ಶಿವಮೊಗ್ಗ ಲೋಕಸಭಾ ಕ್ಷೇತ್ರವು ಇಬ್ಬರು ಮಾಜಿ ಮುಖ್ಯಮಂತ್ರಿ ಕುಟುಂಬಗಳ ಪ್ರತಿಷ್ಠೆಯ ಕಣವೆಂದರೆ ತಪ್ಪಾಗಲಾರದು. ಕಳೆದ ಮೂರ್ನಾಲ್ಕು ಚುನಾವಣೆಗಳಿಂದಲೂ ಶಿವಮೊಗ್ಗವೆಂದರೆ ಬಿ.ಎಸ್.ಯಡಿಯೂರಪ್ಪ ವರ್ಸಸ್ ಬಂಗಾರಪ್ಪ ಫ್ಯಾಮಿಲಿ ನಡುವಿನ ಕದನವಾಗಿಯೇ ಗಮನ ಸೆಳೆಯುತ್ತಿದೆ. ಆದರೆ ಯಡಿಯೂರಪ್ಪನವರೇ ಮೇಲುಗೈ ಸಾಧಿಸುತ್ತಾ ಬಂದಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶಿವಮೊಗ್ಗ ನಗರ (ಬಿಜೆಪಿ), ಶಿವಮೊಗ್ಗ ಗ್ರಾಮಾಂತರ (ಜೆಡಿಎಸ್), ಭದ್ರಾವತಿ (ಕಾಂಗ್ರೆಸ್), ಸೊರಬ (ಕಾಂಗ್ರೆಸ್), ಸಾಗರ (ಕಾಂಗ್ರೆಸ್), ತೀರ್ಥಹಳ್ಳಿ (ಬಿಜೆಪಿ), ಶಿಕಾರಿಪುರ (ಬಿಜೆಪಿ), ಉಡುಪಿ ಜಿಲ್ಲೆಯ ಬೈಂದೂರು (ಬಿಜೆಪಿ) ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ವರು ಬಿಜೆಪಿ ಶಾಸಕರು, ಮೂವರು ಕಾಂಗ್ರೆಸ್ ಶಾಸಕರು, ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ.
1952ರ ಚುನಾವಣೆಯಿಂದ ಈವರೆಗೆ- ಕೆ.ಜಿ.ಒಡೆಯರ್, ಎಸ್.ವಿ.ಕೃಷ್ಣಮೂರ್ತಿರಾವ್, ಜೆ.ಎಚ್.ಪಟೇಲ್, ಟಿ.ವಿ.ಚಂದ್ರಶೇಖರಪ್ಪ, ಎ.ಆರ್.ಭದ್ರಿನಾರಾಯಣ್, ಎಸ್.ಟಿ.ಕೌದ್ರಿ, ಕೆ.ಜಿ.ಶಿವಪ್ಪ, ಎಸ್.ಬಂಗಾರಪ್ಪ, ಆಯನೂರು ಮಂಜನಾಥ್, ಬಿ.ಎಸ್.ಯಡಿಯೂರಪ್ಪ, ಬಿ.ವೈ.ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಈ ಸಲದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಹೆಚ್ಚಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ7,31,779 ಪುರುಷರು, 7,51,159 ಮಹಿಳೆಯರು ಸೇರಿದಂತೆ 14,82,938 ಮತದಾರರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಲಿಂಗಾಯತರು, ಈಡಿಗರು (ಬಿಲ್ಲವ/ದೀವರ/ನಾಮಧಾರಿ) ಹೆಚ್ಚಿರುವ ಶಿವಮೊಗ್ಗದಲ್ಲಿ ಗೌಡರು, ಇತರ ಹಿಂದುಳಿದ ಜಾತಿಗಳು, ದಲಿತ ಸಮುದಾಯಗಳು, ಮುಸ್ಲಿಮರೂ ಗಣನೀಯವಾಗಿ ಇದ್ದಾರೆ. ದೀವರು ಮತ್ತು ಲಿಂಗಾಯತ ಕ್ಯಾಂಡಿಟೇಟ್ಗಳ ನಡುವೆಯೇ ಕದನ ಏರ್ಪಡುತ್ತಾ ಬಂದಿದೆ.
ಯಡಿಯೂರಪ್ಪ, ವಿಜಯೇಂದ್ರ ಪ್ರಭಾವ, ರಾಘವೇಂದ್ರ ಅವರಿಗಿರುವ ಕ್ಷೇತ್ರದ ಸಂಪರ್ಕ ಮತ್ತು ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರೂ ಆಗಿರುವ ಮಧು ಬಂಗಾರಪ್ಪನವರ ಸಂಘಟನಾ ಚತುರತೆ- ಎಲ್ಲವೂ ಸೇರಿ ಚುನಾವಣಾ ಕಣ ರಂಗೇರುವ ಸಾಧ್ಯತೆ ಇದೆ.
ಎಸ್.ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪ ಕುಟುಂಬದ ನಡುವೆ ಈ ಸಲವೂ ಚುನಾವಣೆಯ ಸ್ಪರ್ಧೆ ಏರ್ಪಡುವುದು ಖಚಿತ. ಬಿಎಸ್ವೈ ಪುತ್ರ ಬಿ.ವೈ.ರಾಘವೇಂದ್ರ ಮತ್ತು ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ಕುಮಾರ್ ಕ್ರಮವಾಗಿ ಬಿಜೆಪಿ- ಕಾಂಗ್ರೆಸ್ನಿಂದ ಮುಖಾಮುಖಿಯಾಗುವುದು ನಿಶ್ಚಿತವೇ ಸರಿ (ಬಿಜೆಪಿ ಟಿಕೆಟ್ ಇನ್ನು ಅಧಿಕೃತವಾಗಿ ಘೋಷಣೆಯಾಗಿಲ್ಲ).
ಬಂಗಾರಪ್ಪ- ಯಡಿಯೂರಪ್ಪ ಕದನದ ನೆಲ ಶಿವಮೊಗ್ಗ
2008ರಲ್ಲಿ ಲೋಕಸಭಾ ಕ್ಷೇತ್ರ ಪುನರ್ ರಚನೆಯಾಗಿತ್ತು. ಶಿವಮೊಗ್ಗದ ಪರಿಧಿ ಬದಲಾಗಿ, ಚನ್ನಗಿರಿ ಮತ್ತು ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳನ್ನು ದಾವಣಗೆರೆ ಲೋಕಸಭೆಗೆ ಸೇರಿಸಲಾಯಿತು. ಉಡುಪಿಯ ಬೈಂದೂರು ಶಿವಮೊಗ್ಗಕ್ಕೆ ಸೇರಿಕೊಂಡಿತು. ಹಿಂದುತ್ವದ ಪ್ರಯೋಗಕ್ಕೆ ಸಿಲುಕಿರುವ ಬೈಂದೂರು ವಿಧಾನಸಭೆಯು ಶಿವಮೊಗ್ಗ ಲೋಕಸಭೆಗೆ ವ್ಯಾಪ್ತಿಗೆ ಸೇರಲು ಯಡಿಯೂರಪ್ಪನವರು ಪ್ರಭಾವ ಬೀರಿದ್ದಾರೆಂಬ ಚರ್ಚೆಯೂ ನಡೆದಿತ್ತು.
2009ರ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ- ಬಂಗಾರಪ್ಪ ನಡುವೆ ಪ್ರತಿಷ್ಠೆ ಏರ್ಪಟ್ಟಿತ್ತು. ಶಿಕಾರಿಪುರಕ್ಕೆ ಬಂದು ಯಡಿಯೂರಪ್ಪನವರಿಗೆ ಮುಳುವಾಗಿದ್ದ ಬಂಗಾರಪ್ಪನವರನ್ನು ಸೋಲಿಸಲು ಯಡಿಯೂರಪ್ಪ ಸಜ್ಜಾಗಿದ್ದರು. ತಮ್ಮ ಹಿರಿಯ ಪುತ್ರ ರಾಘವೇಂದ್ರರನ್ನು ಬಿಎಸ್ವೈ ಕಣಕ್ಕಿಳಿಸಿದರು. ಅಭ್ಯರ್ಥಿ ರಾಘವೇಂದ್ರರಾದರೂ ಯಡಿಯೂರಪ್ಪನವರೇ ನಿಜವಾದ ಸ್ಪರ್ಧಿಯಾಗಿದ್ದರು. ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಬಂಗಾರಪ್ಪನವರು ಕ್ಷೇತ್ರವನ್ನು ಸುತ್ತಲಿಲ್ಲ. ಆರ್ಥಿಕವಾಗಿಯೂ ದುರ್ಬಲವಾಗಿದ್ದರು. ಯಡಿಯೂರಪ್ಪನವರ ಹಣಬಲದ ಮುಂದೆ ಬಂಗಾರಪ್ಪ ಕಂಗಾಲಾದರೆಂದೇ ರಾಜಕೀಯ ವಿಶ್ಲೇಷಕರು ಇಂದಿಗೂ ಹೇಳುತ್ತಾರೆ. 52,893 ಮತಗಳ ಅಂತರದಲ್ಲಿ ರಾಘವೇಂದ್ರ ವಿರುದ್ಧ ಬಂಗಾರಪ್ಪ ಸೋಲು ಕಂಡರು.
2013ರ ಚುನಾವಣೆ ಸಂದರ್ಭದಲ್ಲಿ ಕೆಜೆಪಿ ಕಟ್ಟಿ, ಮತ್ತೆ 2014ರ ಲೋಕಸಭೆ ವೇಳೆಗೆ ಬಿಜೆಪಿ ಸೇರಿದ್ದ ಬಿಎಸ್ವೈ, ಶಿವಮೊಗ್ಗದಿಂದ ಸ್ಪರ್ಧಿಸಿದರು. ಬಂಗಾರಪ್ಪನವರು ನಿಧನರಾದ ಬಳಿಕ, ತಂದೆಯ ಸೋಲಿನ ಸೇಡು ತೀರಿಸಿಕೊಳ್ಳಲು ಮಧು ಬಂಗಾರಪ್ಪ ಬಯಸಿದ್ದರು. ತಮ್ಮ ಸಹೋದರಿ ಗೀತಾರನ್ನು ಜೆಡಿಎಸ್ನಿಂದ ಕಣಕ್ಕಿಳಿಸಿದರು. ಆದರೆ ಯಡಿಯೂರಪ್ಪನವರ ಎದುರು ಹೀನಾಯವಾಗಿ ಸೋಲಬೇಕಾಯಿತು. ಮೂರನೇ ಸ್ಥಾನಕ್ಕೆ ಗೀತಾ ಅವರು ಕುಸಿದರು. ಮೋದಿ ಅಲೆಯಲ್ಲಿ ಯಡಿಯೂರಪ್ಪ ಗೆದ್ದು ಬೀಗಿದರು.
2018ರ ವಿಧಾನಸಭಾ ಚುನಾವಣೆ ವೇಳೆಗೆ ಯಡಿಯೂರಪ್ಪನವರು ಸಿಎಂ ಆಸೆ ಹೊತ್ತರು. ಹೀಗಾಗಿ ಶಿಕಾರಿಪುರದಲ್ಲಿ ಸ್ಪರ್ಧಿಸಿದರು. ಬಿಜೆಪಿ ದೊಡ್ಡ ಪಕ್ಷವಾಗಿ ಹೊಮ್ಮಿದರೂ ಅಧಿಕಾರ ಹಿಡಿಯಲಿಲ್ಲ. ಲೋಕಸಭೆ ಕ್ಷೇತ್ರ ತೆರವಾದಾಗ ತಮ್ಮ ಮಗ ರಾಘವೇಂದ್ರರನ್ನು ಉಪಚುನಾವಣೆಯಲ್ಲಿ ನಿಲ್ಲಿಸಿದರು. ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮಧು ಬಂಗಾರಪ್ಪ ಸ್ಪರ್ಧಿಸಿದರೂ ಬಂಗಾರಪ್ಪ ಫ್ಯಾಮಿಲಿಗೆ ಮತ್ತೆ ಸೋಲಾಯಿತು. 52,148 ಮತಗಳ ಅಂತರದಲ್ಲಿ ರಾಘವೇಂದ್ರ ಗೆದ್ದರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ರಾಘವೇಂದ್ರ ಮತ್ತು ಜೆಡಿಎಸ್-ಕಾಂಗ್ರೆಸ್ನ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಎದುರಾದರು. ಮೋದಿ ಅಲೆಯಲ್ಲಿ 2,23,360 ಮತಗಳ ಅಂತರದಲ್ಲಿ ಸುಲಭವಾಗಿ ರಾಘವೇಂದ್ರ ಗೆದ್ದರು. ರಾಘವೇಂದ್ರ 729,872 ಮತಗಳನ್ನು ಪಡೆದರೆ, ಮಧು ಬಂಗಾರಪ್ಪ 5,06,512 ಮತಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.
ಈ ಚುನಾವಣೆಯಲ್ಲಿ ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಗೆದ್ದು ಸಚಿವರೂ ಆಗಿರುವ ಮಧು ಬಂಗಾರಪ್ಪನವರಿಗೆ ಇದು ಪ್ರತಿಷ್ಠೆಯ ಚುನಾವಣೆಯೂ ಹೌದು. ಮಲೆನಾಡು, ಕರಾವಳಿ ಭಾಗದಲ್ಲಿ ಕೇಸರಿ ಹಿಡಿತಕ್ಕೆ ಸಿಲುಕಿರುವ ಬಿಲ್ಲವ/ನಾಮಧಾರಿ/ಈಡಿಗ/ದೀವರು ಸಮುದಾಯವನ್ನು ಮತ್ತೆ ಕಾಂಗ್ರೆಸ್ ಪಾಳಯಕ್ಕೆ ಮಧು ಬಂಗಾರಪ್ಪ ತರುತ್ತಾರೆಯೇ ಎಂಬುದು ಸದ್ಯದ ಕುತೂಹಲ.
