ದೆಹಲಿ ಹೈಕೋರ್ಟ್ ಕಲಾಪದ ವಿಡಿಯೋಗಳನ್ನು ಅಕ್ರಮವಾಗಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರರ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯಿಂದ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ತೇಜಸ್ ಕರಿಯಾ ಅವರು ಬುಧವಾರ ಹಿಂದೆ ಸರಿದಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ವಿಭಾಗೀಯ ಪೀಠದ ಮುಂದೆ ವಕೀಲ ವೈಭವ್ ಸಿಂಗ್ ಅವರು ಸಲ್ಲಿಸಿದ್ದ ಈ ಪಿಐಎಲ್ ವಿಚಾರಣೆಗೆ ನಿಗದಿಯಾಗಿತ್ತು. ಆದರೆ, ಈ ವಿಚಾರಣೆಯಿಂದ ನ್ಯಾಯಮೂರ್ತಿ ತೇಜಸ್ ಕರಿಯಾ ಹಿಂದೆ ಸರಿದ ಕಾರಣ, ಅರ್ಜಿಯನ್ನು ಬೇರೊಂದು ಪೀಠದ ಮುಂದೆ ಗುರುವಾರ (ಏಪ್ರಿಲ್ 23) ವಿಚಾರಣೆಗೆ ನಿಗದಿಪಡಿಸುವಂತೆ ಮುಖ್ಯ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. “ಈ ಅರ್ಜಿಯನ್ನು ನಮ್ಮ ಪೀಠ ವಿಚಾರಣೆ ನಡೆಸುವುದಿಲ್ಲ. ನ್ಯಾಯಮೂರ್ತಿ ತೇಜಸ್ ಕರಿಯಾ ಅವರು ಸದಸ್ಯರಾಗಿಲ್ಲದ ಬೇರೊಂದು ಪೀಠದ ಮುಂದೆ ನಾಳೆ ಪಟ್ಟಿ ಮಾಡಿ” ಎಂದು ವಿಭಾಗೀಯ ಪೀಠವು ಸೂಚಿಸಿದೆ.
ಏಪ್ರಿಲ್ 13 ರಂದು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರ ವಿಚಾರಣೆಯಿಂದ ಹಿಂದೆ ಸರಿಯುವಂತೆ (Recusal) ಕೋರಿ ಅರವಿಂದ್ ಕೇಜ್ರಿವಾಲ್ ಅವರು ಖುದ್ದಾಗಿ ಸುಮಾರು 45-50 ನಿಮಿಷಗಳ ಕಾಲ ವಾದ ಮಂಡಿಸಿದ್ದರು. ಈ ಕಲಾಪವನ್ನು ಉದ್ದೇಶಪೂರ್ವಕವಾಗಿ ಚಿತ್ರೀಕರಿಸಿ, ನ್ಯಾಯಾಂಗದ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ ಎಂದು ಆರೋಪಿಸಿ ವಕೀಲ ವೈಭವ್ ಸಿಂಗ್ ಈ ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿದ್ದೀರಾ? ದೀದಿ ಕೋಟೆಯಲ್ಲಿ ಕಮಲ ಅರಳುವುದೇ? ನಿರ್ಣಾಯಕ ಹಂತದಲ್ಲಿ 59 ಕ್ಷೇತ್ರಗಳ ಅಸಲಿ ಆಟ
ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಸೇರಿದಂತೆ ಹಲವು ಎಎಪಿ ನಾಯಕರು, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹಾಗೂ ಪತ್ರಕರ್ತ ರವೀಶ್ ಕುಮಾರ್ ಅವರ ಹೆಸರನ್ನು ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಕಲಾಪದ ವಿಡಿಯೋಗಳನ್ನು ಹಂಚಿಕೊಂಡವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕು, ಈ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಮತ್ತು ಮೆಟಾ, ಎಕ್ಸ್ (ಟ್ವಿಟರ್) ಹಾಗೂ ಗೂಗಲ್‌ನಂತಹ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಈ ವಿಡಿಯೋಗಳನ್ನು ತೆಗೆದುಹಾಕಲು ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ನ್ಯಾಯಮೂರ್ತಿ ತೇಜಸ್ ಕರಿಯಾ ಅವರು ನ್ಯಾಯಾಧೀಶರಾಗಿ ಬಡ್ತಿ ಪಡೆಯುವ ಮುನ್ನ ಪ್ರಮುಖ ಕಾನೂನು ಸಂಸ್ಥೆಯಲ್ಲಿ ಪಾಲುದಾರರಾಗಿದ್ದರು ಮತ್ತು ಈ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಮೆಟಾ ಸಂಸ್ಥೆಯ ಪರವಾಗಿ ಹಲವು ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು.
ಇದಕ್ಕೂ ಮುನ್ನ, ಸೋಮವಾರವಷ್ಟೇ (ಏಪ್ರಿಲ್ 20) ಅಬಕಾರಿ ಪ್ರಕರಣದ ವಿಚಾರಣೆಯಿಂದ ತಾವೇ ಖುದ್ದು ಹಿಂದೆ ಸರಿಯಬೇಕೆಂಬ ಕೇಜ್ರಿವಾಲ್ ಅವರ ಕೋರಿಕೆಯನ್ನು ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು ತಿರಸ್ಕರಿಸಿದ್ದರು.





