ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯಕ್ಕಾಗಿ ದೊಡ್ಡ ಸಂಖ್ಯೆಯ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಬೂತ್ ಮಟ್ಟದ ಅಧಿಕಾರಿಗಳಾಗಿ (BLO) ನಿಯೋಜಿಸಲಾಗಿದೆ. ಇದರಿಂದಾಗಿ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದ್ದು, ಪಠ್ಯ ಪೂರ್ಣಗೊಳಿಸಲು ಪರದಾಡುವಂತಾಗಿದೆ. ಮಾರ್ಚ್ನಿಂದ ಆಗಸ್ಟ್ 17ರವರೆಗೆ ಮೊದಲ ಹಂತದ ಪರಿಷ್ಕರಣೆ ನಡೆದಿದ್ದು, ಅಕ್ಟೋಬರ್ 22ರವರೆಗೆ ಹಕ್ಕು ಮತ್ತು ಆಕ್ಷೇಪಣೆಯ ಅಂತಿಮ ಹಂತದ ಕೆಲಸ ಮುಂದುವರಿಯುತ್ತದೆ ಎನ್ನಲಾಗಿದೆ.
ಇದರಿಂದ ಉಳಿದ ಶಿಕ್ಷಕರು ಪಠ್ಯಕ್ರಮ ಪೂರೈಸಲು ಹೆಣಗಾಡುತ್ತಿದ್ದಾರೆ. ಅನೇಕರು ತಮ್ಮ ವಿಷಯವಲ್ಲದ ಪಾಠಗಳನ್ನು ಬೋಧಿಸುತ್ತಿದ್ದಾರೆ. ಬೆಂಗಳೂರಿನ ನಗರ ವಾರ್ಡ್ಗಳಲ್ಲಿ ಈ ಪರಿಣಾಮ ಹೆಚ್ಚು. ಕೆಲವು ಶಾಲೆಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಒಬ್ಬ ಮುಖ್ಯೋಪಾಧ್ಯಾಯರು ಮತ್ತು ಕೆಲವು ಅತಿಥಿ ಶಿಕ್ಷಕರು ಮಾತ್ರ ಇದ್ದಾರೆ. ಪಾಠ-ಆಧಾರಿತ ಮೌಲ್ಯಮಾಪನಗಳು ವಿಳಂಬವಾಗುತ್ತಿವೆ ಕೆಲವೆಡೆ ಭೋದನೆಯೆ ನಡೆಯುತ್ತಿಲ್ಲ.
ಜಿಲ್ಲಾವಾರು ಪರಿಸ್ಥಿತಿ:
- ಗದಗ (ಲಕ್ಷ್ಮೇಶ್ವರ): ಎರಡೂ ಶಿಕ್ಷಕರು SIRನಲ್ಲಿ ಇದ್ದಾಗ ಒಂದು ಶಾಲೆ ಬೀಗ ಹಾಕಲಾಗಿತ್ತು. ಪೋಷಕರು ಇತರ ಸರ್ಕಾರಿ ನೌಕರರನ್ನು ನಿಯೋಜಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
- ಹುಬ್ಬಳ್ಳಿ/ಧಾರವಾಡ: ಬಹುತೇಕ ದೈಹಿಕ ಶಿಕ್ಷಣ ಮತ್ತು ಕ್ರಾಫ್ಟ್ ಶಿಕ್ಷಕರು ಇನ್ನೂ ಕರ್ತವ್ಯದಲ್ಲಿದ್ದಾರೆ. ವಿಷಯ ಶಿಕ್ಷಕರು ಹಿಂತಿರುಗಿದ್ದಾರೆ, ಆದರೆ ಪಠ್ಯೇತರ ಚಟುವಟಿಕೆಗಳು ಬಾಧಿತವಾಗಿವೆ.
- ವಿಜಯಪುರ: ಶಿಕ್ಷಕರು ಸುಮಾರು ಎರಡು ತಿಂಗಳು ಹೊರಗಿದ್ದರು. ಅಧಿಕಾರಿಗಳು ಹೇಳುವಂತೆ ಇತರರು ಪಠ್ಯಕ್ರಮವನ್ನು ನಿಭಾಯಿಸಿದ್ದಾರೆ ಮತ್ತು ಹೆಚ್ಚುವರಿ ಅವಧಿಗಳನ್ನು ನೀಡಲಾಗುವುದು ಎಂಬ ಭರವಸೆ ನೀಡಲಾಗಿದೆ.
- ಮಂಗಳೂರು/ದಕ್ಷಿಣ ಕನ್ನಡ: ಸುಮಾರು 381 ಶಿಕ್ಷಕರು ನಿಯೋಜಿತ. ಫಾರ್ಮೇಟಿವ್ ಅಸೆಸ್ಮೆಂಟ್ ಪಠ್ಯಕ್ರಮ ವಿಳಂಬವಾಗಿದೆ. ಮಳೆ ರಜೆಗಳು ಮತ್ತು ಈಗಾಗಲೇ ಇದ್ದ ಕೊರತೆ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.
- ಶಿವಮೊಗ್ಗ: 500ಕ್ಕೂ ಹೆಚ್ಚು ಶಿಕ್ಷಕರು ಕರ್ತವ್ಯದಲ್ಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಹೀಗೆ ಎರಡೆರೆಡು ಪಾತ್ರ ನಿರ್ವಹಣೆಯಿಂದ ಶಿಕ್ಷಕರಿಗೆ ಒತ್ತಡ ಹೆಚ್ಚಾಗುತ್ತಿದೆ.
ಆಯುಕ್ತರು ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ ಮತ್ತು ಶಿಕ್ಷಕರು ಹಿಂತಿರುಗಿದ ನಂತರ ಹೆಚ್ಚುವರಿ ತರಗತಿಗಳು (ಅಗತ್ಯವಿದ್ದರೆ ರಜಾದಿನಗಳಲ್ಲೂ) ನಡೆಯುವುದು ಎಂದು ಹೇಳಿದ್ದಾರೆ. ಆದರೆ ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ ವಿ.ಪಿ. ಹೇಳುವಂತೆ, ಆರು ತಿಂಗಳ ನಷ್ಟವನ್ನು ರಜೆಗಳಲ್ಲಿ ಸರಿದೂಗಿಸಲು ಸಾಧ್ಯವಿಲ್ಲ. ಬಡ ಮಕ್ಕಳು ಹೆಚ್ಚು ಬಾಧಿತರಾಗಿದ್ದಾರೆ. ಯುವ ನಿಧಿ ಯೋಜನೆಯ ನಿರುದ್ಯೋಗಿ ಯುವಕರನ್ನು ನಿಯೋಜಿಸಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪೋಷಕರು ಮತ್ತು ಶಿಕ್ಷಕರು ಇಂತಹ ದೀರ್ಘಾವಧಿ ಕರ್ತವ್ಯಗಳಿಂದ ಶಿಕ್ಷಕರಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮೂಲ: ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ (TNIE), 31 ಆಗಸ್ಟ್ 2026




