ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ಯು ಈವರೆಗೆ 500 ಕೋಟಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣವನ್ನು ಒದಗಿಸಿದೆ. ಆ ಮೂಲಕ ಅಂತಾರಾಷ್ಟ್ರೀಯ ದಾಖಲೆ ಬರೆದಿದೆ. ʼಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ನ ‘ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್’ಗೆ ಸೇರ್ಪಡೆಯಾಗಿದೆ.
ಉಚಿತ ಬಸ್ ಪ್ರಯಾಣ ಒದಗಿಸುವುದು ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಒಂದು ಪ್ರಮುಖ ಹೆಜ್ಜೆಯಾಗಲಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು. ಅದರಂತೆ, ಶಕ್ತಿ ಯೋಜನೆಯನ್ನು 2023ರ ಜೂನ್ 11ರಂದು ಜಾರಿಗೊಳಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ 500 ಕೋಟಿ (ಟಿಕೆಟ್) ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಒದಗಿಸಲಾಗಿದೆ. ಈ ಮೈಲಿಗಲ್ಲನ್ನು ಸಾಧಿಸುವ ಮೂಲಕ ‘ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್’ನಲ್ಲಿ ಸ್ಥಾನಪಡೆದುಕೊಂಡಿದೆ.
ಈ ಲೇಖನ ಓದಿದ್ದೀರಾ?: ಕರ್ನಾಟಕದ ಮಹಿಳೆಯರಿಗೆ ಶಕ್ತಿ ತುಂಬಿವೆ 5 ಗ್ಯಾರಂಟಿಗಳು: ಹೊಸ ಅಧ್ಯಯನ ವರದಿ
‘ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್’ಗೆ ಶಕ್ತಿ ಯೋಜನೆ ಸೇರ್ಪಡೆಗೊಂಡ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, “ರಾಜ್ಯದ ಮಹಿಳೆಯರು ಆರ್ಥಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಸಬಲರಾಗಲು ಶಕ್ತಿ ಯೋಜನೆ ನೆರವಾಗಿದೆ. ಕರ್ನಾಟಕದಲ್ಲಿ ಯೋಜನೆ ಯಶಸ್ವಿಯಾದ ಬಳಿಕ, ದೇಶದ ವಿವಿಧ ರಾಜ್ಯಗಳಲ್ಲಿ ಯೋಜನೆಯನ್ನು ಅಲ್ಲಿನ ಸರ್ಕಾರಗಳು ಅನುಷ್ಠನಕ್ಕೆ ತರುತ್ತಿವೆ. ಈಗಾಗಲೇ, ಯೋಜನೆಯು ‘ಗೋಲ್ಡನ್ ಬುಕ್ ಆಫ್ ವರ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದಿದೆ. ಈಗ, ಯೋಜನೆಗೆ ಮತ್ತೊಂದು ಗರಿ ದೊರೆತಿದೆ” ಎಂದು ಹೇಳಿದ್ದಾರೆ.