ಲೋಕಸಭಾ ಕಲಾಪಕ್ಕೆ ಆಗಂತುಕರು ನುಗ್ಗಿದ ಘಟನೆಯಿಂದ ಬಿಜೆಪಿಯ ಇಮೇಜ್‌ಗೆ ಭಾರೀ ಪೆಟ್ಟು ಬಿದ್ದಿದೆ. ಪಾರ್ಲಿಮೆಂಟ್ ಮೇಲಿನ ದಾಳಿಯ 22ನೇ ವರ್ಷಾಚರಣೆಯ ದಿನದಂದೇ ಘಟನೆ ನಡೆದಿರುವುದು ಪ್ರಧಾನಿ ನರೇಂದ್ರ ಮೋದಿಯವರ ವಿಶ್ವಗುರುವಿನ ವರ್ಚಸ್ಸಿಗೆ ಧಕ್ಕೆ ಮಾಡಿದೆ. ಇದು ಆಕಸ್ಮಿಕವಾಗಿ ಗೆದ್ದು ಸಂಸದರಾಗಿದ್ದ ಪ್ರತಾಪ್ ಸಿಂಹ ಅವರ ರಾಜಕೀಯ ಜೀವನ ಅಂತ್ಯವಾಗಲು ಕಾರಣವಾಗುವ ಸಾಧ್ಯತೆ ಇದೆ.
2024ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ವೀರ ಅನ್ನಿಸಿಕೊಳ್ಳಬೇಕೆನ್ನುವ ಆಸೆಯಿಂದಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಲೋಕಸಭಾ ಗ್ಯಾಲರಿಗೆ ಆಗಂತುಕರು ನುಗ್ಗಿದ ಪ್ರಕರಣವೇ ಕಂಟಕವಾಗುವ ಸಾಧ್ಯತೆಗಳಿವೆ. ಅಪರಿಚಿತರಿಗೆ ಅತಿಥಿ ಪಾಸ್ ನೀಡಿ ಘಟನೆ ನಡೆಯಲು ಕಾರಣವಾಗಿರುವ ಪ್ರತಾಪ್ ಸಿಂಹ ಮೇಲೆ ಬಿಜೆಪಿ ವರಿಷ್ಠರು ಕೋಪ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಪ್ರತಾಪ್ ಸಿಂಹ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದಿರಲಿ, ಅವರಿಗೆ ಟಿಕೆಟ್ ಸಿಗುವುದೂ ಕೂಡ ಅನುಮಾನ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ವಾಸ್ತವವಾಗಿ, ಪ್ರತಾಪ್ ಸಂಸದರಾಗಿದ್ದೇ ಒಂದು ಸೋಜಿಗ. ಒಂದಷ್ಟು ಸಂಘ ಪರಿವಾರದ ಹಿರಿಯರ ಜೊತೆ ಸಂಪರ್ಕವಿಟ್ಟುಕೊಂಡು, ಅವರು ಹೇಳುತ್ತಿದ್ದ ಹಸಿ ಬಿಸಿ ಸುಳ್ಳುಗಳನ್ನೇ ಪತ್ರಿಕೆಯ ತನ್ನ ಅಂಕಣದಲ್ಲಿ ಬರೆದು ತಾನೂ ಒಬ್ಬ ಪತ್ರಕರ್ತ ಎನ್ನಿಸಿಕೊಂಡವರು. ನಂತರ ಅದೇ ಸಂಘ ಪರಿವಾರದವರ ವಕಾಲತ್ತಿನಿಂದ ಮೈಸೂರು-ಕೊಡಗು ಕ್ಷೇತ್ರದ ಎಂಪಿ ಟಿಕೆಟ್ ಗಿಟ್ಟಿಸಿ, ಮೋದಿ ಅಲೆಯಲ್ಲಿ ತೇಲಿ ಹೋಗಿ ಸಂಸತ್ತಿನಲ್ಲಿ ಬಿದ್ದರು. ಇನ್ನು ಅವರು ಎರಡನೇ ಬಾರಿ ಗೆಲ್ಲಲು ಕಾರಣ, ಅವರ ಎದುರಾಳಿಗಳಾಗಿದ್ದವರ ದೌರ್ಬಲ್ಯ ಮತ್ತು ದೇವೇಗೌಡರಂಥ ‘ಜಾತ್ಯಸ್ಥ’ರ ಬೆಂಬಲ.
ಎರಡು ಬಾರಿ ಸಂಸದರಾದರೂ ಪ್ರತಾಪ್ ಮಾಡಿದ ಕೆಲಸ ಶೂನ್ಯ; ಹಾದಿ ತಪ್ಪಿದ ಕಾಲೇಜು ಹುಡುಗನಂತೆ ಪೋಸು ಕೊಟ್ಟುಕೊಂಡು ಓಡಾಡಿದ್ದು ಬಿಟ್ಟರೆ ಕ್ಷೇತ್ರದ ಅಭಿವೃದ್ಧಿ ಕಡೆ ಗಮನವೇ ಕೊಡಲಿಲ್ಲ. ಅವರು ಸಂಸದರಾದ ನಂತರವೂ ಎಳಸು ವರ್ತನೆ ಬಿಟ್ಟಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗಲೊಮ್ಮೆ ವೇದಿಕೆ ಮೇಲೆಯೇ ಸಿಂಹರ ಅಪ್ರಬುದ್ಧ ವರ್ತನೆಗೆ ಜಾಡಿಸಿದ್ದರು. ಟಿಪ್ಪು ಜಯಂತಿ ಬೇಡ, ಬಸ್ ಸ್ಟಾಪ್ ಗಳಲ್ಲಿ ಗುಂಬಜ್ ಶೈಲಿ ನಿರ್ಮಾಣ ಬೇಡ, ಮಹಿಷ ದಸರಾ ಬೇಡ ಎಂಬಂಥ ವಿವಾದಗಳಿಂದ ಬಿಟ್ಟರೆ ಪ್ರತಾಪ್, ಒಳ್ಳೆಯ ಕಾರಣಕ್ಕಾಗಿ ಸುದ್ದಿಯಾಗಿದ್ದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್ ಮಾಡಿಸಿದ್ದು ತಾನೇ ಎಂಬಂತೆ ಪ್ರದರ್ಶನ ನೀಡಿದ ಸಿಂಹ, ಎಕ್ಸ್‌ಪ್ರೆಸ್ ಹೈವೇಯಲ್ಲಿ ನೀರು ನಿಂತು, ಅಪಘಾತಗಳು ಹೆಚ್ಚಾಗಿ, ಸರ್ವೀಸ್ ರಸ್ತೆ ಇಲ್ಲದೇ ಜನ ಪ್ರತಿಭಟನೆಗಿಳಿದಾಗ ನಿಧಾನಕ್ಕೆ ಅದರಿಂದ ಜಾರಿಕೊಂಡರು. ಹೀಗಾಗಿಯೇ ಮೈಸೂರು-ಕೊಡಗು ಕ್ಷೇತ್ರದಲ್ಲಿ ವಿಪಕ್ಷಗಳಲ್ಲಿ ಇರಲಿ, ಸ್ವಂತ ಪಕ್ಷದಲ್ಲೂ ಕೂಡ ಪ್ರತಾಪ್ ಅವರನ್ನು ವಿರೋಧಿಸುವವರೇ ಹೆಚ್ಚು.
ಲೋಕಸಭೆಯಲ್ಲಿ ಗ್ಯಾಲರಿಗೆ ನುಗ್ಗಿದ ಪ್ರಕರಣ ನಡೆಯದಿದ್ದರೂ, ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನವಿತ್ತು. ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ, ಮೈಸೂರು ಕ್ಷೇತ್ರ ತನಗೆ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆಯಂತೆ. ಆದರೆ, ಬಿಜೆಪಿ ಮೈಸೂರನ್ನು ಬಿಟ್ಟುಕೊಡಲು ಸಿದ್ದವಿಲ್ಲ ಎನ್ನಲಾಗಿದೆ. ಇನ್ನು ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಂದ ಹಿಡಿದು ಹಲವರು ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎನ್ನುವ ಮಾತುಗಳಿವೆ. ಅವರ ಪೈಕಿ ಮೈಸೂರು ನಗರ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಎಚ್ ಮಂಜುನಾಥ್, ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ, ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಶ್ರೀರಮೇಶ್ ಮುಖ್ಯರು.
ತಮ್ಮ ಪಕ್ಷದವರಲ್ಲದಿದ್ದರೂ ನಾನಾ ಕಾರಣಗಳಿಗಾಗಿ ಹೋದ ಬಾರಿ ಪ್ರತಾಪ್ ಸಿಂಹ ಗೆಲ್ಲಲು ನೆರವು ನೀಡಿದ್ದ ದೇವೇಗೌಡ, ಡಿ ಕೆ ಶಿವಕುಮಾರ್, ವಿಶ್ವನಾಥ್ ಎಲ್ಲರೂ ಈ ಬಾರಿ ಅವರಿಂದ ದೂರವಾಗಿದ್ದಾರೆ. ಕೊಡಗಿನ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಬಂದು ಕೂತಿದ್ದಾರೆ. ಇವು ಸಾಲದು ಎನ್ನುವಂತೆ ಸ್ವಂತ ಪಕ್ಷದ ಎಸ್ ಎ ರಾಮದಾಸ್, ನಾಗೇಂದ್ರ ಸೇರಿದಂತೆ ಹಲವು ಹಾಲಿ ಹಾಗೂ ಮಾಜಿ ಶಾಸಕರು ಕೂಡ ಪ್ರತಾಪ್ ಸಿಂಹ ಅವರನ್ನು ವಿರೋಧಿಸುತ್ತಿದ್ದಾರೆ. ಹೀಗೆ ಈ ಬಾರಿ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಅವರಿಗೆ ಮೊದಲೇ ಪ್ರತಿಕೂಲ ಪರಿಸ್ಥಿತಿಯಿತ್ತು. ಅದರ ಜೊತೆಗೆ ಈಗ ಸಂಸತ್ ಭವನಕ್ಕೆ ಆಗಂತುಕರು ನುಗ್ಗಲು ಪರೋಕ್ಷವಾಗಿ ಕಾರಣರಾಗಿದ್ದೂ ಸೇರಿಕೊಂಡು ಪ್ರತಾಪ ಸಿಂಹ ಅವರ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.
ಆರೋಪಿಗಳಲ್ಲಿ ಒಬ್ಬನಾದ ಮನೋರಂಜನ್ ಮೈಸೂರಿನವನು, ಸರಿ. ಆದರೆ, ಉತ್ತರ ಪ್ರದೇಶದ ಸಾಗರ್ ಶರ್ಮಾಗೆ ಮೈಸೂರು ಎಂಪಿಯ ಕಚೇರಿಯಿಂದ ಪಾಸ್ ಸಿಕ್ಕಿದ್ದು ಹೇಗೆ ಎಂದು ಬಿಜೆಪಿ ಹೈಕಮಾಂಡ್ ಸಿಟ್ಟಾಗಿದೆಯಂತೆ. ಪಾಸ್ ಕೊಡುವಾಗ ಕನಿಷ್ಠ ಮಟ್ಟದ ವಿಚಾರಣೆ ನಡೆಸಿದ್ದರೂ ಈ ಘಟನೆ ನಡೆಯುತ್ತಿರಲಿಲ್ಲ. ಇದೇ ಪ್ರಶ್ನೆಯನ್ನೇ ಸಂಸದ ಡಿ ಕೆ ಸುರೇಶ್ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಕೂಡ ಕೇಳಿದ್ದಾರೆ.
ಲೋಕಸಭಾ ಕಲಾಪಕ್ಕೆ ಆಗಂತುಕರು ನುಗ್ಗಿದ ಘಟನೆಯಿಂದ ಬಿಜೆಪಿ ಇಮೇಜ್‌ಗೆ ಭಾರೀ ಪೆಟ್ಟು ಬಿದ್ದಿದೆ. ಅದೂ ಪಾರ್ಲಿಮೆಂಟ್ ಮೇಲಿನ ದಾಳಿಯ 22ನೇ ವರ್ಷಾಚರಣೆಯ ದಿನದಂದೇ ಘಟನೆ ನಡೆದಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಗುರುವಿನ ವರ್ಚಸ್ಸಿಗೆ ಧಕ್ಕೆ ಮಾಡಿದೆ. ದೇಶದ ಜನರಿಗೆ ರಕ್ಷಣೆ ನೀಡಲು, ದೇಶಕ್ಕೆ ಭದ್ರತೆ ಒದಗಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬ ಪ್ರಚಾರ ಮಾತ್ರದಿಂದಲೇ ಮತದಾರರನ್ನು ಹಿಡಿದಿಟ್ಟುಕೊಳ್ಳಲು ನೋಡುತ್ತಿದ್ದ ಬಿಜೆಪಿಗೆ ಈ ಘಟನೆಯಿಂದ ಮುಂದಿನ ಚುನಾವಣೆಯಲ್ಲಿ ನಷ್ಟವಾಗುವ ಸಾಧ್ಯತೆ ಕೂಡ ಇದೆ. ಹಾಗಾಗಿ ಪ್ರತಾಪ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮುಂತಾದವರು ಕೆಂಡ ಕಾರುತ್ತಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಅವರಿಗೆ ಫೋನ್ ಮಾಡಿ ಸರಿಯಾಗಿ ಜಾಡಿಸಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
In a chilling reminder to the Parliament attack 21 years back on the same day (Dec 13), a man jumped from visitors’ gallery into Lok Sabha MPs area. The breach could’ve put lives of MPs in danger. It has exposed chinks in the 56inch armour. The man was a guest of @BJP4India MP. pic.twitter.com/qhPX4C4Dia
— Kunwar Danish Ali (@KDanishAli) December 13, 2023
ಘಟನೆಯ ಸಂಬಂಧ ಪ್ರತಾಪ್ ವಿರುದ್ಧ ಕ್ರಮ ಜರುಗಿಸಲು ಬಿಜೆಪಿ ವರಿಷ್ಠರು ಮುಂದಾಗಿದ್ದರಂತೆ. ಆದರೆ, ಅದರಿಂದ ಇಡೀ ಘಟನೆಗೆ ಬಿಜೆಪಿಯೇ ಹೊಣೆ ಎಂದು ತಪ್ಪೊಪ್ಪಿಕೊಂಡಂತಾಗುತ್ತದೆ; ಜೊತೆಗೆ ಅದನ್ನು ಕಾಂಗ್ರೆಸ್ ತನ್ನ ಪ್ರಚಾರಕ್ಕೆ ಬಳಸಿಕೊಳ್ಳಬಹುದು ಎಂದು ಕ್ರಮ ಜರುಗಿಸುವ ಯೋಚನೆ ಕೈ ಬಿಟ್ಟರಂತೆ. ಕೊನೆಗೆ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್‌ಗೆ ಟಿಕೆಟ್ ನೀಡದಿರಲು ನಿರ್ಧರಿಸಿದ್ದಾರೆ ಎಂದು ಬಿಜೆಪಿ ಪಕ್ಷದೊಳಗಿನ ಮೂಲಗಳು ತಿಳಿಸಿವೆ. ಜನಬೆಂಬಲ ಇಲ್ಲದಿದ್ದರೂ ಎರಡು ಬಾರಿ ಗೆದ್ದ ಪ್ರತಾಪ್ ಸಿಂಹ, ತನ್ನ ತಪ್ಪೊಂದು ಈ ರೀತಿ ತನಗೆ ಮುಳುವಾಗುತ್ತದೆಂದು ಕನಸಿನಲ್ಲೂ ಊಹಿಸಿರಲಾರರು.
ಪ್ರತಾಪ್ ಸಿಂಹ ಬಿಜೆಪಿ ಸೇರುವ ಮುನ್ನ ಬಳ್ಳಾರಿ ರೆಡ್ಡಿಗಳ ವಿರುದ್ಧ ಒಂದು ಪುಸ್ತಕ ಬರೆದಿದ್ದರು. ಬಿಜೆಪಿ ಸೇರಿದ ನಂತರ ಮೋದಿಯವರನ್ನು ಮೆಚ್ಚಿಸಲು ‘ಮೋದಿ ನನ್ನ ದೇವರು, ನಾನು ಅವರ ಸೇವಕ’ ಎಂದಿದ್ದ ಪ್ರತಾಪ್, ಪ್ರಧಾನಿ ಬಗ್ಗೆ ಒಂದು ಪುಸ್ತಕವನ್ನೂ ಬರೆದಿದ್ದರು.
ಈ ಸುದ್ದಿ ಓದಿದ್ದೀರಾ: ಸಂಸತ್ ಭದ್ರತಾ ಲೋಪ | ವಿಪಕ್ಷಗಳಿಂದ ಗದ್ದಲ; ಉಭಯ ಸದನ ಮುಂದೂಡಿಕೆ; ಏಳು ಭದ್ರತಾ ಸಿಬ್ಬಂದಿ ಅಮಾನತು
ಇಷ್ಟೆಲ್ಲ ಆದರೂ ತನ್ನ ಟೈಮು ಸರಿಯಿಲ್ಲ ಎನ್ನುವ ಮುನ್ಸೂಚನೆ ಪ್ರತಾಪ್ ಅವರಿಗೆ ಸಿಕ್ಕಿತ್ತು. ಹಾಗಾಗಿಯೇ ಅವರು ಸಂಖ್ಯಾಶಾಸ್ತ್ರಜ್ಞರೊಬ್ಬರ ಸಲಹೆಯ ಮೇರೆಗೆ ಇತ್ತೀಚೆಗೆ prathap simha ಎಂಬ ತಮ್ಮ ಹೆಸರನ್ನು Pratap simmha ಎಂದು ಬದಲಾಯಿಸಿಕೊಂಡಿದ್ದರು. ಆದರೂ ನಸೀಬು ಕೈ ಕೊಟ್ಟಿದೆ, ಇಂಥ ಘಟನೆ ನಡೆದಿದೆ. ಆಕಸ್ಮಿಕವಾಗಿ ಗೆದ್ದು ಸಂಸದರಾಗಿದ್ದ ಪ್ರತಾಪ್ ಸಿಂಹ ಅವರ ರಾಜಕೀಯ ಜೀವನ ಅಂತ್ಯವಾಗಲು ಆಕಸ್ಮಿಕವಾಗಿ ನಡೆದ ಈ ಘಟನೆ ಕಾರಣವಾಗುವ ಸಾಧ್ಯತೆಯೂ ಇದೆ.
ಪಾಪ, ಪ್ರತಾಪ್ ಸಿಂಹ!

ಕೆರೆಕೆಳಗಿನಹಳ್ಳಿ ಶ್ರೀನಿವಾಸ್
ಲೇಖಕ, ಸಾಮಾಜಿಕ ಹೋರಾಟಗಾರ