ಯಾವುದೇ ಸಾಂವಿಧಾನಿಕ ಹುದ್ದೆಗೊಂದು ಘನತೆ, ಜೊತೆಗೆ ಜವಾಬ್ದಾರಿಯೂ ಇರುತ್ತದೆ. ಅಂತಹ ಸ್ಥಾನಗಳಿಗೆ ಯೋಗ್ಯರನ್ನು ಆಯ್ಕೆ ಮಾಡಬೇಕೇ ಹೊರತು, ರಾಜಕೀಯ ಲೆಕ್ಕಾಚಾರದಿಂದ ಆಯ್ಕೆಯಾಗಬಾರದು. ಇದಕ್ಕಾಗಿಯೇ ʼಆತ್ಮಸಾಕ್ಷಿಯ ಮತʼಎಂಬ ಬಹುದೊಡ್ಡ ಅಸ್ತ್ರವನ್ನು ಸಂವಿಧಾನ ಸಂಸದರಿಗೆ ನೀಡಿದೆ. ಆದರೆ, ತಮ್ಮ ಪಕ್ಷದ ಬಲಿಷ್ಠ ನಾಯಕರ ಕಟ್ಟಾಜ್ಞೆ ಮೀರಿ ತಮ್ಮ ಆತ್ಮದ ಮಾತು ಕೇಳಿ ಯೋಗ್ಯರಿಗೆ ಮತ ಹಾಕುತ್ತಾರೆ ಎಂಬುದನ್ನು ನಿರೀಕ್ಷೆ ಮಾಡುವುದು ಕಷ್ಟ. ಆದರೂ ಜನತಂತ್ರದ ಮೇಲೆ ನಂಬಿಕೆ ಇರುವ ಪ್ರತಿಯೊಬ್ಬರೂ ಅಂತಹದೊಂದು ನಿರೀಕ್ಷೆಯಲ್ಲಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನ ಶುರುವಾದ ಮೊದಲ ದಿನ ಸೋಮವಾರ (ಜು.21) ರಾತ್ರಿಯೇ ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ನೀಡಿದ್ದಾರೆ. ಮಂಗಳವಾರ ಮುಂಜಾನೆ ರಾಜೀನಾಮೆ ಅಂಗೀಕಾರವಾದ ಸುದ್ದಿ ರಾಷ್ಟ್ರಪತಿ ಭವನದಿಂದ ಹೊರಬಿದ್ದಿದೆ. ಅದಾಗಿ ಮೂರು ದಿನ ನಂತರ ಇಂದು ಚುನಾವಣಾ ಆಯೋಗ ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ರಾಜ್ಯಸಭೆಯ ಮುಖ್ಯ ಕಾರ್ಯದರ್ಶಿ ಸಿ ಪಿ ಮೋದಿ ಅವರನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸಿದೆ.
ಧನಕರ್ ರಾತ್ರೋರಾತ್ರಿ ರಾಜೀನಾಮೆ ಸಲ್ಲಿಸಿದ್ದು ಯಾಕೆ, ಯಾರ ಒತ್ತಡವಿತ್ತು ಎಂಬ ಬಗ್ಗೆ ವಿಪಕ್ಷಗಳು ಚರ್ಚೆ ನಡೆಸುತ್ತಿವೆ. ಆರೋಗ್ಯದ ಸಮಸ್ಯೆ ಒಂದು ದಿನದ ಕಲಾಪದ ನಂತರ ಏಕಾಏಕಿ ಕಾಣಿಸಿಕೊಂಡಿತೇ? ಅಥವಾ ಅದು ಆಡಳಿತ ಪಕ್ಷದ ಉನ್ನತ ನಾಯಕತ್ವದಿಂದ ಬಂದ ಒತ್ತಡದ ಪರಿಣಾಮವೇ ಎಂದು ಅವರೇ ಉತ್ತರಿಸಬೇಕಿದೆ. ಅನಾರೋಗ್ಯದ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದ ಧನಕರ್ ಆ ನಂತರ ಯಾವುದೇ ಹೇಳಿಕೆ ನೀಡಿಲ್ಲ. ಮೌನ ಮುರಿದಿಲ್ಲ. ಮೂರು ದಿನಗಳಾದರೂ, ಅಧಿವೇಶನ ನಡೆಯುತ್ತಿದ್ದರೂ ಅವರಿಗೊಂದು ಗೌರವಯುತ ಬೀಳ್ಕೊಡುಗೆ ನೀಡಿಲ್ಲ.
ಧನಕರ್ ಕಲಾಪದ ಸಮಯದಲ್ಲೂ, ಹೊರಗೂ ಮೋದಿಯ ಪರಮ ಭಕ್ತರಂತೆ ವರ್ತಿಸುತ್ತಿದ್ದವರು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಬಗ್ಗೆ ಟೀಕೆ ಮಾಡಿ ವಿವಾದಕ್ಕೆ ಗುರಿಯಾಗಿದ್ದರು. ಮೋದಿಯವರನ್ನು ಕಂಡಾಗ ನಡು ಬಗ್ಗಿಸಿ ನಮಸ್ಕರಿಸುವ ಅವರ ನಡವಳಿಕೆ ಚರ್ಚೆಗೆ ಗ್ರಾಸವಾಗಿತ್ತು. ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಮಾತನಾಡುವಾಗ ಅವಮಾನಿಸಿದ ಘಟನೆಯೂ ನಡೆದಿತ್ತು. ಆದರೂ, ಧನಕರ್ ಅವರ ದಿಢೀರ್ ರಾಜೀನಾಮೆ ಹಲವು ಪ್ರಶ್ನೆಗಳಿಗೆ ಗ್ರಾಸವಾಗಿದೆ. ರಾಜ್ಯಸಭೆಯ ಕಲಾಪದ ಮೊದಲ ದಿನವೇ ಕಾಂಗ್ರೆಸ್ ಬೇಡಿಕೆಯಂತೆ ಆಪರೇಷನ್ ಸಿಂಧೂರ್ ಬಗ್ಗೆ ಚರ್ಚೆಗೆ ಅನುಮತಿ ನೀಡಿರುವುದಕ್ಕೆ ಮೋದಿ ಬಳಗ ಸಿಟ್ಟಾಗಿದೆ ಎಂಬ ಮಾತುಗಳು ಕೇಳಿಬಂದಿದೆ. ಕಲಾಪವನ್ನು ಹೇಗೆ ನಡೆಸಬೇಕು ಎಂಬುದು ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟ ವಿಚಾರ. ಆ ವಿಚಾರದಲ್ಲೂ ಸರ್ಕಾರ ಹಸ್ತಕ್ಷೇಪ ನಡೆಸುವುದು ಸರಿಯಲ್ಲ. ತನ್ನ ವಿವೇಚನೆ ಬಳಸಿದ್ದಕ್ಕೆ ಸಭಾಧ್ಯಕ್ಷರು ರಾಜೀನಾಮೆ ನೀಡುವ ಸಂದರ್ಭ ಬರುತ್ತದೆ ಎಂದಾದರೆ ಇದು ಸಂವಿಧಾನಕ್ಕೆ ಎಸಗಿದ ಅಪಚಾರ. ಸಭಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಾಗ ಅವರು ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುತ್ತಾರೆ. ಆ ನಂತರ ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ, ಸೇರಿರಬಾರದು ಎಂಬುದು ನಿಯಮ. ಆದರೆ, ಕಲಾಪದ ಸಮಯದಲ್ಲಿ ತಮ್ಮ ಪಕ್ಷನಿಷ್ಠೆಯನ್ನು ಯಾವುದೇ ಮುಜುಗರವಿಲ್ಲದೇ ತೋರಿಸುತ್ತ ಬಂದವರು ಧನಕರ್. ಆದರೆ, ಆತ್ಮಸಾಕ್ಷಿಗೆ ಸರಿಯಾಗಿ ನಡೆದುಕೊಂಡ ಕಾರಣಕ್ಕೆ ಅವರು ತಮ್ಮ ಸ್ಥಾನವನ್ನು ತ್ಯಜಿಸಬೇಕಾಗಿ ಬಂದಿರುವುದು ಪ್ರಜಾಪ್ರಭುತ್ವದ ಅಣಕ. ಮೋದಿ, ಅಮಿತ್ ಶಾ ಸಿಟ್ಟಿಗೆ ಬಲಿಯಾದವರ ಪಟ್ಟಿಗೆ ಧನಕರ್ ಹೊಸ ಸೇರ್ಪಡೆ. ಇದು ಮುಂದೆ ಬರುವವರಿಗೆ ಸವಾಲಿನ ಪಾಠವಾಗಿದೆ. ಸ್ಥಾನ ಉಳಿಸಿಕೊಳ್ಳಬೇಕಿದ್ದರೆ ಆತ್ಮಸಾಕ್ಷಿ, ವಿವೇಚನೆ ಎಲ್ಲವನ್ನೂ ತ್ಯಜಿಸಿ ಬರಬೇಕು. ಬಂದ ನಂತರ ಆಡಳಿತ ಪಕ್ಷದ ಗುಲಾಮನಂತೆ ವರ್ತಿಸಬೇಕು ಎಂಬ ಕೆಟ್ಟ ಸಂದೇಶ ಧನಕರ್ ರಾಜೀನಾಮೆಯಿಂದ ರವಾನೆಯಾಗಿದೆ.
ಇಷ್ಟೆಲ್ಲ ಬೆಳವಣಿಯ ನಡುವೆ ಮೋದಿಯವರು ವಿದೇಶ ಪ್ರವಾಸದಲ್ಲಿದ್ದಾರೆ. ಅಧಿವೇಶನಕ್ಕೂ ಅವರಿಗೂ ಸಂಬಂಧವೇ ಇಲ್ಲವೇನೋ ಎಂಬ ಅವರ ನಡವಳಿಕೆ ಹನ್ನೊಂದು ವರ್ಷಗಳಿಂದ ಯಾವುದೇ ಅಡೆತಡೆ ಇಲ್ಲದೇ ಮುಂದುವರಿದಿದೆ. ಇದು ದೇಶವೇ ಸಂಭ್ರಮಿಸುವ ಅಧಿವೇಶನ ಎಂದು ಹೇಳಿದ ಮೋದಿಯವರೇ ಅಧಿವೇಶನದಲ್ಲಿ ಇಲ್ಲ!
ಚುನಾವಣೆಯ ಮೂಲಕ ಆಯ್ಕೆಯಾಗುವ ಉಪರಾಷ್ಟ್ರಪತಿಯವರೇ ರಾಜ್ಯಸಭೆಯ ಸಭಾಧ್ಯಕ್ಷರೂ ಆಗಿರುವ ಕಾರಣ ಆ ಹುದ್ದೆ ಹೆಚ್ಚು ಕಾಲ ಖಾಲಿ ಇರುವಂತಿಲ್ಲ. ರಾಜ್ಯಸಭೆಯ ಕಲಾಪ ನಡೆಸುವ ಮಹತ್ವದ ಹೊಣೆ ಅವರ ಮೇಲಿದೆ. ಸಂವಿಧಾನದ ಆರ್ಟಿಕಲ್ 63(2) ಪ್ರಕಾರ ಐದು ವರ್ಷದ ಅವಧಿ ಮುಗಿಯುವ ಮುನ್ನವೇ ಉಪರಾಷ್ಟ್ರಪತಿ ನಿಧನರಾದರೆ, ರಾಜೀನಾಮೆ ನೀಡಿದರೆ ಅಥವಾ ತೆರವುಗೊಳಿಸಿದರೆ ಅಂತಹ ಸಂದರ್ಭದಲ್ಲಿ ತಕ್ಷಣ ಚುನಾವಣೆ ನಡೆಸಬೇಕು.
ಸಂಸತ್ತಿನ ಎರಡೂ ಸದನಗಳ ಸದಸ್ಯರು ಮತ ಚಲಾಯಿಸುವ ಮೂಲಕ ಈ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ರಹಸ್ಯ ಮತದಾನ ಆಗಿರುವ ಕಾರಣ ವಿಪ್ ಜಾರಿಗೊಳಿಸುವಂತಿಲ್ಲ. ಪ್ರತಿ ಸದಸ್ಯನೂ ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಲು ಅವಕಾಶವಿದೆ. ಲೋಕಸಭೆಯ 542 ಸದಸ್ಯರು ಮತ್ತು ರಾಜ್ಯಸಭೆಯ 240 ಸದಸ್ಯರಿರುವ ಸಂಸತ್ತಿನ ಒಟ್ಟು 782. ಎನ್‌ಡಿಎ ಸದಸ್ಯರ ಬಲ 293+134=397 ಇದೆ. ವಿಪಕ್ಷಗಳು 249+106=355. ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಲು 392 ಮತ ಬೇಕು. ಎನ್‌ಡಿಎ ಅಭ್ಯರ್ಥಿಗೆ ಗೆಲುವು ನಿಶ್ಚಿತ. ಆದರೂ ಇಂಡಿಯಾ ಕೂಟ ಸ್ಪರ್ಧಿಸುವುದಾಗಿ ಈಗಾಗಲೇ ತಿಳಿಸಿದೆ. 2022 ಆಗಸ್ಟ್‌ನಲ್ಲಿ ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕರ್ನಾಟಕದ ಮಾರ್ಗರೆಟ್ ಆಳ್ವ ಅವರು ಸ್ಪರ್ಧಿಸಿದ್ದರು.
ಈ ಮಧ್ಯೆ ಬಿಹಾರ ಚುನಾವಣೆ ಸಮೀಪಿಸುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಉಪರಾಷ್ಟ್ರಪತಿ ಮಾಡುವಂತೆ ಬಿಹಾರ ಬಿಜೆಪಿ ಒಲವು ತೋರಿದೆ. ಇದು ನಿತೀಶ್ ಅವರನ್ನು ಬಿಹಾರದಿಂದ ಖಾಲಿ ಮಾಡಿಸುವ ಷಡ್ಯಂತ್ರ ಎಂದು ರಾಜಕೀಯ ವಿಶ್ಲೇಷಕರು ಟೀಕಿಸಿದ್ದಾರೆ. ಆದರೆ, ನಿತೀಶ್ ಉಪರಾಷ್ಟ್ರಪತಿಯಾಗಿ ರಾಜ್ಯಸಭೆಯ ಕಲಾಪ ನಡೆಸಲು ಯೋಗ್ಯರೇ ಎಂದೂ ನೋಡಬೇಕಿದೆ. ಇತ್ತೀಚಿನ ಅವರ ನಡವಳಿಕೆಗಳು, ಸಾರ್ವಜನಿಕ ಸಭೆಗಳಲ್ಲಿ ನಡೆದುಕೊಳ್ಳುತ್ತಿರುವ ರೀತಿ ಅವರ ಮಾನಸಿಕ ಸ್ಥಿರತೆಯ ಬಗ್ಗೆ ಅನುಮಾನ ಹುಟ್ಟಿಸಿದೆ. ಇಂತಹ ವ್ಯಕ್ತಿ ರಾಜ್ಯಸಭೆಯ ಕಲಾಪ ನಡೆಸಲು ಸಾಧ್ಯವೇ? ಈ ಎಲ್ಲ ಆಯಾಮಗಳಲ್ಲಿ ಯೋಚಿಸಬೇಕಿದೆ.
ಯಾವುದೇ ಸಾಂವಿಧಾನಿಕ ಹುದ್ದೆಗೊಂದು ಘನತೆ, ಜೊತೆಗೆ ಜವಾಬ್ದಾರಿಯೂ ಇರುತ್ತದೆ. ಅಂತಹ ಸ್ಥಾನಗಳಿಗೆ ಯೋಗ್ಯರನ್ನು ಆಯ್ಕೆ ಮಾಡಬೇಕೇ ಹೊರತು, ರಾಜಕೀಯ ಲೆಕ್ಕಾಚಾರದಿಂದ ಆಯ್ಕೆ ಮಾಡುವುದು ಆ ಸ್ಥಾನದ ಗೌರವಕ್ಕೆ ಧಕ್ಕೆ ತರುತ್ತದೆ. ಇದಕ್ಕಾಗಿಯೇ ʼಆತ್ಮಸಾಕ್ಷಿಯ ಮತʼಎಂಬ ಬಹುದೊಡ್ಡ ಅಸ್ತ್ರವನ್ನು ಸಂವಿಧಾನ ಸಂಸದರಿಗೆ ನೀಡಿದೆ. ಆದರೆ, ತಮ್ಮ ಪಕ್ಷದ ಬಲಿಷ್ಠ ನಾಯಕರ ಕಟ್ಟಾಜ್ಞೆ ಮೀರಿ ತಮ್ಮ ಆತ್ಮದ ಮಾತು ಕೇಳಿ ಯೋಗ್ಯರಿಗೆ ಮತ ಹಾಕುತ್ತಾರೆ ಎಂಬುದನ್ನು ನಿರೀಕ್ಷೆ ಮಾಡುವುದು ಕಷ್ಟ. ಆದರೂ ಜನತಂತ್ರದ ಮೇಲೆ ನಂಬಿಕೆ ಇರುವ ಪ್ರತಿಯೊಬ್ಬರೂ ಅಂತಹದೊಂದು ನಿರೀಕ್ಷೆಯಲ್ಲಿದ್ದಾರೆ. ಸರ್ಕಾರದ ಗುಲಾಮರಂತೆ ನಡೆದುಕೊಳ್ಳುವ, ಪಕ್ಷಪಾತಿಗಳು ಸಭಾಧ್ಯಕ್ಷ ಪೀಠದಲ್ಲಿ ಕುಳ್ಳಿರಿಸಿ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆ ತರುವ ಕೆಲಸ ಆಗಬಾರದು. ಒಂದೇ ಪಕ್ಷದ ತುತ್ತೂರಿ ಊದುವ ಕೆಲಸ ಮಾಡುವುದಕ್ಕೆ ಅವಕಾಶ ಕೊಡಬಾರದು. ಪರಸ್ಪರ ಅಭಿಪ್ರಾಯಗಳನ್ನು ಗೌರವಿಸುವ, ಸೌಹಾರ್ದಯುತ ಚರ್ಚೆಗೆ ಅವಕಾಶ ಕಲ್ಪಿಸುವ ಸಮರ್ಥ ವ್ಯಕ್ತಿಯನ್ನು ರಾಜ್ಯಸಭೆಯ ಅಧ್ಯಕ್ಷ ಸ್ಥಾನದಲ್ಲಿ ನೋಡುವಂತಾಗಬೇಕು.
