ನಟ ವಿಷ್ಣುವರ್ಧನ್ ಅವರ ಸಮಾಧಿ ಜಾಗ ವಿವಾದಾತ್ಮಕ ಸ್ಥಳ ಎಂಬುದು ಮೊದಲು ನಮಗೆ ಗೊತ್ತಿರಲಿಲ್ಲ. ಎಚ್ ಡಿ ಕುಮಾರಸ್ವಾಮಿ ಅಭಿಮಾನ್ ಸ್ಟುಡಿಯೋದಲ್ಲೇ ಸಮಾಧಿ ಮಾಡಲು ಹೇಳಿದ್ದರಿಂದ ನಾವು ಒಪ್ಪಿಕೊಂಡಿದ್ದೆವು ಎಂದು ನಟ ವಿಷ್ಣುವರ್ಧನ್ ಅವರ ಅಳಿಯ ಹಾಗೂ ನಟ ಅನಿರುದ್ಧ್ ತಿಳಿಸಿದ್ದಾರೆ.
ನಟ ವಿಷ್ಣುವರ್ಷನ್ ಸಮಾಧಿ ತೆರವುಗೊಳಿಸಿದ ಬಗ್ಗೆ ಭಾನುವಾರ ಜಯನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿಮಾನ್ ಸ್ಟುಡಿಯೋ ಜಾಗದಲ್ಲಿ ಮೊದಲೇ ಸಮಸ್ಯೆ ಇತ್ತು. 2004ರಲ್ಲಿ ಬಾಲಣ್ಣ ಕುಟುಂಬದವರು ಆ ಜಾಗದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ನಮ್ಮ ಅಪ್ಪಾಜಿಯವರಿಗೆ ಅಭಿಮಾನ್ ಸ್ಟುಡಿಯೋದಲ್ಲಿ ಅಗ್ನಿಸ್ಪರ್ಶ ಕಾರ್ಯ ನಡೆದಿದ್ದು 2009ರಲ್ಲಿ, ಅಷ್ಟರಲ್ಲೇ ಆ ಜಾಗದ ವಿಚಾರವಾಗಿ ಸಮಸ್ಯೆ ಇತ್ತು ಎಂದರು.
ಮತ್ತೊಂದು ವಿಚಾರ ಎಂದರೆ ನಾವು ಅಪ್ಪಾಜಿಯವರ ಕುಟುಂಬದವರ ಅಂತ್ಯ ಸಂಸ್ಕಾರವನ್ನು ಚಾಮರಾಜಪೇಟೆಯ ರುದ್ರಭೂಮಿಯಲ್ಲೇ ಮಾಡಿದ್ದೆವು. ನಾವು ಅಲ್ಲೇ ಅಂತ್ಯಸಂಸ್ಕಾರ ಮಾಡುವುದಕ್ಕೆ ತೀರ್ಮಾನ ಮಾಡಿಕೊಂಡಿದ್ದೆವು ಆದರೆ, ಆ ಸಮಯದಲ್ಲಿ ಕುಮಾರಸ್ವಾಮಿಯವರು ನನಗೆ ಕರೆ ಮಾಡಿ, ‘ವಿಷ್ಣುವರ್ಧನ್ ಅವರಿಗೆ ಅವರದ್ದೇ ಆದ ಗೌರವವಿದೆ. ಅಭಿಮಾನ್ ಸ್ಟುಡಿಯೋದಲ್ಲೇ ಸರ್ಕಾರಿ ಗೌರವದೊಂದಿಗೆ ಸಮಾಧಿ ಮಾಡೋಣ’ ಎಂದು ಹೇಳಿದ್ದರು. ಅದಕ್ಕೆ ನಾವು ಒಪ್ಪಿದ್ದೆವು ಎಂದು ಅನಿರುದ್ಧ್ ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್ಎಸ್ಎಸ್ ಕಗ್ಗಂಟು?
ಅಂತ್ಯ ಸಂಸ್ಕಾರ ಎಲ್ಲ ಮುಗಿದ ಮೇಲೆ ಆ ಜಾಗ ವಿವಾದಾತ್ಮಕ ಸ್ಥಳ ಎಂಬುದಾಗಿ ನಮಗೆ ಗೊತ್ತಾಯಿತು. ಈಗ ಸಮಾಧಿ ನೆಲಸಮ ಆಗಿದೆ. ಭಾರತೀ ಅಮ್ಮ ತುಂಬಾ ನೊಂದುಕೊಂಡಿದ್ದಾರೆ. ಅದು ಖಾಸಗಿ ಜಾಗ ಆಗಿದ್ದರೂ ಭಾವನಾತ್ಮಕವಾಗಿ ಸಮಾಧಿ ಇದ್ದ ಜಾಗ, ಅದು ಕನ್ನಡಿಗರ ಜಾಗವಾಗಿತ್ತು. ಬಾಲಣ್ಣ ಅವರ ಮೇಲೆ ನಮಗೆ ತುಂಬಾ ಗೌರವ ಇದೆ ಎಂದು ಅನಿರುದ್ಧ್ ಹೇಳಿದರು.
ಅಪ್ಪಾಜಿಯ ಸ್ಮಾರಕವನ್ನು ಪುಣ್ಯಭೂಮಿ ಎಂಬುದಾಗಿ ಅಭಿಮಾನಿಗಳು ಕರೆಯುತ್ತಾರೆ. ಅಭಿಮಾನಿಗಳು ಬರುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಬಾಲಣ್ಣ ಕುಟುಂಬದವರಿಗೆ ನಾನು ಸಾಕಷ್ಟು ಬಾರಿ ಕೇಳಿಕೊಂಡಿದ್ದೇನೆ ಎಂದು ಅನಿರುದ್ಧ್ ತಿಳಿಸಿದರು.
ನಾನು ಮೈಸೂರು ಹಾಗೂ ಬೆಂಗಳೂರಿನಲ್ಲಿ ಅಪ್ಪಾಜಿಯವರ ಸ್ಮಾರಕ ಇರಲಿ ಎಂದು ಹೇಳಿದ್ದೆ. ಬೆಂಗಳೂರಲ್ಲೇ ಅಪ್ಪಾಜಿ ಸ್ಮಾರಕ ಮಾಡುವುದಕ್ಕೆ ಸಾಕಷ್ಟು ಓಡಾಡಿದ್ದೆ. ಆದರೆ ಕೆಲಸ ಆಗುತ್ತಿರಲಿಲ್ಲ. ನಾವು ಎಷ್ಟು ಅಲೆದಾಡಿದ್ದೀವಿ ಯಾರಿಗೂ ಗೊತ್ತಿಲ್ಲ. ನಾನು ಅಭಿಮಾನಿಗಳನ್ನು ಸಿಂಹಗಳು ಅಂತಾ ಕರೆಯುತ್ತೇನೆ. ನಮ್ಮ ನಿಮ್ಮ ನಡುವೆ ಯಾರೋ ಬಿರುಕು ಮೂಡಿಸುವಂತೆ ಮಾಡುತ್ತಿದ್ದಾರೆ. ಅದನ್ನು ಅಭಿಮಾನಿಗಳು ಅರ್ಥ ಮಾಡಿಕೊಳ್ಳಿ ಎಂದು ಅನಿರುದ್ಧ್ ಮನವಿ ಮಾಡಿದರು.
ದಯವಿಟ್ಟು ಅಭಿಮಾನಿಗಳು ದೂರ ಆಗಬೇಡಿ. ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತಾನಾಡಬೇಡಿ. ಏನೇ ಇದ್ದರೂ ನನ್ನನ್ನೇ ನೇರವಾಗಿ ಸಂಪರ್ಕ ಮಾಡಿ. ಅಭಿಮಾನಿಗಳ ಪ್ರಯತ್ನದಿಂದ ಬೆಂಗಳೂರಿನಲ್ಲೇ ಸ್ಮಾರಕ ಆದರೆ ತುಂಬಾ ಒಳ್ಳೆಯದು. ಬೇಕಿದ್ದರೆ ಸರಕಾರದ ಬಳಿ ಮಾತನಾಡಲು ನಾವು ಸಿದ್ಧರಿದ್ದೇವೆ ಎಂದು ಅನಿರುದ್ಧ್ ತಿಳಿಸಿದರು.
ಕೆಲವರಿಂದ ಬಿರುಕು ಮೂಡಿಸುವ ಕೆಲಸ: ಕೆಲವರು ತಾವು ವಿಷ್ಣುವರ್ಧನ್ ಅಭಿಮಾನಿಗಳು ಎಂದು ಹೇಳಿಕೊಂಡು ನಮ್ಮ ಮತ್ತೆ ನಿಜವಾದ ಅಭಿಮಾನಿಗಳ ಮಧ್ಯೆ ಬಿರುಕು ಮೂಡುವಂತೆ ಮಾಡುತ್ತಿದ್ದಾರೆ. ನಮ್ಮನ್ನು ವಿಲನ್ ಮಾಡಿ ಅವರು ಹೀರೋ ಆಗಲು ಪ್ರಯತ್ನಿಸುತ್ತಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕವನ್ನು ತೆರವು ಮಾಡುವುದು ನನಗೆ ಗೊತ್ತೇ ಇರಲಿಲ್ಲ ಎಂದು ಅನಿರುದ್ಧ್ ಅಸಮಾಧಾನ ಹೊರ ಹಾಕಿದರು.