ದಕ್ಷಿನ ಕನ್ನಡ ಜಿಲ್ಲೆಯ ಬಂಟ್ವಾಳದ ಬಿಸಿ ರಸ್ತೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಯುವತಿಯ ಹತ್ಯೆಯಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಶೀಘ್ರವೇ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ವಿಜಯಪುರ ಜಿಲ್ಲಾ ಸಹ ಸಂಚಾಲಕ ಚನ್ನು ಕಟ್ಟಿಮನಿ ಆಗ್ರಹಿಸಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, “ಸಾರ್ವಜನಿಕ ಸ್ಥಳದಲ್ಲೇ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕಾನೂನು ತನ್ನ ಕೆಲಸವನ್ನು ತ್ವರಿತವಾಗಿ ಮಾಡಿ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಬೇಕು” ಎಂದು ಒತ್ತಾಯಿಸಿದರು.
ಈ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಎಲ್ಲ ಸಂಘಟನೆಗಳು ಪಕ್ಷಾತೀತವಾಗಿ ಧ್ವನಿ ಎತ್ತಬೇಕಾಗಿತ್ತು. ಆದರೆ ಕೆಲ ಸಂಘಟನೆಗಳು ಮೌನ ವಹಿಸಿರುವುದು ಬೇಸರದ ಸಂಗತಿಯಾಗಿದೆ. ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಯಾವುದೇ ರೀತಿಯ ತಾರತಮ್ಯ ಇರಬಾರದು. ಅಪರಾಧ ಯಾರಿಂದ ನಡೆದಿದ್ದರೂ ಅದನ್ನು ಸಮಾನವಾಗಿ ಖಂಡಿಸಿ, ಸಂತ್ರಸ್ತೆಗೆ ನ್ಯಾಯ ದೊರಕಿಸಲು ಎಲ್ಲರೂ ಒಗ್ಗೂಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರ ಕಠಿಣ ಕ್ರಮ ಕೈಗೊಂಡು, ಇಂತಹ ಘಟನೆಗಳು ಮರುಕಳಿಸದಂತೆ ಪರಿಣಾಮಕಾರಿ ಕಾನೂನು ಜಾರಿಗೊಳಿಸಬೇಕು ಎಂದು ಚನ್ನು ಕಟ್ಟಿಮನಿ ಆಗ್ರಹಿಸಿದರು.




