ಈ ದಿನ ಸಂಪಾದಕೀಯ | ಒಬಿಸಿಗಳಿಗೆ ಸಿಗಬೇಕಿದೆ ಶಾಸನಸಭೆಗಳಲ್ಲಿ ಮೀಸಲಾತಿ

Date:

Advertisements
ಮಂಡಲ್‌ ರಾಜಕಾರಣದ ವಿರುದ್ಧ ಕಮಂಡಲ ರಾಜಕಾರಣ ಶುರುವಾಗಿ ಒಬಿಸಿಗಳ ದನಿಯನ್ನು ಹತ್ತಿಕ್ಕುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯಿತು. ಅಂದು ಹಳಿತಪ್ಪಿದ ಒಬಿಸಿಗಳು ನಿಧಾನಕ್ಕೆ ಎಚ್ಚೆತ್ತುಕೊಳ್ಳುವ ಸೂಚನೆಗಳು ಸಿಗುತ್ತಿವೆ.

ಆಗಸ್ಟ್ 30ರಂದು ‘ಜಾಗೃತ ಕರ್ನಾಟಕ’ ರಾಜಕೀಯ ಸಂಘಟನೆ ನಡೆಸಿದ ‘ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2: ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ’ ವಿಚಾರಸಂಕಿರಣವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿತು. ಒಬಿಸಿ ಪ್ರಾತಿನಿಧ್ಯಕ್ಕೆ ಸಂಬಂಧಪಟ್ಟ ನಿರ್ಣಯ ಮುಂದಿನ ದಿನಗಳಲ್ಲಿ ಬಹುಚರ್ಚೆಗೆ ಒಳಗಾಗಬೇಕಿದೆ. ”ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಶಾಸನಸಭೆಗಳಲ್ಲಿ ಮೀಸಲಾತಿ ಕಲ್ಪಿಸಿರುವುದು ನ್ಯಾಯಕ್ಕೆ ಪೂರಕವಾದ ಕ್ರಮವಾಗಿದೆ. ಅದೇ ರೀತಿ ಹಿಂದುಳಿದ ವರ್ಗಗಳಿಗೂ ಶಾಸನಸಭೆಗಳಲ್ಲಿ ಮೀಸಲಾತಿ ಕಲ್ಪಿಸುವುದು ಅಗತ್ಯವಿದೆ. ಮುಂಬರುವ ಜಾತಿ ಸಮೀಕ್ಷೆಯಲ್ಲಿ ಬರುವ ದತ್ತಾಂಶಗಳನ್ನು ಆಧರಿಸಿ ಆ ನಿಟ್ಟಿನಲ್ಲಿ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂಬ ಆಗ್ರಹ ನ್ಯಾಯೋಚಿತವಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ 25 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದರು. 28 ಸಂಸದರ ಪೈಕಿ ಒಬ್ಬನೇ ಒಬ್ಬ ಇತರೆ ಹಿಂದುಳಿದ ವರ್ಗಕ್ಕೆ ಸೇರಿರಲಿಲ್ಲ. ಇದು ಒಬಿಸಿಗಳಲ್ಲಿ ಕ್ಷೀಣಿಸುತ್ತಿರುವ ರಾಜಕೀಯ ಜಾಗೃತಿಯ ಸೂಚನೆಯೂ ಆಗಿತ್ತು. 2024ರ ವೇಳೆಗೆ ಜಾತಿ ಪ್ರಾತಿನಿಧ್ಯ ಮುನ್ನೆಲೆಗೆ ಬಂದಿದ್ದರಿಂದ ಇಬ್ಬರಾದರೂ ಒಬಿಸಿಗಳು ಆಯ್ಕೆಯಾದರು. ಆದರೆ ಕರ್ನಾಟಕದ ಜನಸಂಖ್ಯೆಯಲ್ಲಿ ಒಬಿಸಿಗಳು ಹೆಚ್ಚಿದ್ದಾರೆ ಎಂಬುದು ಮೇಲುನೋಟಕ್ಕೆ ಕಾಣುತ್ತದೆ. ”ನಾವು ಅಧಿಕಾರಕ್ಕೆ ಬಂದರೆ ಜಾತಿ ಗಣತಿಯನ್ನು ನಡೆಸುತ್ತೇವೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭಾ ಚುನಾವಣೆ ವೇಳೆ ಪ್ರಚಾರ ಮಾಡಿದರು. ಇದನ್ನು ಪ್ರಧಾನಿ ಮೋದಿಯವರು, ”ಜಾತಿಗಳ ಹೆಸರಲ್ಲಿ ದೇಶವನ್ನು ಒಡೆಯಲಾಗುತ್ತಿದೆ” ಎಂದು ಬಿಂಬಿಸಿದರು. ಆದರೆ ಕಾಲಚಕ್ರ ಬೇಗ ತಿರುಗಿದೆ. ಜಾತಿ ಗಣತಿ ಮಾಡುವುದಾಗಿ ಈಗ ಕೇಂದ್ರ ಸರ್ಕಾರವೇ ಹೇಳಿಕೊಂಡಿದೆ. ಒಬಿಸಿಗಳು ನಿಧಾನಕ್ಕೆ ಎಚ್ಚೆತ್ತುಕೊಳ್ಳುತ್ತಿರುವ ಸೂಚನೆಯೂ ಇದಾಗಿದೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ತಬ್ಬಲಿ ಅಲೆಮಾರಿಗಳನ್ನು ‘ಶವಪೆಟ್ಟಿಗೆ’ಗೆ ಹಾಕಿದ ಕಾಂಗ್ರೆಸ್ ಸರ್ಕಾರ

“ಒಬಿಸಿ ಪಟ್ಟಿಯಲ್ಲಿದ್ದ ಮಾತ್ರಕ್ಕೆ ಎಲ್ಲರೂ ಒಬಿಸಿಗಳಾಗುವುದಿಲ್ಲ. ಪ್ರವರ್ಗ 1, ಪ್ರವರ್ಗ 2ಎ ಮತ್ತು 2ಬಿಯಲ್ಲಿ ಬರುವ ಅತ್ಯಂತ ಹಿಂದುಳಿದ ಸಮುದಾಯಗಳನ್ನು ಮುಖ್ಯವಾಗಿಟ್ಟುಕೊಂಡು ನಾವು ಚರ್ಚೆ ನಡೆಸಬೇಕು” ಎಂದು ಅಭಿಪ್ರಾಯ ತಾಳುವ ರಾಜಕೀಯ ವಿಶ್ಲೇಷಕ ಎ.ನಾರಾಯಣ ಅವರ ಮಾತು ಇಲ್ಲಿ ಉಲ್ಲೇಖಾರ್ಹ. ಒಬಿಸಿ ಪಟ್ಟಿಯಲ್ಲಿ ಬರುವ ಕೆಲವೇ ಕೆಲವು ಬಲಾಢ್ಯ ಸಮುದಾಯಗಳೇ ರಾಜಕೀಯದಲ್ಲಿ ಮುಂದುವರಿದಿವೆ. ಒಬಿಸಿ ಮೀಸಲಾತಿ ಎಂದು ಬಂದಾಗ ಅತ್ಯಂತ ಹಿಂದುಳಿದ ಸಮುದಾಯಗಳು ತಮ್ಮ ಪಾಲಿಗಾಗಿ ದನಿ ಎತ್ತುತ್ತವೆ ಎಂಬುದನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ಇರುವುದರಿಂದ ದನಿ ಇಲ್ಲದ ಒಬಿಸಿಗಳಿಗೆ ಪ್ರಾತಿನಿಧ್ಯ ಸಿಕ್ಕಿದೆ. ದುರದೃಷ್ಟವಶಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮುಂದೂಡಲ್ಪಡುತ್ತಿರುವುದರಿಂದ ಒಬಿಸಿಗಳಿಗೆ ಅನ್ಯಾಯವಾಗಿದೆ. ರಾಜ್ಯ ಸರ್ಕಾರ ಇದರ ಬಗ್ಗೆ ಕಣ್ಣು ತೆರೆದು ನೋಡಬೇಕಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೆಂದರೆ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಸಮರ್ಪಕವಾಗಿ ಆಗಬೇಕಿದೆ. ವೈಜ್ಞಾನಿಕ ದತ್ತಾಂಶ ಸರ್ಕಾರದ ಬಳಿ ಇದ್ದಾಗ ಮಾತ್ರ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ 2015ರಲ್ಲಿ ನಡೆಸಿದ್ದ ಜಾತಿ ಸಮೀಕ್ಷೆಯ ವರದಿ ಬಿಡುಗಡೆ ಮಾಡಲು ಪ್ರಬಲ ಸಮುದಾಯಗಳು ಬಿಡಲೇ ಇಲ್ಲ. ಅದು ಅವೈಜ್ಞಾನಿಕವಾಗಿದೆ ಎಂಬ ಆಕ್ರೋಶ ವ್ಯಕ್ತವಾಯಿತು. ಒತ್ತಡಕ್ಕೆ ಮಣಿದ ಕಾಂಗ್ರೆಸ್ ಸರ್ಕಾರ ಮತ್ತೊಂದು ಸಮೀಕ್ಷೆಯನ್ನು ಸೆಪ್ಟೆಂಬರ್ 22ರಿಂದ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ ಮತ್ತೆ ತಕರಾರುಗಳನ್ನು ಮುಂದೆ ತಂದು ವರದಿ ಬಿಡುಗಡೆಯಾಗದಂತೆ ಅಡ್ಡಿಪಡಿಸುವ ಹುನ್ನಾರಗಳು ಇದ್ದೇ ಇರುತ್ತವೆ. ಇವುಗಳನ್ನು ಮನಗಂಡು ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳು ಜಾಗೃತರಾಗಬೇಕು. ತಮ್ಮ ನಿಜಸ್ಥಿತಿಗಳನ್ನು ತಿಳಿಯಲು ಇರುವ ಪ್ರಬಲ ಅಸ್ತ್ರ ಜಾತಿ ಸಮೀಕ್ಷೆ ಎಂಬುದನ್ನು ಅವಕಾಶ ವಂಚಿತ ಸಮುದಾಯಗಳು ಮರೆಯಬಾರದು.

ಕೇಂದ್ರ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ಜಾತಿಗಣತಿಯನ್ನು ನಡೆಸುವಾಗ, ರಾಜ್ಯ ಸರ್ಕಾರದ ಜಾತಿ ಸಮೀಕ್ಷೆಗೆ ಬೆಲೆ ಇದೆಯೇ? ಪ್ರಯೋಜನವಿದೆಯೇ? ಎಂಬ ಪ್ರಶ್ನೆಗಳೂ ಈಗಾಗಲೇ ಬಂದಿವೆ. ಆದರೆ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗಗಳು ಕಾಲಕಾಲಕ್ಕೆ ಅಧ್ಯಯನ ಮಾಡಬೇಕೆಂದು ಇಂದ್ರಾ ಸಹಾನಿ ಪ್ರಕರಣದ ತೀರ್ಪಿನಲ್ಲೇ ಸುಪ್ರೀಂಕೋರ್ಟ್ ಸೂಚಿಸಿದೆ. ಈ ಕೆಲಸವನ್ನು ಮಾಡಬೇಕಾದದ್ದು ರಾಜ್ಯ ಸರ್ಕಾರದ ಸಾಂವಿಧಾನಿಕ ಪಾಲನೆಯಾಗುತ್ತದೆ. ಅಷ್ಟೇ ಅಲ್ಲದೆ ಜಾತಿಗಳ ವಾಸ್ತವ ಸ್ಥಿತಿಗಳು ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರಗಳಿಗೆ ಹೆಚ್ಚು ತಿಳಿದಿರುತ್ತದೆ ಎಂಬುದು ಮುಖ್ಯವಾಗುತ್ತದೆ. ಕೇಂದ್ರ ಸರ್ಕಾರ ಕೇವಲ ತಲೆ ಎಣಿಕೆ ಮಾಡಿಬಿಡಬಹುದು, ಆದರೆ ರಾಜ್ಯ ಸರ್ಕಾರ ಜಾತಿಗಳ ವಾಸ್ತವ ಸ್ಥಿತಿಗಳನ್ನು ದಾಖಲಿಸುತ್ತಿದೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಕಾಲವೆಂಬ ಗಾಲಿಯಡಿ ಡಿ.ಕೆ.ಶಿ.; ಏಳುವರೇ, ಬೀಳುವರೇ?

ಮುಂದಿನ ರಾಜಕೀಯ ಪಲ್ಲಟಗಳಿಗೆ ಜಾತಿಗಣತಿ ನಾಂದಿ ಹಾಡಬೇಕಾದರೆ ಈಗಿನಿಂದಲೇ ಶಾಸನ ಸಭೆಗಳಲ್ಲಿ ಒಬಿಸಿ ಮೀಸಲಾತಿಗಾಗಿ ಚಳವಳಿ ಶುರುವಾಗಬೇಕು. ಅದಕ್ಕೆ ಕರ್ನಾಟಕ ರಾಜ್ಯವು ಮುಂದಡಿ ಇಡಬೇಕು. ಮಂಡಲ್‌ ರಾಜಕಾರಣದ ವಿರುದ್ಧ ಕಮಂಡಲ ರಾಜಕಾರಣ ಶುರುವಾಗಿ ಒಬಿಸಿಗಳ ದನಿಯನ್ನು ಹತ್ತಿಕ್ಕುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯಿತು. ಅಂದು ಹಳಿತಪ್ಪಿದ ಒಬಿಸಿಗಳು ನಿಧಾನಕ್ಕೆ ಎಚ್ಚೆತ್ತುಕೊಳ್ಳುವ ಸೂಚನೆಗಳು ಸಿಗುತ್ತಿವೆ. ಒಡೆದು ಹೋದವರು ಒಗ್ಗೂಡುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಆ ಕಾರ್ಯ ಸಫಲವಾದರೆ ಮಾತ್ರ ದೀರ್ಘಕಾಲೀನ ಫಲಿತಾಂಶಗಳನ್ನು ನಿರೀಕ್ಷಿಸಬಹುದು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

ಈ ದಿನ ಸಂಪಾದಕೀಯ | ಬಸನಗೌಡ ಯತ್ನಾಳ್‌ ಒಪ್ಪಿಸಿದ್ದು ಮನುವಾದಿ ಗಿಳಿಪಾಠ

ನಾಡ ದೇವತೆ ಎಂದು ಕರೆಸಿಕೊಂಡ ಚಾಮುಂಡಿ ದೇವಿ ಹೆಣ್ಣಾಗಿ ದಲಿತ ಮಹಿಳೆಯಿಂದ...

Download Eedina App Android / iOS

X