ಯಾವುದೇ ಎಬಿವಿಪಿ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ತಿಪಟೂರು ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಗಾಗಿ ಹೋಗಿದ್ದೆ. ಸಭೆ ಮುಗಿಸಿಕೊಂಡು ವಾಪಸ್ ಆಗುವಾಗ ರಾಣಿ ಅಬ್ಬಕ್ಕ ಅವರ ಮೆರವಣಿಗೆ ಬರುತ್ತಿತ್ತು. ಸ್ಥಳೀಯ ಶಾಸಕರಾದ ಷಡಕ್ಷರಿ ಅವರು ಜೊತೆಗಿದ್ದರು. ಹೂ ಸಮರ್ಪಿಸುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಕಾರು ನಿಲ್ಲಿಸಿ ಹೂ ಹಾಕಿ ಬಂದಿದ್ದೇನೆ. ಯಾವ ಎಬಿವಿಪಿ ಕಾರ್ಯಕ್ರಮದಲ್ಲಿಯೂ ಭಾಗವಹಿಸಿಲ್ಲ” ಎಂದರು.
“ಇದನ್ನೇ ವಿವಾದ ಮಾಡುವುದಿದ್ದರೆ ಮಾಡಲಿ, ತೊಂದರೆ ಇಲ್ಲ. ನನ್ನ ಸೈದ್ಧಾಂತಿಕ ಬದ್ಧತೆಯನ್ನು ಯಾರು ಪ್ರಶ್ನೆ ಮಾಡಲು ಆಗುವುದಿಲ್ಲ. ನಾನು ನಿಷ್ಠಾವಂತ ಕಾಂಗ್ರೆಸ್ ಸದಸ್ಯ. ನಾನು ಕಾಂಗ್ರೆಸ್ ಸದಸ್ಯನಾಗಿಯೇ ಸಾಯುತ್ತೇನೆ. ಕೀಳು ರಾಜಕೀಯ ಮಾಡುವವರು ಮಾಡಲಿ. ಪರಮೇಶ್ವರ್ ಏನು ಅಂತ ಇಡೀ ರಾಜ್ಯದಲ್ಲಿ ಪ್ರತಿಯೊಬ್ಬರಿಗೆ ಗೊತ್ತಿದೆ. ಕಳೆದ ಮೂವತ್ತೈದು ವರ್ಷದಿಂದ ಜನರಿಗೆ ನನ್ನ ರಾಜಕಾರಣ ಏನೆಂಬುದು ಗೊತ್ತಿದೆ. ಅದನ್ನು ಮತ್ತೆ ಸಾಭೀತುಪಡಿಸಲು ಹೋಗುವುದಿಲ್ಲ” ಎಂದು ಹೇಳಿದರು.
“ಪ್ರಚೋಧನಾತ್ಮಕ ಭಾಷಣ ಮಾಡಿದ ಆರೋಪದ ಮೇಲೆ ಸಿ.ಟಿ.ರವಿ ಅವರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ” ಎಂದರು.
ಒಳ ಮೀಸಲಾತಿ ಕುರಿತು ಪ್ರತಿಕ್ರಿಯಿಸಿ, “ಎಲ್ಲ ರೀತಿಯ ಲೆಕ್ಕಚಾರ ಮಾಡಿ ಜಾತಿಸಂಖ್ಯೆಯ ಆಧಾರದ ಮೇಲೆ, ಜಸ್ಟೀಸ್ ನಾಗಮೋಹನ್ ದಾಸ್ ಅವರ ಆಯೋಗ ಮಾಡಿದ್ದ ವರ್ಗದ ಹಿನ್ನೆಲೆಯಲ್ಲಿ ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ. ಮೂರು ವರ್ಗಗಳನ್ನು ಮಾಡಿ 6, 6, 5 ಮೀಸಲಾತಿ ಮಾಡಿದ್ದಾರೆ. ಅವರಿಗೆ ಒಪ್ಪಿಗೆಯಾಗಿಲ್ಲ ಎಂಬ ಕಾರಣದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಮುಖ್ಯಮಂತ್ರಿಗಳ ಗಮನಕ್ಕೆ ಹೋಗಿದೆ. ಮುಖ್ಯಮಂತ್ರಿಗಳು ಮತ್ತು ಸರ್ಕಾರ ಯಾವ ರೀತಿ ತೀರ್ಮಾನ ಮಾಡುತ್ತಾರೆ ನೋಡಬೇಕು. ನಾವು ಒಬ್ಬರೆ ತೀರ್ಮಾನ ಮಾಡಲು ಆಗುವುದಿಲ್ಲ” ಎಂದು ಹೇಳಿದರು.
ತುಮಕೂರು ಜಿಲ್ಲೆಯ ತಿಮಟೂರಲ್ಲಿ ಎಬಿವಿಪಿ ಆಯೋಜನೆ ಮಾಡಿದ್ದ ರಾಣಿ ಅಬ್ಬಕ್ಕನ 500ನೇ ವರ್ಷದ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ರಥಯಾತ್ರೆ ಮತ್ತು ಪಂಜಿನ ಮೆರವಣಿಗೆಯಲ್ಲಿ ಪರಮೇಶ್ವರ್ ಪಾಲ್ಗೊಂಡಿದ್ದರು. ಸಚಿವರ ನಡೆ ಬಗ್ಗೆ ಟೀಕೆಗಳು ಕೇಳಿಬಂದಿದ್ದು, ಪುಷ್ಪಾರ್ಚನೆ ಮಾಡಿರುವ ವಿಡಿಯೋ ಎಲ್ಲಡೇ ವೈರಲ್ ಆಗಿದೆ.