ಐದು ತಿಂಗಳ ಬಾಕಿ ಪ್ರೋತ್ಸಾಹಧನ ಹಾಗೂ ಒಂದು ತಿಂಗಳ ನಿಶ್ಚಿತ ಗೌರವಧನ ನೀಡುವಂತೆ ಆಗ್ರಹಿಸಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಜಿಲ್ಲಾ ಆರೋಗ್ಯಧಿಕಾರಿ ಕಚೇರಿ ಮುಂದೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಎಐಯುಟಿಯುಸಿ ಜೊತೆಗೂಡಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು. ಇದೇ ವೇಳೆ ತಮ್ಮ ಬೇಡಿಕೆ ಈಡೇರಿಸುವಂತೆ ಡಿಎಚ್ಒ ಡಾ. ಎಲ್ ಆರ್ ಶಂಕರ್ ನಾಯ್ಕ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಡಿಎಚ್ಒ ಎರಡು ದಿನದಲ್ಲಿ ಇನ್ಸೆಂಟಿವ್ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಇನ್ನುಳಿದ ಹಣವನ್ನು 20 ದಿನದೊಳಗೆ ರಿಲೀಸ್ ಮಾಡಲಾಗುತ್ತೆ ಅಂದರು.
ಸಮಸ್ಯೆ ಬಗೆಹರಿಸುವಂತೆ ತಿಂಗಳ ಹಿಂದೆಯೇ ನಡೆದ ಹೋರಾಟದ ಫಲವಾಗಿ ಇನ್ಸೆಂಟಿವ್ ಹಣ ರಿಲೀಸ್ ಆಗಿದೆ. ಎಲ್ಲಾ ಜಿಲ್ಲೆಗಳು ಸೇರಿ 260 ಕೋಟಿ ರೂಪಾಯಿ ರೂ. ಬಿಡುಗಡೆಯಾಗಿದ್ದು, ಇದರಲ್ಲಿ ವಿಜಯನಗರ ಜಿಲ್ಲೆಗೆ 5.6 ಕೋಟಿ ರೂಪಾಯಿ ನಿಗದಿಯಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಇಲ್ಲಿವರೆಗೆ ಆ ಹಣ ಕೈ ಸೇರಿಲ್ಲ ಎಂದು ಆಶಾ ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೇ, ಕೂಡಲೇ ಆಶಾ ಕಾರ್ಯಕರ್ತೆಯರಿಗೆ ಬಾಕಿ ಹಣ ಬಿಡುಗಡೆಯಾಗಬೇಕು. ಒಂದು ವೇಳೆ ವಿಳಂಬವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.





