ಕನ್ನಡ ಚಿತ್ರರಂಗದಲ್ಲಿ ‘ಕ್ರೇಝಿ ಸ್ಟಾರ್’ ಎಂದೇ ಖ್ಯಾತಿ ಗಳಿಸಿರುವ ನಟ ರವಿಚಂದ್ರನ್ ಸಾಕಷ್ಟು ಏಳು-ಬೀಳುಗಳನ್ನು ಕಂಡ ಬಹುಮುಖ ಪ್ರತಿಭೆ. ನಟ, ನಿರ್ದೇಶಕ, ಸಂಗೀತ ಸಂಯೋಜಕ, ನಿರ್ಮಾಪಕ ಹಾಗೂ ಛಾಯಾಗ್ರಾಹಕನಾಗಿ ಚಿತ್ರರಂಗದ ಎಲ್ಲ ಕ್ಷೇತ್ರಗಳಲ್ಲೂ ದುಡಿದವರು. ದುಡಿಯುತ್ತಿರುವವರು. 1980ರಲ್ಲಿ ಸಿನಿಜರ್ನಿ ಆರಂಭಿಸಿದ ರವಿಚಂದ್ರನ್ ಈವರೆಗೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕನಾಗಿ, ಪೋಷಕ ನಟನಾಗಿ ನಟಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ಸಿಕ್ಕಾಪಟ್ಟೆ ಸಕ್ಸಸ್ ಕಂಡರೆ, ಹಲವು ಸಂದರ್ಭಗಳಲ್ಲಿ ಎಡವಿದ್ದಾರೆ. ಅವರ ಬಹುತೇಕ ಸಿನಿಮಾಗಳ ಮುಖ್ಯ ಕಥಾಹಂದರ ಪ್ರೀತಿ. ಜೊತೆಗೆ ವಿಶಿಷ್ಟ ಶೈಲಿ, ಸಂಗೀತ, ಹಾಸ್ಯ ಹಾಗೂ ಅವರದ್ದೇ ಆದ ಒಳನೋಟ. ಹಲವು ಸಿನಿಮಾಗಳಲ್ಲಿ ಅವರ ಅಂತರಾಳ ಪ್ರೇಕ್ಷಕರಿಗೆ ಅರ್ಥವಾಗದೇ, ಸಿನಿಮಾಗಳು ಸೋತಿರುವ ಉದಾಹರಣೆಗಳೂ ಇವೆ.
ರವಿಚಂದ್ರನ್ ಅವರು ‘ಖದೀಮ ಕಳ್ಳರು’ ಚಿತ್ರದಿಂದ ಇತ್ತೀಚೆಗೆ ಬಿಡುಗಡೆಯಾದ ‘ಗೌರಿಶಂಕರ’ ಚಿತ್ರದವರೆಗೆ ಬರೋಬ್ಬರಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿವೆ. 40 ಸಿನಿಮಾಗಳು ಮಾತ್ರವೇ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮನ ಗೆದ್ದು, ಯಶಸ್ಸು ಕಂಡಿವೆ.
1968ರಲ್ಲಿ ತೆರೆಕಂಡ ‘ಧೂಮಕೇತು’ ಸಿನಿಮಾದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದ ರವಿಚಂದ್ರನ್, 1982ರಲ್ಲಿ ಬಿಡುಗಡೆಯಾದ ‘ಖದೀಮ ಕಳ್ಳರು’ ಸಿನಿಮಾದಲ್ಲಿ ಪ್ರಮುಖ ಪಾತ್ರದ ಮೂಲಕ ಚಿತ್ರರಂಗದಲ್ಲಿ ಮುನ್ನೆಲೆಗೆ ಬಂದರು. 1987ರಲ್ಲಿ ತೆರೆಕಂಡ ‘ಪ್ರೇಮಲೋಕ’ ಚಿತ್ರವು ಅವರನ್ನು ಸೂಪರ್‌ಸ್ಟಾರ್ ಆಗಿ ರೂಪಿಸಿತು. ತಮ್ಮದೇ ‘ನಾಯಕನ್ ಪ್ರೊಡಕ್ಷನ್ಸ್’ ಮೂಲಕ ಹಲವಾರು ಸಿನಿಮಾಗಳನ್ನು ತಾವೇ ನಿರ್ದೇಶಿಸಿ, ನಿರ್ಮಿಸಿದರು.
ಬಾಕ್ಸ್‌ಆಫೀಸ್‌ನಲ್ಲಿ ಯಶಸ್ಸು ಕಂಡ ರವಿಚಂದ್ರನ್ ಅವರು ಪ್ರಮುಖ ಚಿತ್ರಗಳು:
- ಪ್ರೇಮಲೋಕ (1987): ರವಿಚಂದ್ರನ್ ತಾವೇ ಸ್ವತಃ ನಿರ್ದೇಶಿಸಿದ ಮೊದಲ ಚಿತ್ರ. ರವಿ ಎಂಬ ಪಾತ್ರದಲ್ಲಿ ಅವರ ನಟನೆ ಮತ್ತು ಹಾಡುಗಳು ಸಿನಿ ಪ್ರೇಮಿಗಳ ಮನಗೆದ್ದವು. ಸಿನಿಮಾ 25 ವಾರಗಳ ಕಾಲ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡಿತು.
ಅಂಜದ ಗಂಡು (1988), ರಣಧೀರ (1988), ರಾಮಚಾರಿ (1991), ಮನೆ ದೇವರು (1993), ಸಿಪಾಯಿ (1996), ಕಲಾವಿದ (1997), ಯಾರೇ ನೀನು ಚೆಲುವೆ (1998), ಪ್ರೀತ್ಸೋದ್ ತಪ್ಪಾ (1998), ಓ ನನ್ನ ನಲ್ಲೆ (2000), ಕನಸುಗಾರ (2001), ಮಲ್ಲ (2004), ಹಠವಾದಿ (2006), ದೃಶ್ಯ (2014) ಸೇರಿದಂತೆ ಕೆಲವು ಸಿನಿಮಾಗಳು ಹಿಟ್ ಆಗಿವೆ.
ಆದರೆ, ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಯಶಸ್ಸು ಕಂಡ ಸಿನಿಮಾಗಳಿಗಿಂತ ಫ್ಲಾಪ್ ಆಗಿ, ಬಂಡವಾಳವೂ ಕೈಸೇರದೇ ಹೋದ ಸಿನಿಮಾಗಳ ಸಂಖ್ಯೆಯೇ ಹೆಚ್ಚು.
ಪ್ರಮುಖ ಫ್ಲಾಪ್ ಸಿನಿಮಾಗಳು:
ಶಾಂತಿ ಕ್ರಾಂತಿ (1991), ಪುಟ್ಣಂಜ (1995), ಮೊಮ್ಮಗ (1997), ಚೆಲುವ (1997), ನಾನು ನನ್ನ ಹೆಂಡ್ತೀರು (1999), ಮಹಾತ್ಮ (2000), ಪ್ರೀತ್ಸು ತಪ್ಪೇನಿಲ್ಲ (2000), ಪ್ರೇಮಕ್ಕೆ ಸೈ (2001), ಉಸಿರೆ (2001), ಏಕಾಂಗಿ (2002), ಪ್ರೀತಿ ಮಾಡೋ ಹುಡುಗರಿಗೆಲ್ಲ (2002), ಕೋದಂಡ ರಾಮ (2002), ಒಂದಾಗೋಣ ಬಾ (2003), ಅಹಂ ಪ್ರೇಮಾಸ್ಮಿ (2005), ರಾಮ ಕೃಷ್ಣ (2004), ಸಾಹುಕಾರ (2004), ನೀನೆಲ್ಲೋ ನಾನಲ್ಲೆ (2006), ಒಡಹುಟ್ಟಿದವಳು (2006), ರವಿ ಶಾಸ್ತ್ರಿ (2006), ನೀಲಕಂಠ (2006), ಉಗಾದಿ (2007), ನೀ ಟಾಟಾ ನಾ ಬಿರ್ಲಾ (2008), ಹೂ (2010), ಅಪೂರ್ವ (2016) ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಸಿನಿಮಾಗಳು ಫ್ಲಾಪ್ ಆಗಿವೆ.