ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳಿಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ವಿಚಾರಣಾ ನ್ಯಾಯಾಲಯ ಆದೇಶಿಸಿದೆ. ಈ ಹಿಂದೆ, ಆರೋಪಿಗಳಿಗೆ ಜುಲೈ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಗುರುವಾರಕ್ಕೆ ಬಂಧನದ ಅವಧಿ ಮುಗಿದಿದ್ದು, ಇದೀಗ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಗುರುವಾರ, ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ನಡೆದಿದ್ದು, ಜಾಮೀನು ನೀಡದಂತೆ ಪೊಲೀಸರು ಅಫಿಡವಿಟ್ ಸಲ್ಲಿಸಿದ್ದರು. ಪೊಲೀಸರ ವಾದವನ್ನು ಆಲಿಸಿರುವ ನ್ಯಾಯಾಲಯ, ಜಾಮೀನು ನಿರಾಕರಿಸಿದೆ.
ವಿಚಾರಣೆ ವೇಳೆ ವಾದ ಮಂಡಿಸಿದ ಪೊಲೀಸರ ಪರ ವಕೀಲರು, “ಪ್ರಕರಣದ ಎಲ್ಲ 17 ಆರೋಪಿಗಳು ಕೊಲೆ ಮತ್ತು ಸಾಕ್ಷಿನಾಶ ಮಾಡಿದ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈ ಎಲ್ಲರಿಗೂ ಕಾನೂನಿನ ಮೇಲೆ ಕಿಂಚಿತ್ತೂ ಗೌರವ ಇಲ್ಲವೆಂಬುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ. ಆರೋಪಿಗಳು ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ಕೃತ್ಯದ ಬಳಿಕ ಭೌತಿಕ, ತಾಂತ್ರಿಕ, ವೈಜ್ಞಾನಿಕ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದ್ದಾರೆ ಎಂಬುದು ಕೂಡ ಸಾಬೀತಾಗಿದೆ” ಎಂದು ಹೇಳಿದ್ದಾರೆ.
“ಪ್ರಕರಣದಲ್ಲಿ ಆರೋಪಿಗಳಿಂದ ಈವರೆಗೆ 83,65,500 ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದರಿ ಹಣವನ್ನು ಆರೋಪಿಗಳಿಗೆ ನೀಡಿರುವ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ. ಜೊತೆಗೆ, ಹಣದ ಮೂಲ ಯಾವುದು ಎಂಬುದರ ಮಾಹಿತಿಯನ್ನೂ ಸಂಗ್ರಹಿಸಬೇಕಿದೆ. ಆರೋಪಿಗಳು ಕೃತ್ಯಕ್ಕೆ ಮತ್ತು ಸಾಕ್ಷ್ಯನಾಶಕ್ಕೆ ಬಳಸಿದ್ದ ವಾಹನಗಳನ್ನು ಆರ್‌ಟಿಒ ಅಧಿಕಾರಿಗಳಿಂದ ಪರಿಶೀಲನೆ ಮಾಡಿಸಿ, ವರದಿ ಪಡೆಯಕಿದೆ. ಪ್ರಕರಣದಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಮೊಬೈಲ್‌ಗಳನ್ನು ರಿಟ್ರೇವ್ ಮಾಡಿಸಿ ಸಿಎಫ್‌ಎಸ್‌ಎಲ್ ವರದಿ ಪಡೆಯಬೇಕಿದೆ. ಹೀಗಾಗಿ, ಆರೋಪಿಗಳಿಗೆ ಜಾಮೀನು ನೀಡಬಾರದು” ಎಂದು ನ್ಯಾಯಾಲಯಕ್ಕೆ ಮಾಡಿದ್ದಾರೆ.
“ಆರೋಪಿಗಳು ಪ್ರಭಾವಿಗಳಾಗಿದ್ದು, ಹಣ ಬಲ ಮತ್ತು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವಾರು ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿದೆ. ಈ ಸಮಯದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದಲ್ಲಿ ತಮ್ಮ ಪ್ರಭಾವಗಳನ್ನು ಬಳಸಿ ಸಾಕ್ಷಿದಾರರಿಗೆ ಬೆದರಿಕೆ ಹಾಕುವ ಮತ್ತು ವ್ಯವಸ್ಥಿತ ರೀತಿಯನ್ನು ಸಾಕ್ಷ್ಯನಾಶ ಪಡಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಪ್ರಕರಣವು ತನಿಖಾ ಹಂತದಲ್ಲಿರುವುದರಿಂದ ಆರೋಪಿಗಳಿಗೆ ಜಾಮೀನು ನೀಡಬಾರದು” ಎಂದು ವಾದಿಸಿದ್ದರು.
ಪೊಲೀಸರ ವಾದವನ್ನು ಆಲಿಸಿ ನ್ಯಾಯಾಲಯವು ಆರೋಪಿ ನಟ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳಿಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶಿಸಿದೆ.