಗಿರುವ ಅಧಿವೇಶನದ ಅಸಲಿ ಕಾರ್ಯಸೂಚಿಯು ಕ್ಷೇತ್ರ ಮರುವಿಂಗಡಣೆಯೇ ಆಗಿದೆ. ಮಹಿಳಾ ಮೀಸಲಾತಿಯನ್ನು ಮರುವಿಂಗಡಣೆಯ ಗೂಟಕ್ಕೆ ಬಿಗಿಯಲಾಗಿದೆ. ಮರುವಿಂಗಡಣೆಯ ನಂತರವೇ ಮಹಿಳಾ ಮೀಸಲಾತಿ ಜಾರಿಗೆ ಬರುವುದೆಂದು ಸರ್ಕಾರ ವಿಧಿಸಿದೆ. ಮಹಿಳಾ ಈ ಮಸೂದೆಯನ್ನು ಮುಂದಿಟ್ಟುಕೊಂಡು, ಅದರ ಮುಸುಕಿನ ಮರೆಯಲ್ಲಿ ತರುತ್ತಿರುವ ಮಸೂದೆ, ಕ್ಷೇತ್ರ ಮರುವಿಂಗಡಣೆಯದು. ಅರ್ಥಾತ್ ಲೋಕಸಭೆ ಮತ್ತು ವಿಧಾನಸಭೆಯ ಹಾಲಿ ಕ್ಷೇತ್ರಗಳ ಗಡಿರೇಖೆಗಳನ್ನು ಬದಲಿಸಿ, ಹೊಸ ಹೆಚ್ಚುವರಿ ಕ್ಷೇತ್ರಗಳನ್ನು ರೂಪಿಸುವುದು. ಹೇಳುವುದಕ್ಕೆ ಕೇಳಿಸಿಕೊಳ್ಳುವುದಕ್ಕೆ ಸರಳವೆಂದು ತೋರುವ ಮರುವಿಂಗಡಣೆಯ ಕಸರತ್ತು ಭಾರತವೆಂಬ ಒಕ್ಕೂಟದ ರೂಪುರೇಷೆಗಳು, ಚಹರೆ ಗುರುತುಗಳನ್ನು ಬದಲಿಸುವಂತಹುದು. ಆಳುವ ಪಕ್ಷ ಬಯಸಿದರೆ ತನಗೆ ತಾರಕವಾಗಿಯೂ, ಪ್ರತಿಪಕ್ಷಗಳಿಗೆ ಮಾರಕವಾಗಿಯೂ ಜಾರಿಗೆ ಕೊಡಬಲ್ಲ ಶಕ್ತಿ ಸಾಮರ್ಥ್ಯ ಹೊಂದಿರುವಂತಹುದು. ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಅಧಿಕಾರದಲ್ಲಿದೆ. ಅಲ್ಲಿ ಈಗಾಗಲೆ ಸಾಧಿಸಿರುವ ಚುನಾವಣಾ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ಕ್ಷೇತ್ರ ಮರುವಿಂಗಡಣೆಯನ್ನು ಬಳಸಲಿದೆ. ತಾನು ದುರ್ಬಲವಾಗಿರುವ ರಾಜ್ಯಗಳಲ್ಲಿ ಆಳಕ್ಕೆ ಬೇರೂರಲು ಅಗತ್ಯವಿರುವ ‘ಅನುಕೂಲಗಳನ್ನು’ ಮರುವಿಂಗಡಣೆಯ ಮೂಲಕ ಸೃಷ್ಟಿಸಿಕೊಳ್ಳಲಿದೆ. ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಿರುವ ಜನಗಣತಿ 2011ರ ನಂತರ 2021ರಲ್ಲಿ ನಡೆಯಬೇಕಿತ್ತು. ಆದರೆ ಅದನ್ನು ನಿರಂತರ ಮುಂದೆ ಹಾಕುತ್ತ ಬರಲಾಯಿತು. ಕಡೆಗೆ 2026-27ರಲ್ಲಿ ನಡೆಸುವುದಾಗಿ ಸಾರಲಾಯಿತು. ಸಂವಿಧಾನದ ಪ್ರಕಾರ ರಾಜ್ಯಗಳ ಸೀಟು ಹಂಚಿಕೆಯನ್ನು ಸರ್ವಸಮ್ಮತಿಯ ಮೇರೆಗೆ 1971ರ ಜನಗಣತಿಯ ಅಂಕಿಅಂಶಗಳ ಮೇರೆಗೆ ಸ್ಥಗಿತಗೊಳಿಸಲಾಗಿತ್ತು. 2026ರ ಜನಗಣತಿಯ ನಂತರ ಈ ಗಡುವು ತೀರಲಿತ್ತು.

ಮುಂದಿನ ಕ್ಷೇತ್ರ ಮರುವಿಂಗಡಣೆಯು 2026ರ ನಂತರದ ಮೊದಲ ಜನಗಣತಿಯ ವರದಿ ಪ್ರಕಟವಾದ ನಂತರವೇ ಸ್ಥಗಿತಗೊಳಿಸಿರುವ ಗಡುವು ತೀರುತ್ತದೆ. ಅರ್ಥಾತ್ ಮುಂದಿನ ಕ್ಷೇತ್ರ ಮರುವಿಂಗಡಣೆಯ 2031ರ ಜನಗಣತಿಯನ್ನು ಆಧರಿಸಿ ನಡೆಯಬೇಕಿತ್ತು.  ಆದರೆ ಮರುವಿಂಗಡಣೆಯನ್ನು 2029ರ ಲೋಕಸಭಾ ಚುನಾವಣೆಯ ಒಳಗಾಗಿ ಮಾಡಿ ಮುಗಿಸಬಯಸುತ್ತದೆ ಬಿಜೆಪಿ. ಈ ಕಾರಣಕ್ಕಾಗಿ ಜನಗಣತಿಯನ್ನು 2026 ಅಥವಾ 2027ರ ತನಕ ಎಳೆಯಬಯಸುತ್ತದೆ ಮೋದಿ ಸರ್ಕಾರ ಎಂಬ ಮಾತನ್ನು ಜೀನ್ ಡ್ರೀಜ್ ಅವರು 2024ರಷ್ಟು ಹಿಂದೆಯೇ ಆಡಿದ್ದರು. ಅವರ ಈ ಮುನ್ನೋಟ ಇದೀಗ ನಿಜವೆನಿಸಿದೆ.

2026-27ರಲ್ಲಿ ಜನಗಣತಿ ನಡೆಸಿದರೂ, ಮರುವಿಂಗಡಣೆಯ ಕೆಲಸ ಮುಗಿಯಲು ವರ್ಷಗಟ್ಟಲೆ ಹಿಡಿಯುತ್ತದೆಂದು ಅರಿತ ಮೋದಿ ಸರ್ಕಾರ ಇದೀಗ ಮರುವಿಂಗಡಣೆಯ ತರಾತುರಿಯಲ್ಲಿದೆ. 2011ರ ಜನಗಣತಿಯ ಆಧಾರದ ಮೇಲೆ ಮರುವಿಂಗಡಣೆ ನಡೆಸಲು ಮುಂದಾಗಿದೆ.ದಕ್ಷಿಣದ ರಾಜ್ಯಗಳ ಸೀಟುಗಳ ಸಂಖ್ಯೆಗಳು ತಗ್ಗುವುದಿಲ್ಲ ಎಂದು ಅಮಿತ್ ಭರವಸೆ ನೀಡಿದ್ದರು. ಈ ಭರವಸೆಯು ಇದೀಗ ಸಿದ್ಧಪಡಿಸಿರುವ ಸಂವಿಧಾನ ತಿದ್ದುಪಡಿ ಮಸೂದೆಗಳಲ್ಲಿ ನಾಪತ್ತೆಯಾಗಿದೆ. ಸೀಟುಗಳು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆಯಾಗಲಿವೆಯೇ ವಿನಾ ಪ್ರಮಾಣಾತ್ಮಕ ದರದಲ್ಲಿ ಅಲ್ಲ. ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಛತ್ತೀಸಗಢ, ಉತ್ತರಾಖಂಡ ಹಾಗೂ ದೆಹಲಿಯ ಹಿಂದೀ ಸೀಮೆಯ ಸೀಟುಗಳ ಸಂಖ್ಯೆ 543ರ ಪೈಕಿ 207. ಮರುವಿಂಗಡಣೆಯ ನಂತರ ಈ ಸಂಖ್ಯೆ 366ಕ್ಕೆ ಹೆಚ್ಚಲಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ಪುದುಚೆರಿಯ ಹಾಲಿ ಸೀಟುಗಳ ಸಂಖ್ಯೆ 132. ಇವುಗಳ ಸಂಖ್ಯೆ 176ಕ್ಕೆ ಏರಲಿದೆ. ಹಿಂದೀ ಸೀಮೆಯಲ್ಲಿ ಸೀಟುಗಳ ಏರಿಕೆಯ ಶೇಕಡಾವಾರು ಪ್ರಮಾಣ 77ರಷ್ಟಾದರೆ, ದಕ್ಷಿಣ ರಾಜ್ಯಗಳ ಏರಿಕೆಯ ಪ್ರಮಾಣ 33 ಮಾತ್ರ. ಮಹಿಳಾ ಮೀಸಲನ್ನು ಮರುವಿಂಗಡಣೆಯ ಗೂಟಕ್ಕೆ ಬಿಗಿಯಬೇಕಾದ ಅಗತ್ಯವೇ ಇರಲಿಲ್ಲ. ಹಾಲಿ 543 ಸೀಟುಗಳಲ್ಲಿಯೇ ಹಂಚಿಕೆ ಮಾಡಬಹುದಿತ್ತು. ಆದರೆ ಮೋದಿ ಸರ್ಕಾರದ ಅಸಲು ಉದ್ದೇಶ ಮಹಿಳಾ ಮೀಸಲಾತಿ ಆಗಿರಲಿಲ್ಲ. ಹೀಗಾಗಿಯೇ ಮರುವಿಂಗಡಣೆಗೆ ಕೈ ಹಾಕಿದೆ.

ಲೋಕಸಭೆಯಲ್ಲಿ ನಾನಾ ರಾಜ್ಯಗಳ ಪ್ರಾತಿನಿಧ್ಯದ ಪಾಲು ಅವುಗಳ ಜನಸಂಖ್ಯೆಗೆ ಅನುಗುಣವಾಗಿ ಇರಬೇಕು ಮತ್ತು ಎಲ್ಲ ಲೋಕಸಭಾ ಕ್ಷೇತ್ರಗಳ ಜನಸಂಖ್ಯೆಯು ಸಾಧ್ಯವಾದಷ್ಟೂ ಒಂದೇ ಪ್ರಮಾಣದಲ್ಲಿರಬೇಕು ಎಂಬುದು ಮರುವಿಂಗಡಣೆಯ ತತ್ವ. ಸಂವಿಧಾನದ 81ನೆಯ ಪರಿಚ್ಛೇದವೇ ಈ ಅಂಶವನ್ನು ವಿಧಿಸಿದೆ. ಈ ಹಿಂದೆ ಕ್ಷೇತ್ರ ಮರುವಿಂಗಡಣೆ ನಡೆದದ್ದು 1973ರಲ್ಲಿ. ಈ ಕಸರತ್ತು 1971ರ ಜನಗಣತಿಯನ್ನುಆಧರಿಸಿ ನಡೆದಿತ್ತು. ಮುಂದಿನ ಮರುವಿಂಗಡಣೆಯಲ್ಲಿ 1973ರಿಂದ ತ್ವರಿತಗತಿಯಲ್ಲಿ ಜನಸಂಖ್ಯೆ ಹೆಚ್ಚಾಗಿರುವ ರಾಜ್ಯಗಳಿಗೆ ಹೆಚ್ಚು ಲೋಕಸಭಾ ಕ್ಷೇತ್ರಗಳು ದೊರೆಯಲಿವೆ. ದಕ್ಷಿಣದ ರಾಜ್ಯಗಳ ಪಾಲಿಗೆ ಗಂಡಾಂತರ ಅಡಗಿರುವುದು ಇಲ್ಲಿಯೇ. 1973ರ ನಂತರ ಉತ್ತರಭಾರತದ ರಾಜ್ಯಗಳ ಜನಸಂಖ್ಯೆ ತೀವ್ರ ಪ್ರಮಾಣದಲ್ಲಿ ಏರಿದೆ. ದಕ್ಷಿಣದ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ನೀತಿಯನ್ನು ಬಿಗಿಯಾಗಿ ಅನುಸರಿಸುತ್ತ ಬಂದಿವೆ. ಈ ಕಾರಣದಿಂದಾಗಿ ಅವುಗಳ ಜನಸಂಖ್ಯೆ ಭಾರೀ ಗತಿಯಲ್ಲಿ ಬೆಳೆದಿಲ್ಲ. ಕ್ಷೇತ್ರ ಮರುವಿಂಗಡಣೆಗೆ ಜನಸಂಖ್ಯೆಯೇ ಮೂಲಾಧಾರ. ಪರಿಣಾಮವಾಗಿ ಲೋಕಸಭೆಯಲ್ಲಿ ಉತ್ತರ ಭಾರತದ ರಾಜ್ಯಗಳ ಸೀಟುಗಳು ಹಿಗ್ಗಲಿವೆ.ದಕ್ಷಿಣದ ರಾಜ್ಯಗಳ ಸೀಟುಗಳು ಹಿಗ್ಗುವುದಿರಲಿ, ಈಗ ಇರುವುದಕ್ಕಿಂತ ಕಡಿಮೆ ಸಂಖ್ಯೆಗೆ ಕುಗ್ಗಲಿವೆ. ಇಂತಹ ಮರುವಿಂಗಡಣೆಯನ್ನು ಬಿಜೆಪಿ ಜಾರಿಗೆ ತಂದಿದ್ದೇ ಆದರೆ, 2029ರ ಲೋಕಸಭಾ ಚುನಾವಣೆಯಲ್ಲಿ ಅದರ ಗೆಲುವಿನ ಅವಕಾಶಗಳು ಹೆಚ್ಚಲಿವೆ. ಯಾಕೆಂದರೆ ದಕ್ಷಿಣಕ್ಕಿಂತ ಉತ್ತರದಲ್ಲೇ ಬಿಜೆಪಿ ಹೆಚ್ಚು ಬಲಿಷ್ಠ.

ಮೋದಿ ಸರ್ಕಾರ ಬಿಜೆಪಿಯನ್ನು ಗೆಲ್ಲಿಸದಿರುವ ದಕ್ಷಿಣ ರಾಜ್ಯಗಳ ರಾಜಕೀಯ ಅಧಿಕಾರ ಪ್ರಾತಿನಿಧ್ಯವನ್ನು ಮೊಟಕು ಮಾಡಿ, ಕೇಸರೀಕರಣಗೊಂಡಿರುವ ಉತ್ತರದ ರಾಜ್ಯಗಳ ರಾಜಕೀಯ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲಿದೆ.  ವಿರೋಧ ಪಕ್ಷಗಳ ಭದ್ರ ಅಧಿಕಾರ ನೆಲೆಗಳನ್ನು ಕದಲಿಸುವ ತಂತ್ರವಿದು. ಕ್ಷೇತ್ರಗಳ ಗಡಿರೇಖೆಗಳನ್ನು ಬಿಜೆಪಿ ಅನುಕೂಲಕ್ಕೆ ತಕ್ಕಂತೆ, ಮುಸ್ಲಿಂ ಬಹುಳ ಕ್ಷೇತ್ರಗಳನ್ನು ಯಶಸ್ವಿಯಾಗಿ ಹರಿದು ಹಾಕಿದ ಜಮ್ಮು- ಕಾಶ್ಮೀರ ಮತ್ತು ಅಸ್ಸಾಮ್ ಕ್ಷೇತ್ರ ಮರುವಿಂಗಡಣೆಗಳ ನಿದರ್ಶನ ಈಗಾಗಲೇ ನಮ್ಮ ಕಣ್ಣ ಮುಂದಿದೆ. ಇದೀಗ ಸಿದ್ಧವಾಗಿರುವ ಹೊಸ ಮಸೂದೆಯ ಪ್ರಕಾರ ಉದ್ದೇಶಿತ ಕ್ಷೇತ್ರ ಮರುವಿಂಗಡಣಾ ಆಯೋಗವು ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರೊಂದಿಗೆ ಸಮಾಲೋಚಿಸಲಿದೆ. ಆದರೆ ಅದರ ತೀರ್ಮಾನವೇ ಅಂತಿಮ. ಅದನ್ನು ಯಾವ ನ್ಯಾಯಾಲಯಗಳಲ್ಲೂ ಪ್ರಶ್ನಿಸುವಂತಿಲ್ಲ. ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಯ ಅಧ್ಯಕ್ಷತೆಯಲ್ಲಿ ರಚಿಸಲಾಗುವ ಈ ಆಯೋಗದ ಸದಸ್ಯರು ಕೇಂದ್ರೀಯ ಮುಖ್ಯ ಚುನಾವಣಾ ಆಯುಕ್ತರು ಮತ್ತು ರಾಜ್ಯಗಳ ಚುನಾವಣಾ ಆಯುಕ್ತರು. ಚುನಾವಣಾ ಆಯೋಗದ ಹಾಲಿ ಸ್ಥಿತಿಯನ್ನು ನೋಡಿದವರ್ಯಾರೂ ಅದು ಸ್ವತಂತ್ರವಾಗಿ ಉಳಿದಿದೆ ಎನ್ನಲಾರರು.

ಮೋದಿ ಸರ್ಕಾರದ ಈ ನಿರ್ದಿಷ್ಟ ಸ್ವರೂಪದ ಮರುವಿಂಗಡಣೆಯಿಂದ ಭಾರತ ಗಣರಾಜ್ಯ ಒಕ್ಕೂಟದ ಪ್ರಾದೇಶಿಕ ಅಧಿಕಾರ ಸಮತೋಲನ ಹದಗೆಡಲಿದೆ. ಸಂವಿಧಾನ ತಿದ್ದುಪಡಿಗಳು ಅಂಗೀಕಾರವಾದರೆ, ಸಂವಿಧಾನದಲ್ಲಿ ನಿಹಿತವಾಗಿರುವ ಅಧಿಕಾರಗಳು ಆಳುವ ಸರ್ಕಾರದ ಕೈವಶ ಆಗಲಿವೆ. ಪ್ರತಿಪಕ್ಷಗಳ ಸಮ್ಮತಿಯ ಅಗತ್ಯ ಬೀಳುವುದಿಲ್ಲ. ಸಂವಿಧಾನ ತಿದ್ದುಪಡಿಗೆ ಬೇಕಿರುವ ಮೂರನೆಯ ಎರಡರಷ್ಟು ಬಹುಮತ ಮೋದಿ ಸರ್ಕಾರಕ್ಕೆ ಇಲ್ಲದಿರುವುದೇ ಏಕೈಕ ಆಶಾ ಕಿರಣ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿದ್ದರಾಮಯ್ಯ ‘ಸ್ಟಿಂಗ್’ ವಿವಾದದ ಅಸಲಿ ವೃತ್ತಾಂತವೇನು? ‘ಸತ್ಯಕ್ಕೇ ಜಯ’ ಎಂದು ಮಾಜಿ ಸಿಎಂ ಹೇಳಿದ್ದೇಕೆ?

ಕರ್ನಾಟಕ ರಾಜಕಾರಣದಲ್ಲಿ ಇದೀಗ ‘ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ....

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...