ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ ಬಸವಣ್ಣ ಅವರ ಹೆಸರು ನಾಮಕರಣಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ವಿಶ್ವಗುರು ಬಸವಣ್ಣ ಅವರನ್ನು ʻಕರ್ನಾಟಕದ ಸಾಂಸ್ಕೃತಿಕ ನಾಯಕʼ ಎಂದು ಘೋಷಿಸಿದ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ‘ಬಸವ ಸಂಸ್ಕೃತಿ ಅಭಿಯಾನ-2025’ರ ಸಮಾರೋಪ ಸಮಾರಂಭದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಶರಣ ಸಂಸ್ಕೃತಿಯ 301 ಶರಣರು, ಗುರುಗಳು, ಸ್ವಾಮೀಜಿಗಳ ಸಾನಿಧ್ಯದಲ್ಲಿ ಲಿಂಗಾಯತ ಧರ್ಮ ಚಳವಳಿಯ ಪ್ರಮುಖರು, ಪ್ರಗತಿಪರ ಚಿಂತಕರು, ಹೋರಾಟಗಾರರು ಹಾಗೂ 2 ಲಕ್ಷಕ್ಕೂ ಅಧಿಕ ಶರಣಾನುಯಾಯಿಗಳು ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಸಿಎಂ, ಮುಂದಿನ ವರ್ಷದ ಒಳಗೆ ಅನುಭವ ಮಂಟಪದ ನಿರ್ಮಾಣ ಪೂರ್ತಿ ಮಾಡುತ್ತೇವೆ. ವಚನ ವಿವಿ ಮಾಡುವ ಬೇಡಿಕೆ ಕೊಟ್ಟಿದ್ದೀರಿ, ಮುಂದಿನ ವರ್ಷದಿಂದ ವಚನ ವಿಶ್ವವಿದ್ಯಾಲಯ ಮಾಡುತ್ತೇವೆ. ನಾನು ರಾಜಕೀಯದಲ್ಲಿ ಏನು ಮಾತು ಕೊಡುತ್ತೇನೊ, ಆ ಮಾತು ನಡೆಸಿಕೊಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಸಿಎಂ ಭಾಷಣ ಮಾಡುವ ವೇಳೆಯೇ ನಮ್ಮ ಮೆಟ್ರೋಗೆ ಬಸವಣ್ಣ ಹೆಸರು ಇಡಲು ಆಗ್ರಹ ಕೇಳಿಬಂದಿತು, ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಮೆಟ್ರೋ ನಿಲ್ದಾಣಕ್ಕೆ ನಮ್ಮ ಪಾಲು ಜಾಸ್ತಿ ಇರಬಹುದು. ಆದರೆ ನಮ್ಮ ಮೆಟ್ರೋಗೆ ಬಸವಣ್ಣ ಹೆಸರು ಇಡುವುದು ನಮ್ಮ ಕೈಯಲ್ಲಿಲ್ಲ, ಕೇಂದ್ರ ಸರ್ಕಾರಕ್ಕೆ ಇದರ ಶಿಫಾರಸು ಮಾಡುತ್ತೇವೆ. ನಮ್ಮದೇ ಸರ್ಕಾರದ ವ್ಯಾಪ್ತಿಯಲ್ಲಿ ಇದ್ದಿದ್ದರೆ ಈ ಸ್ಥಳದಲ್ಲೇ ಒಪ್ಪಿಗೆ ಕೊಡುತ್ತಿದ್ದೆ ಎಂದು ಹೇಳಿದರು.
ನಾನು ಬಸವಣ್ಣನ ಅಭಿಮಾನಿ, ಅವರ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ, ಬದ್ಧತೆ ಇಟ್ಟುಕೊಂಡವನು. ಆ ಕಾರಣಕ್ಕೆ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಅಂತ ನಮ್ಮ ಸರ್ಕಾರ ಘೋಷಣೆ ಮಾಡಿದೆ. ಆ ಮೂಲಕ ಇಡೀ ಸರ್ಕಾರ ಬಸವಣ್ಣರಿಗೆ ಗೌರವ ಸೂಚಿಸಿದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದಿಂದ ಬಿಹಾರಕ್ಕೆ ಬಿಜೆಪಿಯ ಬದಲಾದ ನಿಲುವು
ಈ ಸಮಾಜದಲ್ಲಿ ಜಾತಿ ವ್ಯವಸ್ಥೆ, ಮೇಲುಕೀಳು ಇರೋವರೆಗೂ ಬಸವಣ್ಣನ ತತ್ವಗಳು ಅತ್ಯಂತ ಪ್ರಸ್ತುತ. ನಾವು ಮೂಲತಃ ಮಾನವರು, ಆಮೇಲೆ ಭಾರತೀಯರು. ನಾನು ಕಾನೂನು ವಿದ್ಯಾರ್ಥಿ ಆಗಿದ್ದಾಗಿನಿಂದ ಈವರೆಗೂ ಬಸವಣ್ಣನ ಅನುಯಾಯಿ. ಸಂವಿಧಾನದಲ್ಲಿ ಬಸವಣ್ಣ ವಿಚಾರಗಳನ್ನು ಅಳವಡಿಸಿದ್ದಾರೆ. ಬಸವ ವಿಚಾರಗಳು, ಸಂವಿಧಾನದ ವಿಚಾರಗಳು ಹೆಚ್ಚೂ ಕಡಿಮೆ ಒಂದೇ ಆಗಿವೆ ಎಂದು ಬಣ್ಣಿಸಿದರು.
ನಾನು ಜಾಸ್ತಿ ಭಾಷಣ ಮಾಡಲು ಹೋಗಲ್ಲ. ನಾನು ಏನೇನೋ ಮಾತಾಡಿದರೆ ಅದು ವಿವಾದ ಆಗಬಹುದು. ನಾವೆಲ್ಲರೂ ಶೂದ್ರರು, ಚತುರ್ವರ್ಣದಲ್ಲಿ ನಾಲ್ಕನೇ ಸ್ಥಾನ. ಬ್ರಾಹ್ಮಣರು, ವೈಶ್ಯರು, ಕ್ಷತ್ರಿಯರು, ಶೂದ್ರರು ಈಗ ಪಂಚಮರು ಅಂತ ಒಂದಿದೆ. ನಾವೆಲ್ಲರೂ ಒಂದೇ, ನಾವೆಲ್ಲರೂ ಶೂದ್ರರು. ನಮ್ಮ ಸಮಾಜದಲ್ಲಿ ವೈರುಧ್ಯತೆ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಅಸಮಾನತೆ ಇದೆ. ಇವನ್ನು ಹೋಗಲಾಡಿಸುವ ತನಕ ನಿಜವಾದ ಸ್ವಾತಂತ್ರ್ಯ ಬಂದಂತಾಗಲ್ಲ. ಅಸಮಾನತೆಗೆ ಬೆಂಬಲ ಕೊಡೋರು ಸ್ವಾತಂತ್ರ್ಯದ ಸೌಧ ಕೆಡವೋರು. ಈ ಎಚ್ಚರಿಕೆಯನ್ನು ಅಂಬೇಡ್ಕರ್ ಆವತ್ತೇ ಕೊಟ್ಟಿದ್ದರು ಎಂದು ತಿಳಿಸಿದರು.