ರಾಜಕೀಯ ಮತ್ತು ಸಾಮಾಜಿಕ ದುರುದ್ದೇಶಗಳ ಕಾರಣಕ್ಕೆ ಸಮೀಕ್ಷೆಯ ವಿರುದ್ಧ ಬಿಜೆಪಿ ನಾಯಕರು ಹಲ್ಲು ಮಸೆಯುತ್ತಿರಬಹುದು. ಆದರೆ ತಮ್ಮದೇ ಪಕ್ಷದ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯನ್ನು ಡಿ.ಕೆ.ಶಿವಕುಮಾರ್ ಅಣಕ ಮಾಡುವುದು ದುರಂತವೇ ಸರಿ.
ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ‘ಸಮಗ್ರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ’ಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ.ಸೋಮಣ್ಣ ಮತ್ತು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೊಟ್ಟಿರುವ ಹೇಳಿಕೆಗಳು ಜನರನ್ನು ದಿಕ್ಕುತಪ್ಪಲು ಪ್ರಚೋದಿಸಿದಂತಿವೆ. ಈಗಾಗಲೇ ಪೂರ್ವಗ್ರಹ ಪೀಡಿತರಾಗಿರುವ ಜನರನ್ನು ಮತ್ತಷ್ಟು ಕ್ರುದ್ಧರನ್ನಾಗಿ ಮಾಡುವ ಕೆಲಸಗಳನ್ನು ಯಾವುದೇ ರಾಜಕಾರಣಿ ಮಾಡುವುದು ಅಕ್ಷಮ್ಯ.
ಡಿ.ಕೆ.ಶಿವಕುಮಾರ್ ಅವರ ಮಾತುಗಳನ್ನೇ ನೋಡಿ: “ಗಣತಿದಾರರು ನಾಗರಿಕರ ಬಳಿ ಕೋಳಿ, ಕುರಿ, ಒಡವೆ, ವಾಷಿಂಗ್ ಮಷಿನ್, ಪ್ರಿಜ್ ಹೀಗೆ ವೈಯಕ್ತಿಕ ಮಾಹಿತಿಗಳನ್ನು ಕೇಳಲು ಹೋಗಬೇಡಿ. ಸಮೀಕ್ಷಕರು ಏನು ಮಾಡುತ್ತಾರೋ ಗೊತ್ತಿಲ್ಲ. ಯಾರು ಏನೇ ಆಕ್ಷೇಪ ಮಾಡಿದರೂ ಸಮೀಕ್ಷೆ ನಡೆಯುತ್ತದೆ. ಇಷ್ಟವಿದ್ದ ಪ್ರಶ್ನೆಗೆ ಉತ್ತರಿಸಿ, ಇಲ್ಲದಿದ್ದರೆ ಬೇಡ ಎಂದು ನ್ಯಾಯಾಲಯವೇ ಹೇಳಿದೆ. ಸಮೀಕ್ಷೆಗೆ ವಿರೋಧ ಮಾಡುವುದು ಸರಿಯಲ್ಲ. ಈ ಹಿಂದಿನ ಸಮೀಕ್ಷೆ ಸರಿಯಿಲ್ಲ ಎಂಬ ಕಾರಣಕ್ಕೆ ಹೊಸದಾಗಿ ಸಮೀಕ್ಷೆ ಮಾಡಲಾಗುತ್ತಿದೆ. ಎಲ್ಲರೂ ಸಹಕರಿಸಬೇಕು”. ಒಂದು ಕಡೆ ಸಮೀಕ್ಷೆಯನ್ನು ಪ್ರೋತ್ಸಾಹಿಸುವ ಮಾತನಾಡುತ್ತಾರೆ; ಮತ್ತೊಂದೆಡೆ ಎಲ್ಲ ಮಾಹಿತಿಯನ್ನು ಕೊಡುವ ಅಗತ್ಯವಿಲ್ಲ ಎಂದೂ ಹೇಳುತ್ತಾರೆ. ಸಮೀಕ್ಷೆಯ ವೇಳೆ ಕೆಲ ಮಾಹಿತಿಯನ್ನು ನೀಡಲು ಡಿ.ಕೆ.ಶಿವಕುಮಾರ್ ಅವರೇ ನಿರಾಕರಿಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಬಿಜೆಪಿ ನಾಯಕರು ಪ್ರಚಾರ ಮಾಡುತ್ತಿರುವ ರೀತಿಗೂ ಡಿ.ಕೆ. ಶಿವಕುಮಾರ್ ನಡೆದುಕೊಂಡಿರುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಹಿಂದುಳಿದ ವರ್ಗಗಳ ಹಿತಕ್ಕೆ ಕೊಳ್ಳಿ ಇಡಲು ಹೊರಟ ಬಿಜೆಪಿ
ಸೋಮಣ್ಣನವರ ಹೇಳಿಕೆಯಂತೂ ಅಸಹ್ಯದ ಪರಮಾವಧಿಯಂತಿದೆ. “ಮೇಲ್ಜಾತಿಗಳನ್ನು ತುಳಿಯುವ ಸಲುವಾಗಿ ಜಾತಿವಾರು ಸಮೀಕ್ಷೆ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ತಕ್ಷಣವೇ ಈ ಸಮೀಕ್ಷೆಯನ್ನು ನಿಲ್ಲಿಸಬೇಕು. ಸಮೀಕ್ಷಕರು ನಮ್ಮ ಮನೆಗೂ ಬಂದಿದ್ದರು. ನನ್ನೊಬ್ಬನಿಂದ ಮಾಹಿತಿ ಪಡೆಯಲು 1 ಗಂಟೆ 4 ನಿಮಿಷ ಬೇಕಾಯಿತು. ತಾಂತ್ರಿಕ ಸಮಸ್ಯೆ ಒಂದೆಡೆಯಾದರೆ, ಅನಗತ್ಯವಾದ ಪ್ರಶ್ನೆಗಳು ಒಂದೆಡೆ. ಅಗತ್ಯವಿಲ್ಲದ ಪ್ರಶ್ನೆಗಳನ್ನು ಏಕೆ ಕೇಳುತ್ತಿದ್ದೀರಿ. ಮೇಲ್ಜಾತಿ ಅಥವಾ ಯಾವುದೋ ಜಾತಿಗಳನ್ನು ತುಳಿಯುವ ಸಲುವಾಗಿ ಇಷ್ಟೆಲ್ಲ ಅಸಹ್ಯಕರವಾದ ಸಮೀಕ್ಷೆಯನ್ನು ನಡೆಸುತ್ತಿದ್ದಾರೆ. ಸಮೀಕ್ಷೆ ಬಗ್ಗೆ ಅಧಿಕಾರಿಗಳಿಗೆ ಪೂರ್ಣ ಮಾಹಿತಿ ಇಲ್ಲ. ಇದು ಇನ್ನೊಂದು ಕಾಂತರಾಜ ಆಯೋಗದ ಸಮೀಕ್ಷೆಯಂತಾಗುತ್ತದೆ. ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕು. ಅತ್ಯಂತ ಅವೈಜ್ಞಾನಿಕವಾಗಿ ಈ ಸಮೀಕ್ಷೆ ನಡೆಸಲಾಗುತ್ತಿದೆ. ಆರು ತಿಂಗಳು- ವರ್ಷವಾದರೂ ಸಮೀಕ್ಷೆ ಮುಗಿಯುವುದಿಲ್ಲ” ಎನ್ನುತ್ತಾರೆ ಸೋಮಣ್ಣ. ತಮ್ಮೊಳಗೆ ಇರುವ ಮೇಲು ಕೀಳು ಮನೋಭಾವವನ್ನು ಅನಾವರಣ ಮಾಡುವ ಜೊತೆಗೆ ಜಾತಿ ಸಮೀಕ್ಷೆಯ ಉದ್ದೇಶವನ್ನೇ ಅಣಕ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ನಡೆಸುವ ತಲೆ ಎಣಿಕೆಯಂತಹ ಜಾತಿ ಗಣತಿಗೂ ಹಿಂದುಳಿದ ವರ್ಗಗಳ ಆಯೋಗ ನಡೆಸುವ ಸಮೀಕ್ಷೆಗೂ ಅಜಗಜ ಅಂತರವಿದೆ. ಸಮೀಕ್ಷೆಯ ಉದ್ದೇಶವೇ ಜನರ ಸ್ಥಿತಿಗತಿಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡುವುದಾಗಿದೆ. ಹೀಗಾಗಿ ಸಣ್ಣಪುಟ್ಟ ವಿವರಗಳನ್ನೂ ಕಲೆಹಾಕುವುದು ಅಗತ್ಯ. ಈ ಮೈಕ್ರೊ ಮಾಹಿತಿಗಳೇ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ಸ್ಪಷ್ಟವಾಗಿ ಹೇಳುತ್ತವೆ. ಈಗಷ್ಟೇ ಅಲ್ಲ, ಕಾಂತರಾಜ ಆಯೋಗ ನಡೆಸಿದ ಸಮೀಕ್ಷೆಯಲ್ಲೂ ಪರಿಶಿಷ್ಟರ ಮೀಸಲಾತಿ ವರ್ಗೀಕರಣಕ್ಕಾಗಿ ಜಸ್ಟಿಸ್ ನಾಗಮೋಹನ ದಾಸ್ ಆಯೋಗ ನಡೆಸಿದ ಸಮೀಕ್ಷೆಯಲ್ಲೂ ಇಂತಹ ಮೈಕ್ರೊ ಮಾಹಿತಿಗೆ ಸಂಬಂಧಿಸಿದ ಪ್ರಶ್ನೆಗಳಿದ್ದವು. ಇಂತಹ ವಿವರಗಳು ಮುಂದುವರಿದ ಸಮುದಾಯಗಳಿಗೆ ಇದು ಅನಗತ್ಯ ಅನಿಸಬಹುದು. ಈ ಎಲ್ಲ ಮಾಹಿತಿಗಳನ್ನು ಕೊಟ್ಟರೆ ನಮ್ಮ ನಿಜ ಸ್ಥಿತಿ ಅನಾವರಣವಾಗುತ್ತದೆ ಎಂಬ ಆತಂಕವೂ ಇರಬಹುದು. ಸರ್ಕಾರದ ಮುಂದೆ ತಮ್ಮ ಸ್ಥಿತಿಗತಿಗಳನ್ನು ಹೇಳಿಕೊಂಡು, ತಮಗಾಗಿ ಏನಾದರೂ ಒಳಿತನ್ನು ನಿರೀಕ್ಷಿಸಬಹುದೇ ಎಂದು ಸಣ್ಣಪುಟ್ಟ ಸಮುದಾಯಗಳು, ನಿಜವಾಗಿಯೂ ಹಿಂದುಳಿದವರು ಪ್ರಜ್ಞಾಪೂರ್ಣಕವಾಗಿ ಸಮೀಕ್ಷೆಗೆ ಸ್ಪಂದಿಸುತ್ತಿದ್ದಾರೆ. ಎಲ್ಲ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಯಾರು ಮಾಹಿತಿಯನ್ನು ನಿರಾಕರಿಸುತ್ತಾರೋ ಅಂಥವರು ನಿಜಕ್ಕೂ ಸ್ಥಿತಿವಂತರು ಎಂದು ಭಾವಿಸಲು ವಿಶೇಷ ದೃಷ್ಟಿಯೇನೂ ಬೇಕಿಲ್ಲ. “ಇವರು ಬೇಕಂತಲೇ ಮಾಹಿತಿ ನಿರಾಕರಿಸಲು ಯತ್ನಿಸುತ್ತಿದ್ದಾರೆ” ಎಂದು ಅನ್ನ ತಿನ್ನುವ ಎಲ್ಲ ಜನಕ್ಕೂ ಅರ್ಥವಾಗುತ್ತದೆ. ಸಮೀಕ್ಷೆಗೆ ಒತ್ತಾಯಿಸುವಂತಿಲ್ಲ ಎಂದು ಕೋರ್ಟ್ ಸದುದ್ದೇಶದಿಂದ ಹೇಳಿದ್ದನ್ನು ದುರುಪಯೋಗ ಮಾಡಿಕೊಳ್ಳಬಾರದು. ಎಲ್ಲ ಜಾತಿಗಳಲ್ಲೂ ಬಡವರು, ಆರ್ಥಿಕವಾಗಿ ತೀರಾ ಹಿಂದುಳಿದವರು ಇದ್ದೇ ಇರುತ್ತಾರೆ ಎಂಬುದು ಸತ್ಯ. ಹೀಗೆ ಮಾಹಿತಿಯನ್ನು ನೀಡಲು ನಿರಾಕರಿಸಿದರೆ, ತಮ್ಮ ಜಾತಿಯೊಳಗಿರುವ ಜನರಿಗೂ ಅನ್ಯಾಯ ಮಾಡಿದಂತೆ ಎಂದು ಅರಿತುಕೊಳ್ಳಬೇಕು.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ತೇಲುತ್ತಿರುವ ಉತ್ತರ ಕರ್ನಾಟಕ; ಹಾರಾಡುತ್ತಿರುವ ಅಧಿಕಾರಸ್ಥರು
ರಾಜಕೀಯ ಮತ್ತು ಸಾಮಾಜಿಕ ದುರುದ್ದೇಶಗಳ ಕಾರಣಕ್ಕೆ ಸಮೀಕ್ಷೆಯ ವಿರುದ್ಧ ಬಿಜೆಪಿ ನಾಯಕರು ಹಲ್ಲು ಮಸೆಯುತ್ತಿರಬಹುದು. ಆದರೆ ತಮ್ಮದೇ ಪಕ್ಷದ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯನ್ನು ಡಿ.ಕೆ.ಶಿವಕುಮಾರ್ ಅಣಕ ಮಾಡುವುದು ದುರಂತವೇ ಸರಿ. ಯಾವುದೇ ಪಕ್ಷವಿರಲಿ, ಆಯಾ ಪಕ್ಷಗಳಲ್ಲಿರುವ ಬಲಾಢ್ಯರು ಅಂತಿಮವಾಗಿ ತಮ್ಮ ಜಾತಿ ಮೂಲದ ಹಿತಾಸಕ್ತಿಗೆ ಅಂಟಿ ಕೂರುತ್ತಾರೆ ಎಂಬುದಕ್ಕೆ ಡಿ.ಕೆ. ಶಿವಕುಮಾರ್ ಉದಾಹರಣೆಯಾಗಿ ನಿಲ್ಲುತ್ತಾರೆ. ಆ ಮೂಲಕ ತಾವು ಪ್ರತಿನಿಧಿಸುವ ಸಮುದಾಯಗಳಿಗೂ ಕೆಟ್ಟ ಸಂದೇಶ ಕೊಡುವುದು ಅಕ್ಷಮ್ಯ. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ವರಿಷ್ಠರೆಲ್ಲರೂ ಜಾತಿ ಸಂಬಂಧಿತ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಮುಖಾಮುಖಿಯಾಗುತ್ತಿದ್ದಾರೆ. ತಮ್ಮದೇ ಪಕ್ಷದ ನಾಯಕರ ನಯವಾಗಿ ನಿರಾಕರಿಸುವುದು ಪಕ್ಷದ ಸೈದ್ಧಾಂತಿಕ ಬದ್ಧತೆಗೂ ಅಪಚಾರ ಎಸಗಿದಂತೆ ಎಂದು ಡಿ.ಕೆ.ಶಿವಕುಮಾರ್ ಅರ್ಥಮಾಡಿಕೊಳ್ಳಬೇಕಾಗಿದೆ. ಹಿಂದುಳಿದ ವರ್ಗಗಳ ನಿಜಸ್ಥಿತಿಯನ್ನು ತಿಳಿಯಲು ಇರುವ ಸುವರ್ಣಾವಕಾಶಕ್ಕೆ ಅಡ್ಡಗಾಲು ಹಾಕುವುದು ಅಕ್ಷಮ್ಯ ಅಪರಾಧ.
