ಹರಿಯಾಣ ವಿದ್ಯುತ್ ಇಲಾಖೆಯ ನೌಕರರು ನಡೆಸುತ್ತಿರುವ ಮೂರು ದಿನಗಳ ಮುಷ್ಕರದಿಂದ ಗುರುಗ್ರಾಮ್ (ಗುರ್ಗಾಂವ್)ನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಾವಿರಾರು ಮನೆಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಸುಮಾರು 1,800 ಕೈಗಾರಿಕಾ ಘಟಕಗಳು ಕೆಲಸ ನಿಲ್ಲಿಸಿವೆ. ವಿದ್ಯುತ್ ಮತ್ತು ನೀರಿನ ಸಮಸ್ಯೆಯಿಂದ ಬೇಸತ್ತ ನಿವಾಸಿಗಳು ಗುರುವಾರ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಹರಿಯಾಣ ವಿದ್ಯುತ್ ನಿಯಂತ್ರಣ ಆಯೋಗ (HERC) ಗುರುಗ್ರಾಮ್ ಮತ್ತು ನೂಹ್ ಜಿಲ್ಲೆಗಳಲ್ಲಿ ಖಾಸಗಿ ಕಂಪನಿ Eleven Power Private Limitedಗೆ ವಿದ್ಯುತ್ ವಿತರಣೆ ಮಾಡಲು ಸಮಾನಾಂತರ ಪರವಾನಗಿ ನೀಡಿರುವುದನ್ನು ವಿರೋಧಿಸಿ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಅಕ್ಟೋಬರ್ 19ರಂದು ಹೊರಡಿಸಲಾದ ಈ ಆದೇಶದ ವಿರುದ್ಧ ಬುಧವಾರ ರಾತ್ರಿ ಆರಂಭವಾದ ಪ್ರತಿಭಟನೆಯ ಪರಿಣಾಮ ಗುರುವಾರದ ವೇಳೆಗೆ ನಗರದ ವಸತಿ ಪ್ರದೇಶಗಳು, ಕೈಗಾರಿಕಾ ವಲಯಗಳು ಮತ್ತು ಗ್ರಾಮೀಣ ಪ್ರದೇಶಗಳು ಕತ್ತಲಲ್ಲಿ ಮುಳುಗಿದ್ದವು.
50 ಸಾವಿರಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ವ್ಯತ್ಯಯ
ಸುಮಾರು 8.5 ಲಕ್ಷ ವಿದ್ಯುತ್ ಗ್ರಾಹಕರನ್ನು ಹೊಂದಿರುವ ಗುರುಗ್ರಾಮ್ನಲ್ಲಿ ಹಳೆಯ ನಗರದ ಹಲವು ಪ್ರದೇಶಗಳು ಹೆಚ್ಚು ಬಾಧಿತವಾಗಿವೆ. ಗುರುವಾರ ಒಂದೇ ದಿನ 50,000ಕ್ಕೂ ಹೆಚ್ಚು ಮನೆಗಳು ವಿದ್ಯುತ್ ಕಡಿತದಿಂದ ತೊಂದರೆಗೊಳಗಾಗಿವೆ ಎಂದು ನಿವಾಸಿಗಳು ತಿಳಿಸಿದ್ದಾರೆ. ವಿದ್ಯುತ್ ಇಲಾಖೆ ಸ್ವೀಕರಿಸಿದ ದೂರುಗಳ ಸಂಖ್ಯೆಯೂ ಬಿಕ್ಕಟ್ಟಿನ ತೀವ್ರತೆಯನ್ನು ತೋರಿಸಿದೆ. ಮುಷ್ಕರ ಆರಂಭವಾದ ಮೊದಲ 12 ಗಂಟೆಗಳಲ್ಲಿ 3,000ಕ್ಕೂ ಹೆಚ್ಚು ದೂರುಗಳು ಬಂದಿದ್ದರೆ, ಗುರುವಾರ ವಿದ್ಯುತ್ ಕಡಿತದ ಕುರಿತು ಸುಮಾರು 5,000 ದೂರುಗಳು ದಾಖಲಾಗಿದ್ದವು ಎಂದು ದಕ್ಷಿಣ ಹರಿಯಾಣ ವಿದ್ಯುತ್ ವಿತರಣಾ ನಿಗಮದ (DHBVN) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ, ದೂರು ನೀಡಿದರೂ ಅಧಿಕಾರಿಗಳಿಂದ ಸೂಕ್ತ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂಬುದು ನಿವಾಸಿಗಳ ಆರೋಪ. ವಿದ್ಯುತ್ ಯಾವಾಗ ಪುನರಾರಂಭವಾಗಲಿದೆ ಎಂಬ ಸ್ಪಷ್ಟ ಮಾಹಿತಿಯೂ ಲಭ್ಯವಾಗದ ಕಾರಣ ಜನರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ವಿದ್ಯುತ್ ಇಲ್ಲದೆ ನೀರಿಗೂ ಹಾಹಾಕಾರ
ಸೆಕ್ಟರ್ 9ಎ ಪ್ರದೇಶದಲ್ಲಿ ಗುರುವಾರ ಬೆಳಗಿನ ಜಾವ ಸುಮಾರು 3.30ಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ಸುಮಾರು 6,000 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದವು. ವಿದ್ಯುತ್ ಇಲ್ಲದ ಕಾರಣ ನೀರು ಪೂರೈಸುವ ಬೂಸ್ಟಿಂಗ್ ಕೇಂದ್ರವೂ ಕಾರ್ಯನಿರ್ವಹಿಸಲಿಲ್ಲ. 16 ಗಂಟೆಗಳಿಗೂ ಹೆಚ್ಚು ಕಾಲ ಕಳೆದರೂ ಪೂರೈಕೆ ಪುನರಾರಂಭವಾಗಿರಲಿಲ್ಲ ಎಂದು ಸೆಕ್ಟರ್ 9ಎ ನಿವಾಸಿಗಳ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿ ಸೂರಜ್ ಭೋಲಾ ತಿಳಿಸಿದ್ದಾರೆ.
“ನಾನು ಅಧಿಕಾರಿಗಳಿಗೆ ಸುಮಾರು 50 ಬಾರಿ ಕರೆ ಮಾಡಿದ್ದೇನೆ. ಯಾರೂ ಉತ್ತರಿಸುತ್ತಿಲ್ಲ. ವಿದ್ಯುತ್ ಇಲ್ಲ, ಇನ್ವರ್ಟರ್ಗಳೂ ಖಾಲಿಯಾಗಿವೆ. ಈಗ ನೀರೂ ಇಲ್ಲ. ಜನರು ತಮ್ಮ ದೈನಂದಿನ ಅಗತ್ಯಗಳನ್ನು ಹೇಗೆ ಪೂರೈಸಬೇಕು?” ಎಂದು ಪ್ರಶ್ನಿಸಿದ್ದಾರೆ.
ಹರಿನಗರದಲ್ಲಿ 7,000ಕ್ಕೂ ಹೆಚ್ಚು ಕುಟುಂಬಗಳು ಬುಧವಾರ ರಾತ್ರಿ 10 ಗಂಟೆಯಿಂದ ವಿದ್ಯುತ್ ವ್ಯತ್ಯಯ ಎದುರಿಸಿದವು ಎಂದು ನಿವಾಸಿಗಳು ತಿಳಿಸಿದ್ದಾರೆ. ಅಲ್ಲಿನ ನಿವಾಸಿಗಳ ಸಂಘದ ಅಧ್ಯಕ್ಷ ಸುಮಿತ್ ಗುಜ್ಜರ್, ಕಿರಿಯ ಎಂಜಿನಿಯರ್ ಮತ್ತು ಉಪವಿಭಾಗಾಧಿಕಾರಿಗಳು ಕರೆಗಳಿಗೆ ಉತ್ತರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಝಾರಾ ಆವಾಸ್ ಮತ್ತು ಲೋಟಸ್ ಹೋಮ್ಸ್ ವಸತಿ ಸಂಕೀರ್ಣಗಳಲ್ಲಿಯೂ ನಿವಾಸಿಗಳು ತೊಂದರೆ ಅನುಭವಿಸಿದರು. ಕೆಲವು ಕಡೆ ಲಿಫ್ಟ್ಗಳಂತಹ ಅಗತ್ಯ ಸೇವೆಗಳಿಗೆ ಮಾತ್ರ ಬ್ಯಾಕಪ್ ವಿದ್ಯುತ್ ಲಭ್ಯವಿದ್ದು, ಮನೆಗಳ ಒಳಗೆ ವಿದ್ಯುತ್ ಪೂರೈಕೆ ಇರಲಿಲ್ಲ. ಇನ್ವರ್ಟರ್ಗಳು ಖಾಲಿಯಾದ ಬಳಿಕ ಮೊಬೈಲ್ ಫೋನ್ ಬೆಳಕಿನಲ್ಲಿ ಅಡುಗೆ ಮಾಡಬೇಕಾಯಿತು ಎಂದು ಲೋಟಸ್ ಹೋಮ್ಸ್ ನಿವಾಸಿ ಅನು ಗುಲಾಟಿ ತಿಳಿಸಿದ್ದಾರೆ.
ರಸ್ತೆಗಿಳಿದ ನಿವಾಸಿಗಳು; ಪೊಲೀಸರ ಮಧ್ಯಪ್ರವೇಶ
ರಾಜೇಂದ್ರ ಪಾರ್ಕ್, ಭೀಮ್ಗಢ್ ಖೇರಿ ಮತ್ತು ಗುರ್ಗಾಂವ್ ರೈಲು ನಿಲ್ದಾಣದ ಸಮೀಪದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ತೊಂದರೆಗೊಳಗಾದ ನಿವಾಸಿಗಳು ಗುರುವಾರ ಸಂಜೆ ರೈಲು ನಿಲ್ದಾಣದ ರಸ್ತೆ ಸೇತುವೆ ಬಳಿ ಪ್ರತಿಭಟನೆ ನಡೆಸಿದರು. ಸುಮಾರು ರಾತ್ರಿ 8 ಗಂಟೆಯ ವೇಳೆಗೆ ವಿದ್ಯುತ್ ಕಡಿತಕ್ಕೆ ಹತ್ತು ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದ್ದರಿಂದ ಪುರುಷರು ಮತ್ತು ಮಹಿಳೆಯರು ರಸ್ತೆಯಲ್ಲಿ ಜಮಾಯಿಸಿ ವಿದ್ಯುತ್ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರೂ, ವಿದ್ಯುತ್ ಪೂರೈಕೆ ಪುನರಾರಂಭವಾಗುವವರೆಗೆ ಸ್ಥಳದಿಂದ ತೆರಳುವುದಿಲ್ಲ ಎಂದು ನಿವಾಸಿಗಳು ಪಟ್ಟುಹಿಡಿದರು. ವಿದ್ಯುತ್ ಇಲ್ಲದೆ ಮನೆಗಳಲ್ಲಿನ ನೀರಿನ ಮೋಟಾರ್ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಪೊಲೀಸರೆದುರು ಅಳಲು ತೋಡಿಕೊಂಡಿದ್ದಾರೆ.
ಫರಿದಾಬಾದ್ನ ನ್ಯೂ ಇಂಡಸ್ಟ್ರಿಯಲ್ ಟೌನ್ಶಿಪ್-2 ಪ್ರದೇಶದಲ್ಲಿಯೂ ನಿವಾಸಿಗಳು ವಿದ್ಯುತ್ ಪೂರೈಕೆ ಪುನರಾರಂಭಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆದಿರುವ ಮಾಹಿತಿ ಬಂದ ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ನೂಹ್ ಜಿಲ್ಲೆಯ ಪುನ್ಹಾನಾ, ನಗಿನಾ ಮತ್ತು ಫಿರೋಜ್ಪುರ ಝಿರ್ಕಾ ಪ್ರದೇಶಗಳಲ್ಲಿಯೂ ವಿದ್ಯುತ್ ವ್ಯತ್ಯಯ ವರದಿಯಾಗಿದೆ.
1,800 ಕೈಗಾರಿಕಾ ಘಟಕಗಳ ಉತ್ಪಾದನೆಗೆ ಅಡ್ಡಿ
ಗುರುಗ್ರಾಮ್ನ ಸೆಕ್ಟರ್ 37 ಮತ್ತು ಕದೀಪುರ ಕೈಗಾರಿಕಾ ಪ್ರದೇಶಗಳ ಸುಮಾರು 1,800 ಉತ್ಪಾದನಾ ಘಟಕಗಳು ವಿದ್ಯುತ್ ವ್ಯತ್ಯಯದಿಂದ ಬಾಧಿತವಾಗಿವೆ. ಬಸಾಯಿ ಪ್ರದೇಶದ ಕೈಗಾರಿಕೆಗಳಲ್ಲಿಯೂ ಯಂತ್ರಗಳು ಸ್ಥಗಿತಗೊಂಡು ಉತ್ಪಾದನಾ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಜವಳಿ ಘಟಕಗಳು, ರಫ್ತು ಸಂಸ್ಥೆಗಳು, ವಾಹನ ಬಿಡಿಭಾಗ ತಯಾರಕರು ಮತ್ತು ಕಾರ್ಪೊರೇಟ್ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಆಹಾರ ಪೂರೈಸುವ ಕಂಪನಿಗಳು ಈ ವ್ಯತ್ಯಯದಿಂದ ತೊಂದರೆಗೊಳಗಾಗಿವೆ. ವಿದ್ಯುತ್ ಕಡಿತ ದೀರ್ಘಕಾಲ ಮುಂದುವರಿದರೆ ಕೋಟ್ಯಂತರ ರೂಪಾಯಿ ನಷ್ಟವಾಗಬಹುದು ಎಂದು ಕೈಗಾರಿಕೋದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರೋಗ್ರೆಸಿವ್ ಫೆಡರೇಷನ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (PFTI) ಅಧ್ಯಕ್ಷ ದೀಪಕ್ ಮೈನಿ ಮಾತನಾಡಿ, ಸೆಕ್ಟರ್ 37ರಲ್ಲಿ ಬುಧವಾರ ರಾತ್ರಿ 10 ಗಂಟೆಯಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ನೂರಾರು ಘಟಕಗಳ ಕಾರ್ಯಾಚರಣೆ ನಿಂತಿರುವುದರಿಂದ ಉತ್ಪಾದನೆ ಮತ್ತು ವ್ಯವಹಾರಕ್ಕೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ವಿದ್ಯುತ್ ಬದಲಿಗೆ ಡೀಸೆಲ್ ಜನರೇಟರ್ಗಳನ್ನು ಬಳಸಲು ಕೈಗಾರಿಕೆಗಳು ಪ್ರಯತ್ನಿಸಿದರೂ, ಅವುಗಳನ್ನು ನಿರಂತರವಾಗಿ ನಡೆಸುವುದು ಕಷ್ಟವಾಗಿದೆ. ಹಲವು ಗಂಟೆಗಳ ಬಳಕೆಯ ಬಳಿಕ ಜನರೇಟರ್ಗಳನ್ನು ತಂಪಾಗಿಸಲು ನಿಲ್ಲಿಸಬೇಕಾಗುತ್ತದೆ. ಇದರಿಂದ ಉತ್ಪಾದನೆ ಮತ್ತೆ ಮತ್ತೆ ಸ್ಥಗಿತಗೊಳ್ಳುತ್ತದೆ ಎಂದು ಕೈಗಾರಿಕೋದ್ಯಮಿ ವಿಕ್ರಾಂತ್ ಗುಪ್ತಾ ಹೇಳಿದ್ದಾರೆ.
ಇದಲ್ಲದೆ, ದೆಹಲಿ-ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಡೀಸೆಲ್ ಜನರೇಟರ್ಗಳ ಬಳಕೆಯ ಮೇಲೂ ನಿಯಮಗಳಿವೆ. ಹೀಗಾಗಿ ವಿದ್ಯುತ್ ಇಲ್ಲದೆ ಕೈಗಾರಿಕೆಗಳನ್ನು ನಡೆಸುವುದೂ ಕಷ್ಟ, ಜನರೇಟರ್ಗಳನ್ನು ಬಳಸುವುದಕ್ಕೂ ನಿರ್ಬಂಧಗಳಿವೆ ಎಂದು ಉದ್ಯಮಿಗಳು ತಿಳಿಸಿದ್ದಾರೆ.
ವಿದ್ಯುತ್ ವಿತರಣೆಯಲ್ಲಿ ಖಾಸಗಿ ಕಂಪನಿಯ ಪ್ರವೇಶಕ್ಕೆ ವಿರೋಧ
HERC ಅಕ್ಟೋಬರ್ 19ರಂದು ವಿದ್ಯುತ್ ಕಾಯ್ದೆ, 2003ರ ಸೆಕ್ಷನ್ 14ರ ಅಡಿಯಲ್ಲಿ Eleven Power Private Limitedಗೆ ಗುರ್ಗಾಂವ್ ಮತ್ತು ನೂಹ್ ಜಿಲ್ಲೆಗಳಲ್ಲಿ 25 ವರ್ಷಗಳ ಅವಧಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡಿದೆ. ಇದರ ಅಡಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವಿದ್ಯುತ್ ವಿತರಣಾ ಕಂಪನಿಗಳ ಜೊತೆಗೆ ಖಾಸಗಿ ಸಂಸ್ಥೆಯೂ ವಿದ್ಯುತ್ ವಿತರಣೆ ಮಾಡಬಹುದು.
ಈ ನಿರ್ಧಾರವು ಸಾರ್ವಜನಿಕ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು, ನೌಕರರ ಉದ್ಯೋಗಗಳಿಗೆ ಧಕ್ಕೆ ತರಬಹುದು ಮತ್ತು ರೈತರು ಹಾಗೂ ಸಾಮಾನ್ಯ ಗ್ರಾಹಕರಿಗೆ ಪರಿಣಾಮ ಬೀರಬಹುದು ಎಂದು ನೌಕರರ ಸಂಘಟನೆಗಳು ವಾದಿಸಿವೆ. ರಾಜ್ಯಾದ್ಯಂತ ಸುಮಾರು 40,000 ವಿದ್ಯುತ್ ಇಲಾಖೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಂಘಟನೆಗಳು ತಿಳಿಸಿವೆ.
ಇದು ವೇತನ ಅಥವಾ ಭತ್ಯೆಗಳಿಗಾಗಿ ನಡೆಯುತ್ತಿರುವ ಮುಷ್ಕರವಲ್ಲ; ಸಾರ್ವಜನಿಕ ವಿದ್ಯುತ್ ಮೂಲಸೌಕರ್ಯ, ನೌಕರರ ಉದ್ಯೋಗ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ ಹೋರಾಟ ಎಂದು ಹರಿಯಾಣ ಬಿಜ್ಲಿ ಕರ್ಮಚಾರಿ ಮತ್ತು ಎಂಜಿನಿಯರ್ಸ್ ಜಾಯಿಂಟ್ ಸಂಘರ್ಷ ಮೋರ್ಚಾ ಹೇಳಿದೆ. ಖಾಸಗಿ ಕಂಪನಿಯ ಅನುಭವ, ತಾಂತ್ರಿಕ ಸಾಮರ್ಥ್ಯ, ಬಂಡವಾಳ ಹೂಡಿಕೆ, ಆರ್ಥಿಕ ಬಲ ಮತ್ತು ಅರ್ಹತೆಗಳ ಕುರಿತು ವಿವರಗಳನ್ನು ಬಹಿರಂಗಪಡಿಸಬೇಕು ಎಂದು ನೌಕರರ ಮುಖಂಡರು ಒತ್ತಾಯಿಸಿದ್ದಾರೆ. ಪರವಾನಗಿ ನೀಡಿದ ಪ್ರಕ್ರಿಯೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಯನ್ನೂ ಅವರು ಕೋರಿದ್ದಾರೆ.
ಮುಷ್ಕರ ಅನಗತ್ಯ ಎಂದ ಸರ್ಕಾರ; ಕಾನೂನು ಹೋರಾಟಕ್ಕೆ ಸಿದ್ಧತೆ
ಹರಿಯಾಣ ಸರ್ಕಾರವು HERC ನಿರ್ಧಾರವನ್ನು ಪ್ರಶ್ನಿಸಿ ವಿದ್ಯುತ್ ಮೇಲ್ಮನವಿ ನ್ಯಾಯಮಂಡಳಿಗೆ (APTEL) ಅರ್ಜಿ ಸಲ್ಲಿಸಿ, ಪರವಾನಗಿಯ ಜಾರಿಗೆ ತಡೆಯಾಜ್ಞೆ ಪಡೆಯಲು ಮುಂದಾಗಿದೆ ಎಂದು ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ತಿಳಿಸಿದ್ದಾರೆ. ನೌಕರರು ಮುಷ್ಕರ ಕೈಬಿಟ್ಟು ಸರ್ಕಾರದ ಕಾನೂನು ಹೋರಾಟಕ್ಕೆ ಸಹಕರಿಸಬೇಕು ಎಂದೂ ಮನವಿ ಮಾಡಿದ್ದಾರೆ.
ಇಂಧನ ಸಚಿವ ಅನಿಲ್ ವಿಜ್ ಮುಷ್ಕರವನ್ನು ಅನಗತ್ಯ ಎಂದು ಕರೆದಿದ್ದಾರೆ. ಪರವಾನಗಿ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿಲ್ಲ; ಅದು ಸ್ವತಂತ್ರ ನಿಯಂತ್ರಣ ಆಯೋಗದ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ. ವಿದ್ಯುತ್ ಮೂಲಸೌಕರ್ಯದಲ್ಲಿ ಸಾರ್ವಜನಿಕ ಹಣ ಹೂಡಿಕೆಯಾಗಿರುವುದರಿಂದ ಮತ್ತು ನೌಕರರ ಉದ್ಯೋಗಗಳು ಮುಖ್ಯವಾಗಿರುವುದರಿಂದ ಖಾಸಗೀಕರಣಕ್ಕೆ ತಾವು ವಿರೋಧಿಯಾಗಿದ್ದೇನೆ ಎಂದೂ ತಿಳಿಸಿದ್ದಾರೆ.
ಸರ್ಕಾರ ನೌಕರರ ಪ್ರತಿನಿಧಿಗಳಿಗೆ ಕಾನೂನು ಹೋರಾಟದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲು ಸಿದ್ಧವಿದೆ. ನೌಕರರು ತಮ್ಮ ಪರ ವಕೀಲರನ್ನು ಸೂಚಿಸಬಹುದು ಅಥವಾ ಸರ್ಕಾರದ ವಕೀಲರೊಂದಿಗೆ ಪ್ರಕರಣ ಸಿದ್ಧಪಡಿಸುವಲ್ಲಿ ಸಹಕರಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಭುಗಿಲೆದ್ದ ಆಕ್ರೋಶ: ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರು
ಆದರೆ, ನೌಕರರ ಸಂಘಟನೆಗಳು ಕೇವಲ ನ್ಯಾಯಾಂಗ ಹೋರಾಟ ಸಾಕಾಗುವುದಿಲ್ಲ ಎಂದು ವಾದಿಸಿವೆ. ರಾಜ್ಯದಲ್ಲಿ ಎಲ್ಲಿಯೂ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡದಂತೆ ಸಚಿವ ಸಂಪುಟದ ಮೂಲಕ ನೀತಿ ನಿರ್ಧಾರ ಕೈಗೊಳ್ಳಬೇಕು ಎಂದು ಅಖಿಲ ಭಾರತ ವಿದ್ಯುತ್ ಎಂಜಿನಿಯರ್ಸ್ ಫೆಡರೇಷನ್ (AIPEF) ಸೇರಿದಂತೆ ವಿವಿಧ ಸಂಘಟನೆಗಳು ಒತ್ತಾಯಿಸಿವೆ. ವಿದ್ಯುತ್ ಕಾಯ್ದೆಯಡಿ ಲಭ್ಯವಿರುವ ಅಧಿಕಾರ ಬಳಸಿ ಪರವಾನಗಿಯನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿವೆ.
ಹೆಲ್ಪ್ಲೈನ್ಗಳಿಗೂ ದೂರು; ಮುಷ್ಕರ ಮುಂದುವರಿಯುವ ಆತಂಕ
ವಿದ್ಯುತ್ ವ್ಯತ್ಯಯದ ಕುರಿತು ದೂರು ಸಲ್ಲಿಸಲು ಜಿಲ್ಲಾಡಳಿತ 1912 ಮತ್ತು 180010804334 ಎಂಬ ಟೋಲ್ಫ್ರೀ ಸಂಖ್ಯೆಗಳ ಜೊತೆಗೆ 8813999708 ಮತ್ತು 9540954768 ಎಂಬ ವಾಟ್ಸಾಪ್ ಸಂಖ್ಯೆಗಳನ್ನೂ ಪ್ರಕಟಿಸಿತ್ತು. ಆದರೆ, ಈ ಸಂಖ್ಯೆಗಳ ಮೂಲಕ ದೂರು ನೀಡಿದರೂ ತ್ವರಿತ ಪರಿಹಾರ ದೊರೆಯಲಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಮುಷ್ಕರದಿಂದ ದೂರು ಕೇಂದ್ರಗಳು, ಉಪಕೇಂದ್ರಗಳು ಮತ್ತು ವಿದ್ಯುತ್ ಇಲಾಖೆಯ ಹಲವು ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದೆ. ಆಸ್ಪತ್ರೆಗಳು, ನೀರು ಪೂರೈಕೆ ವ್ಯವಸ್ಥೆಗಳು ಮತ್ತು ಮೆಟ್ರೋ ಸೇರಿದಂತೆ ಅಗತ್ಯ ಸೇವೆಗಳಿಗೆ ಆದ್ಯತೆ ನೀಡುವಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚಿಸಿದೆ.
ನೌಕರರ ಸಂಘಟನೆಗಳು ತಮ್ಮ ಬೇಡಿಕೆಗಳು ಈಡೇರದಿದ್ದರೆ ಅಕ್ಟೋಬರ್ 24ರ ನಂತರವೂ ಮುಷ್ಕರ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಎಚ್ಚರಿಸಿವೆ. ಸರ್ಕಾರ ಪರವಾನಗಿ ನಿರ್ಧಾರವನ್ನು ನ್ಯಾಯಾಂಗದ ಮೂಲಕ ಪ್ರಶ್ನಿಸಲು ಮುಂದಾಗಿದ್ದರೂ, ನೌಕರರು ಅದನ್ನು ಹಿಂಪಡೆಯುವಂತೆ ಮತ್ತು ಭವಿಷ್ಯದಲ್ಲಿ ಇಂತಹ ಪರವಾನಗಿಗಳನ್ನು ನೀಡದಂತೆ ನೀತಿ ರೂಪಿಸುವಂತೆ ಒತ್ತಾಯಿಸುತ್ತಿದ್ದಾರೆ. ವಿದ್ಯುತ್ ಪೂರೈಕೆ ಸಹಜ ಸ್ಥಿತಿಗೆ ಮರಳುವವರೆಗೆ ಗುರ್ಗಾಂವ್ನ ನಿವಾಸಿಗಳು ಮತ್ತು ಕೈಗಾರಿಕೆಗಳು ಬಿಕ್ಕಟ್ಟಿನ ಪರಿಣಾಮ ಎದುರಿಸಬೇಕಾದ ಪರಿಸ್ಥಿತಿ ಮುಂದುವರಿಯುವ ಆತಂಕವಿದೆ.





