ಹಾಸನ ತಾಲ್ಲೂಕು ಕಟ್ಟಾಯ ಹೋಬಳಿಯ ಚನ್ನಂಗಿಹಳ್ಳಿ ಗ್ರಾಮದಲ್ಲಿ ದಲಿತ ಸಮುದಾಯದ ಇಬ್ಬರು ಮಹಿಳೆಯರು ಮತ್ತು ಯುವಕನ ಮೇಲೆ ಜಾತಿ ದೌರ್ಜನ್ಯವೆಸಗಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ
ಚನ್ನಂಗಿಹಳ್ಳಿ ಗ್ರಾಮದ ದಲಿತ ಸಮುದಾಯದ ಮಹಿಳೆಯರಾದ ಕಮಲಮ್ಮ, ರಾಜಮ್ಮ ಹಾಗೂ ಯುವಕ ಕಿರಣ್ ಕುಮಾರ್ ಮೇಲೆ ಜುಲೈ 22 ರಂದು ಸಂಜೆ ಜಾತಿ ದೌರ್ಜನ್ಯದ ಜೊತೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳಾದ ಅಣ್ಣೇಗೌಡ ಮತ್ತು ಆತನ ಮಗ ಹರೀಶ್ ವಿರುದ್ಧ ಗೊರೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕಮಲಮ್ಮ ಅವರು ಗ್ರಾಮದ ನಂಜೇಗೌಡ ಎಂಬುವವರ ಜಮೀನನ್ನು ಪಾಲಿಗೆ ಪಡೆದಿದ್ದು, ಜುಲೈ 22ರ ಸಂಜೆ 4.30ರ ಸುಮಾರಿಗೆ ದನ ಮೇಯಿಸಲು ಜಮೀನಿಗೆ ತೆರಳಿದ್ದರು. ಈ ವೇಳೆ ಜಮೀನಿನಲ್ಲಿ ಸೌದೆ ಹಾಕಿದ್ದ ಅಣ್ಣೇಗೌಡನನ್ನು ಸೌದೆ ಎತ್ತಿಕೊಳ್ಳಲು ಕೇಳಿದಾಗ, ಆತ ಕಮಲಮ್ಮನ ಮೇಲೆ ದಾಳಿ ಮಾಡಿ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನು ವಿರೋಧಿಸಿದ ಕಮಲಮ್ಮ ಅವರನ್ನು ದೊಣ್ಣೆಯಿಂದ ಹೊಡೆದು ಗಾಯಗೊಳಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಉಪರಾಷ್ಟ್ರಪತಿ ಚುನಾವಣೆ; ಆತ್ಮಸಾಕ್ಷಿ ಮತಕ್ಕೆ ಗೆಲುವಾಗಲಿ
ಈ ಘಟನೆಯನ್ನು ತಿಳಿದು ಪ್ರಶ್ನಿಸಲು ಅಣ್ಣೇಗೌಡನ ಮನೆಗೆ ತೆರಳಿದ ಕಮಲಮ್ಮನ ತಂಗಿ ರಾಜಮ್ಮನಿಗೂ ಜಾತಿ ನಿಂದನೆ ನಡೆಸಿ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ. ರಾಜಮ್ಮನನ್ನು ರಕ್ಷಿಸಲು ಮುಂದಾದ ಕಮಲಮ್ಮನ ಮಗ ಕಿರಣ್ ಕುಮಾರ್ ಮೇಲೂ ಅಣ್ಣೇಗೌಡ ಮತ್ತು ಹರೀಶ್ ಅಮಾನುಷವಾಗಿ ದಾಳಿ ಮಾಡಿದ್ದಾರೆ. ಗಾಯಗೊಂಡ ಕಮಲಮ್ಮ ಅವರನ್ನು ಅದೇ ದಿನ ಸಂಜೆ 7 ಗಂಟೆ ಸುಮಾರಿಗೆ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಮರುದಿನ ರಾಜಮ್ಮ ಅವರು ಗೊರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಜುಲೈ 24ರಂದು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಆರೋಪಿಗಳ ಬಂಧನಕ್ಕೆ ದಲಿತ ಹಕ್ಕುಗಳ ಸಮಿತಿ-ಕರ್ನಾಟಕ ಪ್ರತಿಭಟನೆ
ದಲಿತ ಹಕ್ಕುಗಳ ಸಮಿತಿ-ಕರ್ನಾಟಕ (ಡಿಎಚ್‌ಎಸ್) ಹಾಸನ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿದೆ. ನೊಂದ ದಲಿತ ಮಹಿಳೆಯರು, ಯುವಕ ಮತ್ತು ಕುಟುಂಬಕ್ಕೆ ರಕ್ಷಣೆ ಹಾಗೂ ಪರಿಹಾರ ನೀಡಬೇಕು ಎಂದು ಡಿಎಚ್‌ಎಸ್ ಮುಖಂಡರು ಒತ್ತಾಯಿಸಿದ್ದಾರೆ.
ಹಾಸನದಲ್ಲಿ ದಿನೇ ದಿನೇ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ, ಜಾತಿ ದೌರ್ಜನ್ಯಗಳನ್ನು ತಡೆಗಟ್ಟಲು ಅಧಿಕಾರಿಗಳು ಮತ್ತು ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು .ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುಬೇಕಿದೆ. ನೊಂದ ಮಹಿಳೆಯರು ಮತ್ತು ಯುವಕರಿಗೆ ರಕ್ಷಣೆ ಮತ್ತು ಸೂಕ್ತ ಪರಿಹಾರ ಒದಗಿಸುವುದರ ಜೊತೆ ಹಾಸನ ಜಿಲ್ಲೆಯಲ್ಲಿ ಜಾತಿ ಆಧಾರಿತ ದೌರ್ಜನ್ಯವನ್ನು ತಡೆಗಟ್ಟಲು ವಿಶೇಷ ಕ್ರಮ ಕೈಗೊಳ್ಳಬೇಕೆಂದು ಡಿಎಚ್‌ಎಸ್ ಒತ್ತಾಯಿಸಿದೆ.

