ಈ ದಿನ ಸಂಪಾದಕೀಯ | ಸಾಕ್ಷಿ ಮಲಿಕ್‌ ʼಶೂʼಗಳು ಭಾರತದ ಆತ್ಮಸಾಕ್ಷಿಯನ್ನು ಅಣಕಿಸುವ ಸಂಕೇತವಾಗಿ ಉಳಿಯಲಿದೆ

Date:

Advertisements
ಬ್ರಿಜ್‌ ಭೂಷಣನ ಆಪ್ತ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಸಾಕ್ಷಿ ಮಲಿಕ್‌ ತಾನು ಕುಸ್ತಿ ಕ್ರೀಡೆಯಿಂದ ನಿವೃತ್ತರಾಗುವುದಾಗಿ ಘೋಷಿಸುತ್ತಲೇ ತಮ್ಮ ಶೂಗಳನ್ನು ಮೇಜಿನ ಮೇಲಿಟ್ಟು ಅಳುತ್ತಲೇ ಅಲ್ಲಿಂದ ತೆರಳಿದರು. ಸಾಕ್ಷಿ ಶೂಗಳು ಭಾರತದ ಆತ್ಮಸಾಕ್ಷಿಯನ್ನು ಅಣಕಿಸುವಂತಿದೆ. ಇದು ಪ್ರತಿಭಟನೆಯ ಸಂಕೇತವಾಗಿ ಇತಿಹಾಸದಲ್ಲಿ ಉಳಿಯಲಿದೆ.

 

ಕಳೆದ ವರ್ಷ ಇದೇ ಹೊತ್ತಿನಲ್ಲಿ ದೇಶದ ಮಹಿಳಾ ಕ್ರೀಡಾಪಟುಗಳನ್ನು ಭಯ, ಆತಂಕ, ಹತಾಶೆಗೆ ನೂಕುವ ಸುದ್ದಿಯೊಂದು ಸಿಡಿದಿತ್ತು. ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಮತ್ತು ಬಿಜೆಪಿಯ ಸಂಸದ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ದೂರು ನೀಡಿ ತಿಂಗಳಾದರೂ ಪೊಲೀಸರು ಎಫ್‌ಐಆರ್‌ ದಾಖಲಿಸಿಲ್ಲ ಎಂದು ಆರೋಪಿಸಿ ಏಷ್ಯನ್‌ ಗೇಮ್ಸ್‌ ಮತ್ತು ಒಲಿಂಪಿಕ್‌ ಪದಕ ವಿಜೇತ ಕ್ರೀಡಾಪಟುಗಳು ಪ್ರತಿಭಟನೆ ಧರಣಿ ನಡೆಸಿದ್ದು ವಿಶ್ವವ್ಯಾಪಿ ಸುದ್ದಿಯಾಗಿತ್ತು.

ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್‌, ಏಷ್ಯನ್‌ ಗೇಮ್ಸ್‌ ಪದಕ ವಿಜೇತೆ ವಿನೇಶಾ ಫೋಗಟ್ ಸೇರಿದಂತೆ ಕೆಲ ಮಹಿಳಾ ಕುಸ್ತಿಪಟುಗಳು ಜನವರಿ ತಿಂಗಳ ಕೊರೆಯುವ ಚಳಿಯಲ್ಲಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಧರಣಿ ಕುಳಿತಿದ್ದರು. ಭಜರಂಗ್‌ ಪೂನಿಯಾ ಸೇರಿದಂತೆ ಹಲವರು ಬೆಂಬಲಿಸಿದ್ದರು. ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸ್ಥಾನದಿಂದ ಬ್ರಿಜ್‌ ಭೂಷಣ್‌ನನ್ನು ಪದಚ್ಯುತಿಗೊಳಿಸಬೇಕು, ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂಬುದು ಅವರ ಒತ್ತಾಯವಾಗಿತ್ತು.

ಈ ಮಧ್ಯೆ ಅಪ್ರಾಪ್ತ ಕುಸ್ತಿ ಪಟುವೊಬ್ಬರ ತಂದೆ ಪೋಕ್ಸೊ ಪ್ರಕರಣವನ್ನೂ ದಾಖಲಿಸಿದ್ದರು. ಬಾಲಕಿಯ ತಂದೆ ನ್ಯಾಯಮೂರ್ತಿಯ ಮುಂದೆ ಹೇಳಿಕೆ ನೀಡುವಾಗ ತಿರುಗಿಬಿದ್ದ ಪರಿಣಾಮ ಪೋಕ್ಸೋ ಪ್ರಕರಣ ರದ್ದಾಯಿತು. ಆ ತಂದೆ ಮಗಳು ಮೌನಕ್ಕೆ ಶರಣಾದರು. ಆದರೆ ಬ್ರಿಜ್‌ ಭೂಷಣ್‌ ವಿರುದ್ಧ ಯಾವ ತನಿಖೆಯೂ ನಡೆದಿಲ್ಲ. ಪ್ರಧಾನಿ ಮೋದಿ ಆದಿಯಾಗಿ ಬಿಜೆಪಿಯ ಯಾವೊಬ್ಬ ಮಂತ್ರಿಗಳೂ ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ. ಈ ಮಧ್ಯೆ ಸಂಸತ್ತಿನ ಅಧಿವೇಶನ, ಸೆಂಟ್ರಲ್‌ ವಿಸ್ತಾ ಉದ್ಘಾಟನೆ, ವಿಶೇಷ ಅಧಿವೇಶನಗಳಿಗೆ ಯಾವುದೇ ಮುಜುಗರವಿಲ್ಲದೇ ಬ್ರಿಜ್‌ ಭೂಷಣ್‌ ಹಾಜರಾಗಿದ್ದಾನೆ. ಪಕ್ಷ ಆತನ ವಿರುದ್ಧ ಯಾವ ಶಿಸ್ತು ಕ್ರಮವನ್ನೂ ಜರುಗಿಸಿಲ್ಲ. ಯಥಾ ಪ್ರಕಾರ ಬಿಜೆಪಿ ಭಕ್ತರು ಕ್ರೀಡಾಪಟುಗಳನ್ನೇ ಟ್ರೋಲ್‌ ಮಾಡಿ, ನಕಲಿ ಫೋಟೊ, ತಿರುಚಿದ ವಿಡಿಯೊ ಹಂಚಿ ತಮ್ಮ ಎಂದಿನ ವಿಕೃತ ಸಂಸ್ಕೃತಿ ಮೆರೆದಿದ್ದರು.

ಜನವರಿಯಲ್ಲಿ ಒಂದು ವಾರ ಧರಣಿ ನಡೆಸಿದ್ದ ಕುಸ್ತಿಪಟುಗಳು, ಕ್ರೀಡಾ ಸಚಿವರ ಭರವಸೆಯ ನಂತರ ಕೈಬಿಟ್ಟಿದ್ದರು. ಆದರೆ ಆರೋಪಿ ವಿರುದ್ಧ ಯಾವುದೇ ಕ್ರಮ ಜರುಗಲಿಲ್ಲವೆಂದು ಪುನಃ ಧರಣಿ ಕುಳಿತಿದ್ದರು. ಮೇ 28 ರಂದು ನೂತನ ಸಂಸತ್‌ ಭವನ ಉದ್ಘಾಟನೆಯ ದಿನ ಕುಸ್ತಿಪಟುಗಳು ಜಂತರ್‌ ಮಂತರ್‌ನಿಂದ ಹೊಸ ಸಂಸತ್ತಿನ ಭವನದ ಕಡೆಗೆ ಮೆರವಣಿಗೆ ಹೊರಟಿದ್ದರು. ಅವರನ್ನು ಪೊಲೀಸರು ತಡೆದಿದ್ದರು. ಜೂನ್ ತಿಂಗಳಲ್ಲಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಬ್ರಿಜ್ ಭೂಷಣ್ ಕುಟುಂಬದ ಸದಸ್ಯರು ಅಥವಾ ಆಪ್ತರಿಗೆ ಕುಸ್ತಿ ಫೆಡರೇಷನ್ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡುವುದಿಲ್ಲ ಎಂದು ಭರವಸೆ ನೀಡದ ಬಳಿಕ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದರು.

ಈ ನಡುವೆ ಸಮಯಕ್ಕೆ ಸರಿಯಾಗಿ ಫೆಡರೇಷನ್‌ ಚುನಾವಣೆ ನಡೆಸದೆ ಕಾಲಹರಣ ಮಾಡಲಾಯಿತು. ಈ ಕಾರಣದಿಂದಾಗಿ ಭಾರತ ಅಂತಾರಾಷ್ಟ್ರೀಯ ಫೆಡರೇಷನ್‌ ಸದಸ್ಯತ್ವವನ್ನು ಕಳೆದುಕೊಂಡಿತ್ತು. ಇದೀಗ ಡಿ. 21ರಂದು ಕುಸ್ತಿ ಫೆಡರೇಷನ್‌ ಚುನಾವಣೆ ನಡೆದಿದೆ. ಬ್ರಿಜ್‌ ಭೂಷಣ್‌ನ ಆಪ್ತ ಮತ್ತು ಆರೆಸ್ಸೆಸ್‌ ಬೆಂಬಲಿಗ ಸಂಜಯ್‌ ಸಿಂಗ್‌ 40 ಮತ ಪಡೆದು ಅಧ್ಯಕ್ಷನಾಗಿ ಆಯ್ಕೆಯಾಗಿದ್ದಾನೆ. ಬ್ರಿಜ್‌ ಭೂಷಣ್ ಕುಸ್ತಿ ಫೆಡರೇಷನ್‌ ಮೇಲೆ ತನ್ನ ಉಕ್ಕಿನ ಹಿಡಿತವನ್ನು ಬಿಟ್ಟುಕೊಟ್ಟಿಲ್ಲ. ಒಂದರ್ಥದಲ್ಲಿ ತಾನೇ ಫೆಡರೇಷನ್‌ ಅಧ್ಯಕ್ಷ ಎಂದು ವ್ಯವಸ್ಥೆಯನ್ನು ಅಣಕಿಸಿದ್ದಾನೆ.

ಇದರಿಂದ ಈಗಾಗಲೇ ಲೈಂಗಿಕ ಕಿರುಕುಳ, ಪ್ರತಿಭಟನೆ, ಕಾನೂನು ಸಮರದಿಂದ ನಲುಗಿ ಹೋಗಿದ್ದ ಮಹಿಳಾ ಕುಸ್ತಿ ಪಟುಗಳ ಭವಿಷ್ಯದ ಪದಕದ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ. ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ ವಿನೇಶಾ ಫೋಗಟ್‌, ಭಜರಂಗ್‌ ಪೂನಿಯಾ ಹಾಗೂ ಸಾಕ್ಷಿ ಮಲಿಕ್‌ ಅಕ್ಷರಶಃ ಅಧೀರರಾಗಿದ್ದರು. ಬ್ರಿಜ್‌ ಭೂಷಣನ ಆಪ್ತ ಕುಸ್ತಿ ಫೆಡರೇಷನ್‌ ಅಧ್ಯಕ್ಷನಾಗಿ ಆಯ್ಕೆಯಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಸಾಕ್ಷಿ ತಾನು ಕುಸ್ತಿ ಕ್ರೀಡೆಯಿಂದ ನಿವೃತ್ತರಾಗುವುದಾಗಿ ಘೋಷಿಸುತ್ತಲೇ ತಮ್ಮ ಶೂಗಳನ್ನು ಮೇಜಿನ ಮೇಲಿಟ್ಟು ಕಣ್ಣೀರಾಗಿ ಅಲ್ಲಿಂದ ತೆರಳಿದರು. ಸಾಕ್ಷಿಯ ಶೂಗಳು ಭಾರತದ ಆತ್ಮಸಾಕ್ಷಿಯನ್ನು ಅಣಕಿಸಲಿವೆ. ಪ್ರತಿಭಟನೆಯ ಸಂಕೇತವಾಗಿ ಇತಿಹಾಸದಲ್ಲಿ ಉಳಿದು ಹೋಗಲಿವೆ.

ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಾಗ ಮನೆಗೆ ಕರೆದು ಚಹಾ ಕುಡಿದು ಹರಟೆ ಹೊಡೆಯುತ್ತಾ ಫೋಟೋ ಶೂಟ್‌ ಮಾಡಿಸಿಕೊಂಡಿದ್ದರು ಪ್ರಧಾನಿ. ಆನಂತರ ಈ ಮಹಿಳಾ ಕುಸ್ತಿಪಟುಗಳನ್ನು ಕರೆದು ಮಾತನಾಡಿಸುವ ಕನಿಷ್ಠ ಸೌಜನ್ಯವನ್ನಾಗಲಿ, ಪ್ರಬುದ್ಧತೆಯನ್ನಾಗಲಿ ತೋರಿಸಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಸ್ಮೃತಿ ಇರಾನಿ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ವರದಿಗಾರರು ಪ್ರಶ್ನಿಸುತ್ತಿದ್ದಂತೆ ಅಕ್ಷರಶಃ ಮುಖ ಮುಚ್ಚಿಕೊಂಡು ಓಡಿದ್ದರು. ಡಬಲ್‌ ಎಂಜಿನ್‌ ಸರ್ಕಾರ ಇದ್ದರೂ ಏಳು ತಿಂಗಳ ನಂತರವೂ ನಿಲ್ಲದ ಮಣಿಪುರದ ಗಲಭೆ, ವ್ಯರ್ಥವಾದ ಕುಸ್ತಿ ಪಟುಗಳ ಪ್ರತಿಭಟನೆಯ ಬಗ್ಗೆ ಮೌನವಾಗಿರುವ ಮೋದಿ ಸರ್ಕಾರದ ನಡೆ ದೇಶದ ಸಾಕ್ಷಿ ಪ್ರಜ್ಞೆಯ ಅಣಕವಾಗಿದೆ.

ದೇಶಕ್ಕೆ ಕೀರ್ತಿ ತಂದ ಸಾಧಕರ ನೋವಿಗೆ ಈ ಸರ್ಕಾರ ಎಷ್ಟು ಗೌರವ, ಸ್ಪಂದನೆ ನೀಡುತ್ತಿದೆ ಎಂಬುದಕ್ಕೆ ಉದಾಹರಣೆಗಳು ಹಲವಾರು. ರೈತರು ಒಂದು ವರ್ಷ ಕಾಲ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸಿದರೂ ಅಲ್ಲಿಗೆ ಭೇಟಿ ನೀಡದ, ರೈತ ಮುಖಂಡರ ಜೊತೆ ಮಾತುಕತೆ ನಡೆಸದ ಪ್ರಧಾನಿ ಮೋದಿಯವರ ಅಹಂಕಾರವನ್ನು ರೈತರು ಅಂತಿಮವಾಗಿ ರಸ್ತೆಯಲ್ಲಿ ಕುಳಿತೇ ಇಳಿಸಿದ್ದರು. ರೈತ ವಿರೋಧಿ ಕಾಯ್ದೆಗಳನ್ನು ವಾಪಸ್‌ ತೆಗೆದುಕೊಳ್ಳುವಂತೆ ಮಾಡಿದ್ದರು. ಕುಸ್ತಿ ಫೆಡರೇಷನ್‌ ವಿಚಾರದಲ್ಲೂ ದೇಶದ ಇಡೀ ಕ್ರೀಡಾ ಸಮೂಹ ಒಂದಾಗಿ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು. ದೈಹಿಕ ಶ್ರಮ, ಮಾನಸಿಕ ದೃಢತೆ ಬೇಡುವ ಕ್ರೀಡಾ ಕ್ಷೇತ್ರ ಹೀಗೆ ಭ್ರಷ್ಟರು ಮತ್ತು ಹೆಣ್ಣುಬಾಕರ ಪಾಲಾಗಿ ನಲುಗಬಾರದು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು...

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

Download Eedina App Android / iOS

X