ಈ ದಿನ ಸಂಪಾದಕೀಯ |ದೇವರ ಆಟವೇ, ದಗಲುಬಾಜಿ ಕಾಟವೇ? ಯಾವುದು ನಿಜ ಮೋದಿಯವರೇ!

Date:

Advertisements

2022 ಅಕ್ಟೋಬರ್ 30ರಂದು ಪ್ರಧಾನಿ ಮೋದಿಯವರ ತವರು ರಾಜ್ಯ, ಒಂದು ದಶಕ ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸಿದ್ದ ಗುಜರಾತಿನಲ್ಲಿ ಮೋರ್ಬಿ ಸೇತುವೆ ಕುಸಿದು 135 ಮಂದಿ ಪ್ರಾಣ ಕಳೆದುಕೊಂಡಿದ್ದರು. ಮೋದಿಯವರ “Act of Fraud” ಹೇಳಿಕೆ ಆಗ ಮುನ್ನೆಲೆಗೆ ಬಂದಿತ್ತು. ಮೋರ್ಬಿ ತೂಗು ಸೇತುವೆ ಬಳಕೆಗೆ ಯೋಗ್ಯವಾಗಿರಲಿಲ್ಲ, ದುರಸ್ತಿ ಮಾಡಲು ಗುತ್ತಿಗೆ ಕೊಟ್ಟಿದ್ದೂ ಫ್ರಾಡ್‌ ಕಂಪನಿಗೆ. ಪಶ್ಚಿಮ ಬಂಗಾಳದ ದುರಂತವನ್ನು ಗೇಲಿ ಮಾಡಿದ್ದ ಮೋದಿಯವರು ತಾವೇ ಭಾರೀ ಗೇಲಿಗೆ ಒಳಗಾದರು.

ಕಳೆದ ಒಂದು ವಾರದ ಅವಧಿಯಲ್ಲಿ ಡಬಲ್ ಎಂಜಿನ್ ಸರ್ಕಾರಗಳಿರುವ ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ತಾನ, ಹರಿಯಾಣ, ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಸೇತುವೆಗಳು ಮುರಿದು ಬಿದ್ದಿವೆ, ಹೆದ್ದಾರಿಗಳು ಆಳಕ್ಕೆ ಕುಸಿದು ಬಾಯಿ ತೆರೆದು ನುಂಗುವ ಬಾವಿಗಳಾಗಿ ಹೋಗಿವೆ. ಸಾವುನೋವುಗಳು ಸಂಭವಿಸಿವೆ. ಹೆದ್ದಾರಿಗಳು, ಸ್ಮಾರ್ಟ್ ಸಿಟಿಗಳ ರಸ್ತೆಗಳು ಅಕ್ಷರಶಃ ಹೊಳೆಗಳಾಗಿ ಹರಿದಿವೆ. ಆಳುವವರ ಬ್ರಹ್ಮಾಂಡ ಭ್ರಷ್ಟಾಚಾರದ ಪ್ರತ್ಯಕ್ಷ ಸಾಕ್ಷಿಗಳಾಗಿವೆ.

ಡಬಲ್ ಎಂಜಿನ್ ಸರ್ಕಾರಗಳನ್ನು ಆರಿಸಿದರೆ ಸ್ವರ್ಗವನ್ನೇ ಧರೆಗೆ ಇಳಿಸುತ್ತೇವೆ ಎಂದೆಲ್ಲ ಆಶ್ವಾಸನೆ ನೀಡಿದ್ದವರಿಗೆ ಆತ್ಮಸಾಕ್ಷಿಯಿದ್ದರೆ ಮುಖ ಮರೆಸಿಕೊಳ್ಳಬೇಕಾದ ದುಸ್ಥಿತಿಯಿದು. ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಸೇತುವೆಯೊಂದು ಕುಸಿದು ಬಿದ್ದಾಗ ಮೋದಿಯವರು ಮಮತಾ ದೀದಿಯನ್ನು ಕಟುಮಾತುಗಳ ಬಾಣಗಳಿಂದ ಇರಿದಿದ್ದರು. Act of God ಅಲ್ಲ, Act of Fraud (ದೇವರ ಆಟವಲ್ಲ, ಭ್ರಷ್ಟಾಚಾರ ದಗಲುಬಾಜಿಯ ಕಾಟ) ಎಂದು ಹಂಗಿಸಿದ್ದರು.

ದಗಲುಬಾಜಿಯ ಕಾಟವೇ ಎಂಬ ಅವರ ಪ್ರಶ್ನೆ ಒಂದಲ್ಲ, ಹತ್ತಾರು ತಿರುಗುಬಾಣಗಳಾಗಿ ತಿವಿದಿವೆ. ಏನೂ ಆಗಿಲ್ಲವೆಂದು ನಟಿಸುತ್ತ ಅಡ್ಡಾಡಿ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ.

ಜುಲೈ 9ರಂದು ಗುಜರಾತ್‌ ರಾಜ್ಯದ ವಡೋದರಾ ಜಿಲ್ಲೆಯ ಮುಜ್‌ಪುರ ಬಳಿಯ ಕೇವಲ ನಾಲ್ಕು ದಶಕಗಳಷ್ಟು ಹಳೆಯ ಗಂಭೀರಾ ಸೇತುವೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಹಲವಾರು ವಾಹನಗಳು ನದಿಗೆ ಬಿದ್ದು, ಹದಿನೇಳು ಮಂದಿ ಮೃತಪಟ್ಟಿದ್ದಾರೆ. ಆತಂಕಕಾರಿ ಸುದ್ದಿ ಏನೆಂದರೆ ಕಳೆದ ಐದಾರು ವರ್ಷಗಳಲ್ಲಿ ನಿರ್ಮಾಣ ಹಂತದ ಸೇತುವೆ, ಫ್ಲೈಓವರ್‌, ರಸ್ತೆ ಕುಸಿತದ ಸುದ್ದಿಗಳು ಮಾಮೂಲಿಯಾಗಿವೆ. ಕೆಲವು ಪ್ರಾಕೃತಿಕ ವಿಕೋಪ, ಭಾರೀ ಮಳೆಯ ಕಾರಣದಿಂದ, ನದಿ ತಟದಲ್ಲಿ ನಡೆಸುವ ಅವೈಜ್ಞಾನಿಕ ಅಭಿವೃದ್ಧಿಯ ಕಾರಣಕ್ಕೆ ಅವಘಡಗಳು ನಡೆದರೆ, ನಿರ್ಮಾಣ ಹಂತದಲ್ಲಿಯೇ ಕುಸಿದು ಬೀಳುವುದು ಖಂಡಿತವಾಗಿ Act of Fraud.

ಆದರೆ, ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಕಮಿಷನ್‌ ದಂಧೆ ನಡೆಯುತ್ತಿರುವುದು ನಿರ್ದಿಷ್ಟ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರ ಎಂದು ಮೂರ್ಖರಷ್ಟೇ ಹೇಳಬಹುದು. ಎಲ್ಲಾ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಹಳೆಯ ಸೇತುವೆಗಳು ಹಳೆಯದಾಗುತ್ತಾ ನಿರ್ವಹಣೆ ಬೇಕಾಗುತ್ತದೆ. ಗಂಭೀರಾ ಸೇತುವೆ ಬಹಳ ಹಿಂದಿನಿಂದಲೂ ಅಪಾಯಕಾರಿ ಶಿಥಿಲಾವಸ್ಥೆಯಲ್ಲಿತ್ತು. ಸ್ಥಳೀಯರು ಅದರ ಶಿಥಿಲಾವಸ್ಥೆಯ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡಿ ತುರ್ತು ದುರಸ್ತಿ ಅಥವಾ ಹೊಸ ಸೇತುವೆ ನಿರ್ಮಾಣಕ್ಕೆ ಮನವಿ ಮಾಡುತ್ತಿದ್ದರು. ಆದರೆ ಅವರ ಎಚ್ಚರಿಕೆಗಳನ್ನು ನಿರ್ಲಕ್ಷಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಮೋರ್ಬಿ ಸೇತುವೆಯ ಬಗ್ಗೆಯೂ ಇದೇ ಆರೋಪ ಕೇಳಿ ಬಂದಿತ್ತು. ಬೇರೆಯವರ ಭ್ರಷ್ಟಾಚಾರದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುವ ಮೋದಿಯವರು ತಮ್ಮದೇ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯಗಳ ಅವ್ಯವಸ್ಥೆಯ ಬಗ್ಗೆಯಾದರೂ ಗಮನ ಹರಿಸಿದ್ದರೆ ಇಂತಹ ಸ್ವಯಂಕೃತ ಅಪರಾಧದಿಂದಾಗುವ ದುರಂತಗಳನ್ನು ತಡೆಯಬಹುದಿತ್ತು. ಮೋದಿಯವರಿಗೆ ಇಪ್ಪತ್ತಕ್ಕೂ ಹೆಚ್ಚು ದೇಶಗಳ ನಾಗರಿಕ ಪ್ರಶಸ್ತಿ ಲಭಿಸಿದೆ. ಗುಜರಾತಿನಲ್ಲಿ ಸೇತುವೆ ಕುಸಿದಿರುವಾಗ ಅವರು ನಮೀಬಿಯಾ ದೇಶದ ಅತ್ಯುನ್ನತ ನಾಗರಿಕ ಗೌರವ ಸ್ವೀಕರಿಸುತ್ತಿದ್ದರು. ದುರಂತದ ಬಗ್ಗೆ ಸಂದೇಶ ಕಳುಹಿಸಿರುವ ಮೋದಿಯವರು ಮೃತ ಕುಟುಂಬಗಳಿಗೆ ಜುಜುಬಿ ಎರಡು ಲಕ್ಷ ಪರಿಹಾರ ಘೋಷಿಸಿದ್ದಾರೆ.

ಆದರೆ, ಮೋದಿಯವರು ಇಂತಹ ವಿಷಯದಲ್ಲಿ ಹಿಂದೆಮುಂದೆ ನೋಡದೆ ಮುಂದಾಗಬಹುದಾದ ಅನಾಹುತವನ್ನು ಗ್ರಹಿಸದೆ ಬಿಜೆಪಿಯೇತರ ರಾಜ್ಯಗಳ ಚುನಾವಣಾ ಭಾಷಣ ಇರಬಹುದು, ಇನ್ಯಾವುದಾದರೂ ಸಮಾವೇಶವಿರಬಹುದು ಸರ್ಕಾರ ನಡೆಸುವವರನ್ನು ಹಂಗಿಸುವ ಚಾಳಿಯನ್ನು ಇನ್ನಾದರೂ ಬಿಡಬೇಕು. ಯಾಕೆಂದರೆ ಅವರ ಮಾತುಗಳು ಮತ್ತೆ ಮತ್ತೆ ಎದ್ದು ಅವರನ್ನೇ ಗುದ್ದಿ ಗೇಲಿ ಮಾಡುತ್ತಿವೆ. ದೇಶದ ಪ್ರಧಾನಿ ಹುದ್ದೆಯಲ್ಲಿರುವವರು ಕ್ಷುಲ್ಲಕ ಕಾರಣಗಳಿಗಾಗಿ ಸಾಮಾನ್ಯ ಜನರಿಂದಲೂ ಗೇಲಿಗೆ ಒಳಗಾಗುವುದು ಉತ್ತಮ ಬೆಳವಣಿಗೆಯಲ್ಲ. ಅದನ್ನು ತಪ್ಪಿಸುವುದು ಅವರಿಂದ ಮಾತ್ರವೇ ಸಾಧ್ಯ.

2016 ಮಾರ್ಚ್‌ 31ರಂದು ಪಶ್ಚಿಮ ಬಂಗಾಳದಲ್ಲಿ ನಿರ್ಮಾಣ ಹಂತದ ಫ್ಲೈಓವರ್‌ ಕುಸಿದಿತ್ತು. ಆ ಪ್ರಕರಣದ ಬಗ್ಗೆ ಮಾತನಾಡುತ್ತಾ ಸಿಎಂ ಮಮತಾ ಅವರು ಆ್ಯಕ್ಟ್ ಆಫ್‌ ಗಾಡ್‌ (ದೇವರ ಆಟ)ಅಂದಿದ್ದರು. ಆಗಷ್ಟೇ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಶುರುವಾಗಿತ್ತು. ಏಪ್ರಿಲ್‌ ಏಳರಂದು ಬಂಗಾಳದಲ್ಲಿ ಚುನಾವಣಾ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ದೀದಿ ಉದ್ದೇಶಿಸಿ “ಅದು ಆ್ಯಕ್ಟ್ ಆಫ್‌ ಗಾಡ್‌ ಅಲ್ಲ, ಆ್ಯಕ್ಟ್ ಆಫ್‌ ಫ್ರಾಡ್‌” ಎಂದಿದ್ದರು. 2022 ಅ. 30 ರಂದು ಪ್ರಧಾನಿ ಮೋದಿಯವರ ತವರು ರಾಜ್ಯ, ಗುಜರಾತಿನಲ್ಲಿ ಮೋರ್ಬಿ ಸೇತುವೆ ಕುಸಿದು 135 ಮಂದಿ ಪ್ರಾಣ ಕಳೆದುಕೊಂಡಿದ್ದರು. ಮೋದಿಯವರ ಆ್ಯಕ್ಟ್ ಆಫ್‌ ಫ್ರಾಡ್‌ ಹೇಳಿಕೆ ಆಗ ಮುನ್ನೆಲೆಗೆ ಬಂದಿತ್ತು. ಮೋರ್ಬಿ ತೂಗುಸೇತುವೆ ಬಳಕೆಗೆ ಯೋಗ್ಯವಾಗಿರಲಿಲ್ಲ, ದುರಸ್ತಿ ಮಾಡಲು ಗುತ್ತಿಗೆ ಕೊಟ್ಟಿದ್ದು ಫ್ರಾಡ್‌ ಕಂಪನಿಗೆ. ಮೂರು ದಶಕದಿಂದ ಗುಜರಾತಿನಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಪಶ್ಚಿಮ ಬಂಗಾಳದ ದುರಂತವನ್ನು ಗೇಲಿ ಮಾಡಿದ್ದ ಮೋದಿಯವರು ತಾವೇ ಭಾರೀ ಗೇಲಿಗೆ ಒಳಗಾದರು. ಅದಷ್ಟೇ ಅಲ್ಲ ಬಿಜೆಪಿ ಅಧಿಕಾರ ನಡೆಸುತ್ತಿರುವ ಮಹಾರಾಷ್ಟ್ರದಲ್ಲಿ 18,೦೦೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ದೇಶದ ಅತಿ ಉದ್ದದ ಅಟಲ್‌ ಸೇತು 2024 ಜನವರಿ 12 ರಂದು ಪ್ರಧಾನಿ ಮೋದಿಯವರು ಉದ್ಘಾಟಿಸಿದ ಕೆಲವೇ ತಿಂಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ರಸ್ತೆ ಒಂದು ಅಡಿ ಕುಸಿದಿತ್ತು. ಆಗ ಮೋದಿಯವರ ಭಾಷಣ ಮತ್ತೆ ಮುನ್ನೆಲೆಗೆ ಬಂದಿತ್ತು. ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದಾಗಿ ಜನರ ಜೀವ ಅಪಾಯಕ್ಕೆ ಸಿಲುಕಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಳೆ ಆರೋಪಿಸಿದ್ದರು. ಎಂಟು ವರ್ಷಗಳ ಸುದೀರ್ಘ ಕಾಲದಲ್ಲಿ ಮೋದಿ ಸರ್ಕಾರ ಈ ಸೇತುವೆ ನಿರ್ಮಾಣ ಮಾಡಿತ್ತು.

ಅಹಮದಾಬಾದ್‌ನಲ್ಲಿ ಪುನರ್‌ ನಿರ್ಮಾಣಗೊಂಡ ಕ್ರಿಕೆಟ್‌ ಸ್ಟೇಡಿಯಂಗೆ ಮೋದಿಯ ಹೆಸರಿಡಲಾಗಿತ್ತು. ಉದ್ಘಾಟನೆಗೊಂಡ ಕೆಲ ತಿಂಗಳಲ್ಲೆ ಒಂದು ಭಾಗ ಕುಸಿದು ಬಿದ್ದಿತ್ತು. ಕಳೆದ ವರ್ಷ ಜೂನ್‌ನಲ್ಲಿ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್‌ 1ರ ಚಾವಣಿ ಕುಸಿದು ಒಬ್ಬ ಮೃತಪಟ್ಟಿದ್ದ. ಹಲವು ವಾಹನಗಳು ಜಖಂಗೊಂಡಿದ್ದವು. ಮೋದಿಯವರ ಅವಧಿಯಲ್ಲಿ ನಿರ್ಮಾಣಗೊಂಡು, ಅವರ ಹಸ್ತದಿಂದಲೇ ಉದ್ಘಾಟನೆ, ಫೋಟೋ ಶೂಟ್‌ ನಡೆದ ಸೇತುವೆ, ರಸ್ತೆ ನಂತರ ಕುಸಿದು ಬಿದ್ದಿವೆ. ಇವೆಲ್ಲವೂ ಮೋದಿಯವರ ಪ್ರಕಾರ ಆ್ಯಕ್ಟ್ ಆಫ್‌ ಫ್ರಾಡ್‌. ಆದರೆ ಮೋದಿಯವರು ಪ್ರೆಸ್‌ಮೀಟ್‌ ಮಾಡುವ ಧೈರ್ಯ ತೋರದಿರುವ ಕಾರಣ ಇಂತಹ ಪ್ರಶ್ನೆಗಳನ್ನು ಅವರು ನೇರವಾಗಿ ಎದುರಿಸದೇ ಬಚಾವ್‌ ಆಗುತ್ತಿದ್ದಾರೆ. ಸಂಸತ್ತಿನಲ್ಲೂ ಮೊದಲ ದಿನ ಕೊನೆಯ ದಿನ ಹಾಜರಾಗಿ ವಿಪಕ್ಷಗಳನ್ನು ಗೇಲಿ ಮಾಡಿ ಹೋಗುತ್ತಾರೆ. ಯಾವುದೇ ಚರ್ಚೆಯಲ್ಲಿ ಭಾಗಿಯಾಗುತ್ತಿಲ್ಲ. ಹೀಗಾಗಿ ಅವರಿಗೆ ಮುಜುಗರವಾಗುವ ಸಂದರ್ಭವೇ ಬರುತ್ತಿಲ್ಲ.

ಆರು ತಿಂಗಳ ಹಿಂದೆಯಷ್ಟೇ ಮುಗಿದ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮುವ್ವತ್ತಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ನಂತರ ಕುಂಭಮೇಳಕ್ಕೆ ಹೊರಟಿದ್ದ ರೈಲು ಹತ್ತುವಾಗ ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಆದರೆ, ಬೆಂಗಳೂರಿನಲ್ಲಿ ಕಳೆದ ತಿಂಗಳು ಆರ್‌ಸಿಬಿ ಕಪ್‌ ಗೆದ್ದ ತಂಡದ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಹನ್ನೊಂದು ಮಂದಿ ಮೃತಪಟ್ಟ ಘಟನೆಯನ್ನು ಬಿಜೆಪಿ ರಾಜಕೀಯಗೊಳಿಸಿತ್ತು. ಕರ್ನಾಟಕ ಬಿಜೆಪಿ ಭಾರೀ ಪ್ರತಿಭಟನೆ ನಡೆಸಿತ್ತು. ರಾಷ್ಟ್ರಮಟ್ಟದ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತಪಡಿಸಿದ್ದರು.

ಕಳೆದ ವರ್ಷ ಬಿಜೆಪಿ ಮೈತ್ರಿ ಸರ್ಕಾರ ಇರುವ ಬಿಹಾರದಲ್ಲಿ ಹತ್ತಕ್ಕೂ ಹೆಚ್ಚು ಸೇತುವೆಗಳು ಕೊಚ್ಚಿ ಹೋಗಿವೆ. ಬಿಜೆಪಿ ಆಡಳಿತದಲ್ಲಿರುವ ರಾಜಸ್ತಾನದಲ್ಲಿ ನಾಲ್ಕು ವರ್ಷಗಳಲ್ಲಿ ಹದಿನಾರು ಸೇತುವೆಗಳು ಕುಸಿದಿವೆ, ಇವುಗಳ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಸೇತುವೆಗಳು, ನೂರು ವರ್ಷ ತುಂಬಿದ ಸೇತುವೆಗಳು ಈಗಲೂ ಬಳಕೆಯಲ್ಲಿರುವಾಗ ಹೊಸ ಸೇತುವೆಗಳು ಕುಸಿಯುತ್ತಿರುವುದಕ್ಕೆ ಕಾರಣಗಳೇನು? ಅಭಿವೃದ್ಧಿಯ ಹೆಸರಿನಲ್ಲಿ ಸೇತುವೆಗಳ ಬುಡಕ್ಕೇನಾದರೂ ಧಕ್ಕೆಯಾಗುತ್ತಿದೆಯೇ ಎಂಬ ಬಗ್ಗೆ ಇಡೀ ದೇಶದಲ್ಲಿರುವ ಸೇತುವೆಗಳ ಗುಣಮಟ್ಟದ ಪರೀಕ್ಷೆ ಮಾಡುವ ಅಗತ್ಯವಿದೆ. ಅದೆಲ್ಲ ಬಿಟ್ಟು ತಮ್ಮದು ಭ್ರಷ್ಟಾಚಾರಮುಕ್ತ ಪಕ್ಷ, ಸರ್ಕಾರ. ಮತ್ತೆಲ್ಲ ಸರ್ಕಾರಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂದು ಟೀಕಿಸುವ ಕೆಲಸವನ್ನು ಪ್ರಧಾನಿ ಮೋದಿಯವರು ಬಿಡಬೇಕು. ಅವರು ಇಡೀ ದೇಶದ 145 ಕೋಟಿ ಜನರಿಗೂ ಪ್ರಧಾನಿ. ಬೇರೆ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯಗಳಿಗೂ ಅವರೇ ಪ್ರಧಾನಿ. ಹಾಗೆ ನಡೆದುಕೊಳ್ಳುವುದು ಅವರಿಗೂ ಗೌರವ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು...

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

Download Eedina App Android / iOS

X