“ಬಂಡವಾಳವಾದ, ಬಹುಸಂಖ್ಯಾತವಾದ, ಕೋಮುವಾದದ ಪ್ರವಾಹ ಜನಪರ ಪತ್ರಿಕೋದ್ಯಮವನ್ನು ಬಹುತೇಕ ಮುಳುಗಿಸಿದೆ. ಮುಳುಗದೆ ಉಳಿದಿರುವ ಕೆಲವೇ ಅಪವಾದಗಳು ಉಸಿರಕಟ್ಟಿ ಒದ್ದಾಡಿ ಕೈಕಾಲು ಬಡಿಯುತ್ತಿವೆ. ಧರ್ಮದ ಬೇರು ಕರುಣೆ ಎಂದಿದ್ದ ಬಸವಣ್ಣ. ಆದರೆ ಇಂದು ದ್ವೇಷವೇ ಧರ್ಮದ ಬೇರು ಆಗಿ ಹೋಗಿದೆ” ಎಂದು ಹಿರಿಯ ಪತ್ರಕರ್ತ ಡಿ ಉಮಾಪತಿ ಹೇಳಿದರು.
ಕರ್ನಾಟಕ ಸರ್ಕಾರ 2024ರಲ್ಲಿ ಸ್ಥಾಪಿಸಿರುವ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
“ಜನತಾಂತ್ರಿಕ ವ್ಯವಸ್ಥೆಯಲ್ಲಿ ಆಳುವ ವಗ೯ದ ಬಗೆಗೆ ಸದಾ ಎಚ್ಚರವನ್ನು ಮೂಡಿಸುವ ಮಹತ್ತರ ಕಾಯ೯ವನ್ನು ನೆರವೇರಿಸುವ ಸಮೂಹ ಮಾಧ್ಯಮಗಳನ್ನು ‘ಕಾಯುವ ನಾಯಿ’ಗೆ ಹೋಲಿಸುವುದು ಉಂಟು. ಆದರೆ ಇಂದಿನ ಸಂದರ್ಭದಲ್ಲಿ ಈ ಕಾಯುವ ನಾಯಿ ದುರ್ಲಾಭ ಗಳಿಸುವ ಕಾಯಿಲೆಗೆ ಬಿದ್ದಿದೆ, ಇಲ್ಲವೇ ಅದಕ್ಕೆ ಹುಚ್ಚು ಹಿಡಿದಿದೆ. ವಿನಾಕಾರಣ ಅಮಾಯಕರು ಮತ್ತು ನಿರಪರಾಧಿಗಳ ಮೇಲೆರಗಿ ಪರಚಿ ಕಚ್ಚಿ ಬೊಗಳುತ್ತದೆ. ಆಳುವವರ ಮುಂದೆ ಬಾಗಿ ಬಾಲ ಆಡಿಸುತ್ತದೆ. ಸರ್ಕಾರ ಮತ್ತು ಆಡಳಿತ ಪಕ್ಷವನ್ನು ಪ್ರಶ್ನಿಸುವ ಬದಲು ಪ್ರತಿಪಕ್ಷಗಳ ಹಿಂದೆ ಬಿದ್ದಿರುವ ವಿಪರ್ಯಾಸ ಜರುಗಿದೆ. ಜನಸಮುದಾಯಗಳ ಹಿತವೇ ಪ್ರಧಾನವೆನಿಸಿದ್ದ ಪತ್ರಿಕೋದ್ಯಮ ಬಂಡವಾಳದ ತುಳಿತಕ್ಕೆ ಸಿಕ್ಕಿದೆ. ನಿಜ, ಅರ್ಥದಲ್ಲಿ ಕಾರ್ಪೊರೇಟ್ ಉದ್ಯಮವಾಗಿ ಬೆಳೆದಿದೆ. ಅದರ ಜನಪರ ಅಂತರಾತ್ಮದ ಹತ್ಯೆಯಾಗಿ ಹೋಗಿದೆ” ಎಂದು ಹೇಳಿದರು.
“ಮೀಡಿಯಾ ನಿಷ್ಪಕ್ಷಪಾತವಾಗಿರಬೇಕು ಎಂಬುದು ಮೋಸದಿಂದ ಕೂಡಿದ ಆಕರ್ಷಕ ಸುಳ್ಳು. ಹೊಸಕಾಲದ ಮಾಧ್ಯಮ ಸತ್ಯ ನ್ಯಾಯ ಪ್ರೀತಿಯ ಪಕ್ಷಪಾತಿಯಾಗಿರಬೇಕು. ಪತ್ರಕರ್ತ ಜಾರ್ಜ್ ಆರ್ವೆಲ್ ಬರೆದ 1948ರಲ್ಲಿ 1984 ಎಂಬ ಡಿಸ್ಟೋಪಿಯನ್ (ಕೇಡುಗಾಲ)ದ ಕಾದಂಬರಿಯಲ್ಲಿ, ಆಳುವ ಪಕ್ಷ ಹೇಳಿದ್ದೇ ಅಂತಿಮ. ಎರಡಕ್ಕೆ ಎರಡು ಸೇರಿಸಿದರೆ ನಾಲ್ಕೋ ಅಥವಾ ಐದೋ ಎಂದು ಅನುಮಾನಿಸುವ ಅನಿಶ್ಚಯತೆಯ ಹಂತಕ್ಕೆ ಜನತೆಯನ್ನು ತಳ್ಳಲಾಗುತ್ತದೆ. ಕೆಲವು ಸಲ, ನಿರ್ದಿಷ್ಟ ತಾತ್ವಿಕ ಅಥವಾ ಸೈದ್ಧಾಂತಿಕ ಪರಿಕಲ್ಪನೆಗಳ ಸಂದರ್ಭದಲ್ಲಿ ಎರಡಕ್ಕೆ ಎರಡು ಸೇರಿಸಿದರೆ ಐದು ಕೂಡ ಆಗಬಹುದು ಎಂದು ಪ್ರಜೆಗಳು ಒಪ್ಪಬೇಕಾಗುತ್ತದೆ. ಕಟ್ಟಕಡೆಗೆ ಎರಡಕ್ಕೆ ಎರಡು ಸೇರಿಸಿದರೆ ಆಳುವ ಪಕ್ಷ ಎಷ್ಟು ಹೇಳುತ್ತದೋ ಅಷ್ಟು ಎಂಬ ಸ್ಥಿತಿಗೆ ಜನತೆಯನ್ನು ಬಗ್ಗಿಸಲಾಗುತ್ತದೆ.
ಸರ್ವಾಧಿಕಾರಿ ಸಮಾಜಗಳ ಎರಡು ಚಹರೆಗಳನ್ನು ಆತ ಗುರುತಿಸಿದ್ದ. ಒಂದು ಸುಳ್ಳು ಹೇಳುವುದು ಮತ್ತೊಂದು schizophrenia (ಅಂದರೆ ಛಿದ್ರಮನಸ್ಕತೆ. ನಿರಂತರ ಭ್ರಾಂತಿಗಳಿಂದ ಕೂಡಿದ ಮಾನಸಿಕ ವ್ಯಾಧಿ). ಸಂಘಟಿತವಾಗಿ ಸುಳ್ಳು ಹೇಳುವುದು ಸರ್ವಾಧಿಕಾರಿ ಪ್ರಭುತ್ವದ ಅವಿಭಾಜ್ಯ ಅಂಗ. ವರ್ತಮಾನಕ್ಕೆ ಸ್ಥಾನ ಕಲ್ಪಿಸಲು ಗತವನ್ನು ನಿರಂತರವಾಗಿ ತಿದ್ದಿ ಬರೆಯುವುದೂ ಈ ಸುಳ್ಳು ಹೇಳುವಿಕೆಯಲ್ಲಿ ಸೇರಿದೆ. ಇಂತಹ ಪ್ರಭುತ್ವ schizophrenic ಆಲೋಚನಾ ವ್ಯವಸ್ಥೆಯನ್ನೇ ಏರ್ಪಡಿಸಿಬಿಡುತ್ತದೆ. ನೆನಪಿಡಿ ಆರ್ವೆಲ್ ಈ ಮಾತುಗಳನ್ನು ಬರೆದದ್ದು 1948ರಲ್ಲಿ.
ಗುಣಮಟ್ಟದ ಪತ್ರಿಕೋದ್ಯಮಕ್ಕೆ ಶಾರ್ಟ್‌ಕಟ್‌ಗಳು ಇಲ್ಲ. ಶಕ್ತಿಯುತ ಮತ್ತು ಉತ್ತರದಾಯಿ ಮಾಧ್ಯಮ ಹೊಂದಬೇಕಿದ್ದರೆ ಟಿ.ಆರ್.ಪಿ. ಅಥವಾ ಜಾಹೀರಾತು ಅವಲಂಬಿತ ಮಾದರಿಯ ಪತ್ರಿಕೋದ್ಯಮ ಸಾಯಬೇಕು. ಹಣ ಸಂದಾಯ ಮಾಡಿ ಸೇವೆಗಳನ್ನು ಪಡೆಯುವ ಮಾದರಿಯಲ್ಲಿ ಓದುಗರು ಕಾಸು ತೆತ್ತು ಸುದ್ದಿ ಓದುವ ಕಾಲ ಬರಬೇಕು. ಅದು ಸದ್ಯಕ್ಕೆ ಬರುವ ನಿಚ್ಚಳ ಸೂಚನೆಗಳು ಕಾಣುತ್ತಿಲ್ಲ. ಪರಿಸರ ಮತ್ತು ಅಭಿವೃದ್ಧಿಯ ವ್ಯಾಖ್ಯಾನಗಳೇ ಬದಲಾಗಿ ಹೋಗುತ್ತಿರುವ ಅಪಾಯಕಾರಿ ಕಾಲಮಾನ ಇದು. ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಆಗುವ ಪ್ರಯೋಜನ ಏನು ಎಂಬುದು ಇಂದಿನ ಅಭಿವೃದ್ಧಿಯ ಮಾನದಂಡವಾಗಿ ಉಳಿದಿಲ್ಲ” ಎಂದರು.
ಈ ದಿನ ಸಂಪಾದಕೀಯ | ಬಸನಗೌಡ ಯತ್ನಾಳ್ ಒಪ್ಪಿಸಿದ್ದು ಮನುವಾದಿ ಗಿಳಿಪಾಠ
ಕನ್ನಡ ಪತ್ರಿಕೋದ್ಯಮದ ಚರಿತ್ರೆಯಲ್ಲಿ ಅಪ್ಪಟ ಜನಪರ ಅಧ್ಯಾಯಗಳನ್ನು ಕಟ್ಟಿದ ಕೆಲವೇ ಧೀಮಂತರ ಪೈಕಿ ಒಬ್ಬರು ವಡ್ಡರ್ಸೆ ರಘುರಾಮಶೆಟ್ಟಿಯವರು. ನೇರವಾಗಿ ಅವರೊಂದಿಗೆ ಕೆಲಸ ಮಾಡುವ ಸಂದರ್ಭ ನನಗೆ ಬರಲಿಲ್ಲ. ಸಾಮಾನ್ಯ ಓದುಗರು ಪತ್ರಿಕೆಯ ಒಡೆಯರಾಗಬೇಕೆಂಬ ಕನಸನ್ನು ನನಸು ಮಾಡಲು ತಮ್ಮ ಬದುಕಿನ ಬಹುಮುಖ್ಯ ಆಯಸ್ಸನ್ನು ತೇದವರು. ಕೇವಲ 1,000/- ರೂ. ದೇಣಿಗೆ ನೀಡುವ ಮೂಲಕ ಷೇರುಗಳನ್ನು ಖರೀದಿಸಿ ಪತ್ರಿಕೆಯ ಒಡೆಯರಾಗಬೇಕೆಂದು ಅವರು ಬಯಸಿದ್ದರು. “ಚಿಂತನೆಯ ಹೊಳೆ ಹರಿಸಿ, ಜನಶಕ್ತಿಯ ಬೆಳೆ ತೆಗೆಯುವ ಮುಂಗಾರು” ಎಂಬುದು ಅವರ ಪತ್ರಿಕೆಯೇ ಧ್ಯೇಯವಾಕ್ಯ ಆಗಿತ್ತು. ದೀನದಲಿತರು, ದುರ್ಬಲರು-ವಂಚಿತರ ಪರವಾಗಿ ಅಕ್ಷರಶಃ ಪತ್ರಿಕಾಲೋಕದಲ್ಲಿ ಗುಡುಗಿದ ದನಿ ಅವರದಾಗಿತ್ತು. ಬಂಡವಾಳವಾದ ಅವರನ್ನು ಸೋಲಿಸಿತು. ಕಡೆಯ ದಿನಗಳನ್ನು ನೋವಿನಲ್ಲಿ ಕಳೆದರು” ಎಂದು ನೆನಪು ಮಾಡಿಕೊಂಡರು.