"ಕೇಂದ್ರ ಸರ್ಕಾರ ಒಪ್ಪಿಕೊಂಡರೆ ಮೆಟ್ರೊಗೆ ಬಸವಣ್ಣನವರ ಹೆಸರು ಇಡಲಾಗುವುದು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
“ನಮ್ಮದು ಜಡತ್ವದಿಂದ ಕೂಡಿದ ಜಾತಿ ವ್ಯವಸ್ಥೆ. ಅದಕ್ಕೆ ಚಲನೆ ಇಲ್ಲ. ಅದಕ್ಕಾಗಿಯೇ ಬಸವಣ್ಣನವರು ಹೊಸ ಧರ್ಮವನ್ನೇ ಹುಟ್ಟು ಹಾಕಿದರು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ‘ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭ’ದಲ್ಲಿ ಅವರು ಮಾತನಾಡಿದರು. ಪ್ರಾಸಂಗಿಕವಾಗಿ ಪ್ರತ್ಯೇಕ ಧರ್ಮದ ವಿಚಾರ ಪ್ರಸ್ತಾಪ ಮಾಡಿದ ಕೂಡಲೇ ಇಡೀ ಸಭಾಂಗಣ ಕರತಾಡನ ಮಾಡಿತು.
ಚಲನೆ ಇರುವಂತಹ ಸಮಾಜ ಆಗಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ ಎಲ್ಲರಿಗೂ ಶಕ್ತಿ ಬಂದಾಗ ಮಾತ್ರ ಚಲನೆ ಸಿಗುತ್ತದೆ. ಅದಕ್ಕಾಗಿಯೇ ನಮ್ಮ ಸರ್ಕಾರ ಅನೇಕ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅದಕ್ಕಾಗಿಯೇ ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲೇ, ‘ಇವನಾರವ ಇವನಾರವ ಎಂದೆನಿಸದಿರಯ್ಯ, ಇವನಮ್ಮವ, ಇವನಮ್ಮವ ಎಂದೆನಿಸಯ್ಯ’ ಎಂದರು ಎಂದು ಸ್ಮರಿಸಿದರು.
“ನಾನು ಬಸವಣ್ಣನವರ ಅಭಿಮಾನಿ. ಅವರ ತತ್ವ, ಸಿದ್ಧಾಂತದಲ್ಲಿ ನಂಬಿಕೆ ಮತ್ತು ಬದ್ಧತೆ ಇಟ್ಟುಕೊಂಡಿರುವವನು. ಆ ಕಾರಣಕ್ಕಾಗಿ ವಿಶ್ವಗುರು ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ನಮ್ಮ ಸರ್ಕಾರ ನಾಮಕರಣ ಮಾಡಿದೆ. ಆ ನಾಮಕರಣ ಮಾಡುವ ಮೂಲಕ ಇಡೀ ಸರ್ಕಾರ ಬಸವಣ್ಣನವರಿಗೆ ಗೌರವ ಸೂಚಿಸಿದೆ” ಎಂದು ತಿಳಿಸಿದರು.

“ನಮ್ಮ ಸಮಾಜದಲ್ಲಿ ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆಯೋ ಅಲ್ಲಿಯವರೆಗೂ ಬಸವಣ್ಣನವರ ತತ್ವಗಳು ಪ್ರಸ್ತುತ. ಬಸವಾದಿ ಶರಣರು ಜಾತಿ ರಹಿತವಾದ ಮಾನವ ಸಮಾಜದ ಕನಸು ಕಂಡಿದ್ದರು. ಎಲ್ಲರೂ ಮಾನವರಂತೆ ಬದುಕುವ ವ್ಯವಸ್ಥೆಯನ್ನು ನಾವು ನಿರ್ಮಾಣ ಮಾಡಬೇಕು. ನಮ್ಮಲ್ಲಿ ಭಿನ್ನಾಭಿಪ್ರಾಯ ತಾರತಮ್ಯ ಇರಬಾರದು, ಅಸಮಾನತೆ ಇರಬಾರದು. ಇವುಗಳನ್ನು ನಿರ್ನಾಮ ಮಾಡುವುದೇ ಬಸವಾದಿ ಶರಣರ ಮುಖ್ಯ ಗುರಿಯಾಗಿತ್ತು” ಎಂದು ವಿಶ್ಲೇಷಿಸಿದರು.
“ಬಸವಾದಿ ಶರಣರ ಅನುಯಾಯಿ ನಾನು. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮ್ಮ ಸಂವಿಧಾನದಲ್ಲಿ ಬಸವಾದಿ ಶರಣರು ಹೇಳಿದ ವಿಚಾರಗಳನ್ನೇ ಅಳವಡಿಸಿದ್ದಾರೆ. ಬಸವ ವಿಚಾರಗಳು ಮತ್ತು ಸಂವಿಧಾನದ ವಿಚಾರಗಳು ಹೆಚ್ಚು ಕಡಿಮೆ ಒಂದೇ ಆಗಿವೆ. ಅದಕ್ಕಾಗಿಯೇ ಶಾಲಾ ಮತ್ತು ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಪಠಿಸುವುದನ್ನು ಜಾರಿಗೊಳಿಸಿದ್ದೇವೆ. ಎಲ್ಲರೂ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಇದೆ. ಜಾತಿ ರಹಿತ, ವರ್ಗರಹಿತ ಸಮಾಜ ನಿರ್ಮಾಣ ಆಗಬೇಕು ಎಂದು ಬಸವಣ್ಣ ಹೇಳಿದರು. ಅದು ಸಾಧ್ಯವಾಗಬೇಕೆಂದು ನುಡಿದಂತೆ ನಡೆದರು. ನಾವು ಕೂಡ ನುಡಿದಂತೆ ನಡೆಯುವ ಪ್ರಯತ್ನ ಮಾಡಬೇಕು” ಎಂದು ಅಭಿಪ್ರಾಯಟ್ಟರು.
ಇದನ್ನೂ ಓದಿರಿ: ಲಿಂಗಾಯತ ಮಠಾಧಿಪತಿಗಳ ಶಕ್ತಿ ಪ್ರದರ್ಶನ; ಸಿಎಂ ಸಿದ್ದರಾಮಯ್ಯಗೆ ಭರಪೂರ ಮೆಚ್ಚುಗೆ
“ನಮ್ಮ ಸರ್ಕಾರ ಕೂಡ ಬಸವಾದಿ ಶರಣರ ಮಾರ್ಗದಲ್ಲಿ ನಡೆಯಬೇಕೆಂದು ತೀರ್ಮಾನ ಮಾಡಿದೆ. ನಾನು ಮುಖ್ಯಮಂತ್ರಿಯಾದದ್ದು 2013ರ ಮೇ 13ನೇ ತಾರೀಕು. ಅಂದು ಬಸವ ಜಯಂತಿ ಇತ್ತು. ಬಸವಣ್ಣನವರು ಹೇಳಿದ ವಿಚಾರಗಳನ್ನು ಇಂದಿಗೂ ನಂಬಿದ್ದೇನೆ. ಆ ನಿಟ್ಟಿನಲ್ಲಿ ನಡೆಯುತ್ತಿದ್ದೇನೆ. ಮಹಿಳೆಯರಿಗೆ ಸಮಾನತೆಯನ್ನು ಬಸವಾದಿ ಶರಣರು ಕೊಟ್ಟರು. ಹೀಗಾಗಿಯೇ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಮಹಿಳಾ ವಿದ್ಯಾಲಯ ಎಂದು ಹೆಸರಿಡುವ ಕೆಲಸ ಮಾಡಿದೆ. ಎಲ್ಲ ಸರ್ಕಾರಿ ಕಚೇರಿಯಲ್ಲಿ ಬಸವಣ್ಣನವರ ಫೋಟೋ ಇಡಬೇಕೆಂದು ಆದೇಶ ಮಾಡಿದೆ” ಎಂದು ಹಂಚಿಕೊಂಡರು.
ಸಮಾರಂಭದ ಬೇಡಿಕೆಗಳಿಗೆ ಸ್ಪಂದಿಸಿದ ಸಿಎಂ
“ಮುಂದಿನ ವರ್ಷದೊಳಗೆ ಅನುಭವ ಮಂಟಪದ ಕೆಲಸಗಳನ್ನು ಸಂಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ. ಬಸವಲಿಂಗ ಪಟ್ಟದ್ದೇವರು ಅವರು ವಚನ ವಿಶ್ವವಿದ್ಯಾಲಯದ ಬೇಡಿಕೆ ಇಟ್ಟಿದ್ದಾರೆ. ಅದನ್ನು ಮುಂದಿನ ವರ್ಷದಿಂದ ಮಾಡೋಣ ಸ್ವಾಮೀಜಿ” ಎಂದು ಭರವಸೆ ನೀಡಿದರು.
ಸಮಾರಂಭದಲ್ಲಿ ಹಾಜರಿದ್ದ ಜನರು, ‘ಮೆಟ್ರೊ’ಗೆ ಬಸವಣ್ಣನವರ ಹೆಸರು ಇಡುವಂತೆ ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, “ರಾಜಕೀಯದಲ್ಲಿ ನಾನು ಕೊಟ್ಟ ಮಾತನ್ನು ನಡೆಸಿಕೊಡುತ್ತೇನೆ. ಮೆಟ್ರೊ ಯೋಜನೆ ನಾವು ಮತ್ತು ಕೇಂದ್ರ ಸರ್ಕಾರ ಸೇರಿ ಮಾಡುವುದಾಗಿದೆ. ಕೇಂದ್ರ ಸರ್ಕಾರದ ಒಪ್ಪಿಗೆ ಇಲ್ಲದೆ ಏನೂ ಮಾಡೋಕೆ ಆಗಲ್ಲ. ಆದರೆ ಕೇಂದ್ರ ಸರ್ಕಾರದ ಮುಂದೆ ಈ ಪ್ರಸ್ತಾಪವನ್ನು ಇಡುತ್ತೇನೆ. ಬಸವಣ್ಣನವರ ವಿಚಾರದಲ್ಲಿ ನೀವು ಒತ್ತಾಯ ಮಾಡಬೇಕಿಲ್ಲ. ಬಸವಲಿಂಗ ಪಟ್ಟದ್ದೇವರು ಅವರು ಬಂದು ‘ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಲು ಕೇಳಿದರು. ಕೂಡಲೇ ಒಪ್ಪಿ, ಆದೇಶ ಮಾಡಿಬಿಟ್ಟೆ. ಮೆಟ್ರೊಕ್ಕೆ ಬಸವಣ್ಣನವರ ಹೆಸರು ಇಡುವಂತಹ ಕೆಲಸ ನಮ್ಮ ಸರ್ಕಾರದಿಂದ ಮಾಡುವಂತಿದ್ದರೆ ಇಲ್ಲೇ ಒಪ್ಪಿಗೆ ಕೊಟ್ಟುಬಿಡುತ್ತಿದೆ” ಎಂದು ತಿಳಿಸಿದರು.
