ನಟ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಆಕ್ಷನ್-ಥ್ರಿಲ್ಲರ್ ಚಿತ್ರ ‘ಜೈಲರ್ 2’ ಸಿನಿಮಾವನ್ನು ವೀಕ್ಷಿಸಲು ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್, ಬ್ಯಾಟರ್ ಸಂಜು ಸ್ಯಾಮ್ಸನ್ ಇಡೀ ಚಿತ್ರಮಂದಿರವನ್ನೇ ಸಂಪೂರ್ಣವಾಗಿ ಬುಕ್ ಮಾಡಿದ್ದಾರೆ. ನಟ ರಜನಿಕಾಂತ್ ಅವರ ಮೇಲಿರುವ ತಮ್ಮ ಅತಿಯಾದ ಅಭಿಮಾನವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ರಜನಿಕಾಂತ್ ಅವರ ಅಪ್ಪಟ ಅಭಿಮಾನಿಯಾಗಿರುವ ಸಂಜು ಸ್ಯಾಮ್ಸನ್, ತಮ್ಮ ಕುಟುಂಬದವರು, ಸ್ನೇಹಿತರು ಹಾಗೂ ತಮಿಳು ಭಾಷೆ ಬಲ್ಲ ಕೆಲ ಭಾರತೀಯ ತಂಡದ ಸಹ ಆಟಗಾರರೊಂದಿಗೆ ಈ ಸಿನಿಮಾ ವೀಕ್ಷಿಸಲು ಮುಂದಾಗಿದ್ದಾರೆ.
ಈ ಕುರಿತು ಮಾತನಾಡಿರುವ ಸಂಜು ಸ್ಯಾಮ್ಸನ್, ತಮಗೆ ರಜನಿ ಸರ್ ಅವರ ಸಿನಿಮಾಗಳೆಂದರೆ ಅಚ್ಚುಮೆಚ್ಚು ಎಂದಿದ್ದಾರೆ. “ದೆಹಲಿಯಲ್ಲಿ ನಡೆದ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಬೇಕಿದ್ದ ಕಾರಣದಿಂದ ಚಿತ್ರ ಬಿಡುಗಡೆಯಾದ ದಿನದಂದು ಸಿನಿಮಾ ನೋಡಲು ಸಾಧ್ಯವಾಗಲಿಲ್ಲ. ಮರುದಿನವೇ ತಮ್ಮ ಸ್ನೇಹಿತರು ಮತ್ತು ಪತ್ನಿಯೊಂದಿಗೆ ಸಿನಿಮಾ ವೀಕ್ಷಿಸಲು ಇಡೀ ಥಿಯೇಟರ್ ಅನ್ನು ಕಾಯ್ದಿರಿಸಿರುವುದಾಗಿ ಹೇಳಿಕೊಂಡಿದ್ದೆ. ಈಗ, ಥಿಯೇಟರ್‌ಅನ್ನು ಬುಕ್ ಮಾಡಿದ್ದೇನೆ. ನಮ್ಮೊಂದಿಗೆ, ಭಾರತೀಯ ಕ್ರಿಕೆಟ್ ತಂಡದಲ್ಲಿ ತಮಿಳು ಭಾಷೆ ತಿಳಿದಿರುವ ಆಟಗಾರರು ಮತ್ತು ಸಪೋರ್ಟ್ ಸ್ಟಾಫ್ ಕೂಡ ಈ ವಿಶೇಷ ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ” ಎಂದು ತಿಳಿಸಿದ್ದಾರೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಜೈಲರ್ 2’ ಸಿನಿಮಾವು 2023ರ ಬ್ಲಾಕ್‌ಬಸ್ಟರ್ ಹಿಟ್ ‘ಜೈಲರ್’ ಚಿತ್ರದ ಮುಂದುವರಿದ ಭಾಗವಾಗಿದೆ. ಈ ಚಿತ್ರದಲ್ಲಿ ರಜನಿಕಾಂತ್ ಅವರು ನಿವೃತ್ತ ಪೊಲೀಸ್ ಅಧಿಕಾರಿಯಾದ ‘ಟೈಗರ್ ಮುತ್ತುವೇಲ್ ಪಾಂಡಿಯನ್’ ಪಾತ್ರದಲ್ಲಿ ಮತ್ತೊಮ್ಮೆ ತೆರೆಮೇಲೆ ಅಬ್ಬರಿಸಿದ್ದಾರೆ.
ಬಿಡುಗಡೆಯಾದ ದಿನದಿಂದಲೇ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಚಿತ್ರವು ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಅತ್ಯುತ್ತಮ ಮೆಚ್ಚುಗೆಯನ್ನು ಗಳಿಸಿದೆ. ರಜನಿಕಾಂತ್ ಅವರ ಎಂದಿನ ಸ್ಟೈಲ್, ಗತ್ತಿನ ನಟನೆ ಮತ್ತು ಚಿತ್ರದ ಹೈ-ವೋಲ್ಟೇಜ್ ಆಕ್ಷನ್ ದೃಶ್ಯಗಳು ಅಭಿಮಾನಿಗಳನ್ನು ಸೆಳೆದಿವೆ.





