ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಗೆ ಇದೀಗ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಈ ಜನಾಂದೋಲನವು ರಾಜಕೀಯವಾಗಿ ‘ಹೈಜಾಕ್’ ಆಗದಂತೆ ಎಚ್ಚರವಹಿಸಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಸಲ್ಮಾನ್ ಖಾನ್, ಅತ್ಯಂತ ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಯುವಜನರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಈ ವಿದ್ಯಾರ್ಥಿಗಳು ನಿಜಕ್ಕೂ ಧೈರ್ಯಶಾಲಿಗಳು. ಪ್ರಶ್ನೆಪತ್ರಿಕೆ ಸೋರಿಕೆಯು ಅತ್ಯಂತ ಗಂಭೀರವಾದ ವಿಚಾರವಾಗಿದೆ,” ಎಂದು ಹೇಳುವ ಜೊತೆಗೆ ತಮ್ಮ ಶಾಲಾ ದಿನಗಳ ಹಳೆಯ ಫೋಟೋವೊಂದನ್ನು ಹಂಚಿಕೊಂಡು ಯುವಜನರ ಬೆಂಬಲಕ್ಕೆ ನಿಂತಿದ್ದಾರೆ.
“ಈ ಹೋರಾಟವು ಸಂಪೂರ್ಣವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ವ್ಯವಸ್ಥೆಯ ನಡುವಿನ ವಿಚಾರವಾಗಿದೆ. ಹೀಗಾಗಿ ಇದು ಯಾವುದೇ ಕಾರಣಕ್ಕೂ ರಾಜಕೀಯವಾಗಿ ಹೈಜಾಕ್ ಆಗಬಾರದು. ಇದರ ಸಂಪೂರ್ಣ ಶ್ರೇಯಸ್ಸು ನಮ್ಮ ದೇಶದ ವಿದ್ಯಾರ್ಥಿಗಳಿಗೆ ಮಾತ್ರ ಸಲ್ಲಬೇಕು. ಸರ್ಕಾರವು ವಿದ್ಯಾರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಿ, ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸ ನನಗಿದೆ. ಇದೊಂದು ಸಕಾರಾತ್ಮಕ ನಿರ್ಧಾರಕ್ಕೆ ಕಾರಣವಾಗಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಅವರು ಆಶಿಸಿದ್ದಾರೆ.
ಶಿಕ್ಷಣದ ಮಹತ್ವವನ್ನು ಸಾರಿದ ಸಲ್ಮಾನ್ ಖಾನ್, “ಶಿಕ್ಷಣ ಪಡೆಯಲು ಇಚ್ಛಿಸುವ ಪ್ರತಿಯೊಬ್ಬರಿಗೂ ದೇವರು ಒಳ್ಳೆಯದು ಮಾಡಲಿ. ನಮ್ಮ ದೇಶದಲ್ಲಿ ಶಿಕ್ಷಣವು ಒಂದು ‘ಫ್ಯಾಷನ್ ಟ್ರೆಂಡ್’ ಆಗಿ ಬದಲಾಗಬೇಕು. ವಿದೇಶಿ ವಿದ್ಯಾರ್ಥಿಗಳೂ ಕೂಡ ಉನ್ನತ ಶಿಕ್ಷಣ ಪಡೆಯಲು ಭಾರತಕ್ಕೆ ಬರುವಂತಾಗಬೇಕು,” ಎಂದು ತಮ್ಮ ಪೋಸ್ಟ್ನ ಕೊನೆಯಲ್ಲಿ ಬರೆದುಕೊಂಡಿದ್ದಾರೆ.
ಸಲ್ಮಾನ್ ಖಾನ್ ಅವರಿಗಿಂತ ಮುಂಚಿತವಾಗಿ, ಚಿತ್ರರಂಗದ ಹಲವು ಗಣ್ಯರು ಈ ವಿದ್ಯಾರ್ಥಿ ಚಳವಳಿಗೆ ಬೆಂಬಲ ಸೂಚಿಸಿದ್ದರು. ಹಿರಿಯ ನಟರಾದ ನಾಸಿರುದ್ದೀನ್ ಶಾ, ರತ್ನಾ ಪಾಠಕ್ ಶಾ, ಜೀನತ್ ಅಮಾನ್, ಅಭಯ್ ಡಿಯೋಲ್, ರಿತೇಶ್ ದೇಶಮುಖ್, ಸೋನಾಕ್ಷಿ ಸಿನ್ಹಾ ಹಾಗೂ ಓಮಿ ವೈದ್ಯ ಸೇರಿದಂತೆ ಹಲವು ಸೆಲೆಬ್ರಿಟಿಗಳು ಯುವಜನರ ಹೋರಾಟಕ್ಕೆ ಬಹಿರಂಗ ಬೆಂಬಲ ನೀಡಿ, ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದರು.





