ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ ಸ್ವತಂತ್ರ ಭಾರದ್ವಾಜ್ ಎಂಬ ವ್ಯಕ್ತಿ ನೀಡಿದ ಹೇಳಿಕೆಯೀಗ ಭಾರೀ ಸಂಚಲನ ಉಂಟುಮಾಡಿದೆ. ಅಷ್ಟೇ ಅಲ್ಲ ಮೋದಿ ಸರ್ಕಾರದ ನಿಜ ಬಣ್ಣ ಮತ್ತೆ ಬಯಲಾಗಿದೆ. ಜಂತರ್ ಮಂತರ್ ನಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯ ವೇಳೆ ಈತ ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸಿದ್ದ. ಸಿವಿಲ್ ಡ್ರಸ್‌ನಲ್ಲಿದ್ದ ಲಾಠಿ ಹಿಡಿದಿದ್ದ ವ್ಯಕ್ತಿಗಳು ಯಾರು ಎಂಬ ಸಾರ್ವಜನಿಕರ ಪ್ರಶ್ನೆಗೆ ಅವರೆಲ್ಲ ದೆಹಲಿ ಪೊಲೀಸ್ ಎಂದೇ ಸಮರ್ಥಿಸಿಕೊಳ್ಳಲಾಗಿತ್ತು. ಸುಪ್ರೀಮ್ ಕೋರ್ಟಿಗೂ ಇದೇ ಸುಳ್ಳು ಹೇಳಿದ್ದಾರೆ ದೆಹಲಿ ಪೊಲೀಸರು.
ಸಂಸತ್ತಿನ ಮುಂಗಾರು ಅಧಿವೇಶನ ಶುರುವಾಗುವ ಜು. ೨೦ರಂದು ಮುಂಜಾನೆ ಸಿಜೆಪಿ ಕಾರ್ಯಕರ್ತರು ಜಂತರ್ ಮಂತರ್‌ನಿಂದ ಹೊರಟು ಸಂಸತ್ ಭವನ ಕಡೆಗೆ ಶಾಂತಿಯುತ ಹೆಜ್ಜೆ ಹಾಕಿದ್ದರು. ಪೊಲೀಸರು ಸಂಸದ್ ಭವನ್ ಚಲೋಗೆ ಅನುಮತಿ ನೀಡಿರಲಿಲ್ಲ. ಆದರೆ ಭಾರೀ ತಯಾರಿ ಮಾಡಿಕೊಂಡಿದ್ದರು. ಅದರಲ್ಲಿ ಮೊಳೆಗಳನ್ನು ಹೊಡೆದ ಲಾಠಿಗಳು, ಟ್ರಕ್ ಭರ್ತಿ ದಪ್ಪ ಕಲ್ಲುಗಳನ್ನು ತುಂಬಿ ರಸ್ತೆಯ ಬದಿಯಲ್ಲೇ ನಿಲ್ಲಿಸಿದ್ದು, ಅಷ್ಟೇ ಏಕೆ ಬಿಜೆಪಿ ಬೆಂಬಲಿತ ಪುಂಡರ ಕೈಗೆ ಲಾಠಿ ಕೊಟ್ಟು ಪ್ರತಿಭಟನಾಕಾರರನ್ನು ಹೊಡೆಯಲು ಬಿಟ್ಟಿದ್ದರು. ರಸ್ತೆಗೆ ಬ್ಯಾರಿಕೇಡ್ ಇಟ್ಟು ಅವುಗಳನ್ನು ಬೆಸೆದು ಲಾಕ್ ಮಾಡಿದ್ದರೂ ಯುವಜನರ ಆಕ್ರೋಶದ ಕಟ್ಟೆ ಒಡೆದಿತ್ತು. ಯಾವಾಗ ಬ್ಯಾರಿಕೇಡ್ ಹಾರಿ ಸಂಸತ್ತಿನ ಕಡೆಗೆ ಪ್ರತಿಭಟನಾಕಾರರು ಓಟಕಿತ್ತರೋ ಆಗ ಬೀದಿಗಿಳಿದ ಪುಂಡರ ತಂಡ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಥಳಿಸಿದ್ದರು. ಕಲ್ಲುಗಳನ್ನು ಎಸೆದಿದ್ದರು. ಅನೇಕ ವಿದ್ಯಾರ್ಥಿಗಳು ಗಾಯಗೊಂಡರೂ ಯೂನಿಫಾರಂ ಇಲ್ಲದ ಲಾಠಿ ಹಿಡಿದ ದುಷ್ಟರ ಬಗ್ಗೆ ವಿಡಿಯೋ ಮಾಡಿದ್ದರು. ಪೆಲೆಟ್ ಗನ್ ಪ್ರಯೋಗಿಸಲಾಯಿತು. ವಿಪಕ್ಷಗಳು ಗೃಹಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿದರೂ ಪ್ರಯೋಜನವಾಗಲಿಲ್ಲ. ಆದರೆ ಸುಪ್ರೀಂ ಕೋರ್ಟು, ಸಿಜೆಪಿ ಪ್ರತಿಭಟನಾಕಾರರ ಮೇಲಿನ ಎಫ್‌ಐಆರ್ ರದ್ದುಗೊಳಿಸಿದೆ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಕ್ರಿಮಿನಲ್ ಹಿನ್ನೆಲೆಯವರು ಪ್ರತಿಭಟನೆಯಲ್ಲಿದ್ದರು ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ವರದಿ ನೀಡಿದ್ದರು.
ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ ಸ್ವತಂತ್ರ ಭಾರದ್ವಾಜ್ ಎಂಬ ವ್ಯಕ್ತಿ ನೀಡಿದ ಹೇಳಿಕೆಯೀಗ ಭಾರೀ ಸಂಚಲನ ಉಂಟುಮಾಡಿದೆ. ಅಷ್ಟೇ ಅಲ್ಲ ಮೋದಿ ಸರ್ಕಾರದ ನಿಜ ಬಣ್ಣ ಮತ್ತೆ ಬಯಲಾಗಿದೆ. ಜಂತರ್ ಮಂತರ್ ನಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯ ವೇಳೆ ಈತ ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸಿದ್ದ. ಸಿವಿಲ್ ಡ್ರಸ್‌ನಲ್ಲಿದ್ದ ಲಾಠಿ ಹಿಡಿದಿದ್ದ ವ್ಯಕ್ತಿಗಳು ಯಾರು ಎಂಬ ಸಾರ್ವಜನಿಕರ ಪ್ರಶ್ನೆಗೆ ಅವರೆಲ್ಲ ದೆಹಲಿ ಪೊಲೀಸ್ ಎಂದೇ ಸಮರ್ಥಿಸಿಕೊಳ್ಳಲಾಗಿತ್ತು. ಸುಪ್ರೀಮ್ ಕೋರ್ಟಿಗೂ ಇದೇ ಸುಳ್ಳು ಹೇಳಿದ್ದಾರೆ ದೆಹಲಿ ಪೊಲೀಸರು. ಕೆಲವರು ಪೊಲೀಸ್ ಸಮವಸ್ತ್ರದಲ್ಲಿದ್ದರೂ ಅವರ ಹೆಸರಿನ ಬ್ಯಾಜ್ ಕಿತ್ತು ಹಾಕಲಾಗಿತ್ತು. ಅದನ್ನೂ ಕೆಲವರು ಕಂಟೆಂಟ್ ಕ್ರಿಯೇಟರ್‌ಗಳು ಪ್ರಶ್ನೆ ಮಾಡಿದ್ದರು. ಆದರೆ ಇದೀಗ ಪಾಡ್ ಕಾಸ್ಟ್ ಒಂದರಲ್ಲಿ ಸ್ವತಂತ್ರ ಭಾರದ್ವಾಜ್ ಎಂಬ ಕೇಡಿ ಅಸಲಿ ವಿಷಯ ಬಾಯಿಬಿಟ್ಟಿದ್ದಾನೆ.
ಈತನ ಮುಂಗೈ ಲೋಹದ ಬಳೆಯ ಏಟಿಗೆ ದಲಿತ ಸಮುದಾಯದ ಸಂಜಯ್ ಕುಮಾರ್ ಎಂಬುವರ ತಲೆ ಒಡೆದಿತ್ತು. ಸುಮಾರು 60 ಹೊಲಿಗೆಗಳನ್ನು ಹಾಕಲಾಗಿದೆ ಎಂದು ಹೇಳಲಾಗಿತ್ತು. ಇವರ ಮಗಳು ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ತಮ್ಮ ತಂದೆಗೆ ನ್ಯಾಯ ಕೊಡುವಂತೆ ಪೊಲೀಸ್ ಠಾಣೆಯ ಮುಂದೆ ಅತ್ತಿದ್ದಳು. ಈ ಸ್ವತಂತ್ರ ಭಾರದ್ವಾಜನನ್ನು ಸಿವಿಲ್ ಡ್ರೆಸ್ ನಲ್ಲಿರುವ ದೆಹಲಿ ಪೊಲೀಸ್ ಎಂದೇ ನಂಬಿಸಲಾಗಿತ್ತು.
ಆತ ಪಾಡ್ ಕಾಸ್ಟ್‌ನಲ್ಲಿ ತಾನು ಮಾಡಿದ ಕೊಲೆಯತ್ನವನ್ನು ಶೌರ್ಯದ ರೀತಿಯಲ್ಲಿ ಬಣ್ಣಿಸಿಕೊಂಡಿದ್ದಾನೆ. ನಿಶು ಅಜಾದ್ ಳ ತಂದೆಯ ತಲೆ ಒಡೆದಿದ್ದೇನೆ. ಅವರ ತಲೆಗೆ 60 ಹೊಲಿಗೆಗಳು ಬಿದ್ದಿವೆ. ಅವರು ಆಂಬುಲೆನ್ಸ್ ನಲ್ಲಿದ್ರು. ಸಾಯುವ ಸ್ಥಿತಿಯಲ್ಲಿದ್ದರು. ನನ್ನ ಮೇಲೆ ಹತ್ಯೆಗೆ ಯತ್ನ ಆರೋಪದಡಿ ಸೆಕ್ಷನ್ 307ರ ಅನ್ವಯ ಕೇಸು ದಾಖಲಿಸಬಹುದಿತ್ತು. ಆದರೆ, ನಾನು ಮರುದಿನವೇ ಪೊಲೀಸ್ ಠಾಣೆಯಿಂದ ಹೊರ ಬಂದೆ. ಜೈಲಿಗೂ ಹೋಗಲಿಲ್ಲ. ದೆಹಲಿ ಸಚಿವ ಕಪಿಲ್ ಮಿಶ್ರ ಅವರ ಫೋನ್ ಕರೆ ಬಂತು. ಪೊಲೀಸರು ನನ್ನನ್ನು ಬಿಡುಗಡೆಗೊಳಿಸಿದರು. ಕಪಿಲ್ ಮಿಶ್ರ, ಚಿರಾಗ್ ಪಾಸ್ವಾನ್ ನನ್ನ ದೊಡ್ಡಣ್ಣನಂತೆ. ಮೋದಿ ಅವರೂ ನನ್ನ ದೊಡ್ಡಣ್ಣನಂತೆʼ ಎಂದು ಹೇಳಿದ್ದಾನೆ.
ಅಷ್ಟೇ ಅಲ್ಲ “ನನ್ನ ಬೂಟು, ಲಾಠಿ ಎಲ್ಲಾ ದೆಹಲಿ ಪೊಲೀಸರದ್ದು. ನಾನು ಯಾವುದೇ ಫಾರ್ಮು ತುಂಬದೆ, ಪೊಲೀಸರಂತೆ ತಿರುಗುತ್ತೇನೆ” ಎಂದು ಆತ ಹೇಳಿದ್ದಾನೆ. ಇದು ಈ ದೇಶದ ಚುಕ್ಕಾಣಿ ಹಿಡಿದವರ ನೀಚತನವನ್ನು ಎತ್ತಿ ತೋರಿಸುತ್ತದೆ. ತಾವು ಶಾಶ್ವತವಾಗಿ ಅಧಿಕಾರದಲ್ಲಿರಬೇಕು. ಅದಕ್ಕಾಗಿ ವಿಪಕ್ಷಗಳನ್ನು ಮುಗಿಸಬೇಕು, ವಿಪಕ್ಷ ನಾಯಕರ ವಿರುದ್ಧ ಸುಳ್ಳು ಕೇಸುಗಳನ್ನು ಜಡಿಯುವುದು, ಇಡಿ/ಸಿಬಿಐ ಛೂ ಬಿಟ್ಟು ಮಟ್ಟ ಹಾಕುವುದು, ವಿಪಕ್ಷಗಳ ಪ್ರಭಾವಿ ಮುಖಂಡರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿಕೊಳ್ಳುವುದು, ಸಂಘಟನೆಗಳು ಪ್ರತಿಭಟನೆ ಮಾಡದಂತೆ ತಡೆಯುವುದು… ಹೀಗೆ ಪ್ರಜಾಪ್ರಭುತ್ವವನ್ನು ಹತ್ತಿಕ್ಕಿಯಾದರೂ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಆರೆಸ್ಸೆಸ್ ಹೊರಟಿದೆ. ಅದರ ಕರಾಳತೆಯನ್ನು ಭಾರದ್ವಾಜನ ಮಾತು ತೆರೆದಿಟ್ಟಿದೆ.
ತಂದೆಯನ್ನು (ಸಂಜಯಕುಮಾರ್ ಆಜಾದ್) ಚಚ್ಚಿದ್ದೇನೆ, ಮಗಳನ್ನು (ನಿಶೂ ಆಜಾದ್) ಥಳಿಸಲಿದ್ದೇವೆ. ಅದಕ್ಕೆ ಯೋಜನೆ ಹೂಡಿದ್ದೇವೆ ಎಂಬ ಬೆದರಿಕೆಯನ್ನೂ ಹಾಕಿದ್ದಾನೆ. ಭಾರದ್ವಾಜನ ಕೂದಲನ್ನೂ ಕೊಂಕಿಸಲು ಒಪ್ಪದಿದ್ದ ದೆಹಲಿ ಪೊಲೀಸರು ಕಡೆಗೂ ಜನ ಪ್ರತಿಭಟನೆಯ ಶಕ್ತಿಗೆ ಮಣಿದಿದ್ದಾರೆ. ಶುಕ್ರವಾರ ಸಂಜೆಯ ವೇಳೆಗೆ ಈ ಕೇಸರಿ ಕೇಡಿಯನ್ನು ಬಂಧಿಸಿದ್ದಾರೆ.
2020ರಲ್ಲಿ ದೆಹಲಿಯಲ್ಲಿ ನಡೆದ ಸಿಎಎ/ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯಲ್ಲೂ ಇದೇ ತರ ಸಂಘಪರಿವಾರದ ದುಷ್ಟರು ಪ್ರತಿಭಟನಾ ಕಾರರ ಮೇಲೆ ದಾಳಿ ನಡೆಸಿದ್ದರು. ಶಾಹೀನ್ ಬಾಗ್‌ನಲ್ಲಿ ಪ್ರತಿಭಟನಾಕಾರರಿಗೆ ಯುವಕನೊಬ್ಬ ಪೊಲೀಸರ ಸಮ್ಮುಖದಲ್ಲಿಯೇ ಪಿಸ್ತೂಲು ತೋರಿಸಿದ್ದ. ಗೋಲಿ ಮಾರೋ ಸಾಲೋಂಕೋ ಎಂದು ಅಬ್ಬರಿಸಿದ ವ್ಯಕ್ತಿ ದೆಹಲಿ ಸರ್ಕಾರದಲ್ಲಿ ಮಂತ್ರಿ!
ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ 2,873 ಕ್ರಿಮಿನಲ್ ವ್ಯಕ್ತಿಗಳು ಭಾಗಿಯಾಗಿದ್ದರು ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಕ್ರಿಮಿನಲ್ ಹಿನ್ನೆಲೆ ಹೊಂದಿರುವವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ಆದರೆ ದೆಹಲಿ ಪೊಲೀಸರು ಮುಖ ಗುರುತಿಸುವ ತಂತ್ರಜ್ಞಾನ (Facial Recognition System-FRS) ಮೂಲಕ ಗುರುತಿಸಿರುವ 2,873 ಮಂದಿ ಆರೋಪಿಗಳ ಪೈಕಿ ಕನಿಷ್ಠ 25 ಮಂದಿ ಅಂದು ಜೈಲಿನಲ್ಲಿದ್ದರು ಎಂಬುದು ಪೊಲೀಸ್, ಜೈಲು ಮತ್ತು ನ್ಯಾಯಾಲಯದ ದಾಖಲೆಗಳಿಂದ ಬಹಿರಂಗವಾಗಿದೆ.
ಆದರೆ, ಮುಖ ಗುರುತಿಸುವ ತಂತ್ರಜ್ಞಾನದ ಆಧಾರದ ಮೇಲೆ ಮಾತ್ರ ಕ್ರಮ ಕೈಗೊಳ್ಳದೆ, ಸ್ಥಳ ಪರಿಶೀಲನೆ (Field Verification) ಬಳಿಕವೇ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಸಿಜೆಪಿ ಮತ್ತು ಬೇರೆ ಬೇರೆ ಸಂಘಟನೆಗಳಿಗೆ ಕಾನೂನಿನ ಕುಣಿಕೆಗೆ ಹಾಕಲು ಮೋದಿ ಸರ್ಕಾರ, ಗೃಹಸಚಿವ ಅಮಿತ್ ಶಾ ಕುತಂತ್ರ ಮಾಡಿ ಕ್ರಿಮಿನಲ್‌ಗಳನ್ನು ಜಂತರ್ ಮಂತರ್‌ಗೆ ಕಳುಹಿಸಿದ್ದರೇ? ಎಂಬ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಅವರ ಅನುಮಾನ ಸರಿಯಾಗಿದೆ. ಇಂತಹ ಅನುಮಾನ ಬರುವಂತೆ ಮೋದಿ ಸರ್ಕಾರ ಕಳೆದ ಹನ್ನೆರಡು ವರ್ಷಗಳಿಂದ ಹತ್ತಾರು ಬಾರಿ ನಡೆದುಕೊಂಡಿದೆ. ವಿದ್ಯಾರ್ಥಿಗಳನ್ನು ದಿಮಾಗಿ ನಕ್ಸಲರು ಎಂದು ಕೆಂಪುಕೋಟೆಯ ಮೇಲಿಂದ ಅದೂ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ತಮ್ಮ ಪಕ್ಷದಲ್ಲಿ ಅತ್ಯಂತ ಹೆಚ್ಚು ಕ್ರಿಮಿನಲ್‌ಗಳು, ಅತ್ಯಾಚಾರದ ಆರೋಪಿಗಳು, ಭ್ರಷ್ಟಾಚಾರಿಗಳು ತುಂಬಿ ತುಳುಕುತ್ತಿದ್ದಾರೆ. ಮಾತೆತ್ತಿದರೆ ಕಡಿ, ಕೊಲ್ಲು ಎಂಬ ಭಾಷೆ ಬಳಸುವ ನಾಯಕರೇ ತುಂಬಿದ್ದಾರೆ.
ಐದು ವರ್ಷಗಳ ಹಿಂದೆ ದೆಹಲಿಯಲ್ಲಿ ಒಂದೂವರೆ ವರ್ಷಗಳ ಕಾಲ ನಡೆದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ರೈತರು ಬೃಹತ್ ಪ್ರತಿಭಟನೆ ನಡೆಸಿದಾಗಲೂ ಅದನ್ನು ಹತ್ತಿಕ್ಕಲು ನಾನಾ ಬಗೆಯ ಹತಾರಗಳನ್ನು ಪ್ರಯೋಗಿಸಿದ್ದರು. ರೈತರನ್ನು ನಕಲಿ ರೈತರು, ಖಲಿಸ್ತಾನಿಗಳು, ವಿದೇಶದ ಫಂಡ್ ಪಡೆದವರು ಎಂದೆಲ್ಲ ಆರೋಪಿಸಿದ್ದರು. ಕಡೆಗೂ ಮೋದಿ ಸರ್ಕಾರ ಮಣಿಯಲೇಬೇಕಾಯ್ತು. ಸಿಜೆಪಿ ಪ್ರತಿಭಟನೆಯನ್ನೂ ಆರಂಭದಲ್ಲಿ ಲಘುವಾಗಿ ಪರಿಗಣಿಸಿದ್ದ ಮೋದಿ ಸರ್ಕಾರ, ಈ ಪ್ರತಿಭಟನೆಗೆ ಜನಬೆಂಬಲ ದೊರೆಯುತ್ತಿದ್ದಂತೆ ಕ್ರಿಮಿನಲ್‌ಗಳನ್ನು ಬಿಟ್ಟು ಕೆಡಿಸಲು ಯತ್ನಿಸಿತ್ತು. ಆದರೆ, ಜೆನ್-ಝಿಗಳಿಗೆ ಕೊನೆಗೂ ಮಣಿಯಲೇಬೇಕಾಯ್ತು.
ಇನ್ನಾದರೂ ತನ್ನ ದುಷ್ಟ ನಡವಳಿಕೆಯನ್ನು ಬಿಜೆಪಿ ಸರ್ಕಾರ ನಿಲ್ಲಿಸಬೇಕು. ಸರ್ಕಾರದ ದುರಾಡಳಿತದ ವಿರುದ್ಧ ದೇಶವಾಸಿಗಳು ದಂಗೆ ಏಳಿದರೆ ಅವರ ಮಾತುಗಳಿಗೆ ಕಿವಿಯಾಗಬೇಕೇ ಹೊರತು, ಅವರ ಧ್ವನಿಯನ್ನು ಹತ್ತಿಕ್ಕುವ ದುಷ್ಟ ಪ್ರಯತ್ನ ನಿಲ್ಲಿಸಬೇಕು.





