ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸದ ಆರೋಪದ ಮೇಲೆ ಕನ್ನಡದ ‘ಬಿಗ್ ಬಾಸ್’ ಸೀಸನ್ 12ರ ಮನೆಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಈ ಬಾರಿಯ ಬಿಗ್ ಬಾಸ್ ಅರ್ಧಕ್ಕೆ ಮೊಟಕುಗೊಳ್ಳುವ ಸಾಧ್ಯತೆಗಳಿವೆ.
ಬಿಗ್ ಬಾಸ್ ಆಯೋಜಕರು ಸರಿಯಾದ ರೀತಿಯಲ್ಲಿ ತಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಿಸಿಲ್ಲ ಎಂಬ ಕಾರಣಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೂ, ಆಯೋಜಕರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಬಿಗ್ ಬಾಸ್ ಮನೆಗೆ ಬೀಗ ಜಡಿಯಲಾಗಿದೆ.
ಬಿಡದಿ ಸಮೀಪ ಇರುವ ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ಮನೆ ನಿರ್ಮಿಸಲಾಗಿದೆ. ಈ ಸ್ಟುಡಿಯೋದಲ್ಲಿ ಉಂಟಾಗುತ್ತಿರುವ ತಾಜ್ಯವನ್ನು ಸೂಕ್ತ ರೀತಿಯಲ್ಲಿ ಸಂಸ್ಕರಣೆ ಮತ್ತು ವಿಲೇವಾರಿ ಮಾಡಿಲ್ಲ. ಜಾಲಿವುಡ್ ಸ್ಟುಡಿಯೋದಿಂದ ದೊಡ್ಡ ಪ್ರಮಾಣದ ತಾಜ್ಯ ನೀರು ಹೊರಬರುತ್ತಿದೆ ಎಂದು ಆರೋಪಿಸಲಾಗಿತ್ತು. ಆ ಕಾರಣಕ್ಕಾಗಿ ಜಾಲಿವುಡ್ ಸ್ಟುಡಿಯೋಗೂ ಕೂಡ ನೋಟಿಸ್ ನೀಡಲಾಗಿತ್ತು. ಆದರೆ, ಸ್ಟುಡಿಯೋದ ಮಾಲೀಕರು ನೋಟಿಸ್‌ನಲ್ಲಿ ಉಲ್ಲೇಖಿಸಲಾದ ಅಂಶಗಳನ್ನು ಪಾಲಿಸಿರಲಿಲ್ಲ. ಈ ನಡುವೆ, ಅದೇ ಸ್ಟುಡಿಯೋದಲ್ಲಿ ಬಿಗ್ ಬಾಸ್ ಶೋ ಕೂಡ ಆರಂಭವಾಗಿತ್ತು.
ಇದೀಗ, ತ್ಯಾಜ್ಯವನ್ನು ವೈಜ್ಞಾನಿಕರವಾಗಿ ಸಂಸ್ಕರಿಸದ ಕಾರಣ, ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಪೇಪರ್ ತಟ್ಟೆ, ಲೋಟ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ. ಮಾತ್ರವಲ್ಲದೆ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಗತ್ಯ ಅನುಮತಿಯನ್ನೂ ಪಡೆದಿಲ್ಲ ಎಂಬ ಆರೋಪದ ಮೇಲೆ ಬಿಗ್ ಬಾಸ್ ಮನೆಯನ್ನು ಮುಚ್ಚಲು ಸೂಚಿಸಲಾಗಿತ್ತು. ಇದೀಗ, ಜಾಲಿವುಡ್ ಸ್ಟುಡಿಯೋಗೆ ಧಾವಿಸಿದ ಅಧಿಕಾರಿಗಳು ಮನೆಗೆ ಬೀಗ ಜಡಿದಿದ್ದಾರೆ.