ಮೂರು ವರ್ಷಗಳ ಹಿಂದೆ ಮೋದಿ ಸರ್ಕಾರ ತನ್ನ ರಾಜಕೀಯ ಎದುರಾಳಿಗಳು, ಪತ್ರಕರ್ತರು, ನ್ಯಾಯಮೂರ್ತಿಗಳ ವಿರುದ್ಧ ಪ್ರಯೋಗಿಸಿದ್ದ ಇಸ್ರೇಲಿ ಬೇಹುಗಾರಿಕೆ ಸೈಬರಾಸ್ತ್ರ ‘ಪೆಗಸಸ್’ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದೀಗ ಮತ್ತೆ ಫೋನು ಕದ್ದಾಲಿಕೆ ನಡೆಯುತ್ತಿರುವ ಅನುಮಾನ ಬಂದಿದೆ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ನಾಯಕರು, ಪ್ರಶ್ನೆಗಳನ್ನು ಕೇಳುವ ಪತ್ರಕರ್ತರು ಹಾಗೂ ಜನಪರ ಹೋರಾಟಗಾರರ ಫೋನು ಕದ್ದಾಲಿಕೆ ಚಾಳಿಯನ್ನು ಕೈಬಿಡುವಂತೆ ಕಾಣುತ್ತಿಲ್ಲ.
ಇದೀಗ ಅಮೆರಿಕೆಯ ಆ್ಯಪಲ್ ಮೊಬೈಲ್ ಫೋನ್ ಕಂಪನಿ ಭಾರತದ ಪ್ರತಿಪಕ್ಷಗಳ ಹಲವಾರು ನಾಯಕರು, ಪತ್ರಕರ್ತರು ಮತ್ತಿತರರಿಗೆ ಅಪಾಯಸೂಚನೆಯನ್ನು ಕಳಿಸಿದೆ. ನಿಮ್ಮ ಫೋನುಗಳು ಪ್ರಭುತ್ವ ಪ್ರಾಯೋಜಿತ ಹ್ಯಾಕರ್ ಗಳ ದಾಳಿಗೆ ಗುರಿಯಾಗಿವೆ ಎಂಬುದು ಈ ಸೂಚನೆಯ ಸಾರಾಂಶ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್ ಗಾಂಧಿ, ಸಿಪಿಐ(ಎಂ) ಪ್ರಧಾನಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಮಾಜವಾದಿ ಪಾರ್ಟಿಯ ಅಧ್ಯಕ್ಷ ಅಖಿಲೇಶ್ ಸಿಂಗ್ ಯಾದವ್, ತೃಣಮೂಲ ಕಾಂಗ್ರೆಸ್ ಸಂಸದೆ ಮೊಹುವಾ ಮೊಯಿತ್ರಾ, ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಗೂ ಇನ್ನೂ ಹಲವಾರು ರಾಜಕಾರಣಿಗಳು ಪತ್ರಕರ್ತರು ಸಾಮಾಜಿಕ ಹೋರಾಟಗಾರರ ಆ್ಯಪಲ್ ಫೋನುಗಳಿಗೆ ಈ ಅಪಾಯಸೂಚನೆಗಳು ಬಂದಿವೆ.
ಮೂರು ವರ್ಷಗಳ ಹಿಂದೆ ಮೋದಿ ಸರ್ಕಾರ ತನ್ನ ರಾಜಕೀಯ ಎದುರಾಳಿಗಳು, ಪತ್ರಕರ್ತರು, ನ್ಯಾಯಮೂರ್ತಿಗಳ ವಿರುದ್ಧ ಪ್ರಯೋಗಿಸಿದ್ದ ಇಸ್ರೇಲಿ ಬೇಹುಗಾರಿಕೆ ಸೈಬರಾಸ್ತ್ರ ‘ಪೆಗಸಸ್’ ಬಿರುಗಾಳಿಯನ್ನೇ ಎಬ್ಬಿಸಿತ್ತು. ಭಾರತದಲ್ಲಿ ಪೆಗಸಸ್ ದಾಳಿ ಈ ಹಿಂದೆ 2021ರಲ್ಲಿ ಸುದ್ದಿಗೆ ಬಂದಿತ್ತು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆಗೆ ನಾಲ್ಕನೆಯ ಅಂಗವೆಂದು ಕರೆಯಲಾಗುವ ಪತ್ರಿಕಾಂಗಗಳು ಈ ಅಕ್ರಮ ಅನೈತಿಕ, ಜನತಂತ್ರ ವಿರೋಧಿ ದಾಳಿಗೆ ತುತ್ತಾಗಿದ್ದವು. ಸಾಮಾಜಿಕ ರಾಜಕೀಯ ಹೋರಾಟಗಾರರನ್ನೂ ಬಿಟ್ಟಿರಲಿಲ್ಲ.
ನಿರ್ದಿಷ್ಟ ಮೊಬೈಲ್ ಪೋನ್ ಅಥವಾ ಕಂಪ್ಯೂಟರಿಗೆ ಸುಳಿವೇ ಇಲ್ಲದಂತೆ ನುಗ್ಗಿಸಲಾಗುವ ಈ ಅಸ್ತ್ರ ಸಂಬಂಧಪಟ್ಟ ಫೋನ್ ಅಥವಾ ಕಂಪ್ಯೂಟರನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಅರ್ಥಾತ್ ಆ ಪೋನ್ -ಕಂಪ್ಯೂಟರನ್ನು ಬೇಹುಗಾರಿಕೆ ನಡೆಸುವವರ ನಿಯಂತ್ರಣಕ್ಕೆ ಒಪ್ಪಿಸಿಕೊಡುತ್ತದೆ. ಆ ಫೋನಿನ ಮಾಲೀಕ ನಿರ್ದಿಷ್ಟ ಫೋನಿನಲ್ಲಿ ಮಾಡಬಹುದಾದ ಎಲ್ಲ ಕ್ರಿಯೆಗಳನ್ನು ಬೇಹುಗಾರಿಕೆ ನಡೆಸುವವರೂ ಮಾಡಬಹುದು.
ಅಷ್ಟೇ ಅಲ್ಲ, ಶಿಕಾರಿಯಾದ ಫೋನಿನ ಆಸುಪಾಸು ನಡೆಯುವ ಮಾತುಕತೆಗಳು, ಚಟುವಟಿಕೆಗಳ ಧ್ವನಿಮುದ್ರಣ ಮಾಡಿಕೊಳ್ಳಬಹುದು. ಫೋನಿನ ಕ್ಯಾಮೆರಾ ತಂತಾನೇ ಚಾಲನೆಯಾಗಿ ಫೋನಿನ ಆಸುಪಾಸು ನಡೆಯುವ ಎಲ್ಲ ದೃಶ್ಯಗಳನ್ನೂ ಚಿತ್ರೀಕರಿಸಿಕೊಂಡು ಬೇಹುಗಾರರಿಗೆ ರವಾನಿಸುತ್ತದೆ. ಬೇಹುಗಾರಿಕೆಗೆ ಶಿಕಾರಿಯಾದ ಫೋನನ್ನು ಸೈಬರಾಸ್ತ್ರ ಪ್ರವೇಶ ಮಾಡುವುದರಿಂದ ಹಿಡಿದು, ಅದು ನಡೆಸುವ ಈ ಯಾವುದೇ ಕ್ರಿಯೆಯು ಫೋನಿನ ಒಡತಿ-ಒಡೆಯನ ಅರಿವಿಗೆ ಬರುವುದೇ ಇಲ್ಲ. ನಾಲ್ಕು ಗೋಡೆಯ ನಡುವೆ ನಡೆಯುವ ತಮ್ಮ ಎಲ್ಲ ಚಟುವಟಿಕೆಗಳನ್ನು ಬಟಾಬಯಲಿನಲ್ಲಿ ನಡೆಸಿದಂತೆ. ಊಹೆಗೂ ನಿಲುಕದ ಭಯಾನಕ ಸ್ಥಿತಿ. ಹೀಗಾಗಿ ಈ ಬೇಹುಗಾರಿಕೆ ಇಲ್ಲಿಯ ತನಕ ನಾವು ಕಂಡು ಕೇಳಿರುವ ಕೇವಲ ಫೋನುಗಳ ಕದ್ದಾಲಿಕೆಯ ಸಾಧಾರಣ ಬೇಹುಗಾರಿಕೆ ಅಲ್ಲ.
121 ಮಂದಿ ಭಾರತೀಯರ ವಾಟ್ಸ್ಯಾಪ್ ಸಂದೇಶಗಳನ್ನು ಹ್ಯಾಕ್ ಮಾಡಲಾಗಿತ್ತು. ಆಗ ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬ ಅಂಶ ನಿಚ್ಚಳವಾಗಿರಲಿಲ್ಲ. ಪೆಗಸಸ್ ತಂತ್ರಾಂಶವನ್ನು ತಾನು ಖರೀದಿ ಮಾಡಿಯೇ ಇಲ್ಲ ಎಂದು ಮೋದಿ ಸರ್ಕಾರ ಅಂದು ಗಟ್ಟಿಯಾಗಿ ನಿರಾಕರಿಸಿರಲಿಲ್ಲ. ಇಂದು ಕೂಡ ಅಲ್ಲಗಳೆದಿಲ್ಲ.
ಈ ಅಪಾಯಸೂಚನೆಗಳ ಪ್ರಿಂಟ್‌ಔಟ್‌ಗಳು, ಸ್ಕ್ರೀನ್ ಶಾಟ್‌ಗಳನ್ನು ತೆಗೆದುಕೊಟ್ಟರೂ, ಪ್ರತಿಪಕ್ಷಗಳ ನಾಯಕರ ಈ ಆಪಾದನೆ ಅಸ್ಪಷ್ಟ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ. ಅರೆಮನಸ್ಸಿನ ತನಿಖೆಗೂ ಆದೇಶ ನೀಡಿದೆ.
‘ಪೆಗಸಸ್’ ಸೈಬರಾಸ್ತ್ರದ ಖರೀದಿ- ಬಳಕೆ ಕುರಿತು ಸುಪ್ರೀಮ್ ಕೋರ್ಟು ತನಿಖೆಗೆ ಆದೇಶ ನೀಡಿತ್ತು. ತನಿಖೆಗೆ ಕೇಂದ್ರ ಸರ್ಕಾರ ಸಹಕರಿಸಲಿಲ್ಲ. ಆದರೂ ತನಿಖೆ ಪೂರ್ಣಗೊಂಡಿದೆ. ತನಿಖಾ ವರದಿ ಈಗಲೂ ಮೊಹರು ಮಾಡಿದ ಲಕೋಟೆಯಲ್ಲಿ ‘ಬಂದಿ’.
ಈ ಕುರಿತ ತನಿಖೆಗೆ ಸುಪ್ರೀಮ್ ಕೋರ್ಟ್ ರಚಿಸಿದ್ದ ತಜ್ಞರ ಸಮಿತಿ, ಸರ್ಕಾರ ತನ್ನೊಂದಿಗೆ ಸಹಕರಿಸಲಿಲ್ಲವೆಂದು ಕೈ ಚೆಲ್ಲಿತು. ಹಾಗೆಂದು ನ್ಯಾಯಾಲಯಕ್ಕೆ ವರದಿಯನ್ನೂ ಸಲ್ಲಿಸಿತು.
ಪೆಗಸಸ್ ಎಬ್ಬಿಸಿದ್ದ ಬಿರುಗಾಳಿ ಅಡಗುವ ತನಕ ಕಾದಿತ್ತು ಮೋದಿ ಸರ್ಕಾರ. ಪೆಗಸಸ್ ನಂತಹುದೇ ಮತ್ತೊಂದು ಬೇಹುಗಾರಿಕೆ ಸೈಬರಾಸ್ತ್ರದ ಖರೀದಿಗೆ ಮುಂದಾಗಿದೆ ಎಂದು ಬ್ರಿಟನ್ನಿನ ಪ್ರಸಿದ್ಧ ದಿನಪತ್ರಿಕೆ ‘ಫೈನಾನ್ಷಿಯಲ್ ಟೈಮ್ಸ್’ ಇದೇ ವರ್ಷದ ಮಾರ್ಚ್ 30ರಂದು ವರದಿ ಮಾಡಿತ್ತು. ಪೆಗಸಸ್ ನ ಪರ್ಯಾಯ ಬೇಹುಗಾರಿಕೆ ಸಾಧನಗಳ ಪೂರೈಕೆಗಾಗಿ ಭಾರತ ಸರ್ಕಾರ ವಿದೇಶೀ ಸಂಸ್ಥೆಗಳಿಂದ ‘ಬಿಡ್’ ಕರೆದಿದೆ ಎಂದೂ ಎಫ್.ಟಿ. ವರದಿ ಹೇಳಿತ್ತು. ಈ ಹೊಸ ಬೇಹುಗಾರಿಕೆ ಸಾನಗಳನ್ನು ‘ಪ್ರಿಡೇಟರ್,’ ‘ಕಾಗ್ನೈಟ್’, ‘ಕ್ವಾಡ್ರೀಮ್’ ಎಂದು ಗುರುತಿಸಿತ್ತು. ಲೋಕಸಭಾ ಚುನಾವಣೆಗಳು ಆರೇ ತಿಂಗಳು ದೂರದಲ್ಲಿವೆ. ಈಗ ಹೊರಟಿರುವ ಆ್ಯಪಲ್ ಅಪಾಯಸೂಚನೆಗಳು ಹೊರಟಿವೆ. ಅತ್ಯಂತ ಕಳವಳಕಾರಿ ಬೆಳವಣಿಗೆಯಿದು.
ದೇಶದ ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು, ಸಾರ್ವಜನಿಕ ಒಳಿತು ಸಾಧಿಸಲು ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ಗೋಪ್ಯ ನಿಗಾ ಇರಿಸಿ ಅವರ ದೂರವಾಣಿ ಮಾತುಕತೆಗಳು ಮತ್ತು ಡಿಜಿಟಲ್ ಮಾಹಿತಿಗಳನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸುವ ಅಧಿಕಾರ ಸರ್ಕಾರಗಳಿಗೆ ಇದೆ. ಭಾರತೀಯ ಟೆಲಿಗ್ರಾಫ್ ಕಾಯಿದೆ, ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯಿದೆಯಲ್ಲಿ ಈ ಅವಕಾಶ ಕಲ್ಪಿಸಲಾಗಿದೆ. ಆದರೆ ಹಾಗೆ ಮಾಡಲು ಕಾನೂನು ವಿಧಿ ವಿಧಾನಗಳಿವೆ.
ತನ್ನ ಪ್ರಜೆಗಳ ನಾಗರಿಕ ಹಕ್ಕುಗಳು ಮತ್ತು ಖಾಸಗಿತನವನ್ನು, ಜನತಂತ್ರವನ್ನು ಗೌರವಿಸಿ ರಕ್ಷಿಸುವುದು ಆಯಾ ದೇಶದ ಸರ್ಕಾರಗಳ ಆದ್ಯ ಕರ್ತವ್ಯ. ಆದರೆ ಬೇಲಿಯೇ ಎದ್ದು ಹೊಲವನ್ನು ಮೇಯುತ್ತಿದೆ.