ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಮುಖ್ಯಮಂತ್ರಿ ಸೂಚನೆ ಕೊಟ್ಟರೆ ಶೀಘ್ರ ಬೆಂಗಳೂರಿಗೆ ತೆರಳಿ ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ ಎಂದು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಹೇಳಿದರು.
ಶಿವಮೊಗ್ಗದಲ್ಲಿ ಬುಧವಾರ ಸುದ್ದಿಗೋಷ್ಠಿ ಕರೆದು ಮಾತನಾಡಿ, “ಪಕ್ಷಕ್ಕೆ ಮುಜುಗರ ಆಗುವುದನ್ನು ತಡೆಯಲು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೂಡಲು ನಾನೂ ನಿರ್ಧರಿಸಿದ್ದೇನೆ” ಎಂದು ತಿಳಿಸಿದರು.
ಭೂ ಒಡೆತನ ಯೋಜನೆಯ ಫಲಾನುಭವಿಗಳಿಂದ ಶೇ. 40ರಷ್ಟು ಕಮೀಷನ್ ವಸೂಲಿ ಮಾಡಿದ ಆರೋಪಕ್ಕೆ ಗುರಿಯಾಗಿರುವ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್ ರವಿಕುಮಾರ್ ಅವರ ಪದತ್ಯಾಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ಎನ್ನಲಾಗಿದೆ.
ಭೋವಿ ಅಭಿವೃದ್ಧಿ ನಿಗಮದಿಂದ ಸುಮಾರು 15 ಕೋಟಿ ರೂ.ಗಳ ವೆಚ್ಚದಲ್ಲಿ ಭೂ ಒಡೆತನ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಅದರಲ್ಲಿ 60 ಎಕರೆಯನ್ನು ಖರೀದಿಸಿ, ಫಲಾನುಭವಿಗಳಿಗೆ ಹಂಚಿಕೆ ಮಾಡುವ ಇರಾದೆಯಿತ್ತು. ಈ ಯೋಜನೆಯಲ್ಲಿ ಫಲಾನುಭವಿಗಳಿಂದ ಪ್ರತಿ ಘಟಕ ವೆಚ್ಚಕ್ಕೂ ಶೇ. 40ರಷ್ಟು ಕಮೀಷನ್ ನಿಗದಿ ಮಾಡಿರುವುದಾಗಿ ಆರೋಪಗಳಿವೆ. ಜೊತೆಗೆ ಹಣ ಬಿಡುಗಡೆ ವೇಳೆಯಲ್ಲೂ ಹೆಚ್ಚುವರಿಯಾಗಿ ವಸೂಲಿ ಮಾಡಿರುವುದು ತಿಳಿದು ಬಂದಿದೆ.
ಈಗಾಗಲೇ ಬಿಡುಗಡೆಯಾಗಿರುವ 3 ಕೋಟಿ ರೂ. ಅನುದಾನದಲ್ಲಿ ಕಮೀಷನ್ ಪಡೆದು ಅದನ್ನು ನಿಗಮದ ಅಧ್ಯಕ್ಷರಿಗೆ ಮಧ್ಯವರ್ತಿಯೊಬ್ಬರು ನೀಡುವಾಗ, ನಡೆದ ಚರ್ಚೆಗಳು ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸರ್ಕಾರಕ್ಕೆ ತಲೆ ನೋವು ತಂದಿಟ್ಟಿದೆ.
ವಿಡಿಯೋದಲ್ಲಿ ಸೆರೆಯಾಗಿರುವ ಮಾತುಕತೆಯಲ್ಲಿ ನಿಗಮದ ಅಧ್ಯಕ್ಷ ರವಿಕುಮಾರ್ ಸಚಿವರ ಕಡೆಯವರೆಗೂ ಹಣ ತಲುಪಿಸಬೇಕು ಎಂದು ಹೇಳಿರುವುದು ಸೆರೆಯಾಗಿದೆ. ಆ ಸಚಿವರು ಯಾರು ಎಂದು ಇನ್ನೂ ಬಹಿರಂಗಗೊಂಡಿಲ್ಲ. ಸರ್ಕಾರ ಮುಜುಗರದಿಂದ ತಪ್ಪಿಸಿಕೊಳ್ಳಲು ರವಿಕುಮಾರ್ ಅವರು ತಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ರವಿಕುಮಾರ್ ಸ್ಪಷ್ಟನೆ ಏನು?
“ನಾನು ಯಾರ ಬಳಿಯೂ ಹಣ ಪಡೆದಿಲ್ಲ. ಯಾರಿಗೂ ಕೊಟ್ಟಿಲ್ಲ. ಕಮಿಷನ್ ವಿಚಾರವನ್ನು ಮಾತನಾಡಿಲ್ಲ. ಕೃತಕ ಬುದ್ಧಿಮತ್ತೆ (ಎಐ) ತಾಂತ್ರಿಕತೆ ಬಳಸಿ ವಿಡಿಯೊದಲ್ಲಿನ ಸಂಭಾಷಣೆ ತಿರುಚಲಾಗಿದೆ. ಎಫ್‌ಎಸ್ ಎಲ್ ಪರೀಕ್ಷೆಗೆ ಕಳುಹಿಸಿದರೆ ವಾಸ್ತವ ಸಂಗತಿ ಗೊತ್ತಾಗಲಿದೆ. ನಿಗಮದ ಕಚೇರಿಯಲ್ಲಿಯೇ ಆ ರೀತಿ ವಿಡಿಯೊ ಚಿತ್ರೀಕರಿಸಿ ತಿರುಚಲಾಗಿದೆ. ಅದರಲ್ಲಿ ನಿಗಮದ ಅಧಿಕಾರಿಗಳ ಪಾತ್ರವೂ ಇರಬಹುದು. ರಾಜಕೀಯ ವಿರೋಧಿಗಳ ಜೊತೆ ಕೈ ಜೋಡಿಸಿ ಈ ರೀತಿ ಷಡ್ಯಂತ್ರ ಹೆಣೆಯಲಾಗಿದೆ. ಈ ಬಗ್ಗೆ ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಟ್ಟು ಇಡೀ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಲಿದ್ದೇನೆ” ಎಂದಿದ್ದಾರೆ.
“ಭೋವಿ ಅಭಿವೃದ್ಧಿ ನಿಗಮದಲ್ಲಿ ಈ ಹಿಂದೆ ದೊಡ್ಡ ಹಗರಣ ನಡೆದಿರುವುದರಿಂದ ನಾನು ಅದನ್ನು ಮುಳ್ಳಿನ ಕುರ್ಚಿ ಎಂದೇ ಭಾವಿಸಿದ್ದೆ. ಬಹಳಷ್ಟು ಎಚ್ಚರಿಕೆಯಿಂದ ಕೆಲಸ ಮಾಡಿದ್ದೇನೆ. ನಿಗಮದಲ್ಲಿ ಭ್ರಷ್ಟಾಚಾರ ತಡೆಯಲು ಬಿಗಿ ಕ್ರಮ ಕೈಗೊಂಡಿದ್ದೆನು. ಅದನ್ನು ಸಹಿಸಲಾರದೇ ತಂತ್ರಜ್ಞಾನ ಬಳಸಿಕೊಂಡು ಈ ರೀತಿಯ ತಿರುಚಿದ ವಿಡಿಯೊ ಮಾಡಲಾಗಿದೆ. ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಸೇರಿದಂತೆ ಯಾರಿಗೂ ಕಮಿಷನ್ ಕೊಟ್ಟಿಲ್ಲ. ಎಲ್ಲವೂ ಷಡ್ಯಂತ್ರ” ಎಂದು ತಿಳಿಸಿದ್ದಾರೆ.
